ಹಾಡಾಯ್ತು ದರ್ಶನ್ ಬಾಯಿಯಿಂದ ಉದುರಿದ ಅಣಿಮುತ್ತು ? ಡೆವಿಲ್ ದರ್ಶನಕ್ಕೆ ದಿನಗಣನೆ ಆರಂಭ..!
ಅಸಂಖ್ಯಾತ ಅಗಣಿತ ಅಭಿಮಾನಿಗಳಿಗೆ ಈ ವರ್ಷ ಬೆಳ್ಳಿತೆರೆಯಲ್ಲಿ ತಮ್ಮ ನೆಚ್ಚಿನ ನಾಯಕ ದರ್ಶನ್ ಅವರ ದರ್ಶನವಾಗಲಿದೆ. ಬೆಳ್ಳಿತೆರೆಯಲ್ಲಿ ಡೆವಿಲ್ ಧಗಧಗಿಸಲಿದೆ. ಅಕ್ಟೋಬರ್ 31ರಂದು ಡೆವಿಲ್ ತೆರೆಗೆ ಬರಲಿದೆ ಎನ್ನುವ ಮಾತು ಇದೆಯಾದರೂ ಚಿತ್ರತಂಡ ಈ ಕುರಿತು ಇನ್ನೂ ಅಧಿಕೃತವಾದ ಮಾಹಿತಿಯನ್ನು ಹಂಚಿಕೊಂಡಿಲ್ಲವಾದರೂ ಸದ್ಯ ಈ ಚಿತ್ರದ ಮೊದಲ ಹಾಡು ಬಿಡುಗಡೆಗೆ ಮುಹೂರ್ತ ಫಿಕ್ಸ್ ಆಗಿದೆ.
ಇದೇ ಆಗಸ್ಟ್ 15ರಂದು ಸ್ವಾತಂತ್ರ್ಯ ದಿನಾಚಾರಣೆಯ ಪ್ರಯುಕ್ತ ಹಾಡು ಬಿಡುಗಡೆಯಾಗಲಿದೆ. ದರ್ಶನ್ ಅವರ ಬಾಯಿಂದ ಉದುರಿದ ಅಣಿಮುತ್ತೇ ಈ ಹಾಡಿನ ಸಾಲು ಎನ್ನುವುದೇ ವಿಶೇಷ.

ಹೌದು.. ''ಇದ್ರೆ ನೆಮ್ದಿಯಾಗ್ ಇರ್ಬೇಕು".. ಈ ಹಿಂದೆ ದರ್ಶನ್ ಅವರದ್ದೇ ಎನ್ನಲಾದ ಆಡಿಯೋದಲ್ಲಿ ಎಲ್ಲರ ಗಮನ ಸೆಳೆದಿದ್ದ ಸಾಲು ಇದು. ಈ ಸಾಲನ್ನು ಇಟ್ಕೊಂಡು ಹಲವಾರು ಜನ ರೀಲ್ಸ್ ಮಾಡಿದ್ದರು. ಸೋಶಿಯಲ್ ಮೀಡಿಯಾದಲ್ಲಿ ಈ ಸಾಲು ಹಂಚಿಕೊಂಡು ತಮ್ಮ ಅಭಿಮಾನದ ಪ್ರದರ್ಶನವನ್ನು ಮಾಡಿದ್ದರು.
ಇದೀಗ ಇದೇ ಸಾಲು ಹಾಡಾಗಿದೆ. ಈ ಹಾಡಿನ ಸಾಹಿತ್ಯ ಯಾರದ್ದು ಎನ್ನುವುದು ಅವತ್ತೇ ಗೊತ್ತಾಗಲಿದೆ ಆದರೂ ಸದ್ಯ ತಮ್ಮ ಇಷ್ಟದ ಸಾಲು ಹಾಡಿನ ರೂಪದಲ್ಲಿ ಬರುತ್ತಿರುವುದಕ್ಕೆ ಅಭಿಮಾನಿಗಳು ಖುಷಿಯಾಗಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಹಾಡಿನ ಕುರಿತು ಚರ್ಚೆ ಮಾಡುತ್ತಿದ್ದಾರೆ.
ಇನ್ನು ಸಾಮಾನ್ಯವಾಗಿ ದರ್ಶನ್ ಸಿನಿಮಾ ಅಂದರೆ ಅಲ್ಲಿ ಹರಿಕೃಷ್ಣ ಅವರ ಸಂಗೀತ ಇರಲೇಬೇಕು ಎನ್ನುವ ನಿಯಮ ಇತ್ತು. ಅಲ್ಲೊಮ್ಮೆ.. ಇಲ್ಲೊಮ್ಮೆ.. ಅರ್ಜುನ್ ಜನ್ಯ ಬಂದಿದ್ದರು. ಆದರೆ ಈಗ ಇದೇ ಮೊದಲ ಬಾರಿ ದರ್ಶನ್ ಚಿತ್ರಕ್ಕೆ ಅಜನೀಶ್ ಲೋಕನಾಥ್ ಸಂಗೀತವನ್ನು ನೀಡಿದ್ದಾರೆ. ಹೀಗಾಗಿ ಡೆವಿಲ್ ಚಿತ್ರದ ಆಡಿಯೋ ಆಲ್ಬಂ ಮೇಲೆ ಕುತೂಹಲ ಇದ್ದೇ ಇದೆ. ಈ ಕುತೂಹಲಕ್ಕೆ ಈಗ ಉತ್ತರ ಸಿಗುವ ಕಾಲ ಸನ್ನಿಹಿತವಾಗಿದೆ.
ಮಿಲನಾ ಖ್ಯಾತಿಯ ಪ್ರಕಾಶ್ ವೀರ್ ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಈ ಹಿಂದೆ ದರ್ಶನ್‌ಗೆ ''ತಾರಕ್'' ಚಿತ್ರ ಮಾಡಿದ್ದ ಪ್ರಕಾಶ್ ಈ ಬಾರಿ ಯಾವ ರೀತಿಯ ಕಥೆ ಹೆಣೆದಿದ್ದಾರೆ ಎನ್ನುವ ಪ್ರಶ್ನೆ ಕೂಡ ಹಲವರನ್ನು ಕಾಡುತ್ತಿದೆ.

ಯಾಕೆಂದರೆ.. ಡೆವಿಲ್ ಚಿತ್ರವನ್ನು ಅನೇಕರು ಮಾಸ್ ಕಥೆಯನ್ನು ಹೊಂದಿರುವ ಚಿತ್ರ ಎಂದು ಅಂದುಕೊಂಡಿದ್ದರು. ದರ್ಶನ್ ಚಿತ್ರದಲ್ಲಿ ಅಂಡರ್‌ವರ್ಲ್ಡ್ ಡಾನ್ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ ಎಂದುಕೊಂಡಿದ್ದರು. ಆದರೆ.. ಕೆಲ ದಿನಗಳ ಹಿಂದೆಯಷ್ಟೇ ಮುಖ್ಯಮಂತ್ರಿಯ ರೂಪದಲ್ಲಿ ಪ್ರತ್ಯಕ್ಷವಾದ ಫೋಟೊ ಒಂದು ವೈರಲ್ ಆಗಿತ್ತು. ದರ್ಶನ್ ಮುಖ್ಯಮಂತ್ರಿ ಶ್ರೀ ಧನುಶ್ ರಾಜಶೇಖರ್ ಎಂಬ ಪಾತ್ರವನ್ನು ನಿರ್ವಹಿಸಿದ್ದಾರೆ ಎನ್ನುವುದು ಗೊತ್ತಾಗಿತ್ತು.
ಈ ಹಿನ್ನೆಲೆ ಎಲ್ಲಿಯ ಡಾನ್, ಎಲ್ಲಿಯ ಮುಖ್ಯಮಂತ್ರಿ, ಒಂದಕ್ಕೊಂದು ಏನು ಸಂಬಂಧ ಎನ್ನುವ ಪ್ರಶ್ನೆ ಅಭಿಮಾನಿಗಳನ್ನು ಕಾಡುತ್ತಿದೆ. ದರ್ಶನ್ ಅವರದ್ದು ಚಿತ್ರದಲ್ಲಿ ಡಬಲ್ ರೋಲಾ ಅಥವಾ ಹಣಬಲದಿಂದ ಅಧಿಕಾರದ ಬಲವನ್ನು ಡಾನ್ ಪಡೆಯುತ್ತಾನಾ ? ಮುಖ್ಯಮಂತ್ರಿಯಾಗಿದ್ದ ವ್ಯಕ್ತಿ ಆ ನಂತರ ಡಾನ್ ಆಗುತ್ತಾನಾ ? ಎಂಬ ಇತ್ಯಾದಿ ಪ್ರಶ್ನೆಗಳು ಅಭಿಮಾನಿಗಳಲ್ಲಿವೆ.
ಇನ್ನುಳಿದಂತೆ ಪತ್ರಿಕೋದ್ಯಮದಲ್ಲಿ ಪದವಿ ಪಡೆದಿರುವ ಮಾಡೆಲ್ ಹಾಗೂ ಉತ್ತಮ ಭರತನಾಟ್ಯ ಕಲಾವಿದೆಯಾಗಿ ಕೂಡ ಹೆಸರು ಮಾಡಿರುವ ಮಂಗಳೂರು ಚೆಲುವೆ ರಚನಾ ರೈ ಚಿತ್ರದಲ್ಲಿ ನಾಯಕಿಯ ಪಾತ್ರವನ್ನು ನಿರ್ವಹಿಸಿದ್ದಾರೆ. ಅಚ್ಯುತ್ ಕುಮಾರ್, ಮಹೇಶ್ ಮಾಂಜ್ರೇಕರ್, ಶರ್ಮಿಳಾ ಮಾಂಡ್ರೆ, ಚಂದು ಗೌಡ, ವಿನಯ್ ಗೌಡ, ಸೇರಿ ಹಲವರು ಚಿತ್ರದಲ್ಲಿದ್ದಾರೆ. ಸುಧಾಕರ್ ಜೆ ರಾಜ್ ಛಾಯಾಗ್ರಹಣ ಡೆವಿಲ್ ಚಿತ್ರಕ್ಕೆ ಇದೆ.
ಒಟ್ನಲ್ಲಿ ಸದ್ಯ ದಿ ಡೆವಿಲ್ ಚಿತ್ರದ ಮೊದಲ ಹಾಡು ಈ ಆಗಸ್ಟ್ 15ರಂದು ಬಿಡುಗಡೆಯಾಗಲಿದ್ದು, ಹಾಡು ಎಷ್ಟರ ಮಟ್ಟಿಗೆ ಅಭಿಮಾನಿಗಳಿಗೆ ಕಿಕ್ ಕೊಡುತ್ತೆ ಎನ್ನುವುದನ್ನು ಕಾದು ನೋಡಬೇಕಿದೆ. ಬೆಳ್ಳಿತೆರೆಯಲ್ಲಿ ''ದಿ ಡೆವಿಲ್'' ದರ್ಶನಕ್ಕೆ ದಿನಗಣನೆ ಆರಂಭವಾಗಿದೆ.


Click it and Unblock the Notifications











