ಇವ್ರೆಲ್ಲ 500 ರೂಪಾಯಿ ಕೊಟ್ಟು 'ದಿ ವಿಲನ್' ಟೀಸರ್ ಟಿಕೆಟ್ ಕೊಂಡ್ಕೊಂಡ್ರು
ನಿರ್ದೇಶಕ ಪ್ರೇಮ್ ಏನು ಮಾಡಿದರು ಅದು ಸುದ್ದಿ ಆಗುತ್ತದೆ. ಪ್ರೇಮ್ ತಮ್ಮ ಮಾತಿನಲ್ಲಿ ಯಾವಾಗಲೂ ಹೇಳುವ ಹಾಗೆ ಇಡೀ ಸೌತ್ ಇಂಡಿಯಾದಲ್ಲಿ ಯಾರು ಮಾಡದ ಕೆಲಸವನ್ನು ಈಗ ಮಾಡಿದ್ದಾರೆ. ಒಂದು ಸಿನಿಮಾದ ಟೀಸರ್ ನೋಡುವುದಕ್ಕೆ 500 ರೂಪಾಯಿ ಟಿಕೆಟ್ ಬೆಲೆ ಇಟ್ಟಿರುವುದು ಇದೇ ಮೊದಲು.
'ದಿ ವಿಲನ್' ಟೀಸರ್ ನೋಡುವುದಕ್ಕೆ 500 ರೂಪಾಯಿ ಯಾರು ಕೊಡುತ್ತಾರೆ ಎಂದು ಅನೇಕರು ಅಂದುಕೊಂಡರು. ಆದರೆ ಈಗ ಆ ಟಿಕೆಟ್ ಗಳಿಗೆ ದೊಡ್ಡ ಡಿಮ್ಯಾಂಡ್ ಹುಟ್ಟಿಕೊಂಡಿದೆ. ಎಲ್ಲರೂ ಟಿಕೆಟ್ ಖರೀದಿ ಮಾಡಿ ಆ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ.

ಅಂದಹಾಗೆ, 'ದಿ ವಿಲನ್' ಚಿತ್ರದ ಟೀಸರ್ ಟಿಕೆಟ್ ನಿಂದ ಬಂದ ಹಣವನ್ನು ಕಷ್ಟದಲ್ಲಿ ಇರುವ ನಿರ್ದೇಶಕರಿಗೆ ನೀಡಲಾಗುತ್ತದೆ ಎಂದು ಪ್ರೇಮ್ ತಿಳಿಸಿದ್ದಾರೆ. ಚಿತ್ರದ ಟೀಸರ್ ಪ್ರದರ್ಶನ ಕಾರ್ಯಕ್ರಮ ಇದೇ ಗುರುವಾರ (ಜೂನ್ 28) ಮಾಗಡಿ ರಸ್ತೆಯ ಜಿಟಿ ಮಾಲ್ ನಲ್ಲಿ ನಡೆಯಲಿದೆ.

'ದಿ ವಿಲನ್' ಸ್ಯಾಂಡಲ್ ವುಡ್ ನ ಈ ವರ್ಷದ ಬಹು ನಿರೀಕ್ಷಿತ ಸಿನಿಮಾವಾಗಿದೆ. ಮೊದಲ ಬಾರಿಗೆ ಈ ಚಿತ್ರದಲ್ಲಿ ಶಿವರಾಜ್ ಕುಮಾರ್ ಹಾಗೂ ಸುದೀಪ್ ಒಂದಾಗಿದ್ದಾರೆ. ಆಮಿ ಜಾಕ್ಸನ್ ಚಿತ್ರ ನಾಯಕಿಯಾಗಿದ್ದು, ಈ ಚಿತ್ರದ ಮೂಲಕ ಅವರು ಕನ್ನಡಕ್ಕೆ ಕಾಲಿಟ್ಟಿದ್ದಾರೆ. ಸಿನಿಮಾ ಈ ವರ್ಷದ ವರಮಹಾಲಕ್ಷ್ಮಿ ಹಬ್ಬದ ಪ್ರಯಕ್ತ ಬಿಡುಗಡೆಯಾಗಲಿದೆ.


Click it and Unblock the Notifications











