ಕನ್ನಡದಲ್ಲಿ 'ವೆಟ್ಟೆಯಾನ್' ಖದರ್ ನೋಡಿದ್ರಾ? ಬಿಗ್‌ಬಿ ಖಡಕ್ ವಾಯ್ಸ್ ಹಿಂದಿನ ತಂತ್ರ ಗೊತ್ತಾ?
ಸೂಪರ್ ಸ್ಟಾರ್ ರಜನಿಕಾಂತ್ ಹಾಗೂ ಬಿಗ್‌ಬಿ ಅಮಿತಾಬ್ ಬಚ್ಚನ್ ನಟನೆಯ 'ವೆಟ್ಟೆಯಾನ್' ಸಿನಿಮಾ ಶೀಘ್ರದಲ್ಲೇ ತೆರೆಗೆ ಬರಲಿದೆ. ದಸರಾ ಸಂಭ್ರಮದಲ್ಲಿ ಸಿನಿಮಾ ರಿಲೀಸ್ ಪ್ಲ್ಯಾನ್ ನಡೀತಿದೆ. ಕನ್ನಡ ಸೇರಿದಂತೆ 5 ಭಾಷೆಗಳಲ್ಲಿ ಪ್ಯಾನ್ ಇಂಡಿಯಾ ಮಟ್ಟದಲ್ಲಿ ದೊಡ್ಡದಾಗಿ ಸಿನಿಮಾ ತೆರೆಗಪ್ಪಳಿಸಲಿದೆ.
ಲೈಕಾ ಪ್ರೊಡಕ್ಷನ್ಸ್ ಬ್ಯಾನರ್‌ನಲ್ಲಿ ಈ ಆಕ್ಷನ್ ಥ್ರಿಲ್ಲರ್ ಚಿತ್ರಕ್ಕೆ ಜ್ಞಾನವೇಲ್ ಆಕ್ಷನ್ ಕಟ್ ಹೇಳಿದ್ದಾರೆ. ಫಹಾದ್ ಫಾಸಿಲ್, ರಾಣಾ ದಗ್ಗುಬಾಟಿ, ಮಂಜು ವಾರಿಯರ್, ರಿತಿಕಾ ಸಿಂಗ್, ಅಭಿರಾಮಿ, ಕಿಶೋರ್ ಸೇರಿದಂತೆ ಘಟಾನುಘಟಿ ಕಲಾವಿದರು 'ವೆಟ್ಟೆಯಾನ್' ಚಿತ್ರದಲ್ಲಿ ನಟಿಸಿದ್ದಾರೆ. 'ಜೈಲರ್' ಸಕ್ಸಸ್ ಬಳಿಕ ರಜನಿಕಾಂತ್ ಹೀರೊ ಆಗಿ ತಲೈವಾ ನಟಿಸಿರುವ ಸಿನಿಮಾ ಇದು. ಆದರೆ ನಿರೀಕ್ಷಿತ ಮಟ್ಟದಲ್ಲಿ ಸಿನಿಮಾ ಹೈಪ್ ಕ್ರಿಯೇಟ್ ಮಾಡಿಲ್ಲ.

'ವೆಟ್ಟೆಯಾನ್' ಚಿತ್ರದ ಟೀಸರ್ ಹಾಗೂ ಸಾಂಗ್ಸ್ ಅಷ್ಟಾಗಿ ಸದ್ದು ಮಾಡಲಿಲ್ಲ. ಅದೇ ಕಾರಣಕ್ಕೆ ಇನ್ನು ಸಿನಿಮಾ ಬಗ್ಗೆ ನಿರೀಕ್ಷೆ ಮೂಡಿಲ್ಲ. ಆದರೆ ಇತ್ತೀಚೆಗೆ ಬಂದ ಹೊಸ ಟೀಸರ್ ತಕ್ಕ ಮಟ್ಟಿಗೆ ಗಮನ ಸೆಳೆದಿದೆ. ಸಿನಿಮಾ ಕಥೆ ಏನಿರಬಹುದು ದಿಗ್ಗಜ ಕಲಾವಿದರಾದ ರಜನಿಕಾಂತ್- ಅಮಿತಾಬ್ ಜುಗಲ್‌ಬಂದಿ ಹೇಗಿರುತ್ತದೆ ಎನ್ನುವುದರ ಝಲಕ್ ನೋಡಿದಂತಾಗಿದೆ. ಆದರೆ ತಮಿಳು ಟ್ರೈಲರ್‌ನಲ್ಲಿ ಅಮಿತಾಬ್ ಪಾತ್ರಕ್ಕೆ ಪ್ರಕಾಶ್ ರಾಜ್ ಡಬ್ ಮಾಡಿದ್ದರು.
ಚಿತ್ರದಲ್ಲಿ ಮಾನವ ಹಕ್ಕುಗಳ ಆಯೋಗದ ಹಿರಿಯ ಅಧಿಕಾರಿ ಸತ್ಯದೇವ್ ಪಾತ್ರದಲ್ಲಿ ಬಿಗ್‌ಬಿ ನಟಿಸಿದ್ದಾರೆ ಎನ್ನಲಾಗ್ತಿದೆ. ಪ್ರಕಾಶ್ ರಾಜ್ ಖಡಕ್ ವಾಯ್ಸ್ ಬಗ್ಗೆ ದೂಸ್ರಾ ಮಾತಿಲ್ಲ. ಆದರೆ ಬಿಗ್‌ಬಿ ಪಾತ್ರಕ್ಕೆ ಅಷ್ಟಾಗಿ ಹೊಂದಿಕೆ ಆಗುತ್ತಿರಲಿಲ್ಲ. ಇದೀಗ ಕನ್ನಡ ಹಾಗೂ ತಮಿಳಿನಲ್ಲಿ ಟೀಸರ್ ರಿಲೀಸ್ ಆಗಿದೆ. ಅದರಲ್ಲಿ ಬಿಗ್‌ಬಿ ವಾಯ್ಸ್ ಕೇಳಿದವರು ಹುಬ್ಬೇರಿಸಿದ್ದಾರೆ. ಸೂಪರ್ ಎಂದು ಮೆಚ್ಚಿಕೊಳ್ಳುತ್ತಿದ್ದಾರೆ.
'ವೆಟ್ಟೆಯಾನ್' ತಮಿಳು ಟೀಸರ್ ನೋಡಿದವರು ಬಿಗ್‌ಬಿ ಪಾತ್ರಕ್ಕೆ ಪ್ರಕಾಶ್ ರಾಜ್ ವಾಯ್ಸ್ ಬಗ್ಗೆ ಬೇಸರ ವ್ಯಕ್ತಪಡಿಸಿದ್ದರು. ಇದೀಗ ಎಚ್ಚೆತ್ತುಕೊಂಡ ಚಿತ್ರತಂಡ ಹೊಸ ತಂತ್ರಜ್ಞಾನದ ಮೊರೆ ಹೋಗಿದೆ. ಅಮಿತಾಬ್ ಬಚ್ಚನ್ ಧ್ವನಿಯ ಉಚ್ಚಾರಣೆ, ಶಬ್ಧವನ್ನು ಬಳಸಿ AI ತಂತ್ರಜ್ಞಾನದಲ್ಲಿ ಕನ್ನಡ ಹಾಗೂ ತೆಲುಗಿಗೆ ವಾಯ್ಸ್ ರೀ-ಕ್ರಿಯೇಟ್ ಮಾಡಲಾಗಿದೆ. 'ಜೇಮ್ಸ್' ಚಿತ್ರಕ್ಕಾಗಿ ಕೆಲ ದಿನಗಳ ಬಳಿಕ ಇದೇ ತಂತ್ರಜ್ಞಾನ ಬಳಸಿ ಪುನೀತ್ ಪಾತ್ರಕ್ಕೆ ಡಬ್ ಮಾಡಲಾಗಿತ್ತು.
ಸತ್ಯದೇವ್ ಪಾತ್ರಕ್ಕೆ ಪ್ರಕಾಶ್ ರಾಜ್ ಕಂಚಿನ ಕಂಠ ಸೂಕ್ತ ಎಂದು 'ವೆಟ್ಟೆಯಾನ್' ಚಿತ್ರತಂಡ ಮೊದಲು ಭಾವಿಸಿತ್ತು. ಆದರೆ AI ತಂತ್ರಜ್ಞಾನದಿಂದ ಹೆಚ್ಚು ಕಮ್ಮಿ ಬಿಗ್‌ಬಿ ವಾಯ್ಸ್ ಅನ್ನೇ ಬಳಸಿಕೊಳ್ಳುವುದು ಈಗ ಸಾಧ್ಯವಾಗಿದೆ. ತಮಿಳಿನಲ್ಲಿ ಕೂಡ ಪ್ರಕಾಶ್ ರಾಜ್ ವಾಯ್ಸ್ ಬಿಟ್ಟು ಇದೇ ತಂತ್ರಜ್ಞಾನ ಬಳಸಿ ಡಬ್ ಮಾಡುವ ಸಾಧ್ಯತೆಯಿದೆ. ಇನ್ನು ಕನ್ನಡದಲ್ಲಿ ರಜನಿಕಾಂತ್‌ಗೆ ಕಂಠದಾನ ಕಲಾವಿದ ಸುದರ್ಶನ್ ಡಬ್ ಮಾಡಿದ್ದಾರೆ.
ಕನ್ನಡದ 'ಮಾರ್ಟಿನ್' ಚಿತ್ರಕ್ಕಾಗಿ AI ತಂತ್ರಜ್ಞಾನ ಬಳಸಿ ವಿದೇಶದ ಭಾಷೆಗಳಿಗೆ ಸಿನಿಮಾ ಡಬ್ ಮಾಡಲಾಗುತ್ತಿದೆ. ಧ್ರುವ ಸರ್ಜಾ ವಾಯ್ಸ್ ಅನ್ನು ಕೂಡ ಇದೇ ರೀತಿ ಆಯಾ ಭಾಷೆಗಳಿಗೆ AI ರೂಪದಲ್ಲಿ ಅಳವಡಿಸುವ ಪ್ರಯತ್ನ ನಡೆದಿದೆ. ಮುಂದಿನ ದಿನಗಳಲ್ಲಿ ಈ ತಂತ್ರಜ್ಞಾನ ಚಿತ್ರರಂಗದಲ್ಲಿ ದೊಡ್ಡ ಕ್ರಾಂತಿಯನ್ನೇ ಮಾಡುವ ಸುಳಿವು ಸಿಗುತ್ತಿದೆ.
'ವೆಟ್ಟೆಯಾನ್' ಚಿತ್ರದಲ್ಲಿ ರಜನಿಕಾಂತ್ ಎನ್‌ಕೌಂಟರ್ ಸ್ಪೆಷಲಿಸ್ಟ್ ಆಗಿ ನಟಿಸಿದ್ದಾರೆ. ರಾಣಾ ವಿಲನ್ ಆಗಿ ಅಬ್ಬರಿಸಿದ್ದಾರೆ. ಶೀಘ್ರದಲ್ಲೇ ಟ್ರೈಲರ್ ರಿಲೀಸ್ ಮಾಡುವ ಸಾಧ್ಯತೆಯಿದೆ. ಸದ್ಯ ಸಿನಿಮಾ ಸೆನ್ಸಾರ್ ಸರ್ಟಿಫಿಕೇಟ್ ಪಡೆಯಲು ಸಜ್ಜಾಗಿದೆ. ಅಕ್ಟೋಬರ್ 10ರಕ್ಕೆ ವಿಶ್ವದಾದ್ಯಂತ ಸಿನಿಮಾ ತೆರೆಗೆ ಬರಲಿದೆ.
ಹೈದರಾಬಾದ್ ಪಶು ವೈದ್ಯೆ ದಿಶಾ ಅತ್ಯಾಚಾರ, ಕೊಲೆ ಪ್ರಕರಣ ಹಾಗೂ ಬಳಿಕ ನಡೆದ ಎನ್‌ಕೌಂಟರ್‌ನಿಂದ ಪ್ರೇರಣೆಗೊಂಡು 'ವೆಟ್ಟೆಯಾನ್' ಸಿನಿಮಾ ಮಾಡಿದ್ದಾರೆ ಎನ್ನಲಾಗ್ತಿದೆ. ಟ್ರೈಲರ್ ನೋಡಿದ ಕೆಲವರು ಈ ರೀತಿ ಕಾಮೆಂಟ್ ಮಾಡುತ್ತಿದ್ದಾರೆ. ಆದರೆ ಇದಕ್ಕಿಂತ ಮುಖ್ಯವಾಗಿ ಎಜುಕೇಷನ್ ಆಪ್ ಕಂಪನಿಯ ಮೋಸ, ಅದರ ವಿರುದ್ಧ ನಾಯಕ ಹೋರಾಟದ ಕಥೆ ಚಿತ್ರದಲ್ಲಿದೆ ಎಂದು ಹೇಳಲಾಗ್ತಿದೆ.


Click it and Unblock the Notifications











