'ಯುಐ', 'ಭೀಮ', 'ಮಾರ್ಟಿನ್', 'ಮ್ಯಾಕ್ಸ್' ಬಿಟ್ಹಾಕಿ; ಈ ವರ್ಷ ನಿರೀಕ್ಷೆ ಹುಟ್ಟಿಸಿರೋ ಇನ್ನು 4 ಚಿತ್ರಗಳು ಗೊತ್ತಾ?
ನೋಡ ನೋಡುತ್ತಲೇ ಹೊಸ ವರ್ಷದ 4 ತಿಂಗಳು ಕಳೆದೇ ಹೋಯ್ತು. 80ಕ್ಕೂ ಅಧಿಕ ಸಿನಿಮಾಗಳು ಬಂದು ಹೋಗಿವೆ. ಆದರೆ 'ಯುವ', 'ಒಂದು ಸರಳ ಪ್ರೇಮಕಥೆ', 'ಬ್ಲಿಂಕ್' ಸೇರಿ ಮೂರ್ನಾಲ್ಕು ಸಿನಿಮಾಗಳು ಮಾತ್ರ ಗೆದ್ದಿವೆ. ದೊಡ್ಡ ದೊಡ್ಡ ಸಿನಿಮಾಗಳು ಇನ್ನಷ್ಟೇ ಪ್ರೇಕ್ಷಕರ ಮುಂದೆ ಬರಬೇಕಿದೆ.
ಸದ್ಯ ಎಲೆಕ್ಷನ್, ಐಪಿಎಲ್ ಅಂತ ದೊಡ್ಡ ಸಿನಿಮಾಗಳು ತಡವಾಗುತ್ತಿದೆ. ಧ್ರುವ ಸರ್ಜಾ ನಟನೆಯ 'ಮಾರ್ಟಿನ್', ಉಪೇಂದ್ರ ನಿರ್ದೇಶಿಸಿ ನಟಿಸಿರುವ 'ಯುಐ', ಸುದೀಪ್ 'ಮ್ಯಾಕ್ಸ್', ದುನಿಯಾ ವಿಜಯ್ ಸಾರಥ್ಯದ 'ಭೀಮ' ಈ ವರ್ಷ ತೆರೆಗಪ್ಪಳಿಸಿವುದು ಬಹುತೇಕ ಖಚಿತವಾಗಿದೆ. ಆದರೆ ಯಾವಾಗ ಎನ್ನುವುದು ಮಾತ್ರ ಪಕ್ಕಾ ಆಗಿಲ್ಲ. ಈ ನಾಲ್ಕು ಸಿನಿಮಾಗಳನ್ನು ಬಿಟ್ಟರೆ ದರ್ಶನ್ ನಟನೆಯ 'ಡೆವಿಲ್' ಚಿತ್ರವನ್ನು ಇದೇ ವರ್ಷ ತೆರೆಗೆ ತರುವ ಪ್ರಯತ್ನ ನಡೀತಿದೆ.

'ಯುಐ', 'ಮ್ಯಾಕ್ಸ್' ಹಾಗೂ 'ಮಾರ್ಟಿನ್' ಸಿನಿಮಾಗಳು ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸದ್ದು ಮಾಡಲು ಸಿದ್ಧವಾಗಿವೆ. ಅದನ್ನು ಬಿಟ್ಟರೆ 2ನೇ ಶ್ರೇಣಿ ನಟರ ಒಂದಷ್ಟು ಸಿನಿಮಾಗಳು ಭಾರೀ ನಿರೀಕ್ಷೆ ಹುಟ್ಟಿಸಿವೆ. ಈಗಾಗಲೇ ಸಣ್ಣ ಸಣ್ಣ ಸ್ಯಾಂಪಲ್‌ಗಳಿಂದಲೇ ಸಿನಿಮಾ ನೋಡಬೇಕು ಎನ್ನುವ ಕುತೂಹಲ ಮೂಡಿಸಿವೆ. ಆ ಲಿಸ್ಟ್‌ನಲ್ಲಿ ಮೊದಲಿಗೆ ನಿಲ್ಲುವ ಸಿನಿಮಾ 'ಪೆಪೆ'.
ವಿನಯ್ 'ಪೆಪೆ' ಪವರ್
ದೊಡ್ಮನೆ ಹುಡುಗ ವಿನಯ್ ರಾಜ್‌ಕುಮಾರ್ ನಟನೆಯ 'ಪೆಪೆ' ಸಿನಿಮಾ ಬಹಳ ನಿರೀಕ್ಷೆ ಮೂಡಿಸಿರುವುದು ಸುಳ್ಳಲ್ಲ. ಇಷ್ಟುದಿನ ಬರೀ ರೊಮ್ಯಾಂಟಿಕ್ ಹೀರೊ ಆಗಿ ಕಾಣಿಸಿಕೊಳ್ಳುತ್ತಿದ್ದ ವಿಜಯ್ ಇದೇ ಮೊದಲ ಬಾರಿಗೆ ಖಡಕ್ ರೋಲ್‌ನಲ್ಲಿ ಅಬ್ಬರಿಸಿದ್ದಾರೆ. ಇದೊಂದು ಗ್ಯಾಂಗ್‌ಸ್ಟರ್ ಸಿನಿಮಾ ಆಗಿದ್ದು ಹಳ್ಳಿ ಹಿನ್ನೆಲೆಯ ಕಥೆ ಚಿತ್ರದಲ್ಲಿದೆ. ಶ್ರೇಲೇಶ್ ಎಸ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಟೀಸರ್‌ಗಳಲ್ಲಿ ರಗಡ್ ವಿಜಯ್ ಆರ್ಭಟ ನೋಡಿ ಸಿನಿರಸಿಕರು ಫಿದಾ ಆಗಿದ್ದಾರೆ.

ಶ್ರೀಮುರಳಿ 'ಬಘೀರ'
ಪ್ರಶಾಂತ್ ನೀಲ್ ಕಥೆ ಬರೆದಿರುವ 'ಬಘೀರ' ಸಿನಿಮಾ ಕೂಡ ಭಾರೀ ಹೈಪ್ ಕ್ರಿಯೇಟ್ ಮಾಡಿದೆ. ಇತ್ತೀಚೆಗೆ ಬಂದ ಟೀಸರ್ ನೋಡುಗರ ಹುಬ್ಬೇರಿಸಿದೆ. ಹಾಲಿವುಡ್ ರೇಂಜ್ ಆಕ್ಷನ್ ಝಲಕ್ ನೋಡಿ ಫಸ್ಟ್ ಡೇ ಫಸ್ಟ್ ಶೋ ಟಿಕೆಟ್ ಬುಕ್ ಮಾಡಲು ಹಲವರು ಕಾಯುತ್ತಿದ್ದಾರೆ. ಡಾ. ಸೂರಿ ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ಹೊಂಬಾಳೆ ಫಿಲ್ಮ್ಸ್ ಬ್ಯಾನರ್‌ನಲ್ಲಿ ಸಿನಿಮಾ ನಿರ್ಮಾಣವಾಗುತ್ತಿದೆ.
ಪ್ರಜ್ವಲ್ 'ಕರಾವಳಿ'
'ಅಂಬಿ ನಿಂಗ್ ವಯಸ್ಸಾಯ್ತೋ' ಚಿತ್ರ ನಿರ್ದೇಶನ ಮಾಡಿದ್ದ ಗುರುದತ್ ಗಾಣಿಗ ಹೊಸ ಸಾಹಸಕ್ಕೆ ಕೈ ಹಾಕಿದ್ದಾರೆ. ಪ್ರಜ್ವಲ್ ದೇವರಾಜ್ ನಟನೆಯ 'ಕರಾವಳಿ' ಎನ್ನುವ ಸಿನಿಮಾ ಕಟ್ಟಿಕೊಡುತ್ತಿದ್ದಾರೆ. ಸಣ್ಣ ಟೀಸರ್ ಹಾಗೂ ಪೋಸ್ಟರ್‌ಗಳಿಂದಲೇ ಸಿನಿಮಾ ಕುತೂಹಲ ಹೆಚ್ಚಿಸಿದೆ. ಕಂಬಳದ ಜೊತೆಗೆ ಯಕ್ಷಗಾನ ಕೂಡ 'ಕರಾವಳಿ' ಚಿತ್ರದ ಹೈಲೈಟ್‌ಗಳಲ್ಲಿ ಒಂದಾಗಿದೆ. ಮನುಷ್ಯ ಹಾಗೂ ಪ್ರಾಣಿಯ ಮಧ್ಯೆ ನಡೆಯುವ ಸಂಘರ್ಷದ ಕಥೆ ಚಿತ್ರದಲ್ಲಿದ್ದು ಪಕ್ಕಾ ಹಳ್ಳಿ ಬ್ಯಾಕ್ ಡ್ರಾಪ್ ನಲ್ಲಿ ಮೂಡಿ ಬರಲಿದೆ.
ಧನಂಜಯ್ 'ಉತ್ತರಕಾಂಡ'
ಈ ಮೂರು ಸಿನಿಮಾಗಳ ಜೊತೆಗೆ ಗಮನ ಸೆಳೆದಿರುವ ಮತ್ತೊಂದು ಸಿನಿಮಾ 'ಉತ್ತರಕಾಂಡ'. ಈ ಹಿಂದೆ 'ರತ್ನನ್ ಪ್ರಪಂಚ' ಸಿನಿಮಾ ಕಟ್ಟಿಕೊಟ್ಟಿದ್ದ ರೋಹಿತ್ ಪದಕಿ ಈ ಚಿತ್ರದ ಸೂತ್ರಧಾರಿ. ಡಾಲಿ ಧನಂಜಯ್ ಗಬ್ರು ಸತ್ಯ ಎನ್ನುವ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಕೆಆರ್‌ಜಿ ಸ್ಟುಡಿಯೋಸ್ ಬ್ಯಾನರ್‌ನಲ್ಲಿ ಸಿನಿಮಾ ಮೂಡಿ ಬರುತ್ತಿದೆ. ಮೊದಲಿಗೆ ರಮ್ಯಾ ಚಿತ್ರಕ್ಕೆ ನಾಯಕಿ ಆಗಿ ಆಯ್ಕೆ ಆಗಿದ್ದರು. ಬಳಿಕ ಐಶ್ವರ್ಯ ರಾಜೇಶ್ ಆ ಜಾಗಕ್ಕೆ ಬಂದಿದ್ದಾರೆ. ಉತ್ತರ ಕರ್ನಾಟಕ ಭಾಗದಲ್ಲಿ ನಡೆಯುವ ಕಥೆ ಚಿತ್ರದಲ್ಲಿದೆ.


Click it and Unblock the Notifications










