ಅರ್ಧಕ್ಕೆ ನಿಂತ ಸಿಎಂ ಸಿದ್ಧರಾಮಯ್ಯ ಜೀವನಾಧಾರಿತ ಚಿತ್ರ ಲೀಡರ್ ರಾಮಯ್ಯ, ಕಾರಣವೇನು..?
ಕರುನಾಡಿನ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ಜೀವನಕಥೆ 'ಲೀಡರ್ ರಾಮಯ್ಯ' ಹೆಸರಿನಲ್ಲಿ ಬೆಳ್ಳಿ ಪರದೆಗೆ ಬರುತ್ತಿರುವ ವಿಚಾರ ನಿಮಗೆ ಗೊತ್ತೇ ಇರಬೇಕು. ಯಾಕೆಂದರೆ ಶುರುವಾದ ದಿನದಿಂದ ನಾನಾ ಕಾರಣಕ್ಕೆ ಸದ್ದು ಮಾಡುತ್ತಾ ಬಂದ ಚಿತ್ರ ಇದು.
ಸಿದ್ಧರಾಮಯ್ಯ ಅವರ ಏಳು ಬೀಳು, ಸೋಲು ಗೆಲುವು, ಸಿಹಿ ಕಹಿಯ ಸಮ್ಮಿಶ್ರ ಭಾವವನ್ನು ಒಳಗೊಂಡ ಈ ಚಿತ್ರದಲ್ಲಿ ಸಿದ್ಧರಾಮಯ್ಯ ಅವರ ಪಾತ್ರವನ್ನು ಮಕ್ಕಳ್ ಸೆಲ್ವನ್ ವಿಜಯ್ ಸೇತುಪತಿ ನಿರ್ವಹಿಸಲಿದ್ದಾರೆ ಎನ್ನುವ ಸುದ್ದಿ ಇದೆ. ಚಿತ್ರತಂಡ ಕೂಡ ಈ ಮಾತನ್ನು ಹೇಳಿದೆ.

ಸದ್ಯದ ಸಮಾಚಾರ ಏನೆಂದರೆ ಈ ಚಿತ್ರದ ಚಿತ್ರೀಕರಣವನ್ನು ನಿಲ್ಲಿಸಲಾಗಿದೆ. ಹೌದು, ನಿಮಗೆ ಗೊತ್ತು ಸದ್ಯಕ್ಕೆ ಮುಡಾ ಹಗರಣ ವ್ಯಾಪಕ ಸದ್ದು ಮಾಡುತ್ತಿದೆ. ಸಿದ್ಧರಾಮಯ್ಯ ಅವರ ವಿರುದ್ಧ ತನಿಖೆಗೆ ಆದೇಶ ನೀಡಲಾಗಿದೆ. ಸಿದ್ಧರಾಮಯ್ಯ ಅವರು ರಾಜೀನಾಮೆ ನೀಡಬೇಕೆಂಬ ಕೂಗು ಕೇಳಿ ಬರುತ್ತಿದೆ. ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡುವುದು ಉತ್ತಮ ಎನ್ನುವ ಅಭಿಪ್ರಾಯ ಕೂಡ ಸಾರ್ವತ್ರಿಕ ವಲಯದಲ್ಲಿ ವ್ಯಕ್ತವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಚಿತ್ರದ ಚಿತ್ರೀಕರಣವನ್ನು ನಿಲ್ಲಿಸುವ ತೀರ್ಮಾನಕ್ಕೆ ಬಂದಿರುವ ಚಿತ್ರತಂಡ ಸದ್ಯಕ್ಕೆ ಮುಡಾ ಸುತ್ತ ಮುತ್ತದ ಬೆಳವಣಿಗೆಯನ್ನು ಗಮನಿಸುತ್ತಿದೆ.
ಈ ಕುರಿತು ಕೊಪ್ಪಳದಲ್ಲಿ ಮಾತನಾಡಿರುವ ಚಿತ್ರದ ನಿರ್ಮಾಪಕ ಹಯ್ಯಾತ್ ಪೀರ್, ಮುಡಾ ಪ್ರಕರಣದ ಹಿನ್ನೆಲೆ ಎರಡನೇ ಹಂತದ ಚಿತ್ರೀಕರಣಕ್ಕೆ ಬ್ರೇಕ್ ಹಾಕಲಾಗಿದೆ ಎಂದಿದ್ದಾರೆ. ಮುಡಾ ಬೆಳವಣಿಗೆಯನ್ನು ಚಿತ್ರದಲ್ಲಿ ಸೇರಿಸುವ ಚಿಂತನೆ ನಡೆದಿದೆ ಎಂದಿದ್ದಾರೆ. ಇನ್ನೂ ವಿಜಯ್ ಸೇತುಪತಿ ಕೂಡ ಹಲವಾರು ಚಿತ್ರಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಈ ಹಿನ್ನೆಲೆ ಅವರ ಡೇಟ್ ಕೂಡ ಸಮಸ್ಯೆಯಾಗಿದೆ ಈ ಎಲ್ಲ ಕಾರಣಕ್ಕೆ ಚಿತ್ರದ ಚಿತ್ರೀಕರಣವನ್ನು ಸದ್ಯಕ್ಕೆ ನಿಲ್ಲಿಸಿದ್ದೇವೆ ಎಂದು ಹೇಳಿದ್ದಾರೆ.
ಅಂದ್ಹಾಗೇ ಸತ್ಯರತ್ನಂ ನಿರ್ದೇಶನದಲ್ಲಿ ಸಿದ್ಧವಾಗುತ್ತಿರುವ ಈ ಚಿತ್ರದ ಮೊದಲ ಹಂತದ ಚಿತ್ರೀಕರಣವನ್ನು ಮೈಸೂರು ಭಾಗದಲ್ಲಿ ಮಾಡಲಾಗಿದೆ. ಮೈಸೂರಿನಲ್ಲಿ ಸಿಎಂ ಸಿದ್ಧರಾಮಯ್ಯ ಅವರ ಬಾಲ್ಯದ ದಿನಗಳನ್ನು ಚಿತ್ರತಂಡ ಸೆರೆ ಹಿಡಿದಿದೆ. ಇನ್ನೂ.. ಈ ಹಿಂದೆ ಈ ಚಿತ್ರದಲ್ಲಿ ಸಿದ್ಧರಾಮಯ್ಯ ಅವರ ಈಗಿನ ಪಾತ್ರವನ್ನು ವಿಜಯ್ ಸೇತುಪತಿ ನಿಭಾಯಿಸಿದರೆ, ಹದಿಹರೆಯದ ಸಿದ್ಧರಾಮಯ್ಯ ಅವರ ಪಾತ್ರವನ್ನು ಡಾಲಿ ಧನಂಜಯ್ ನಿರ್ವಹಿಸಲಿದ್ದಾರೆ ಎನ್ನುವ ಸುದ್ದಿ ಸಿಕ್ಕಾಪಟ್ಟೆ ಸದ್ದು ಮಾಡಿತ್ತು. ಆದರೆ.. ಡಾಲಿ ಧನಂಜಯ್ ಅದ್ಯಾವ ಕಾರಣಕ್ಕೆ ಸಿದ್ಧರಾಮಯ್ಯನವರ ಪಾತ್ರವನ್ನು ಮಾಡಲಾರೆ ಎಂದರೋ ಗೊತ್ತಿಲ್ಲ. ಡಾಲಿ ಧನಂಜಯ್ ಒಲ್ಲೆ ಅಂದ ಪಾತ್ರವನ್ನು ನಿರೂಪ್ ಭಂಡಾರಿ ನಿರ್ವಹಿಸುವ ಸಾಧ್ಯತೆ ಇದೆ. ಇದಕ್ಕೆ ಪೂರಕವಾಗಿ ಹಿಂದೆ ಫಿಲ್ಮಿ ಬೀಟ್ ಕನ್ನಡಗೆ ಪ್ರತಿಕ್ರಿಯಿಸಿದ್ದ ನಿರೂಪ್ ಭಂಡಾರಿ ಚಿತ್ರತಂಡ ನನ್ನನ್ನೂ ಸಂಪರ್ಕಿಸಿರುವುದು ನಿಜಾ ಎಂದಿದ್ದರು.
ಉಳಿದಂತೆ ಹೆಚ್ಚು ಕಡಿಮೆ 50 ಕೋಟಿಯಲ್ಲಿ ಬಹುಭಾಷೆಯಲ್ಲಿ ನಿರ್ಮಾಣವಾಗುತ್ತಿರುವ ಸಿದ್ಧರಾಮಯ್ಯ ಅವರ ಬಯೋಪಿಕ್ ಲೀಡರ್ ರಾಮಯ್ಯ ಚಿತ್ರಕ್ಕೆ 'ಎ ಕಿಂಗ್ ರೈಸ್ಡ್ ಬೈ ದ ಪೀಪಲ್' ಎನ್ನುವ ಟ್ಯಾಗ್‌ಲೈನ್‌ನ ಚಿತ್ರತಂಡ ನೀಡಿದೆ. ಅಹಿಂದ ನಾಯಕ, ಮಾಸ್ ಲೀಡರ್ ಎಂದೇ ಕರ್ನಾಟಕ ರಾಜಕೀಯರಂಗದಲ್ಲಿ ಗುರ್ತಿಸಿಕೊಂಡ ಸಿದ್ದರಾಮಯ್ಯ ಅವರ ಬಾಲ್ಯದ ಬದುಕು ಆ ನಂತರ ರಾಜಕೀಯ ಜೀವನವನ್ನೂ ಈ ಚಿತ್ರದ ಮೂಲಕ ಹೇಳುವ ಪ್ರಯತ್ನವನ್ನು ಈ ತಂಡ ಮಾಡುತ್ತಿದೆ. ಶಾಸಕರಾಗಿ, ಸಚಿವರಾಗಿ, ಉಪ ಮುಖ್ಯಮಂತ್ರಿಯಾಗಿ ಸಿದ್ಧರಾಮಯ್ಯ ಎದುರಿಸಿದ ಸವಾಲು ಮತ್ತು 2013ರಿಂದ 2018ರವರೆಗೆ ಮೊದಲ ಬಾರಿ ಮುಖ್ಯಮಂತ್ರಿಯಾಗಿ ರಾಜ್ಯವನ್ನು ಮುನ್ನಡೆಸಿದ ರೀತಿಯನ್ನು ಕೂಡ ಈ ಚಿತ್ರದ ಮೂಲಕ ಕಟ್ಟಿಕೊಡುವ ಪ್ರಯತ್ನವಾಗುತ್ತಿದೆ. ಮಿಕ್ಕಂತೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ಈ ಸ್ಪೂರ್ತಿದಾಯಕ ಜೀವನಗಾಥೆಯಲ್ಲಿ ಯಾರೆಲ್ಲ ಇದ್ದಾರೆ ಎನ್ನುವ ಮಾಹಿತಿಯನ್ನೂ ಚಿತ್ರತಂಡ ಬಿಟ್ಟು ಕೊಟ್ಟಿಲ್ಲ.


Click it and Unblock the Notifications











