'ಮ್ಯಾಕ್ಸ್' ಟೈಟಲ್ ಅರ್ಥ, ಒನ್‌ಲೈನ್ ಸ್ಟೋರಿ ಕೂಡ ಲೀಕ್: ಇದು ಆ ಸಿನಿಮಾ ಕಾಪಿನಾ?
ಈ ವರ್ಷದ ಬಹುನಿರೀಕ್ಷಿತ ಸಿನಿಮಾಗಳಲ್ಲಿ ಕಿಚ್ಚ ಸುದೀಪ್ ನಟನೆಯ 'ಮ್ಯಾಕ್ಸ್' ಅಗ್ರಸ್ಥಾನದಲ್ಲಿ ನಿಲ್ಲುತ್ತದೆ. ಕನ್ನಡ ಮತ್ತು ತಮಿಳಿನಲ್ಲಿ ಏಕಕಾಲಕ್ಕೆ ಈ ಆಕ್ಷನ್ ಥ್ರಿಲ್ಲರ್ ಸಿನಿಮಾ ನಿರ್ಮಾಣವಾಗಲಿದೆ. ಕಲೈಪುಲಿ ಎಸ್. ತನು ಜೊತೆಗೆ ಸುದೀಪ್ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ.
ಮಹಾಬಲಿಪುರಂನಲ್ಲಿ ಸೆಟ್‌ಗಳನ್ನು ನಿರ್ಮಿಸಿ ಭರದಿಂದ 'ಮ್ಯಾಕ್ಸ್' ಸಿನಿಮಾ ಚಿತ್ರೀಕರಣ ನಡೆಸಲಾಗುತ್ತಿದೆ. ಮಾರ್ಚ್ ವೇಳೆಗೆ ಚಿತ್ರವನ್ನು ತೆರೆಗೆ ತರುವ ಪ್ರಯತ್ನ ನಡೀತಿದೆ. ತಮಿಳು ನಿರ್ದೇಶಕ ವಿಜಯ್ ಕಾರ್ತಿಕೇಯ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದು ಅಜನೀಶ್ ಲೋಕನಾಥ್ ಸಂಗೀತವಿದೆ. ಶೇಖರ್ ಚಂದ್ರ ಛಾಯಾಗ್ರಹಣ ಚಿತ್ರಕ್ಕಿದೆ. ಚಿತ್ರದಲ್ಲಿ ಕಿಚ್ಚ ಸುದೀಪ್ ಖಡಕ್ ಪೊಲೀಸ್ ಆಫೀಸರ್ ಪಾತ್ರದಲ್ಲಿ ನಟಿಸುತ್ತಿದ್ದಾರೆ.

'ಮ್ಯಾಕ್ಸ್' ಸಿನಿಮಾ ಪ್ರಚಾರ ಹಾಗೂ ಬಿಡುಗಡೆಗೆ ಕೆಆರ್‌ಜಿ ಸಂಸ್ಥೆ ಕೈಜೋಡಿಸಿದೆ. ಸದ್ಯ ಬುಕ್‌ಮೈ ಶೋನಲ್ಲಿ ಚಿತ್ರದ ಪ್ರೊಫೈಲ್ ಕ್ರಿಯೇಟ್ ಆಗಿದ್ದು ಅಭಿಮಾನಿಗಳು ಸಂಭ್ರಮಕ್ಕೆ ಕಾರಣವಾಗಿದೆ. ಪ್ರೊಫೈಲ್ ಲೈಕ್ ಮಾಡುವ ಮೂಲಕ ಸಿನಿಮಾ ನೋಡುವ ಇಂಗಿತ ವ್ಯಕ್ತಪಡಿಸುತ್ತಿದ್ದಾರೆ. ಇದೆಲ್ಲದರ ನಡುವೆ ಚಿತ್ರದ ಒನ್‌ಲೈನ್ ಸ್ಟೋರಿ ರಿವೀಲ್ ಆಗಿದೆ. ಹೌದು. 'ಮ್ಯಾಕ್ಸ್' ಬುಕ್‌ಮೈಶೋ ಪ್ರೊಫೈಲ್‌ನಲ್ಲಿ ಕಥೆಯ ಸಣ್ಣ ಸುಳಿವು ಬಿಟ್ಟುಕೊಡಲಾಗಿದೆ.
ಅರ್ಜುನ್ ಮಹಾಕ್ಷಯ್. ಖಡಕ್ ಪೊಲೀಸ್ ಆಫೀಸರ್. 2 ತಿಂಗಳು ಅಮಾನತಿನಲ್ಲಿದ್ದ ಅರ್ಜುನ್ ಬಳಿಕ ಹೊಸ ಪೊಲೀಸ್ ಠಾಣೆಯಲ್ಲಿ ಡ್ಯೂಟಿಗೆ ರಿಪೋರ್ಟ್ ಮಾಡಿಕೊಳ್ಳುತ್ತಾನೆ. ಈ ಹಾದಿಯಲ್ಲಿ ಮಂತ್ರಿಗಳ ಮಗ ತನ್ನ ಇಲಾಖೆಯ ಅಧಿಕಾರಿಗಳ ಮೇಲೆ ದೌರ್ಜನ್ಯ ಎಸಗುತ್ತಿರುವುದನ್ನು ನೋಡಿ ಬಂಧಿಸುತ್ತಾನೆ. ದುರದೃಷ್ಟವಶಾತ್ ಆತ ಸಾಯ್ತಾನೆ. ಮುಂದೆ ಅರ್ಜುನ್ ಏನು ಮಾಡ್ತಾನೆ? ಅನ್ನೋದೇ 'ಮ್ಯಾಕ್ಸ್' ಸಿನಿಮಾ ಕಥೆ ಎನ್ನುವಂತೆ ಹೇಳಲಾಗಿದೆ.
'ಮ್ಯಾಕ್ಸ್' ಸಿನಿಮಾ ಟೈಟಲ್ ಕೇಳಿ ಅಭಿಮಾನಿಗಳು ಥ್ರಿಲ್ ಆಗಿದ್ದರು. ಇನ್ನು ಸುದೀಪ್ ಕಾಪ್ ಆಗಿ ನಟಿಸ್ತಾರೆ ಎಂದಾಗ ಕುತೂಹಲ ಮೂಡಿತ್ತು. ಸದ್ಯ ಒನ್‌ಲೈನ್ ಸ್ಟೋರಿ ಮತ್ತಷ್ಟು ಕಾತುರ ಹೆಚ್ಚಿಸಿದೆ. ಈ ಹಿಂದೆ ಬಿಡುಗಡೆಯಾಗಿದ್ದ ಫಸ್ಟ್ ಲುಕ್ ಟೀಸರ್ ಸೂಪರ್ ಹಿಟ್ ಆಗಿತ್ತು. ಕಿಚ್ಚನ ಖಡಕ್ ಲುಕ್ಕು, ಬಾಡಿ ಲಾಂಗ್ವೇಜ್ ನೋಡಿ ಅಭಿಮಾನಿಗಳು ಹುಬ್ಬೇರಿಸಿದ್ದರು. ಇದೀಗ ಅರ್ಜುನ್ ಮಹಾಕ್ಷಯ್ ಕಥೆ ಕೇಳಿ ಥ್ರಿಲ್ಲಾಗಿದ್ದಾರೆ. ಫಸ್ಟ್ ಡೇ ಫಸ್ಟ್ ಶೋ ಸಿನಿಮಾ ನೋಡುವುದು ಫಿಕ್ಸ್ ಎನ್ನುತ್ತಿದ್ದಾರೆ.
ಕೆಲವರು 'ಮ್ಯಾಕ್ಸ್' ಚಿತ್ರದ ಒನ್‌ಲೈನ್ ಸ್ಟೋರಿ ಕೇಳಿದವರು ಬೇರೆ ಭಾಷೆಗಳ ಸಿನಿಮಾಗಳ ಜೊತೆ ಹೋಲಿಸಿ ನೋಡುತ್ತಿದ್ದಾರೆ. ಆದರೆ ಕಿಚ್ಚನ ಅಭಿಮಾನಿಗಳು ಮಾತ್ರ ಅರ್ಜುನ್ ಮಹಾಕ್ಷಯ್ ಆರ್ಭಟ ನೋಡಲು ಕಾಯುತ್ತಿದ್ದಾರೆ. ಚಿತ್ರದಲ್ಲಿ ನಾಯಕನ ಹೆಸರು ಅರ್ಜುನ್ ಮಹಾಕ್ಷಯ್. ಎಲ್ಲರೂ ಮಹಾಕ್ಷಯ್‌ನ ಶಾರ್ಟ್ ಆಗಿ 'ಮ್ಯಾಕ್ಸ್' ಕರೆಯುತ್ತಾರೆ ಅನ್ನೋದು ಗೊತ್ತಾಗ್ತಿದೆ.
ಇನ್ನು ಆಕ್ಷನ್ ಥ್ರಿಲ್ಲರ್ 'ಮ್ಯಾಕ್ಸ್' ಚಿತ್ರದಲ್ಲಿ ಕಿಚ್ಚ ಸುದೀಪ್ ಜೊತೆಗೆ ವರಲಕ್ಷ್ಮಿ ಶರತ್‌ಕುಮಾರ್, ಸಂಯುಕ್ತಾ ಹೊರನಾಡ್, ಇಳವರಸು, ಸುನಿಲ್ ಸೇರಿದಂತೆ ಹಲವರು ನಟಿಸುತ್ತಿದ್ದಾರೆ. ಕೇವಲ ಎರಡು ದಿನಗಳಲ್ಲಿ ನಡೆಯುವ ಕಥೆ 'ಮ್ಯಾಕ್ಸ್' ಎನ್ನಲಾಗ್ತಿದೆ. ಬಹಳ ರೋಚಕವಾಗಿ ಸಿನಿಮಾವನ್ನು ಕಟ್ಟಿಕೊಡುತ್ತಿದ್ದಾರೆ. 'ವಿಕ್ರಾಂತ್ ರೋಣ' ಬಳಿಕ ಸುದೀಪ್ ಒಂದು ವರ್ಷ ಬ್ರೇಕ್ ಪಡೆದಿದ್ದರು. ಅ ಸಮಯದಲ್ಲಿ 3 ಕಥೆಗಳನ್ನು ಫೈನಲ್ ಮಾಡಿದ್ದರು. ಅದರಲ್ಲಿ 'ಮ್ಯಾಕ್ಸ್' ಒಂದು.
ಕಳೆದ ವರ್ಷ ಸುದೀಪ್ ನಟನೆಯ ಯಾವುದೇ ಸಿನಿಮಾ ತೆರೆಗೆ ಬರಲಿಲ್ಲ. ಆದರೆ ಈ ವರ್ಷ ಎರಡು ಸಿನಿಮಾವನ್ನು ಪ್ರೇಕ್ಷಕರ ಮುಂದೆ ತರುವ ಪ್ರಯತ್ನದಲ್ಲಿದ್ದಾರೆ. ಇನ್ನು ಬಿಗ್‌ಬಾಸ್ ಕನ್ನಡ ಸೀಸನ್ 10ರ ನಿರೂಪಣೆ ಜವಾಬ್ದಾರಿಯನ್ನು ವಹಿಸಿಕೊಂಡಿದ್ದಾರೆ. 'ಮ್ಯಾಕ್ಸ್' ಸಿನಿಮಾ ಹಾಗೂ ಬಿಗ್‌ಬಾಸ್ ಶೋ ಚಿತ್ರೀಕರಣಕ್ಕಾಗಿ ಬೆಂಗಳೂರು, ಚೆನ್ನೈ ನಡುವೆ ಪ್ರಯಾಣಿಸುತ್ತಿದ್ದಾರೆ. ಅಧಿಕೃತವಾಗಿ 'ಮ್ಯಾಕ್ಸ್' ರಿಲೀಸ್ ಡೇಟ್ ಘೋಷಣೆ ಆಗಿಲ್ಲ.


Click it and Unblock the Notifications











