'ಕಾಟೇರ' ಡೈಲಾಗ್ ಬಗ್ಗೆ ವನ್ಯಜೀವಿ ಸಂರಕ್ಷಣಾ ಒಕ್ಕೂಟ ಆಕ್ಷೇಪ: ಡೈಲಾಗ್ ತೆಗೆಯುವಂತೆ ದೂರು
ದರ್ಶನ್ ನಟನೆಯ 'ಕಾಟೇರ' ಸಿನಿಮಾ ಟ್ರೈಲರ್ ಸೋಶಿಯಲ್ ಮೀಡಿಯಾದಲ್ಲಿ ದಾಖಲೆ ಬರೆದಿದೆ. ಲಕ್ಷ ಲಕ್ಷ ವೀವ್ಸ್ ಸಾಧಿಸಿ ಸದ್ದು ಮಾಡ್ತಿದೆ. ದರ್ಶನ್ ಆರ್ಭಟ, ಜಬರ್ದಸ್ತ್ ಡೈಲಾಗ್ಸ್, ಆಕ್ಷನ್ ಸನ್ನಿವೇಶಗಳು ನೋಡಿ ಸಿನಿರಸಿಕರು ಫಿದಾ ಆಗಿದ್ದಾರೆ. ಇದೀಗ ಚಿತ್ರದ ಡೈಲಾಗ್ ವಿವಾದ ಸೃಷ್ಟಿಸುವ ಸುಳಿವು ಸಿಗುತ್ತಿದೆ. ಈಗಾಗಲೇ ಈ ಬಗ್ಗೆ ವನ್ಯಜೀವಿ ಸಂರಕ್ಷಣಾ ಒಕ್ಕೂಟ ಅಸಮಾಧಾನ ವ್ಯಕ್ತಪಡಿಸಿದೆ.
ಶನಿವಾರ ಹುಬ್ಬಳ್ಳಿಯಲ್ಲಿ ನಡೆದ ಅದ್ಧೂರಿ ಕಾರ್ಯಕ್ರಮದಲ್ಲಿ 'ಕಾಟೇರ' ಚಿತ್ರದ ಟ್ರೈಲರ್ ರಿಲೀಸ್ ಆಗಿತ್ತು. ಮುಖ್ಯಮಂತ್ರಿ ಸಿದ್ದರಾಮಯ್ಯ ಟ್ರೈಲರ್ ಲೋಕಾರ್ಪಣೆ ಮಾಡಿ ಶುಭ ಕೋರಿದ್ದರು. ಇಡೀ ಚಿತ್ರತಂಡ ಕಾರ್ಯಕ್ರಮದಲ್ಲಿ ಭಾಗಿ ಆಗಿತ್ತು. ತರುಣ್ ಸುಧೀರ್ ನಿರ್ದೇಶನದ 'ಕಾಟೇರ' ಸಿನಿಮಾ ಭಾರೀ ಕುತೂಹಲ ಮೂಡಿಸಿದೆ. ಚಿತ್ರದಲ್ಲಿ 70ರ ದಶಕದ ಕಥೆ ಹೇಳಲಾಗಿದೆ. ನೈಜ ಘಟನೆಗಳನ್ನು ಆಧರಿಸಿ ಸಿನಿಮಾ ನಿರ್ಮಾಣವಾಗಿದೆ. ನಿರ್ದೇಶಕ ತರುಣ್ ಸುಧೀರ್ ಜೊತೆ ಸೇರಿ ಜಡೇಶ್ ಹಂಪಿ ಕಥೆ, ಚಿತ್ರಕಥೆ ಸಿದ್ಧಪಡಿಸಿದ್ದಾರೆ.

'ಕಾಟೇರ' ಸಿನಿಮಾ ಡೈಲಾಗ್‌ಗಳು ಒಂದಕ್ಕಿಂತ ಒಂದು ಚೆನ್ನಾಗಿದೆ. ಮಾಸ್ತಿ ಉಪ್ಪಾರಳ್ಳಿ ಚಿತ್ರಕ್ಕೆ ಸಂಭಾಷಣೆ ಬರೆದಿದ್ದಾರೆ. ಇದೀಗ ಟ್ರೈಲರ್‌ನಲ್ಲಿರುವ ಒಂದು ಡೈಲಾಗ್ ಬಗ್ಗೆ ವನ್ಯಜೀವಿ ಸಂರಕ್ಷಣಾ ಒಕ್ಕೂಟ ಆಕ್ಷೇಪ ವ್ಯಕ್ತಪಡಿಸಿದೆ. ಈ ಕುರಿತು ನಿಕಟಪೂರ್ವ ವನ್ಯಜೀವಿ ಪರಿಪಾಲಕ ಪ್ರಸನ್ನ ಕುಮಾರ್ ರಾಜ್ಯಪಾಲರಿಗೆ ಹಾಗೂ ಮುಖ್ಯಮಂತ್ರಿಗೆ ಮೇಲ್ ಮೂಲಕ ದೂರು ನೀಡಿರುವುದಾಗಿ ಮಾಹಿತಿ ನೀಡಿದ್ದಾರೆ.
ಚಿತ್ರದ ಟ್ರೈಲರ್‌ನಲ್ಲಿ ಜಗಪತಿ ಬಾಬು ಪಾತ್ರ ಊರಿನ ಬಡ ಜನರನ್ನು ಉದ್ದೇಶಿಸಿ "ಇವ್ರೆಲ್ಲ ಹಾವುಗಳಿದ್ದಂಗೆ. ವಿಷ ಇಲ್ಲ ಅಂದ್ರೆ ಹಿಡಿಬೇಕು. ವಿಷ ಇದ್ರೆ ಹೊಡಿಬೇಕು" ಎನ್ನುವ ಡೈಲಾಗ್ ಹೊಡಿತ್ತಾರೆ. ಇದೇ ಡೈಲಾಗ್ ಬಗ್ಗೆ ಈಗ ಆಕ್ಷೇಪ ವ್ಯಕ್ತವಾಗಿದೆ. ಈ ಡೈಲಾಗ್‌ನಲ್ಲಿ ಹಾವುಗಳನ್ನು ಹೊಡೆದು ಸಾಯಿಸಬೇಕು ಎನ್ನುವ ಅರ್ಥದಲ್ಲಿ ಮಾತನಾಡಲಾಗಿದೆ. ಈ ಹೇಳಿಕೆ ಸಿನಿಮಾ ನೋಡುವವರ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಅಳಿವಿನ ಅಂಚಿನಲ್ಲಿರುವ ವಿಷಕಾರಿ ಹಾವುಗಳ ಸಂರಕ್ಷಣೆಗೆ 2021ರಲ್ಲಿ ಕಾನೂನು ರೂಪಿಸಲಾಗಿದೆ. ವಿಷಕಾರಿ ಹಾವುಗಳನ್ನು ಉಳಿಸಿಕೊಂಡು ಹೋಗಬೇಕೇ ಹೊರತು ಹೊಡೆದು, ಕೊಲ್ಲೋಕೆ ಪ್ರಚೋದನೆ ನೀಡಬಾರದು ಎಂದು ಪ್ರಸನ್ನ ಕುಮಾರ್ ಹೇಳಿದ್ದಾರೆ.

ವನ್ಯ ಜೀವಿಗಳ ಬಗ್ಗೆ 'ಕಾಟೇರ' ಚಿತ್ರದಲ್ಲಿರುವ ಡೈಲಾಗ್ ಅಪಕ್ವವಾಗಿದೆ. ಕೂಡಲೇ ಅದನ್ನು ಕೈಬಿಡಬೇಕು. ಸೆನ್ಸಾರ್ ಮಂಡಳಿಗೆ ಈ ಬಗ್ಗೆ ಅರಿವು ಇರಬೇಕಿತ್ತು. ಚಿತ್ರಕ್ಕೆ ಸೆನ್ಸಾರ್ ಸರ್ಟಿಫಿಕೇಟ್ ನೀಡುವಾಗ ಇದನ್ನೆಲ್ಲಾ ನೋಡಬೇಕಿತ್ತು. ಇದರಿಂದ ಕೆಟ್ಟ ಸಂದೇಶ ರವಾನೆಯಾಗುತ್ತದೆ. ಇದು ಐಪಿಸಿ ಉಲ್ಲಂಘನೆ ಕೂಡ ಆಗುತ್ತದೆ ಎಂದಿದ್ದಾರೆ.
ರಾಕ್‌ಲೈನ್ ವೆಂಕಟೇಶ್ 'ಕಾಟೇರ' ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಆರಾಧನಾ ರಾಮು ಚಿತ್ರದಲ್ಲಿ ದರ್ಶನ್ ಜೋಡಿಯಾಗಿ ನಟಿಸಿದ್ದಾರೆ. ಇನ್ನುಳಿದಂತೆ ಬಿರಾದಾರ್, ಅಚ್ಯುತ್ ಕುಮಾರ್, ವಿನೋದ್ ಆಳ್ವ, ಕುಮಾರ್ ಗೋವಿಂದ್, ಶ್ರುತಿ ಚಿತ್ರದ ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ.
ಇಂದಿರಾ ಗಾಂಧಿ ಆಡಳಿತಾವಧಿಯಲ್ಲಿ ಜಾರಿಗೆ ತಂದ 'ಉಳುವವನೆ ಭೂಮಿಯ ಒಡೆಯ' ಕಾಯ್ದೆಯ ಸುತ್ತಾ 'ಕಾಟೇರ' ಸಿನಿಮಾ ಕಥೆ ಸಾಗಲಿದೆ. ಹಳ್ಳಿಯೊಂದರಲ್ಲಿ ಜಮೀನ್ದಾರರು ಹಾಗೂ ರೈತರ ನಡುವಿನ ಸಂಘರ್ಷದ ಕಥೆ ಚಿತ್ರದಲ್ಲಿದೆ. ಒಂದಷ್ಟು ನೈಜ ಘಟನೆಗಳನ್ನು ಆಧರಿಸಿ ಸಿನಿಮಾ ಕಟ್ಟಿಕೊಡಲಾಗಿದೆ. ವಿ. ಹರಿಕೃಷ್ಣ ಸಂಗೀತ, ಸುಧಾಕರ್ ರಾಜ್ ಛಾಯಾಗ್ರಹಣ ಚಿತ್ರಕ್ಕಿದೆ.
ಈಗಾಗಲೇ 'ಕಾಟೇರ' ಚಿತ್ರದ ಪೋಸ್ಟರ್‌ಗಳು, ಟೀಸರ್, ಸಾಂಗ್ಸ್ ರಿಲೀಸ್ ಆಗಿ ಹಿಟ್ ಆಗಿದೆ. ಸದ್ಯ ಟ್ರೈಲರ್ ರಿಲೀಸ್ ಆಗಿ 15 ಮಿಲಿಯನ್‌ಗೂ ಅಧಿಕ ವೀವ್ಸ್ ಸಾಧಿಸಿ ದಾಖಲೆ ಬರೆದಿದೆ. ಬಹಳ ದೊಡ್ಡಮಟ್ಟದಲ್ಲಿ ಸಿನಿಮಾ ರಿಲೀಸ್ ಪ್ಲ್ಯಾನ್ ನಡೀತಿದೆ. 'ಕಾಟೇರ' ಚಿತ್ರದ ಮೂಲಕ ಈ ವರ್ಷವನ್ನು ಅದ್ಧೂರಿಯಾಗಿ ಮುಗಿಸಲು ಚಿತ್ರರಂಗ ಸಜ್ಜಾಗುತ್ತಿದೆ.


Click it and Unblock the Notifications











