ಮಂಡ್ಯದ ಈ ನಾಲ್ಕು ವರ್ಗ ಸುಮಲತಾ ಬೆನ್ನಿಗೆ ನಿಂತರೆ ಗೆಲುವು ಖಚಿತ.!
Recommended Video

ಲೋಕಸಭೆ ಚುನಾವಣೆಯ ದಿನಾಂಕ ಘೋಷಣೆಯಾಗಿದ್ದರೂ ಮಂಡ್ಯ ಲೋಕಸಭೆ ಕ್ಷೇತ್ರದ ಟಿಕೆಟ್ ಬಿಕ್ಕಟ್ಟು ಇನ್ನೂ ಬಗೆಹರಿದಿಲ್ಲ. ಜೆಡಿಎಸ್ ಅಭ್ಯರ್ಥಿ ನಿಖಿಲ್ ಕುಮಾರ್ ಎಂದು ಪ್ರಕಟವಾಗಿದೆ. ಮೈತ್ರಿ ಮಾಡಿಕೊಂಡಿರುವ ಕಾಂಗ್ರೆಸ್, ಜೆಡಿಎಸ್ ಅಭ್ಯರ್ಥಿಗೆ ಬೆಂಬಲ ನೀಡಬೇಕಾದ ಪರಿಸ್ಥಿತಿಯಲ್ಲಿದೆ.
ಅಂತಿಮ ಕ್ಷಣದವರೆಗೂ ಕಾಂಗ್ರೆಸ್ ಪಕ್ಷದಿಂದ ಟಿಕೆಟ್ ಸಿಗಬಹುದು ಎಂಬ ನಿರೀಕ್ಷೆಯಲ್ಲಿರುವ ಸುಮಲತಾಗೆ ಬಹುಶಃ ಕಾಂಗ್ರೆಸ್ 'ಕೈ' ಕೊಟ್ಟಿದೆ. ಅಲ್ಲಿಗೆ ಸುಮಲತಾ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುವುದಕ್ಕೆ ಸಜ್ಜಾಗುತ್ತಿದ್ದಾರೆ ಎನ್ನಲಾಗಿದೆ.
ಒಂದು ವೇಳೆ ಸುಮಲತಾ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿದರೇ ಗೆಲುವು ಸುಲಭನಾ? ಎಂಬ ಕುತೂಹಲಕ್ಕೆ ಈ ನಾಲ್ಕು ವರ್ಗ ಉತ್ತರವಾಗಿ ಕಾಣುತ್ತಿದೆ. ಮಂಡ್ಯದಲ್ಲಿರುವ ಈ ನಾಲ್ಕು ವರ್ಗದ ಜನರು ನಿರ್ಧರಿಸಿದರೇ ಬಹುಶಃ ಸುಮಲತಾ ಅವರು ನಿಖಿಲ್ ಕುಮಾರ್ ಎದುರು ಸುಲಭವಾಗಿ ಗೆಲ್ಲಬಹುದು. ಯಾವುದು ಆ ನಾಲ್ಕು ವರ್ಗ?

ಅಂಬರೀಶ್ ಅಭಿಮಾನಿಗಳ ಮತವೇ ಮುಖ್ಯ
ಸುಮಲತಾ ಅವರನ್ನ ಮಂಡ್ಯ ಲೋಕಸಭೆ ಕ್ಷೇತ್ರದಿಂದ ಸ್ಪರ್ಧಿಸಲು ಒತ್ತಾಯ ಮಾಡಿದ್ದೇ ಅಂಬರೀಶ್ ಅಭಿಮಾನಿಗಳು. ಹಾಗಾಗಿ, ಸುಮಲತಾ ಅವರು ಯಾವುದೇ ಪಕ್ಷದಿಂದ ಸ್ಪರ್ಧಿಸಿದರೂ ಅಂಬಿ ಅಭಿಮಾನಿಗಳು ಜೊತೆಯಲ್ಲಿರ್ತಾರೆ ಎಂಬ ನಂಬಿಕೆ ಇದೆ. ಸುಮಲತಾ ಅವರಿಗೆ ಅಂಬಿ ಅಭಿಮಾನಿಗಳ ಮತವೇ ಬಹುಮುಖ್ಯವಾಗಿದ್ದು, ಶೇಕಡಾ 100 ರಷ್ಟು ಅಭಿಮಾನಿಗಳು ಮನಸ್ಸು ಮಾಡಿದ್ರೆ ಅಂಬಿ ಪತ್ನಿಗೆ ಗೆಲುವಿನ ಹಾದಿ ಸುಲಭವಾಗಬಹುದು.

ದರ್ಶನ್ ಮತ್ತು ಯಶ್ ಅಭಿಮಾನಿಗಳು
ಅಂಬರೀಶ್ ಅವರಂತೆ ಮಂಡ್ಯ ಭಾಗದಲ್ಲಿ ದರ್ಶನ್ ಮತ್ತು ಯಶ್ ಅವರ ಅಭಿಮಾನಿ ಬಳಗವೂ ದೊಡ್ಡದಿದೆ. ಈಗಾಗಲೇ ಸುಮಲತಾ ಪರವಾಗಿ ಪ್ರಚಾರ ಮಾಡ್ತೇನೆ ಎಂದು ಸ್ವತಃ ದರ್ಶನ್ ಹೇಳಿದ್ದಾರೆ. ಅಲ್ಲಿಗೆ ದರ್ಶನ್ ಅಭಿಮಾನಿ ಬಳಗವೂ ಸುಮಲತಾ ಅವರ ಪರ ನಿಲ್ಲಬಹುದು. ಜೊತೆಗೆ ಯಶ್ ಅಭಿಮಾನಿಗಳು ಕೂಡ ಸುಮಲತಾ ಪರ ನಿಲ್ಲಬಹುದು. ಅಭಿಮಾನಕ್ಕಾಗಿ ಸುಮಲತಾ ಅವರಿಗೆ ಮತ ಹಾಕಿದ್ರೆ ಎಲ್ಲವೂ ಓಕೆ. ಸಿನಿಮಾ ಬೇರೆ ರಾಜಕೀಯ ಬೇರೆ ಎಂದು ಲೆಕ್ಕಾಚಾರ ಹಾಕಿದ್ರೆ ಕಷ್ಟವಾಗಬಹುದು. ಒಂದು ವೇಳೆ ದರ್ಶನ್ ಮತ್ತು ಯಶ್ ಅಭಿಮಾನಿಗಳು ಅಂಬಿ ಅಭಿಮಾನಿಗಳಿಗೆ ಸಾಥ್ ನೀಡಿದ್ರೆ ವಿಜಯಲಕ್ಷ್ಮಿಯನ್ನ ಒಲಿಸಿಕೊಳ್ಳಲು ಸುಮಲತಾ ಅವರಿಗೆ ಸಾಧ್ಯವಾಗುತ್ತೆ.

ಅತೃಪ್ತ ಕಾಂಗ್ರೆಸ್ ಕಾರ್ಯಕರ್ತರು
ಕಾಂಗ್ರೆಸ್ ಪಕ್ಷದಿಂದ ಸುಮಲತಾಗೆ ಟಿಕೆಟ್ ನೀಡಿದ್ದರೇ ಮಂಡ್ಯ ಕಾಂಗ್ರೆಸ್ ಕಾರ್ಯಕರ್ತರು ಒಮ್ಮತದಿಂದ ಬೆಂಬಲ ಕೊಡುತ್ತಿದ್ದರೇನೋ? ಆದ್ರೀಗ, ಜೆಡಿಎಸ್ ಅಭ್ಯರ್ಥಿಗೆ ಕಾಂಗ್ರೆಸ್ ಕಾರ್ಯಕರ್ತರು ಬೆಂಬಲ ನೀಡಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಸಹಜವಾಗಿ ಇದರಿಂದ ಕೆಲವು ಸ್ಥಳೀಯ ಕಾಂಗ್ರೆಸ್ ಕಾರ್ಯಕರ್ತರು, ನಾವು ಜೆಡಿಎಸ್ ಪಕ್ಷವನ್ನ ಬೆಂಬಲಿಸಲ್ಲ. ಸುಮಲತಾ ಅವರಿಗೆ ನಮ್ಮ ಸಪೋರ್ಟ್ ಎಂದಿದ್ದಾರೆ. ಅಲ್ಲಿಗೆ ಅತೃಪ್ತ ಕಾಂಗ್ರೆಸ್ ಕಾರ್ಯಕರ್ತರು ಅಂಬಿ ಪತ್ನಿ ಪರ ನಿಂತರೇ ಇದು ಕೂಡ ದೊಡ್ಡ ಪ್ಲಸ್ ಪಾಯಿಂಟ್ ಆಗಲಿದೆ.

ಅತೃಪ್ತ ಜೆಡಿಎಸ್ ಕಾರ್ಯಕರ್ತರು
ನಿಖಿಲ್ ಕುಮಾರ್ ಅಭ್ಯರ್ಥಿ ಎಂದು ಘೋಷಿಸಿರುವ ಹಿನ್ನೆಲೆ ಕೆಲವು ಸ್ಥಳೀಯ ಜೆಡಿಎಸ್ ಮುಖಂಡರು ಬೇಸರ ಮಾಡಿಕೊಂಡಿದ್ದಾರೆ. ಸಿಎಂ ಪುತ್ರನಿಗೆ ಟಿಕೆಟ್ ನೀಡಿ, ಕಾರ್ಯಕರ್ತರಿಗೆ ಅನ್ಯಾಯ ಮಾಡಲಾಗಿದೆ ಎಂದವರೂ ಇದ್ದಾರೆ. ಹೀಗಾಗಿ, ನಿಖಿಲ್ ಅವರನ್ನ ಬೆಂಬಲಿಸಲು ಇಷ್ಟವಾಗದೇ ಸುಮಲತಾ ಅವರಿಗೆ ಸಪೋರ್ಟ್ ಮಾಡಿದ್ರೂ ಅಚ್ಚರಿಯಿಲ್ಲ. ಯಾಕಂದ್ರೆ, ಪಕ್ಷ ಭೇದವನ್ನ ಪಕ್ಕಕ್ಕೆ ಇಟ್ಟರೇ ಅಂಬರೀಶ್ ಅವರ ಮೇಲೆ ಮಂಡ್ಯ ಜನಕ್ಕೆ ವಿಶೇಷವಾದ ಗೌರವವಿದೆ. ಒಟ್ನಲ್ಲಿ ಈ ಎಲ್ಲ ಸಾಧ್ಯತೆಗಳು ಸುಮಲತಾ ಅವರ ಪರವಾಗಿ ಇದೆ. ಸದ್ಯಕ್ಕೆ ಸುಮಲತಾ ಸ್ಪರ್ಧಿಸುವ ಬಗ್ಗೆ ಮತ್ತು ಯಾವ ಪಕ್ಷ ಎಂಬುದನ್ನ ಅಂತಿಮಗೊಳಿಸಿಲ್ಲ. ಸೋ, ಕಾದುನೋಡಬೇಕಿದೆ.


Click it and Unblock the Notifications











