Viral Video ; ಯಶ್ ಜೊತೆ ಜವಾನ್ ಡೈರೆಕ್ಟರ್ ಅಟ್ಲಿ ಮಾತುಕತೆ, ಕಥೆ ಹೇಳಿರಬಹುದಾ...?
ರಾಕಿಂಗ್ ಸ್ಟಾರ್ ಅನ್ನಿಸಿಕೊಳ್ಳುವ ಮುಂಚಿನ ದಿನಗಳಿಂದ ಹಿಡಿದು ಇವತ್ತಿನ ವರೆಗೆ ಯಶ್ ನಡೆದುಬಂದ ಸಿನಿಮಾ ಮತ್ತು ಖಾಸಗಿ ಬದುಕಿನ ಹಾದಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಾ ಬಂದರೆ ಹಠಕ್ಕೆ ಬಿದ್ದು ಸಾಧಿಸುವ ಇವರ ಗುಣ ಎದ್ದುಕಾಣುತ್ತದೆ. ಆರಂಭದ ಒಂದಷ್ಟು ಸಿನಿಮಾಗಳು ನಿಲ್ಲದಿದ್ದಾಗ ಯಶ್ ಕತೆ ಮುಗೀತು' ಅಂತಾ ಗಾಂಧಿನಗರದ ಜನಾ ಷರಾ ಬರೆದಿದ್ದರು.
ಆದರೆ ರಾಜಾಹುಲಿ, ಗಜಕೇಸರಿಯಂಥಾ ಸಿನಿಮಾಗಳ ಮೂಲಕ ಯಶ್ ಮತ್ತೆ ಎದ್ದು ನಿಂತರು. ಹೊಸ ಹುಡುಗ ಸಂತೋಷ್ ಆನಂದ್ ರಾಮ್ ಕೈಗೆ ಸಿನಿಮಾ ಕೊಟ್ಟು ಮಿಸ್ಟರ್ ಅಂಡ್ ಮಿಸೆಸ್ ರಾಮಾಚಾರಿ ಮಾಡೋ ಹೊತ್ತಿನಲ್ಲಿ ಯಶ್ ಚಾಪ್ಟರ್ರು ಮುಗೀತು ಗುರೂ' ಅಂತಾ ಅವರ ಸುತ್ತಲಿನವರೇ ಮಾತಾಡಿಕೊಂಡಿದ್ದಿದೆ. ಆದರೆ ಯಶ್ ಮಾತ್ರ ತಮ್ಮ ಬುದ್ದಿವಂತಿಕೆಯನ್ನೆಲ್ಲಾ ಧಾರೆಯೆರೆದು ಆ ಸಿನಿಮಾಗೆ ಏನೇನು ಬೇಕೋ ಅದೆಲ್ಲವನ್ನೂ ದಕ್ಕಿಸಿಕೊಂಡು ರಾಮಾಚಾರಿಯನ್ನು ದೊಡ್ಡ ಮಟ್ಟದಲ್ಲಿ ಗೆಲ್ಲಿಸಿದರು. ಒಂದರ ಹಿಂದೆ ಹಿಟ್ ಸಿನಿಮಾಗಳನ್ನು ನೀಡುತ್ತಾ ಕಲೆಕ್ಷನ್ ವಿಚಾರದಲ್ಲೂ ಗೆದ್ದು ಸ್ಟಾರ್ ಎನಿಸಿಕೊಂಡರು.

ಇನ್ನೂ ಇಲ್ಲಿನ ಜನ ಅಭಿಮಾನ'ದ ವಿಚಾರವಾಗಿ ಒಬ್ಬರನ್ನೊಬ್ಬರು ಕಾಲೆಳೆದುಕೊಳ್ಳೋ ಸಮಯಕ್ಕೆ ಸೀಮಿತ ಪರಿಧಿಯಲ್ಲಿ ಕಿತ್ತಾಡೋದಕ್ಕಿಂತಾ ಗಡಿ ದಾಟಿ ಹೆಸರು ಮಾಡಬೇಕು ಅಂತಾ ನಿರ್ಧರಿಸಿ ಕೆ.ಜಿ.ಎಫ್ ನಂಥಾ ಐದು ಭಾಷೆ ಸಿನಿಮಾದ ಮೂಲಕ ತನ್ನ ವ್ಯಾಪ್ತಿಯನ್ನು ವೃದ್ಧಿಸಿಕೊಳ್ಳುವತ್ತ ಯಶ್ ಗಮನ ಹರಿಸಿದರು.ಕೆಜಿಎಫ್ ಸಿನಿಮಾದ ಮೂಲಕ ಇಡೀ ಭಾರತವೇ ಒಮ್ಮೆ ಕನ್ನಡದ ಇಂಡಸ್ಟ್ರಿಯ ಕಡೆ ತಿರುಗಿ ನೋಡುವಂತೆ ಮಾಡಿದರು.
ಇಂಥಾ ಯಶ್‌ಗೆ ಇವತ್ತು ಚಿನ್ನದಂತ ಬೇಡಿಕೆ ಇದೆ. ಯಶ್ ಜೊತೆ ಒಮ್ಮೆಯಾದರೂ ಕೆಲಸ ಮಾಡಬೇಕೆನ್ನುವ ಅಪಾರವಾದ ಆಸೆ ದಕ್ಷಿಣದಿಂದ ಉತ್ತರದವರೆಗೆ ಅನೇಕರಲ್ಲಿದೆ. ಯಶ್ ಅವರ ನೇಮು-ಫೇಮುಗೆ ಕೈಗನ್ನಡಿ ಎಂಬಂತೆ ಅಂಬಾನಿಯಂತ ಕರೋಡಪತಿ ಮಗನ ಮದ್ವೆಯಲ್ಲಿ ಕನ್ನಡ ಚಿತ್ರರಂಗದಿಂದ ಭಾಗಿಯಾದ ಏಕೈಕ ಸ್ಟಾರ್ ಎಂಬ ಹೆಗ್ಗಳಿಕೆಗೆ ಕೂಡ ಯಶ್ ಪಾತ್ರರಾಗಿದ್ದಾರೆ. ಅಭಿಮಾನಿಗಳ ಎದೆಯುಬ್ಬಿಸಿದ್ದಾರೆ. ಹೀಗಿರುವಾಗ ಇದೇ ಯಶ್ ಅವರನ್ನು ಇದೇ ಅಂಬಾನಿ ಮದ್ವೆಯಲ್ಲಿ ಅಟ್ಲಿ ಭೇಟಿಯಾಗಿ ಮಾತುಕಥೆಯನ್ನು ಮಾಡಿದ್ದಾರೆ. ಅಭಿಮಾನಿಗಳು ಪುಳಕಿತಗೊಳ್ಳಲು ಇದಕ್ಕಿಂತ ಕಾರಣ ಬೇಕಾ..?

ಹೀಗಾಗಿಯೇ ಚಿಕ್ಕ ವಿಡಿಯೋವೊಂದನ್ನು ಕಣ್ಣು ಮಿಟುಕಿಸದೆ ಕಣ್ತುಂಬಿಕೊಳ್ಳುತ್ತಿರುವ 'ರಾಕಿ' ಬಣ ಮನದೊಳಗೆ ಏನೇನೋ ಲೆಕ್ಕಾಚಾರವನ್ನೂ ಹಾಕುತ್ತಿದೆ. ಮೆರ್ಸಲ್, ಬಿಗಿಲ್, ಜವಾನ್, ಹೀಗೆ ಒಂದಕ್ಕಿಂತೊಂದು ಅದ್ಭುತಗಳನ್ನೂ ಸೃಷ್ಟಿಸಿದ ಡೈರೆಕ್ಟರ್ ಅಟ್ಲಿ ಅಂಬಾನಿ ಮದ್ವೆಯಲ್ಲಿ ಯಶ್ ಅವರಿಗೆ ಕಥೆಯೊಂದನ್ನು ಹೇಳಿರಬಹುದಾ ಎಂಬ ಚರ್ಚೆಯನ್ನೂ ಯಶ್ ಭಕ್ತಗಣ ಸಾಮಾಜಿಕ ಜಾಲತಾಣದಲ್ಲಿ ಮಾಡುತ್ತಿದೆ. ಭವಿಷ್ಯದಲ್ಲಿ ಯಶ್‌ಗೆ ಅಟ್ಲಿ ಆಕ್ಷನ್ ಕಟ್ ಹೇಳಿದರು ಹೇಳಬಹುದು ಎಂದು ಸಂಭ್ರಮಿಸುತ್ತಿದೆ.
ಸದ್ಯಕ್ಕೆ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ವೈರಲ್ ಆಗುತ್ತಿದೆ. ಬಗೆ ಬಗೆಯ ಅಭಿಪ್ರಾಯಗಳು ಕೂಡ ವ್ಯಕ್ತವಾಗುತ್ತಿವೆ. ಮಿಕ್ಕಂತೆ ಯಶ್ ಸದ್ಯಕ್ಕೆ ಟಾಕ್ಸಿಕ್ ಚಿತ್ರದ ಗುಂಗಿನಲ್ಲಿದ್ದಾರೆ. ಗೀತು ಮೋಹನ್ ದಾಸ್ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಕೆವಿಎನ್ ಪ್ರೊಡಕ್ಷನ್ಸ್ ಜೊತೆ ಸೇರಿ ಖುದ್ದು ಯಶ್ ಈ ಚಿತ್ರಕ್ಕೆ ಬಂಡವಾಳ ಹೂಡುತ್ತಿದ್ದಾರೆ.


Click it and Unblock the Notifications











