ಮಾನಸ ಗಂಗೋತ್ರಿ ಕ್ಯಾಂಪಸ್ ನಲ್ಲಿ 'ಚಾರ್ಲಿ' ಜೊತೆ ರಕ್ಷಿತ್ ಶೆಟ್ಟಿ
ಸ್ಯಾಂಡಲ್ ವುಡ್ ನ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಈಗ ಮೈಸೂರಿನ ಮಾನಸ ಗಂಗೋತ್ರಿ ಕ್ಯಾಂಪಸ್ ಸೇರಿದ್ದಾರೆ. ಬಹು ನಿರೀಕ್ಷೆಯ '777 ಚಾರ್ಲಿ' ಚಿತ್ರದ ಚಿತ್ರೀಕರಣಕ್ಕಾಗಿ ರಕ್ಷಿತ್ ಮತ್ತು ಟೀಂ ಮೈಸೂರಿನ ಮಾನಸ ಗಂಗೋತ್ರಿಯಲ್ಲಿ ಬೀಡುಬಿಟ್ಟಿದೆ.
ನಿರ್ದೇಶಕ ಕಿರಣ್ ರಾಜ್ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ '777 ಚಾರ್ಲಿ' ಚಿತ್ರದ ಚಿತ್ರೀಕರಣ ಈ ಮೊದಲೇ ಪ್ರಾರಂಭವಾಗತ್ತು. ಆದ್ರೆ ರಕ್ಷಿತ್ 'ಅವನೇ ಶ್ರೀಮನ್ನಾರಾಯಣ' ಚಿತ್ರದಲ್ಲಿ ಬ್ಯುಸಿಯಾಗಿದ್ದರು. ಸದ್ಯ 'ಅವನೇ ಶ್ರೀಮನ್ನಾರಾಯಣ' ಚಿತ್ರೀಕರಣ ಮುಗಿಸಿ ರಕ್ಷಿತ್ ಮತ್ತೆ 'ಚಾರ್ಲಿ' ತಂಡ ಸೇರಿಕೊಂಡಿದ್ದಾರೆ.
ಸದ್ಯ, ಮೈಸೂರಿನ ಮಾನಸ ಗಂಗೋತ್ರಿ ಕ್ಯಾಂಪಸ್ ನ ವಸತಿ ನಿವಾಸದಲ್ಲಿ ಚಿತ್ರೀಕರಣ ನಡೆಯುತ್ತಿದ್ದು, ಈ ದೃಶ್ಯಕ್ಕಾಗಿ ಮುಂಗಾರಿನ ಕಾಲವನ್ನು ಸೃಷ್ಟಿಸಬೇಕಾಗಿದೆಯಂತೆ. ಅಲ್ಲಿ ನಾಯಕನ ಮನೆಯ ಸುತ್ತಮುತ್ತಲಿನ ದೃಶ್ಯಗಳನ್ನು ಸೆರೆಹಿಡಿಯಲಾಗುತ್ತಿದೆಯಂತೆ. ಲೊಕೇಶನ್ ಗಾಗಿ ಸಾಕಷ್ಟು ಸುತ್ತಾಡಿದ್ದ ಚಿತ್ರತಂಡ ಕೊನೆಯದಾಗಿ ಮೈಸೂರನ್ನು ಆಯ್ಕೆ ಮಾಡಿಕೊಂಡಿದೆ. ಕಾರಣ ಹಳೆಯ ಕಟ್ಟಡಗಳು ಮೈಸೂರಿನಲ್ಲಿ ಇರುವುದರಿಂದ ಕಥೆಗೆ ಇದು ಹೊಂದಾಣಿಕೆ ಆಗುತ್ತೆ ಎನ್ನುವ ಕಾರಣಕ್ಕೆ ಮೈಸೂರನ್ನು ಆಯ್ಕೆ ಮಾಡಿಕೊಂಡಿದ್ದಾರಂತೆ.

ಅಂದ್ಹಾಗೆ 30 ದಿನಗಳು ಮೈಸೂರಿನಲ್ಲಿ ಚಿತ್ರೀಕರಣ ಮುಗಿಸಿ ನಂತರ ಎರಡನೇ ಭಾಗದ ಚಿತ್ರೀಕರಣವನ್ನು ಮಂಗಳೂರು, ಚಿಕ್ಕಮಗಳೂರು ಮತ್ತು ಉತ್ತರ ಭಾರತದಲ್ಲಿ ಚಿತ್ರೀಕರಣ ಮಾಡುವ ಪ್ಲಾನ್ ಮಾಡಿಕೊಂಡಿದೆ ಚಿತ್ರತಂಡ. ಸದ್ಯ ಭರದಿಂದ ಚಿತ್ರೀಕರಣ ನಡೆಯುತ್ತಿದ್ದು ಚಿತ್ರವನ್ನು ಈ ವರ್ಷದ ಕೊನೆಯಲ್ಲಿ ತೆರೆಗೆ ತರುವ ತಯಾರಿ ಮಾಡಿಕೊಳ್ಳುತ್ತಿದೆ ಚಿತ್ರತಂಡ.


Click it and Unblock the Notifications











