ಈ ವರ್ಷ ಕನ್ನಡಕ್ಕೆ ಡಬ್ ಆಗಿ ಬರಲಿರುವ ಪರಭಾಷೆಯ ದೊಡ್ಡ ಸಿನಿಮಾಗಳಿವು
ಕರ್ನಾಟಕದಲ್ಲಿ ಈಗ ಡಬ್ಬಿಂಗ್ ಸಿನಿಮಾಗಳಿಗೆ ಅವಕಾಶವಿದೆ. ಮೊದಲೆಲ್ಲಾ ಪರಭಾಷೆಯ ಸಿನಿಮಾಗಳನ್ನು ಆಯಾ ಭಾಷೆಯಲ್ಲೇ ನೋಡಬೇಕಾದ ಅನಿವಾರ್ಯತೆ ಇತ್ತು. ಆದರೆ ಕಳೆದ ಏಳೆಂಟು ವರ್ಷಗಳಿಂದ ತೆಲುಗು, ತಮಿಳು, ಹಿಂದಿ, ಮಲಯಾಳಂ ಸಿನಿಮಾಗಳು ದೊಡ್ಡಮಟ್ಟದಲ್ಲಿ ಡಬ್ ಆಗಿ ರಾಜ್ಯದಲ್ಲಿ ಬಿಡುಗಡೆ ಆಗುತ್ತಿವೆ.
ಈಗ ಕೂಡ ಕಾಟಾಚಾರಕ್ಕೆ ಸಿನಿಮಾಗಳನ್ನು ಕನ್ನಡಕ್ಕೆ ಡಬ್ ಮಾಡುವವರು ಇದ್ದಾರೆ. ಹಿಂದಿ ಸಿನಿಮಾಗಳನ್ನು ಕನ್ನಡಕ್ಕೆ ಮಾಡಲು ಹಿಂದೇಟ ಹಾಕಲಾಗುತ್ತಿದೆ. ಇನ್ನು ಕನ್ನಡ ವರ್ಷನ್‌ಗೆ ಹೆಚ್ಚು ಸ್ಕ್ರೀನ್‌ಗಳು ಸಿಗಲ್ಲ, ಅಥವಾ ಬೇಕೆಂದೇ ಕನ್ನಡ ಶೋಗಳು ಚಿತ್ರಮಂದಿರಗಳಲ್ಲಿ ಪ್ರದರ್ಶನ ಮಾಡಲ್ಲ ಎನ್ನುವ ಆರೋಪವೂ ಇದೆ. ಈ ವರ್ಷದ ಕನ್ನಡದಲ್ಲಿ ದೊಡ್ಡ ಸಿನಿಮಾಗಳ ಸಂಖ್ಯೆ ಕಮ್ಮಿಯಿದೆ.

ಯಶ್, ಸುದೀಪ್, ರಕ್ಷಿತ್ ಶೆಟ್ಟಿ, ಶ್ರೀಮುರಳಿ ನಟನೆಯ ಯಾವುದೇ ಸಿನಿಮಾ ಈ ವರ್ಷ ತೆರೆಗೆ ಬರುತ್ತಿಲ್ಲ. ಸ್ಟಾರ್ ನಟರೆಲ್ಲಾ ಪ್ಯಾನ್ ಇಂಡಿಯಾ ಸಿನಿಮಾಗಳನ್ನು ಮಾಡಲು ಮುಂದಾಗಿದ್ದು ದೊಡ್ಡ ಸಂಖ್ಯೆ ಕಮ್ಮಿ ಆಗುತ್ತಿದೆ. ರಿಷಬ್ ಶೆಟ್ಟಿ ನಿರ್ದೇಶಿಸಿ ನಟಿಸುತ್ತಿರುವ 'ಕಾಂತಾರ-1' ಈ ವರ್ಷದ ಬಹುನಿರೀಕ್ಷಿತ ಕನ್ನಡ ಸಿನಿಮಾ ಎನಿಸಿಕೊಂಡಿದೆ. ಇನ್ನುಳಿದಂತೆ 'KD', 'ಎಕ್ಕ', '45', 'ಡೆವಿಲ್', 'ಲ್ಯಾಂಡ್‌ಲಾರ್ಡ್' ಸೇರಿ ಒಂದಷ್ಟು ಸಿನಿಮಾಗಳು ಕುತೂಹಲ ಮೂಡಿಸಿವೆ.
ಯಶ್ ನಟನೆಯ 'ಟಾಕ್ಸಿಕ್' ಸಿನಿಮಾ ಮುಂದಿನ ವರ್ಷ ಮಾರ್ಚ್ 19ಕ್ಕೆ ತೆರೆಗೆ ಬರಲಿದೆ. ಸುದೀಪ್ ನಟನೆಯ 'ಬಿಲ್ಲ ರಂಗ ಬಾಷ' ಸಿನಿಮಾ ಎರಡು ದಿನದ ಹಿಂದೆ ಶುರುವಾಗಿದೆ. ಈ ಸಿನಿಮಾ ತೆರೆಗೆ ಬರಲು ಕಮ್ಮಿ ಎಂದರೂ ಒಂದೂವರೆ ವರ್ಷ ಬೇಕು. ದರ್ಶನ್ ಅಭಿನಯದ 'ಡೆವಿಲ್' ಚಿತ್ರವನ್ನು ಡಿಸೆಂಬರ್ ವೇಳೆಗೆ ಬಿಡುಗಡೆ ಮಾಡುವ ಪ್ರಯತ್ನ ನಡೀತಿದೆ. ಪರಭಾಷೆಯ ಕೆಲ ಇಂಟ್ರೆಸ್ಟಿಂಗ್ ಸಿನಿಮಾಗಳು ಕನ್ನಡಕ್ಕೆ ಡಬ್ ಆಗಿ ಈ ವರ್ಷ ತೆರೆಗೆ ಬರಲಿದೆ.
ಪರಭಾಷೆಯ ಸ್ಟಾರ್ ನಟರ ಸಿನಿಮಾಗಳನ್ನು ಕನ್ನಡಕ್ಕೆ ಡಬ್ ಮಾಡಿ ಬಿಡುಗಡೆ ಮಾಡಲಾಗುತ್ತಿದೆ. ಕೆಲ ಸಿನಿಮಾಗಳನ್ನು ಕನ್ನಡ ಸಿನಿರಸಿಕರು ಮಾತೃಭಾಷೆಯಲ್ಲೇ ನೋಡಿ ಎಂಜಾಯ್ ಮಾಡಿದ್ದಾರೆ. ರಜನಿಕಾಂತ್ ನಟನೆಯ 'ಜೈಲರ್' ಕನ್ನಡ ವರ್ಷನ್‌ಗೆ ಒಳ್ಳೆ ರೆಸ್ಪಾನ್ಸ್ ಸಿಕ್ಕಿತ್ತು. ಅಲ್ಲು ಅರ್ಜುನ್ ನಟನೆಯ 'ಪುಷ್ಪ'-2 ಸಿನಿಮಾ ಕೂಡ ಇತ್ತೀಚೆಗೆ ಕನ್ನಡಕ್ಕೆ ಡಬ್ ಆಗಿ ಬಂದು ಸದ್ದು ಮಾಡಿತ್ತು. ಡಬ್ಬಿಂಗ್ ಗುಣಮಟ್ಟ ಚೆನ್ನಾಗಿ ಇದ್ದಿದ್ದರಿಂದ ಸಹಜವಾಗಿಯೇ ಪ್ರೇಕ್ಷಕರು ಮೆಚ್ಚಿಕೊಂಡಿದ್ದರು. ಈ ವರ್ಷ ಕನ್ನಡಕ್ಕೆ ಡಬ್ ಆಗಿ ಬರಲಿರುವ ಪರಭಾಷೆಯ ದೊಡ್ಡ ಸಿನಿಮಾಗಳ ಬಗ್ಗೆ ಮುಂದೆ ಓದಿ.

ದಿ ರಾಜಾ ಸಾಬ್
ಯಂಗ್ ರೆಬಲ್ ಸ್ಟಾರ್ ನಟನೆಯ ಬಹುನಿರೀಕ್ಷಿತ ಸಿನಿಮಾ 'ದಿ ರಾಜಾ ಸಾಬ್'. ಮಾರುತಿ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಮಾಳವಿಕಾ ಮೋಹನನ್, ನಿಧಿ ಅಗರ್‌ವಾಲ್ ಚಿತ್ರದಲ್ಲಿ ನಾಯಕಿಯರಾಗಿ ನಟಿಸುತ್ತಿದ್ದಾರೆ. ಸಂಜಯ್ ದತ್ ಮುಖ್ಯವಾದ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಪೀಪಲ್ ಮೀಡಿಯಾ ಫ್ಯಾಕ್ಟರಿ ಸಂಸ್ಥೆ ಚಿತ್ರ ನಿರ್ಮಾಣ ಮಾಡುತ್ತಿದೆ. ಇದೊಂದು ಹಾರರ್ ಕಾಮಿಡಿ ಥ್ರಿಲ್ಲರ್ ಸಿನಿಮಾ ಎನ್ನಲಾಗ್ತಿದೆ. 200-300 ಕೋಟಿ ರೂ. ಬಜೆಟ್‌ನಲ್ಲಿ ಸಿನಿಮಾ ನಿರ್ಮಾಣವಾಗುತ್ತಿದೆ.
ಏಪ್ರಿಲ್ 10ಕ್ಕೆ 'ದಿ ರಾಜಾ ಸಾಬ್' ಸಿನಿಮಾ ಬಿಡುಗಡೆ ಮಾಡೋದಾಗಿ ಚಿತ್ರತಂಡ ಹೇಳಿತ್ತು. ಆದರೆ ಕಾರಣಾಂತರಗಳಿಂದ ತಡವಾಗುತ್ತಿದೆ. ಈಗಾಗಲೇ ಬಹುತೇಕ ಚಿತ್ರೀಕರಣ ಮುಗಿದಿದೆ. ಪೋಸ್ಟ್ ಪ್ರೊಡಕ್ಷನ್ ವರ್ಕ್ ತಡವಾಗುತ್ತಿದೆ. ಅದೇ ಕಾರಣಕ್ಕೆ ಪದೇ ಪದೆ ರಿಲೀಸ್ ಡೇಟ್ ಪೋಸ್ಟ್‌ಪೋನ್ ಆಗುವಂತಾಗಿದೆ. ರಾಮೋಜಿ ಫಿಲ್ಮ್ ಸಿಟಿ, ಕಾಂಚಿಪುರಂ ಸೇರಿದಂತೆ ಸಾಕಷ್ಟು ಕಡೆಗಳಲ್ಲಿ ಸಿನಿಮಾ ಚಿತ್ರೀಕರಣ ನಡೆದಿದೆ. ಈಗಾಗಲೇ ಸಣ್ಣ ಸಣ್ಣ ಟೀಸರ್ ಪೋಸ್ಟರ್ ರಿಲೀಸ್ ಆಗಿ ಕುತೂಹಲ ಮೂಡಿಸಿದೆ.
ಕೂಲಿ
ಸೂಪರ್ ಸ್ಟಾರ್ ರಜನಿಕಾಂತ್ ನಟನೆಯ 'ಕೂಲಿ' ಸಿನಿಮಾ ಹೈಪ್ ಕ್ರಿಯೇಟ್ ಮಾಡಿದೆ. ಕಾರಣ ಲೋಕೇಶ್ ಕನಕರಾಜ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿರುವುದು. ಉಪೇಂದ್ರ, ಆಮೀರ್ ಖಾನ್, ನಾಗಾರ್ಜುನ ಸೇರಿದಂತೆ ಘಟಾನುಘಟಿ ಕಲಾವಿದರು ಚಿತ್ರದಲ್ಲಿ ನಟಿಸಿದ್ದಾರೆ. ಸನ್ ಪಿಕ್ಚರ್ಸ್ ನಿರ್ಮಾಣದ ಚಿತ್ರಕ್ಕೆ ಅನಿರುದ್ದ್ ರವಿಚಂದರ್ ಮ್ಯೂಸಿಕ್ ಕಂಪೋಸ್ ಮಾಡುತ್ತಿದ್ದಾರೆ. ಆಗಸ್ಟ್ 15ಕ್ಕೆ ಸಿನಿಮಾ ರಿಲೀಸ್ ಮಾಡುವುದಾಗಿ ಘೋಷಣೆ ಮಾಡಿದ್ದಾರೆ.
ಇದೊಂದು ಆಕ್ಷನ್ ಎಂಟರ್‌ಟೈನರ್ ಸಿನಿಮಾ ಆಗಿದ್ದು ಅದ್ಧೂರಿಯಾಗಿ ಸಿನಿಮಾ ತಯಾರಾಗುತ್ತಿದೆ. ಪೂಜಾ ಹೆಗ್ಡೆ ಚಿತ್ರದ ಸ್ಪೆಷಲ್ ಸಾಂಗ್‌ಗೆ ಡ್ಯಾನ್ಸ್ ಮಾಡಿದ್ದಾರೆ. ಆಗಸ್ಟ್ 15ಕ್ಕೆ ಭಾರೀ ಬಾಕ್ಸಾಫೀಸ್ ಕ್ಲ್ಯಾಶ್ ಏರ್ಪಡುವ ಸುಳಿವು ಸಿಗುತ್ತಿದೆ. ಅದೇ ದಿನ ಹೃತಿಕ್ ರೋಷನ್, ಜ್ಯೂ. ಎನ್‌ಟಿಆರ್ ನಟನೆಯ 'ವಾರ್-2' ಹಾಗೂ ಕನ್ನಡದ
'45' ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ತೆರೆಗೆ ಬರಲಿದೆ.
ಹರಿಹರ ವೀರಮಲ್ಲು
ಪವನ್ ಕಲ್ಯಾಣ್ ನಟನೆಯ ಐತಿಹಾಸಿಕ ಸಿನಿಮಾ 'ಹರಿಹರ ವೀರಮಲ್ಲು' ರಿಲೀಸ್ ಡೇಟ್ ಮತ್ತೆ ಮುಂದಕ್ಕೆ ಹೋಗುವಂತಾಗಿದೆ. ಕ್ರಿಶ್ ನಿರ್ದೇಶನದ ಈ ಚಿತ್ರಕ್ಕೆ ಕೀರವಾಣಿ ಸಂಗೀತ ಸಂಯೋಜನೆ ಮಾಡಿದ್ದಾರೆ. ಮೇ 9ಕ್ಕೆ ಸಿನಿಮಾ ತೆರೆಗೆ ಬರುತ್ತದೆ ಎಂದು ಚಿತ್ರತಂಡ ಹೇಳಿತ್ತು. ಆದರೆ ಮತ್ತೆ ರಿಲೀಸ್ ಡೇಟ್ ಬದಲಾಗುವ ಸುಳಿವು ಸಿಗುತ್ತಿದೆ. ಈ ಚಿತ್ರ ಕನ್ನಡಕ್ಕೆ ಡಬ್ ಆಗಿ ಬರ್ತಿದ್ದು ಈಗಾಗಲೇ ಕನ್ನಡ ಟೀಸರ್ ಕೂಡ ಬಂದಿದೆ.
ಕಣ್ಣಪ್ಪ
ಮಂಚು ವಿಷ್ಣು ಕಣ್ಣಪ್ಪ ಆಗಿ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗುತ್ತಿದ್ದಾರೆ. ಜೂನ್ 27ಕ್ಕೆ ಈ ಸಿನಿಮಾ ತೆರೆಗೆ ಬರಲಿದೆ. ತೆಲುಗು ಸೇರಿ 5 ಭಾಷೆಗಳಿಗೆ 'ಕಣ್ಣಪ್ಪ' ಸಿನಿಮಾ ಡಬ್ ಆಗಿದೆ. ಅಂದಾಜು 150 ಕೋಟಿ ರೂ. ಬಜೆಟ್‌ನಲ್ಲಿ ಸಿನಿಮಾ ನಿರ್ಮಾಣವಾಗಿದೆ. ಪ್ರಭಾಸ್, ಮೋಹನ್ ಲಾಲ್, ಅಕ್ಷಯ್ ಕುಮಾರ್, ಕಾಜಲ್ ಅಗರ್‌ವಾಲ್ ಚಿತ್ರದ ಅತಿಥಿ ಪಾತ್ರಗಳಲ್ಲಿ ನಟಿಸಿದ್ದಾರೆ.
ಮದರಾಸಿ
ತಮಿಳಿನ 'ಮದರಾಸಿ' ಸಿನಿಮಾ ಕೂಡ ಕನ್ನಡಕ್ಕೆ ಡಬ್ ಆಗಿ ತೆರೆಗೆ ಬರಲಿದೆ. ಎ. ಆರ್ ಮುರುಗದಾಸ್ ನಿರ್ದೇಶನದ ಸಿನಿಮಾ ಸೆಪ್ಟೆಂಬರ್ 5ಕ್ಕೆ ಬಿಡುಗಡೆ ಆಗಲಿದೆ. ಕಳೆದ ವರ್ಷ 'ಅಮರನ್' ರೀತಿಯ ಬ್ಲಾಕ್‌ಬಸ್ಟರ್ ಚಿತ್ರದಲ್ಲಿ ಮಿಂಚಿದ್ದ ಶಿವ ಕಾರ್ತಿಕೇಯನ್ ಇದೀಗ 'ಮದರಾಸಿ' ಆಗಿ ಪ್ರೇಕ್ಷಕರನ್ನು ರಂಜಿಸಲಿದ್ದಾರೆ. ಚಿತ್ರಕ್ಕೆ ಅನಿರುದ್ಧ್ ಸಂಗೀತವಿದೆ.
ಇಂಡಿಯನ್- 3
ಶಂಕರ್ ನಿರ್ದೇಶನದಲ್ಲಿ ಕಮಲ್ ಹಾಸನ್ ನಟನೆಯ 'ಇಂಡಿಯನ್'-3 ಸಿನಿಮಾ ತೆರೆಗೆ ಬರೋದು ಅನುಮಾನ ಎನ್ನುವಂತಾಗಿದೆ. 90ರ ದಶಕದ ಸೂಪರ್ ಹಿಟ್ 'ಇಂಡಿಯನ್' ಸೀಕ್ವೆಲ್ ಕಳೆದ ವರ್ಷ ಬಾಕ್ಸಾಫೀಸ್‌ನಲ್ಲಿ ಮುಗ್ಗರಿಸಿತ್ತು. ಸರಣಿಯ 3ನೇ ಸಿನಿಮಾ ಕೂಡ ಸಿದ್ಧವಾಗ್ತಿದೆ. ಆದರೆ ಚಿತ್ರ ತೆರೆಗೆ ಬರುತ್ತೋ ನೇರವಾಗೆ ಓಟಿಟಿಗೆ ಬಂದುಬಿಡುತ್ತಾ ಕಾದು ನೋಡಬೇಕಿದೆ. ಈ ಚಿತ್ರವನ್ನು ಕನ್ನಡಕ್ಕೆ ಡಬ್ ಮಾಡುವ ಕೆಲಸ ನಡೀತಿದೆ.
ಅಖಂಡ-2
ಬಾಲಕೃಷ್ಣ ನಟನೆಯ 'ಅಖಂಡ' ಸಿನಿಮಾ ಸಕ್ಸಸ್ ಕಂಡಿತ್ತು. ಚಿತ್ರದ ಮುಂದುವರೆದ ಭಾಗ ಚಿತ್ರೀಕರಣ ನಡೀತಿದೆ. ಸೆಪ್ಟೆಂಬರ್ 25ಕ್ಕೆ ಸಿನಿಮಾ ತೆರೆಗೆ ಬರುವ ಸಾಧ್ಯತೆಯಿದೆ. ಈ ಆಕ್ಷನ್ ಥ್ರಿಲ್ಲರ್ ಸಿನಿಮಾ ಕೂಡ ಕನ್ನಡಕ್ಕೆ ಡಬ್ ಆಗಿ ತೆರೆಗೆ ಬರಲಿದೆ.
ಮೂಕುಟ್ಟಿ ಅಮ್ಮನ್-2
ಸಿ. ಸುಂದರ್ ನಿರ್ದೇಶನದ ಫ್ಯಾಂಟಸಿ ಕಾಮೆಡಿ ಸಿನಿಮಾ 'ಮೂಕುಟ್ಟಿ ಅಮ್ಮನ್-2' ಇತ್ತೀಚೆಗೆ ಸೆಟ್ಟೇರಿತ್ತು. ಚಿತ್ರದಲ್ಲಿ ದುನಿಯಾ ವಿಜಯ್ ಕೂಡ ನಟಿಸುತ್ತಿದ್ದಾರೆ. ನಯನತಾರಾ, ಮೀನಾ, ರೆಜಿನಾ, ಅಭಿನಯ ಚಿತ್ರದ ತಾರಾಗಣದಲ್ಲಿದ್ದಾರೆ. ವಿಜಿ ಕೂಡ ನಟಿಸುತ್ತಿರುವುದರಿಂದ ಸಿನಿಮಾ ಕನ್ನಡಕ್ಕೆ ಡಬ್ ಆಗಿ ಬರಲಿದೆ.


Click it and Unblock the Notifications











