ಕೋಟ್ಯಾಧಿಪತಿಯಾಗಲು ಕಸರತ್ತು ; ಡಾಲಿಯ ''ಕೋಟಿ'' ಕೋಟೆಯಲ್ಲಿ ಏನೇನಿದೆ...?
ಹಣ ಕಂಡರೆ ಹೆಣ ಕೂಡ ಬಾಯಿ ಬೀಡುವ ಕಾಲ ಇದು. ಇಂತಹ ಕಾಲದಲ್ಲಿ.. ಪ್ರಾಮಾಣಿಕತೆ.. ನ್ಯಾಯ.. ನಿಷ್ಠೆ.. ತಾಳ್ಮೆ.. ಎಂದು ಚಾಣಕ್ಯನ ನೀತಿ ಕಥೆಯನ್ನ ಹೇಳುತ್ತಾ ಕುಳಿತರೆ, ಜೀತ ಬೆನ್ನು ಬಿಡಲ್ಲ. ಬದುಕು ಉದ್ದಾರ ಆಗಲ್ಲ. ಬದಲಾದ ಕಾಲಘಟ್ಟದಲ್ಲಿ ಇಂದು ಅಡ್ಡದಾರಿಯಲ್ಲಿಯೇ ಸುಖ ಇದೆ. ಹಣ ಸಂಪಾದನೆಗೆ ನೂರೆಂಟು ಮಾರ್ಗ ಇದೆ. ಸಹಜವಾಗಿ ಆ ಮಾರ್ಗದಲ್ಲಿ ಮುಳ್ಳು ಇರುತ್ತವೆ.. ಕಲ್ಲು ಇರುತ್ತವೆ.. ತವಕ.. ತಲ್ಲಣ ಇರುತ್ತೆ. ಇವೆಲ್ಲವನ್ನೂ ಎದುರಿಸಿ ಗೆದ್ದವನು ಗೆದ್ದ.. ಸೋತವನು ಸತ್ತ. ಇದಕ್ಕೆ ಉದಾಹರಣೆಯಂತೆ ಇರುವ ಸ್ಯಾಂಡಲ್‌ವುಡ್‌ನ ''ಕೋಟಿ'' ಕಥೆ ಕೇಳಿದರೆ ''ಕೋಟ್ಯಾಧಿಪತಿ''ಯಾಗುವ ಕನಸು ಚಿಗುರೊಡೆಯದೇ ಇರದು.
ಹೌದು.. ಕೋಟಿ.. ಡಾಲಿ ಧನಂಜಯ್ ಮಾಡಿರುವ ಹೊಸ ಮಹಾಯಜ್ಞ. ಮೊನ್ನೆಯಿಂದ ಸಿಕ್ಕಾಪಟ್ಟೆ ಚರ್ಚೆಗೀಡಾದ ಸಿನಿಮಾ ಇದು. ಇದಕ್ಕೆ ಕಾರಣ.. ಡಾಲಿ ಧನಂಜಯ್ ಈ ಚಿತ್ರದ ನಾಯಕ ಅನ್ನುವುದು ಒಂದಾದರೆ, ಬದಲಾದ ಕಾಲಘಟ್ಟದಲ್ಲಿ, ಒಂದ್ಕಾಲದಲ್ಲಿ ಕಿರುತೆರೆಯ ಕನಸುಗಾರ ಎಂದೇ ಕರೆಯಲ್ಪಟ್ಟ ಪರಮೇಶ್ವರ್ ಗುಂಡ್ಕಲ್ ನಿರ್ದೇಶನದ ಚೊಚ್ಚಲ ಸಿನಿಮಾ ಇದು ಅನ್ನುವುದು ಇನ್ನೊಂದು ಕಾರಣ. ಇವೆರಡರ ಆಚೆ ಕುತೂಹಲ ಕೆರಳಿಸಿದ್ದು ಕೋಟಿ ಅನ್ನುವ ಶೀರ್ಷಿಕೆ ಮತ್ತು ಬಿಡುಗಡೆ ಮಾಡಲಾಗಿದ್ದ ಪೋಸ್ಟರ್.

ಹೀಗಾಗಿಯೇ ಈ ಕೋಟಿ ಕೋಟೆಯಲ್ಲಿ ಏನೆಲ್ಲ ಇದೆ ಅನ್ನುವ ಜಿಜ್ಞಾಸೆಯೊಂದಿಗೆ ಕೋಟಿಯ ಟೀಸರ್‌ಗಾಗಿ ಅನೇಕರು ಕಾಯ್ತಿದ್ದರು. ಕಾಲೆಳೆಯೋಕೆ ಎಂದೇ ಕೆಲವರು ಹೊಂಚು ಹಾಕಿ ಕುಳಿತಿದ್ದರು ಕೂಡ. ಎಲ್ಲರಿಗೂ ಪರಮೇಶ್ವರ್ ಗುಂಡ್ಕಲ್ ಯಾನೆ ಪರಮ್ ಸದ್ಯಕ್ಕೆ ಟೀಸರ್ ಮೂಲಕ ಉತ್ತರವನ್ನ ಕೊಟ್ಟಿದ್ದಾರೆ. ಚಿತ್ರದ ಮೇಲಿನ ನಿರೀಕ್ಷೆಯನ್ನೂ ಕೂಡ ಹೆಚ್ಚಿಸಿದ್ದಾರೆ.
ಇನ್ನೂ ಸಿನಿಮಾ ಎಂಬ ಕೀಟ ಪರಮ್ ಅವರಿಗೆ ತುಂಬಾ ಹಿಂದಯೇ ಗಟ್ಟಿಯಾಗಿ ಕಚ್ಚಿದೆ ಅನ್ನುವುದಕ್ಕೆ ಕೈಗನ್ನಡಿಯಂತೆ ಇರುವ ಈ ಕೋಟಿಯಲ್ಲಿ, ಕಲಾವಿದರ ಜೊತೆ ತಂತ್ರಜ್ಞರು ಕೂಡ ಸುರಿಸಿದ ಬೆವರಿನ ವಾಸನೆ ಬರುತ್ತಿದೆ. ವಿಶೇಷವಾಗಿ ಛಾಯಾಗ್ರಾಹಕ ಅರುಣ್ ಬ್ರಹ್ಮ, ಹಿನ್ನೆಲೆ ಸಂಗೀತ ನಿರ್ದೇಶಕ ನೊಬಿನ್ ಪಾಲ್, ಸಂಕಲನಕಾರ ಪ್ರತೀಕ್ ಶೆಟ್ಟಿ ಅವರ ಕೆಲಸ ಎದ್ದು ಕಾಣುತ್ತಿದೆ.

ಈ ಸಿನಿಮಾಗೆ ಕತೆ, ಚಿತ್ರಕತೆ ಮತ್ತು ಸಂಭಾಷಣೆಯನ್ನು ಬರೆದು ಸ್ವತಃ ಪರಮ್ ನಿರ್ದೇಶನದ ಜವಾಬ್ದಾರಿಯನ್ನೂ ಹೊತ್ತಿದ್ದಾರೆ. ಜಿಯೋ ಸ್ಟುಡಿಯೋಸ್‌ನ ಜ್ಯೋತಿ ದೇಶಪಾಂಡೆ ಚಿತ್ರವನ್ನ ನಿರ್ಮಾಣ ಮಾಡಿದ್ದಾರೆ ಈ ಮೂಲಕ ಕನ್ನಡಕ್ಕೆ ಬಂದಿದ್ದಾರೆ. ವಾಸುಕಿ ವೈಭವ್ ಹಾಡುಗಳನ್ನು ಸಂಯೋಜನೆ ಚಿತ್ರಕ್ಕಿದೆ. ಇನ್ನೂ ಚಿತ್ರದ ತಾರಾಬಳಗದಲ್ಲಿ ಯಾರೆಲ್ಲ ಇದ್ದಾರೆ ಅನ್ನುವುದು ಚಿತ್ರದ ಟೀಸರ್ ನೋಡಿದ್ದರೆ ನಿಮಗೆ ಈಗಾಗಲೇ ಗೊತ್ತಾಗಿರುತ್ತೆ. ಹೊಯ್ಸಳ ಚಿತ್ರದ ನಂತರ ತೆರೆಗೆ ಬರುತ್ತಿರುವ ಡಾಲಿ ಧನಂಜಯ್ ಅಭಿನಯಿಸಿದ ಕನ್ನಡ ಸಿನಿಮಾ ಇದು ಅನ್ನುವುದು ನಿಮ್ಮ ಗಮನಕ್ಕಿರಲಿ
ಒಟ್ನಲ್ಲಿ ಸದ್ಯಕ್ಕೆ ಕೋಟಿ 31 ಲಕ್ಷ ಬಾಕಿ ಉಳಿಸಿಕೊಂಡಿದ್ದಾನೆ. ಎಲ್ಲರೂ ಬೆತ್ತಲೆ ಆಗಿರುವ ಟೈಮ್ ನಲ್ಲಿ ಬಟ್ಟೆ ಹಾಕಿಕೊಂಡಿದ್ದಾನೆ. ಪ್ರತಿ ಮನುಷ್ಯನಲ್ಲಿ ಒಬ್ಬ ಕಳ್ಳ ಇದ್ದಾನೆ ಅನ್ನುವುದನ್ನ ಬಲವಾಗಿ ನಂಬಿರುವ ಈ ಕೋಟಿಯ ಕೋಟ್ಯಂತರ ರೂಪಾಯಿಯ ಕಥೆಯನ್ನ ಟೀಸರ್ ನೋಡಿದ ನಂತರ ನೋಡ್ಲೇಬೇಕು ಅಂತ ನಿಮಗೆ ಅನಿಸಿದರೆ ನೀವು ಜೂನ್ 14ರವರೆಗೆ ಕಾಯ್ಲೇಬೇಕು. ಯಾಕೆಂದರೆ ಅವತ್ತು ಕೋಟಿ ನಿಮ್ಮ ಹತ್ರದ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.


Click it and Unblock the Notifications











