ಕನ್ನಡಿಗರ ಕೋಪಕ್ಕೆ ಗುರಿಯಾಗಿದ್ದ ತಮಿಳು ಚಿತ್ರಗಳು
Recommended Video

ಕಾವೇರಿ ನದಿ ನೀರು ಹಂಚಿಕೆ ವಿವಾದದ ಬಗ್ಗೆ ಹೇಳಿಕೆ ನೀಡಿ ಕರ್ನಾಟಕ ಜನರ ಕೆಂಗಣ್ಣಿಗೆ ಗುರಿಯಾಗಿರುವ ರಜನಿಕಾಂತ್ ಅವರ ಚಿತ್ರವನ್ನ ಕನ್ನಡ ನಾಡಿನಲ್ಲಿ ನಿಷೇಧ ಮಾಡಲಾಗಿದೆ. ಜೂನ್ 7 ರಂದು ರಜನಿಕಾಂತ್ ಅಭಿನಯದ 'ಕಾಲಾ' ಸಿನಿಮಾ ತೆರೆಕಾಣುತ್ತಿದೆ. ಆದ್ರೆ, ಇದು ಕರ್ನಾಟಕದಲ್ಲಿ ಬಿಡುಗಡೆಯಾಗಲ್ಲ. ಯಾಕಂದ್ರೆ, ರಜನಿ ಕನ್ನಡಿಗರ ಸ್ವಾಭಿಮಾನವನ್ನ ಪ್ರಶ್ನಿಸಿದ್ದಾರೆ ಎಂಬುದು.
ಹೀಗೆ, ತಮಿಳು ಸಿನಿಮಾಗಳನ್ನ ಕರ್ನಾಟಕದಲ್ಲಿ ನಿಷೇಧ ಹೇರುತ್ತಿರುವುದು ಇದೇ ಮೊದಲಲ್ಲ. ಇದಕ್ಕೂ ಮುಂಚೆ ಹಲವು ಚಿತ್ರಗಳು ಕರ್ನಾಟಕದಲ್ಲಿ ಪ್ರದರ್ಶನ ಕಾಣದೆ ಸಮಸ್ಯೆ ಅನುಭವಿಸಿದೆ.
ಇರದಲ್ಲಿ, ರಜನಿಕಾಂತ್ ಅವರ ಸಿನಿಮಾವೇ ಹೆಚ್ಚು ಸಂಕಷ್ಟಕ್ಕೆ ಸಿಲುಕುತ್ತೆ ಎಂಬುದು ಗಮನಿಸಬೇಕಾದ ವಿಚಾರ. ಹಾಗಿದ್ರೆ, ಯಾವ ಯಾವ ಚಿತ್ರಗಳು ಈ ಹಿಂದೆ ಕರ್ನಾಟಕದಲ್ಲಿ ನಿಷೇಧಕ್ಕೆ ಒಳಗಾಗಿತ್ತು. ಯಾವ ಕಾರಣದಿಂದ ಬ್ಯಾನ್ ಆಗಿತ್ತು ಎಂಬ ಒಂದು ವಿಶೇಷ ವರದಿ ಇಲ್ಲಿದೆ. ಮುಂದೆ ಓದಿ.....

ರಜನಿಕಾಂತ್ 'ಕಾಲಾ'
ಸುಪ್ರೀಂ ಕೋರ್ಟ್ ಆದೇಶದಂತೆ ತಮಿಳುನಾಡಿಗೆ ಕರ್ನಾಟಕ ನೀರು ಬಿಡಬೇಕು ಎಂದು ಹೇಳಿಕೆ ನೀಡಿದ್ದ ರಜನಿಕಾಂತ್ ಸಿನಿಮಾವನ್ನ ಕನ್ನಡ ಪರ ಸಂಘಟನೆಗಳು ನಿಷೇಧ ಮಾಡಿದೆ. ಜೂನ್ 7 ರಂದು ಈ ಸಿನಿಮಾ ಜಗತ್ತಿನಾದ್ಯಂತ ಬಿಡುಗಡೆಯಾಗುತ್ತಿದೆ. ಆದ್ರೆ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯೂ ಈ ಬಗ್ಗೆ ನಿರ್ಧಾರ ಕೈಗೊಂಡಿದ್ದು, ಸಿನಿಮಾ ರಿಲೀಸ್ ಮಾಡಲು ಬಿಡುವುದಿಲ್ಲ ಎಂದು ತಿಳಿಸಿದೆ. ಇನ್ನು ಒಂದು ವಾರ ಸಮಯವಿದೆ. ಏನಾಗುತ್ತೆ ಎಂದು ಕಾದುನೋಡಬೇಕು.

'ಬಾಹುಬಲಿ' ಸಿನಿಮಾ
ಈ ಹಿಂದೆ ತೆಲುಗು, ತಮಿಳು ಭಾಷೆಯಲ್ಲಿ ಬಿಡುಗಡೆಯಾಗಬೇಕಿದ್ದ 'ಬಾಹುಬಲಿ ದಿ ಕನ್ ಕ್ಲೂಷನ್' ಸಿನಿಮಾವನ್ನ ಬಿಡುಗಡೆ ಮಾಡುವುದಿಲ್ಲ ಎಂದು ನಿಷೇದ ಹೇರಲಾಗಿತ್ತು. ಬಾಹುಬಲಿ ಚಿತ್ರದಲ್ಲಿ ನಟಿಸಿದ್ದ ನಟ ಸತ್ಯರಾಜ್ ಕರ್ನಾಟಕ ಮತ್ತು ಕಾವೇರಿ ನೀರಿನ ಬಗ್ಗೆ ಹೀನಾಯವಾಗಿ ಮಾತನಾಡಿದ್ದರು. ಇದನ್ನ ಖಂಡಿಸಿ ಕನ್ನಡ ಪರ ಸಂಘಟನೆಗಳು ಹೋರಾಟ ಮಾಡಿದ್ದವು. ನಂತರ ಬಹಿರಂಗವಾಗಿ ಕ್ಷಮೆ ಕೇಳಿದ ನಂತರ ಸಿನಿಮಾ ಬಿಡುಗಡೆ ಮಾಡಲಾಗಿತ್ತು.

ಸೂರ್ಯ ಸಿನಿಮಾ
ಇನ್ನು 2012ರಲ್ಲಿ ತಮಿಳು ನಟ ಸೂರ್ಯ ಅಭಿನಯದ 'ಮಾಟ್ರನ್' ಸಿನಿಮಾ ಕೂಡ ಬ್ಯಾನ್ ಆಗಿತ್ತು. ಕಾವೇರಿ ವಿವಾದಕ್ಕೆ ಸಿಲುಕಿದ 'ಮಾಟ್ರನ್' ಸಿನಿಮಾ ಕರ್ನಾಟಕದಲ್ಲಿ ಬಿಡುಗಡೆಯಾಗಬಾರದೆಂದು ನಿಷೇಧ ಮಾಡಿದರು. ಆದ್ರೆ, ಇದೇ ಸಿನಿಮಾ ತೆಲುಗಿನಲ್ಲಿ ಡಬ್ ಆಗಿ 'ಬ್ರದರ್ಸ್' ಎಂಬ ಟೈಟಲ್ ನಲ್ಲಿ ತೆರೆಕಂಡಿತ್ತು.

ಅಜಿತ್ 'ಆರಂಭಂ'
ತಮಿಳು ನಟ ಅಜಿತ್ ಅಭಿನಯದ 'ಆರಂಭಂ' ಸಿನಿಮಾ ಕೂಡ ಕರ್ನಾಟಕದಲ್ಲಿ ಒಂದು ದಿನ ಮಟ್ಟಿಗೆ ನಿಷೇಧವಾಗಿತ್ತು. 2013ರ ಅಕ್ಟೋಬರ್ 31 ರಂದು ಈ ಸಿನಿಮಾ ಬಿಡುಗಡೆಯಾಗಿತ್ತು. ಆದ್ರೆ, ನವೆಂಬರ್ 1 ರಂದು ಕನ್ನಡ ರಾಜ್ಯೋತ್ಸವ ಇದ್ದ ಕಾರಣ, ವಿಳಂಬವಾಗಿ ಪ್ರದರ್ಶನ ಕಂಡಿತ್ತು.

'ಕುಚೇಲನ್' ಸಿನಿಮಾ
ಇನ್ನು 2008ರಲ್ಲಿ ರಜನಿಕಾಂತ್ ಅಭಿನಯದ 'ಕುಚೇಲನ್' ಸಿನಿಮಾ ಕರ್ನಾಟಕದಲ್ಲಿ ಬಿಡುಗಡೆಯಾಗಲು ಬಿಟ್ಟಿರಲಿಲ್ಲ. ಹೋಗೆನೆಕಲ್ ವಿವಾದದ ಸಂದರ್ಭದಲ್ಲಿ ಕನ್ನಡಿಗರ ಬಗ್ಗೆ ರಜನಿಕಾಂತ್ ಅವಹೇಳನವಾಗಿ ಮಾತನಾಡಿದ್ದ ಕಾರಣ ಈ ಸಿನಿಮಾವನ್ನ ಬಿಡುಗಡೆ ಮಾಡಲು ಬಿಡುವುದಿಲ್ಲ ಎಂದು ಹೋರಾಟ ಮಾಡಿದ್ದರು. ನಂತರ ರಜನಿಕಾಂತ್ ಬಹಿರಂಗವಾಗಿ ಕ್ಷಮೆ ಕೇಳಿದ ನಂತರ ಸಿನಿಮಾ ಪ್ರದರ್ಶನಕ್ಕೆ ಅನುಮತಿ ನೀಡಲಾಯಿತು.

ಕಮಲ್ ಹಾಸನ್ ಸಿನಿಮಾಗೂ ನಿಷೇಧ
ಸದ್ಯ, ರಜನಿಕಾಂತ್ ಸಿನಿಮಾ ಮಾತ್ರವಲ್ಲ, ಕಮಲ್ ಹಾಸನ್ ಚಿತ್ರಗಳನ್ನ ಕರ್ನಾಟಕದಲ್ಲಿ ಬಿಡುಗಡೆಯಾಗಲು ಬಿಡುವುದಿಲ್ಲ ಎಂದು ಕನ್ನಡ ಹೋರಾಟಗಾರರು ಎಚ್ಚರಿಕೆ ನೀಡಿದ್ದಾರೆ. 'ವಿಶ್ವರೂಪಂ' ಹಾಗೂ 'ಶಬಾಶ್ ನಾಯ್ಡು' ಸಿನಿಮಾ ತೆರೆಕಾಣಬೇಕಿದೆ. ಸದ್ಯಕ್ಕೆ ಈ ಸಿನಿಮಾಗಳು ಬರುವ ಲಕ್ಷಣವಿಲ್ಲ. ಹೀಗಾಗಿ, ಕಮಲ್ ಹಾಸನ್ ನಿಟ್ಟುಸಿರು ಬಿಟ್ಟಿದ್ದಾರೆ.


Click it and Unblock the Notifications











