ರಾಕಿಂಗ್ ಸ್ಟಾರ್ 'ಟಾಕ್ಸಿಕ್' ಪೋಸ್ಟ್‌ಪೋನ್ ಖಚಿತ.. ಖಚಿತ.. ಖಚಿತ; ದೊಡ್ಡ ಸಿಗ್ನಲ್ ಸಿಕ್ತಲ್ಲ
ರಾಕಿಂಗ್ ಸ್ಟಾರ್ ಯಶ್ ನಟನೆಯ 'ಟಾಕ್ಸಿಕ್' ಸಿನಿಮಾ ಪೋಸ್ಟ್‌ಪೋನ್ ಬಗ್ಗೆ ಚರ್ಚೆ ಶುರುವಾಗಿದೆ. ಮುಂದಿನ ವರ್ಷ ಏಪ್ರಿಲ್ 10ಕ್ಕೆ ಸಿನಿಮಾ ರಿಲೀಸ್ ಎಂದು ಈಗಾಗಲೇ ಘೋಷಣೆ ಮಾಡಲಾಗಿತ್ತು. ಆದರೆ ಇನ್ನು ಸಿನಿಮಾ ಚಿತ್ರೀಕರಣ ಶುರುವಾಗಿಲ್ಲ.
'ಕಾಂತಾರ-1' ಚಿತ್ರವನ್ನು ಮುಂದಿನ ವರ್ಷ ಸಮ್ಮರ್‌ಗೆ ಬಿಡುಗಡೆ ಮಾಡುವ ಪ್ರಯತ್ನ ನಡೀತಿದೆ. ಹಾಗಾಗಿ 'ಟಾಕ್ಸಿಕ್' ಮುಂದಕ್ಕೆ ಹೋಗಬಹುದು ಎನ್ನುವ ಗುಸುಗುಸು ಶುರುವಾಗಿತ್ತು. ಇದು ಹೌದೋ ಅಲ್ವೋ ಎನ್ನುವ ಬಗ್ಗೆ ಭಾರೀ ಚರ್ಚೆ ನಡೀತಿದೆ. ಅಧಿಕೃತವಾಗಿ ಚಿತ್ರತಂಡ ಹೇಳಿಲ್ಲ. ಕಾದು ನೋಡೋಣ ಎಂದೇ ಸಾಕಷ್ಟು ಜನ ಅಂದುಕೊಂಡಿದ್ದಾರೆ. ಆದರೆ ಇದು ನಿಜ ಎನ್ನಲು ಮತ್ತೊಂದು ಬಲವಾದ ಕಾರಣ ಸಿಕ್ಕಿದೆ.

ಗೀತು ಮೋಹನ್ ದಾಸ್ ನಿರ್ದೇಶನದ 'ಟಾಕ್ಸಿಕ್' ಸಿನಿಮಾ ಭಾರೀ ನಿರೀಕ್ಷೆ ಹುಟ್ಟಾಕ್ಕಿದೆ. ಕೆವಿಎನ್ ಪ್ರೊಡಕ್ಷನ್ಸ್ ಜೊತೆ ಸೇರಿ ಸ್ವತಃ ಯಶ್ ಚಿತ್ರಕ್ಕೆ ಬಂಡವಾಳ ಹೂಡುತ್ತಿದ್ದಾರೆ. ಹಾಲಿವುಡ್ ಕಲಾವಿದರು, ತಂತ್ರಜ್ಞರು ಚಿತ್ರದಲ್ಲಿ ಕೆಲಸ ಮಾಡುತ್ತಿದ್ದಾರೆ ಎನ್ನಲಾಗಿತ್ತು. ಬೆಂಗಳೂರಿನ ಹೆಚ್‌ಎಂಟಿ ಫ್ಯಾಕ್ಟರಿ ಆವರಣದಲ್ಲಿ ಚಿತ್ರಕ್ಕಾಗಿ ಭಾರೀ ಸೆಟ್ ನಿರ್ಮಾಣವಾಗುತ್ತಿದೆ.
ಸೆಟ್ ವಿಚಾರಕ್ಕೆ ಇತ್ತೀಚೆಗೆ ವಕೀಲರೊಬ್ಬರು ಹೈಕೋರ್ಟ್‌ನಲ್ಲಿ ಪಿಐಎಲ್ ಸಲ್ಲಿಸಿದ್ದರು. ಅರಣ್ಯ ಭೂಮಿಯಲ್ಲಿ ಅಕ್ರಮವಾಗಿ ಸೆಟ್ ಹಾಕಿದ್ದಾರೆ ಎಂದು ಆರೋಪಿಸಿದ್ದರು. ಕೂಡಲೇ ಅದನ್ನು ತೆರೆವು ಮಾಡಬೇಕು ಎಂದು ಆಗ್ರಹಿಸಿದ್ದರು. ಈ ಸಂಬಂಧ ಚಿತ್ರತಂಡಕ್ಕೆ ನೋಟಿಸ್ ಜಾರಿಯಾಗಿದೆ. ಮುಂದೆ ವಿಚಾರಣೆ ನಡೆಯಲಿದೆ. ಇದೆಲ್ಲದರ ನಡುವೆ ಸಿನಿಮಾ ರಿಲೀಸ್ ಮುಂದಕ್ಕೆ ಹೋಗಬಹುದು ಎಂದು ನಿರೀಕ್ಷಿಸಲಾಗಿತ್ತು.
ಪ್ರಭಾಸ್ ನಟನೆಯ 'ದಿ ರಾಜಾ ಸಾಬ್' ಚಿತ್ರದ ಸಣ್ಣ ಟೀಸರ್ ರಿಲೀಸ್ ಆಗಿದೆ. ಅದರಲ್ಲಿ ಸಿನಿಮಾ ಯಾವ ಬಿಡುಗಡೆ ಎನ್ನುವುದನ್ನು ತಿಳಿಸಲಾಗಿದೆ. ಏಪ್ರಿಲ್ 10ಕ್ಕೆ ಸಿನಿಮಾ ತೆರೆಗೆ ಬರೋದಾಗಿ ಚಿತ್ರತಂಡ ಹೇಳಿದೆ. ಹಾಗಾದರೆ ಆ ದಿನ ಬಾಕ್ಸಾಫೀಸ್‌ನಲ್ಲಿ 'ಟಾಕ್ಸಿಕ್' ವರ್ಸಸ್ 'ರಾಜಾ ಸಾಬ್' ಫೈಟ್ ನಡೆಯುತ್ತಾ? ಖಂಡಿತ ಇಲ್ಲ ಅಂತ್ಲೇ ಹೇಳಬೇಕು.
ಗೊತ್ತಿದ್ದೂ ಗೊತ್ತಿದ್ದೂ 2 ಪ್ಯಾನ್ ಇಂಡಿಯಾ ಸಿನಿಮಾಗಳನ್ನು ಒಟ್ಟೊಟ್ಟಿಗೆ ಬಿಡುಗಡೆ ಮಾಡಲ್ಲ. 'ಟಾಕ್ಸಿಕ್' ರಿಲೀಸ್ ಪೋಸ್ಟ್‌ಪೋನ್ ಆಗುತ್ತಿದೆ ಎನ್ನುವುದನ್ನು ಖಚಿತಪಡಿಸಿಕೊಂಡೇ 'ರಾಜಾ ಸಾಬ್' ಟೀಂ ರಿಲೀಸ್ ಡೇಟ್ ಘೋಷಿಸಿರುವುದು ಗೊತ್ತಾಗುತ್ತಿದೆ. ಇನ್ನು ಯಶ್- ಪ್ರಭಾಸ್ ನಡುವೆ ಕೂಡ ಆತ್ಮೀಯ ಒಡನಾಟವಿದೆ. ಹಾಗಾಗಿ ಏಪ್ರಿಲ್ 10ಕ್ಕೆ ಯಾವುದೇ ಬಾಕ್ಸಾಫೀಸ್ ಕ್ಲ್ಯಾಶ್ ನಿರೀಕ್ಷಿಸಲು ಸಾಧ್ಯವಿಲ್ಲ.
ಅಂದಹಾಗೆ 'ರಾಜಾ ಸಾಬ್' ಚಿತ್ರಕ್ಕೆ ಮಾರುತಿ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಇದೊಂದು ರೊಮ್ಯಾಂಟಿಕ್ ಹಾರರ್ ಕಾಮಿಡಿ ಎಂಟರ್‌ಟೈನರ್ ಸಿನಿಮಾ. ನಿಧಿ ಅಗರ್‌ವಾಲ್ ಹಾಗೂ ಮಾಳವಿಕಾ ಮೋಹನನ್ ನಾಯಕಿಯರಾಗಿ ನಟಿಸುತ್ತಿದ್ದಾರೆ. ಸಂಜಯ್ ದತ್ ಹಾಗೂ ಯೋಗಿ ಬಾಬು ಕೂಡ ಚಿತ್ರದ ತಾರಾಗಣದಲ್ಲಿದ್ದಾರೆ ಎನ್ನಲಾಗ್ತಿದೆ. 5 ಭಾಷೆಗಳಲ್ಲಿ ಸಿನಿಮಾ ರಿಲೀಸ್ ಪ್ಲ್ಯಾನ್ ನಡೀತಿದೆ.

ಪೀಪಲ್ ಮೀಡಿಯಾ ಫ್ಯಾಕ್ಟರಿ ಸಂಸ್ಥೆ 'ರಾಜಾ ಸಾಬ್' ಚಿತ್ರಕ್ಕೆ ಬಂಡವಾಳ ಹೂಡುತ್ತಿದೆ. ಇತ್ತೀಚೆಗೆ ಪ್ರಭಾಸ್ ನಟಿಸಿದ 'ಕಲ್ಕಿ 2898AD' ಸಿನಿಮಾ ಬ್ಲಾಕ್‌ಬಸ್ಟರ್ ಹಿಟ್ ಆಗಿದೆ. 1000 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿದೆ. ಇದೇ ಜೋಶ್‌ನಲ್ಲಿ 'ರಾಜಾ ಸಾಬ್' ಆಗಿ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದ್ದಾರೆ.
'KGF-2' ಸಿನಿಮಾ ಬಂದೋಗಿ ಎರಡೂವರೆ ವರ್ಷ ಆಯ್ತು. 'ಟಾಕ್ಸಿಕ್' ಸಿನಿಮಾ ನೋಡೊಕೆ ಇನ್ನು 10 ತಿಂಗಳು ಕಾಯಬೇಕು ಎಂದುಕೊಂಡಿದ್ದವರಿಗೆ ಈಗ ಮತ್ತೆ ಶಾಕ್ ಎದುರಾಗುತ್ತಿದೆ. ಏಪ್ರಿಲ್ 10ಕ್ಕೂ ರಿಲೀಸ್ ಆಗಲ್ಲ ಅಂದ್ರೆ ಮತ್ತೆ ಯಾವಾಗ? ಎಂದು ಅಭಿಮಾನಿಗಳು ತಲೆಕೆಡಿಸಿಕೊಂಡಿದ್ದಾರೆ.


Click it and Unblock the Notifications











