ಒಳ್ಳೆಯ ಕಥೆಯಿರುವ ಈ ಹೊಸ ಕನ್ನಡ ಚಿತ್ರಗಳನ್ನು ಓಟಿಟಿಯಲ್ಲಿ ಎಷ್ಟು ಹುಡುಕಿದ್ರೂ ಸಿಗಲ್ಲ!
ಓಟಿಟಿ.. ಸದ್ಯ ಸಿನಿಮಾಗಳನ್ನು ವೀಕ್ಷಿಸಲು ಸಿನಿ ರಸಿಕರಿಗೆ ದೊರಕಿರುವ ಮತ್ತೊಂದು ವೇದಿಕೆ ಹಾಗೂ ಇದು ಅತಿ ಸುಲಭದ ಹಾದಿ ಎಂದೇ ಹೇಳಬಹುದು. ಈ ಹಿಂದೆ ಚಿತ್ರಮಂದಿರಗಳಿಗೆ ಹೋಗಿ ಸಿನಿಮಾ ವೀಕ್ಷಿಸುತ್ತಿದ್ದ ಅದೆಷ್ಟೋ ಸಿನಿ ರಸಿಕರು ಈಗ ಓಟಿಟಿ ಅಪ್ಲಿಕೇಶನ್‌ಗಳಲ್ಲಿ ಚಿತ್ರಗಳನ್ನು ವೀಕ್ಷಿಸಲು ಶುರುವಿಟ್ಟುಕೊಂಡುಬಿಟ್ಟಿದ್ದಾರೆ.
ಅದರಲ್ಲಿಯೂ ಕೊರೊನಾ ಲಾಕ್‌ಡೌನ್‌ನ ಕಾರಣದಿಂದಂತೂ ಓಟಿಟಿಯಲ್ಲಿ ಚಿತ್ರ ವೀಕ್ಷಿಸುವ ಸಿನಿ ರಸಿಕರ ಸಂಖ್ಯೆ ದೊಡ್ಡ ಮಟ್ಟದಲ್ಲಿ ಏರಿಕೆ ಕಂಡಿತು ಎಂದೇ ಹೇಳಬಹುದು. ಕುಟುಂಬ ಸಮೇತ ಸಿನಿಮಾವೊಂದನ್ನು ವೀಕ್ಷಿಸಲು ತೆರಳಿ ಸಾವಿರಾರು ರೂಪಾಯಿಗಳನ್ನು ಖರ್ಚು ಮಾಡುವ ಬದಲು ಓಟಿಟಿ ಅಪ್ಲಿಕೇಶನ್‌ವೊಂದರ ಚಂದಾದಾರತ್ವವನ್ನು ಖರೀದಿಸಿದರೆ ವರ್ಷಪೂರ್ತಿ ಸಿನಿಮಾ ವೀಕ್ಷಿಸುವುದು ಉತ್ತಮ ಎಂದು ಹಲವಾರು ಮಂದಿ ಓಟಿಟಿ ಕಡೆ ಮುಖ ಮಾಡಿದ್ದಾರೆ.

ಹೀಗೆ ಓಟಿಟಿ ಅಬ್ಬರ ಜೋರಾದ ಮೇಲೆ ಚಿತ್ರಮಂದಿರಗಳಲ್ಲಿ ಪ್ರದರ್ಶನಗೊಂಡು ತದನಂತರ ಅನೇಕ ದಿನಗಳ ಬಳಿಕ ಟಿವಿಯಲ್ಲಿ ಪ್ರಸಾರಗೊಳ್ಳುತ್ತಿದ್ದ ಸಿನಿಮಾಗಳು ಈಗ ಚಿತ್ರಮಂದಿರದಲ್ಲಿ ತೆರೆಕಂಡ ಕೆಲ ವಾರಗಳಲ್ಲಿಯೇ ಓಟಿಟಿಗೆ ಲಗ್ಗೆ ಇಡುತ್ತಿವೆ. ಹೀಗಾಗಿ ಓಟಿಟಿ ಜನಪ್ರಿಯತೆಯನ್ನು ಗಳಿಸಿದ್ದು, ಚಿತ್ರತಂಡಗಳೂ ಸಹ ಓಟಿಟಿ ಕಡೆ ಒಲವನ್ನು ಹೊಂದಿವೆ.
ತಮ್ಮ ಚಿತ್ರಗಳನ್ನು ಓಟಿಟಿಗೆ ಮಾರಾಟ ಮಾಡಲು ಇಚ್ಛಿಸುತ್ತಿವೆ. ಇನ್ನು ಕೆಲ ಚಿತ್ರಗಳು ಬಿಡುಗಡೆಗೂ ಮುನ್ನವೇ ಓಟಿಟಿಗೆ ಮಾರಾಟವಾದರೆ, ಇನ್ನೂ ಕೆಲ ಚಿತ್ರಗಳು ಚಿತ್ರಮಂದಿರಕ್ಕೆ ಲಗ್ಗೆ ಇಟ್ಟು ಬಳಿಕ ಹಿಟ್ ಆದ ನಂತರ ಓಟಿಟಿಯವರ ಕಣ್ಣಿಗೆ ಬೀಳಲಿವೆ.
ಆದರೆ ಕೆಲ ಚಿತ್ರಗಳು ಮಾತ್ರ ಇನ್ನೂ ಸಹ ಓಟಿಟಿ ವೇದಿಕೆಯಲ್ಲಿ ವೀಕ್ಷಿಸಲು ಲಭ್ಯವಿಲ್ಲ. ಪರಭಾಷೆಗಳಿಗೆ ಹೋಲಿಸಿದರೆ ಕನ್ನಡ ಚಿತ್ರಗಳ ವಿಚಾರವಾಗಿಯೇ ಈ ರೀತಿಯ ಸಮಸ್ಯೆ ಹೆಚ್ಚು ಎಂದು ಹೇಳಬಹುದು. ಸಿನಿ ರಸಿಕರಿಂದ ಬಹಳಷ್ಟು ದೊಡ್ಡ ಮಟ್ಟದ ಮೆಚ್ಚುಗೆಯನ್ನು ಪಡೆದುಕೊಂಡ ಅನೇಕ ಚಿತ್ರಗಳು ಓಟಿಟಿಯಲ್ಲಿ ವೀಕ್ಷಿಸಲು ಲಭ್ಯವಿರದೇ ಇರುವುದು ಬೇಸರದ ಸಂಗತಿಯೇ.
ಹೀಗೆ ಒಳ್ಳೆಯ ವಿಮರ್ಶೆಗಳನ್ನು ಪಡೆದುಕೊಂಡರೂ ಇನ್ನೂ ಸಹ ಯಾವುದೇ ಓಟಿಟಿ ಅಪ್ಲಿಕೇಶನ್‌ನಲ್ಲಿಯೂ ಸಹ ಲಭ್ಯವಿರದ ಕನ್ನಡ ಚಿತ್ರಗಳಿವೆ. ಅಂತಹ ಕನ್ನಡ ಚಿತ್ರಗಳು ಯಾವುವು ಎಂಬ ಮಾಹಿತಿ ಈ ಕೆಳಕಂಡಂತಿದೆ..
* ಧರಣಿ ಮಂಡಲ ಮಧ್ಯದೊಳಗೆ: ನವೀನ್ ಶಂಕರ್, ಐಶಾನಿ ಶೆಟ್ಟಿ, ಯಶ್ ಶೆಟ್ಟಿ ನಟನೆಯ ಧರಣಿ ಮಂಡಲ ಮಧ್ಯದೊಳಗೆ ಚಿತ್ರ ಯಾವುದೇ ಓಟಿಟಿ ವೇದಿಕೆಯಲ್ಲಿ ಲಭ್ಯವಿಲ್ಲ. ಡಿಸೆಂಬರ್ 2ರಂದು ಬಿಡುಗಡೆಗೊಂಡ ಈ ಚಿತ್ರ ಒಳ್ಳೆಯ ವಿಮರ್ಶೆಗಳನ್ನು ಪಡೆದುಕೊಂಡರೂ ಸಹ ಓಟಿಟಿಯಲ್ಲಿ ವೀಕ್ಷಿಸಬೇಕೆನ್ನುವ ಸಿನಿ ರಸಿಕರಿಗೆ ಲಭ್ಯವಿಲ್ಲ.
* ಶಿವಾಜಿ ಸುರತ್ಕಲ್ 2 : 2020ರಲ್ಲಿ ಬಿಡುಗಡೆಗೊಂಡು ಸೂಪರ್ ಹಿಟ್ ಆಗಿದ್ದ ಚಿತ್ರ ಶಿವಾಜಿ ಸುರತ್ಕಲ್ ಚಿತ್ರದ ಸೀಕ್ವೆಲ್ ಶಿವಾಜಿ ಸುರತ್ಕಲ್ 2 ಚಿತ್ರ ಇದೇ ಏಪ್ರಿಲ್ 14ರಂದು ಬಿಡುಗಡೆಗೊಂಡಿತು. ಈ ಚಿತ್ರ ಸಿನಿ ರಸಿಕರಿಂದ ಮಿಶ್ರ ಪ್ರತಿಕ್ರಿಯೆ ಪಡೆದುಕೊಂಡಿತು. ಈ ಚಿತ್ರವೂ ಸಹ ಇನ್ನೂ ಯಾವುದೇ ಓಟಿಟಿ ವೇದಿಕೆಯಲ್ಲಿ ಲಭ್ಯವಿಲ್ಲ.
* ಚೇಜ್: 2022ರಲ್ಲಿ ಬಿಡುಗಡೆಗೊಂಡು ಸಿನಿ ರಸಿಕರ ಗಮನ ಸೆಳೆದಿದ್ದ ಚೇಜ್ ಚಿತ್ರ ಸಹ ಓಟಿಟಿಯಲ್ಲಿ ಲಭ್ಯವಿಲ್ಲ. ರಾಧಿಕಾ ನಾರಾಯಣ್ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದ ಈ ಚಿತ್ರ ಒಳ್ಳೆಯ ಪ್ರತಿಕ್ರಿಯೆಯನ್ನು ಪಡೆದುಕೊಂಡಿತ್ತು.
* ಕಂಬ್ಳಿಹುಳ: ಈ ವರ್ಷ ಚಿತ್ರಮಂದಿರಗಳಲ್ಲಿ ಪ್ರದರ್ಶನ ಕಾಣುತ್ತಿದ್ದಾಗ ಒಳ್ಳೆಯ ಪ್ರತಿಕ್ರಿಯೆ ಪಡೆದುಕೊಂಡಿದ್ದ ಕಂಬ್ಳಿಹುಳ ಚಿತ್ರ ಸಹ ಓಟಿಟಿಯಲ್ಲಿ ಲಭ್ಯವಿಲ್ಲ. ಚಿತ್ರಮಂದಿರದಲ್ಲಿ ವೀಕ್ಷಿಸಲಾಗದೇ ಓಟಿಟಿಯಲ್ಲಿ ವೀಕ್ಷಿಸುವ ಯೋಜನೆ ಹಾಕಿಕೊಂಡಿದ್ದ ಹಲವಾರು ಸಿನಿ ರಸಿಕರು ಈ ಚಿತ್ರ ಯಾವಾಗ ಓಟಿಟಿಗೆ ಬರಲಿದೆ ಎಂದು ಕಾಯುತ್ತಿದ್ದಾರೆ.
* ಮಂಸೋರೆ ನಿರ್ದೇಶನದ 19.20.21 ಚಿತ್ರ ಸಹ ಓಟಿಟಿಯಲ್ಲಿ ಲಭ್ಯವಿಲ್ಲ. ಯಜ್ಞ ಶೆಟ್ಟಿ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದ ಈ ಚಿತ್ರ ಮಾನವ ಹಕ್ಕುಗಳ ಕುರಿತಾದ ಸಂದೇಶವನ್ನು ಹೊಂದಿತ್ತು ಹಾಗೂ ಚಿತ್ರಮಂದಿರದಲ್ಲಿ ವೀಕ್ಷಿಸಿದ್ದ ಸಿನಿ ರಸಿಕರಿಂದ ಮೆಚ್ಚುಗೆ ಪಡೆದುಕೊಂಡಿತ್ತು.
* ಕಳೆದ ವರ್ಷ ಬಿಡುಗಡೆಗೊಂಡಿದ್ದ ವಿಜಯಾನಂದ ಚಿತ್ರ ಸಹ ಓಟಿಟಿಯಲ್ಲಿ ಲಭ್ಯವಿಲ್ಲ. ವಿಜಯಾನಂದ ರೋಡ್‌ಲೈನ್ಸ್ ಮಾಲೀಕ ವಿಜಯ ಸಂಕೇಶ್ವರ ಅವರ ಜೀವಾನಧಾರಿತ ಕಥೆಯಾಗಿದ್ದ ವಿಜಯಾನಂದ ಒಳ್ಳೆಯ ಸಂದೇಶ ನೀಡುವ ಸಿನಿಮಾವಾಗಿತ್ತು.
ಈ ಚಿತ್ರಗಳು ಮಾತ್ರವಲ್ಲದೇ ಇನ್ನೂ ಹಲವಾರು ಕನ್ನಡ ಚಿತ್ರಗಳು ಓಟಿಟಿಯಲ್ಲಿ ಲಭ್ಯವಿರದೇ ಇರುವುದು ಸಿನಿ ರಸಿಕರಿಗೆ ಬೇಸರದ ವಿಷಯವಾಗಿದ್ದು, ಮುಂದಿನ ದಿನಗಳಲ್ಲಾದರೂ ಈ ಚಿತ್ರಗಳು ಓಟಿಟಿಗೆ ಬರಲಿವೆಯಾ ಕಾದು ನೋಡಬೇಕಿದೆ.


Click it and Unblock the Notifications











