ಗಂಡ ಹೆಂಡ್ತಿ ಸಂಜನಾ ಗಲ್ರಾನಿ ಸದ್ದಿಲ್ಲದೇ ಮದುವೆಯಾಗಿದ್ದು ಯಾಕೆ ? ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡಿದ್ದಾರಾ ನಟಿ ?
ಪ್ರೀತಿ ಹೃದಯದ ಭಾಷೆ ಎನ್ನುವುದು ಲೋಕಾರೂಢಿ. ಎರಡು ಹೃದಯಗಳ ಪಿಸುಮಾತಿಗೆ ಯಾವುದೇ ಗಡಿಗಳಿಲ್ಲ. ಭಾಷೆಯ ಹಂಗಿಲ್ಲ. ಎಲ್ಲ ಅಡೆತಡೆಗಳನ್ನು ಮೀರಿ ಬೆಳೆಯುವ ಶಕ್ತಿ ಇರುವುದು ಕೇವಲ ಪ್ರೀತಿಗೆ ಮಾತ್ರ. ಆದರೆ ಈಗೀಗ ಈ ಪ್ರೀತಿ ಧರ್ಮದ ಬೇಲಿಗಳ ನಡುವೆ ಸಿಲುಕಿ ನಲುಗುತ್ತಿದೆ.
ಅದರಲ್ಲಿಯೂ ಭಾರತದಲ್ಲಿ ಸದ್ಯ ಧರ್ಮಾಧಾರಿತ ವ್ಯವಸ್ಥೆಯಲ್ಲಿ ಜನ್ಮ ಸ್ಥಾನ ಮತ್ತು ಸಮಯದಿಂದ ಹಿಡಿದು ಸಾಯುವ ತನಕ ಜಾತಿ ಮತ್ತು ಧರ್ಮ ಎಲ್ಲವನ್ನೂ ನಿಭಾಯಿಸುತ್ತೆ. ಕೋಮುದ್ವೇಷದ ಖಾಯಿಲೆ ಬೇರೆ ಎಲ್ಲ ದೇಶಕ್ಕಿಂತ ಭಾರತವನ್ನು ಹೈರಾಣು ಮಾಡಿದೆ. ಕುಂತರು, ನಿಂತರು ತಪ್ಪೆನ್ನುವ ಒಂದು ವರ್ಗ ಧರ್ಮದ ಅಸ್ತ್ರದ ಮೂಲಕಪ್ರೀತಿಯನ್ನು ಹತ್ತಿಕ್ಕುವ ಪ್ರಯತ್ನ ಮಾಡುತ್ತಿದೆ. ಪ್ರೀತಿಯನ್ನು ರಾಜಕೀಯ ಮತ್ತು ಧರ್ಮದ ಕನ್ನಡಕದ ಮೂಲಕ ನೋಡುತ್ತಿದೆ.

ಅಂತರ ಧರ್ಮಿಯ ಸಂಬಂಧಗಳನ್ನು ಕೇವಲ ವೈಯಕ್ತಿಕ ಆಯ್ಕೆಯಾಗಿ ನೋಡುವ ಬದಲು, ಷಡ್ಯಂತ್ರ .. ಪಿತೂರಿ .. ಎಂಬಂತೆ ಬಿಂಬಿಸಲಾಗುತ್ತಿದೆ. ಪವಿತ್ರವಾದ ಪ್ರೀತಿಗೆ ಲವ್ ಜಿಹಾದ್ ಎಂಬ ಲೆಬಲ್ ಹಚ್ಚುವ ಮೂಲಕ ದ್ವೇಷವನ್ನು ಹೆಚ್ಚಿಸುವ ಕೆಲಸವನ್ನು ಒಂದು ಬಣ ಮಾಡುತ್ತಿದೆಯೇ ಹೊರತು ಸಂಬಂಧಕ್ಕೆ ಈಗ ಬೆಲೆ ಕೊಡುತ್ತಿಲ್ಲ. ಇಂತಹದ್ದೇ ಬಿರುಗಾಳಿಯಲ್ಲಿ ಸಿಲುಕಿದ್ದ ಸಂಜನಾ ಗಲ್ರಾನಿ ತಾವು ಗೌಪ್ಯವಾಗಿ ಮದುವೆಯಾಗಿದ್ದೇಕೆ ಎನ್ನುವುದನ್ನು ಹೇಳಿದ್ದಾರೆ. ಎಲ್ಲವೂ ಸರ್ವನಾಶವಾಯ್ತು ಎಂದು ಭಾವುಕರಾಗಿದ್ದಾರೆ.
ಈ ಕುರಿತು ''ವಿಶ್ವವಾಣಿ ಟಿವಿ''ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ಸಂಜನಾ 2020ರಲ್ಲಿ ಡ್ರಗ್ ಕೇಸ್‌ನಲ್ಲಿ ನನ್ನನ್ನು ಬಲಿಪಶು ಮಾಡಿದರು, ಆಗ ನನಗೆ 32 ವಯಸ್ಸು ಆರಿಗಬಹುದೇನೋ ಎಂದು ಹೇಳಿದ್ದಾರೆ. ಆಗ ಪ್ರತಿಯೊಂದು ವಿಚಾರವನ್ನು ಎಳೆದಾಡಿ ಎಲ್ಲವನ್ನೂ ಬೀದಿಗೆ ತಂದರು ಎಂದಿದ್ದಾರೆ.
ಆ ಸಮಯದಲ್ಲಿ ನಾನು ಆಗಲೇ ಮದುವೆಯಾಗಿದ್ದೇ, ಈ ವಿಚಾರವನ್ನು ನಾನು ತುಂಬಾ ಗೌಪ್ಯವಾಗಿ ಕೂಡ ಇಟ್ಟಿದ್ದೇ ಎಂದು ಹೇಳಿರುವ ಸಂಜನಾ ಡ್ರಗ್ಸ್ ಕೇಸ್‌ನಲ್ಲಿ ನನ್ನ ಫೋನ್ ತಗೊಂಡರು, ಆಗ ಅವರಿಗೆ ನನ್ನ ಮದುವೆಯ ಫೋಟೊಗಳು ಸಿಕ್ಕವು ಎಂದು ಹೇಳಿದ್ದಾರೆ.
ಮುಂದುವರೆದು ಆ ಸಮಯದಲ್ಲಿ ನಾನು ಅದಾಗಲೇ 48 ಸಿನಿಮಾ ಮಾಡಿದ್ದೇ, ನಾಲ್ಕು ಭಾಷೆಗಳಲ್ಲಿ ಮಿಂಚಿದ್ದೆ, ಹೀಗಾಗಿ ಪ್ಯಾಲೇಸ್ ಗ್ರೌಂಡ್‌ನಲ್ಲಿ ಎಲ್ಲರೆದುರು ಅದ್ದೂರಿಯಾಗಿ ಮದುವೆಯಾಗಬೇಕು ಎನ್ನುವ ಆಸೆ ನನಗೆ ಇತ್ತು ಎಂದು ಹೇಳಿರುವ ಸಂಜನಾ ಆಗ ಅವರ ತಾಯಿಗೆ ವಯಸ್ಸಾಗಿತ್ತು, ಅವರು
ಅವರು ಇರ್ತಾರೋ ಇಲ್ವೋ ಅನ್ನೋ ಭಾವನೆ ನಮಗೆ ಇತ್ತು, ಹೀಗಾಗಿ ಸದ್ದಿಲ್ಲದೇ ಮದುವೆಯಾಗಬೇಕಾಯ್ತು ಎಂದು ಹೇಳಿದ್ದಾರೆ. ಅವರಿಗೆ ನಮ್ಮ ಮದುವೆ ನೋಡಬೇಕೆಂಬ ಆಸೆ ಇತ್ತು, ಮುಖ್ಯವಾಗಿ ನಾನು ಅದ್ಧೂರಿ ಮದುವೆಗೆ ಮಾನಸಿಕವಾಗಿ ಸಿದ್ದವಾಗಿರಲಿಲ್ಲ, ಹೀಗಾಗಿ ಹೇಗೋ ಕೊರೊನಾ ಇದೆ. ಮನೆಯ ಪರಿಸ್ಥಿತಿ ಹೀಗೆ ಇದೆ ಎಂದು ನಾವು ಮದುವೆ ಆದೆವು ಎಂದು ಹೇಳಿದ್ಧಾರೆ.

ಹೀಗೆ ನಮ್ಮ ಮದುವೆ ಏನೋ ಆಯ್ತು, ಆದರೆ,ಕೇಸ್ ಆದಾಗ, ನನ್ನ ವೈಯಕ್ತಿಕ ಮಾಹಿತಿ ಫೋನ್‌ನಲ್ಲಿತ್ತು, ಅದರಿಂದ ಬೇರೆ ಧರ್ಮದವರ ಜೊತೆ ಸಂಜನಾ ಮದುವೆಯಾಗಿದ್ದಾರೆ ಅಂತ ಸುದ್ದಿ ಆಯ್ತು ಎಂದು ಹೇಳಿರುವ ಸಂಜನಾ ಬೇರೆ ಧರ್ಮದಲ್ಲಿ ಮದುವೆ ಆದರೇನಂತೆ ? ನೋಡಿ ನಾನು ಹಣೆಯ ಬೊಟ್ಟು ಇಟ್ಟುಕೊಂಡಿದ್ದೇನೆ ಎಂದು ಹೇಳಿದ್ದಾರೆ. ಈ ಮೂಲಕ ನಾನು ಮತಾಂತರಗೊಂಡಿಲ್ಲ ಎನ್ನುವುದನ್ನು ಸ್ಪಷ್ಟಪಡಿಸಿದ್ದಾರೆ.
ನಾನು ಇನ್ನೂ ಹಿಂದೂ ಧರ್ಮವನ್ನೇ ಅನುಸರಿಸುತ್ತೇನೆ ಎಂದು ಹೇಳಿರುವ ಸಂಜನಾ ನಾನು ಎಲ್ಲ ಧರ್ಮವನ್ನು ಕೂಡ ನಂಬುತ್ತೇನೆ, ನನ್ನ ಪತಿಯ ಧರ್ಮವನ್ನು ಕೂಡ ನಾನು ಗೌರವಿಸುತ್ತೇನೆ, ಅವರು ನನ್ನ ದೇವಸ್ಥಾನಕ್ಕೆ ಕರೆದುಕೊಂಡು ಹೋಗ್ತಾರೆ, ಕ್ರಿಸ್‌ಮಸ್‌ಗೆ ನಾವು ಚರ್ಚ್‌ಗೂ ಹೋಗ್ತೀವಿ, ದೇವರು ಒಂದೇ ಎನ್ನುವುದು ನನ್ನ ನಂಬಿಕೆ ಎಂದಿದ್ದಾರೆ.
ನನ್ನ ಪರ್ಸನಲ್ ರಿಲಿಜಿಯನ್ ಚಾಯ್ಸ್ ಬೇರೆ ಅವರಿಗೆ ಯಾಕೆ? ಇದೆಲ್ಲಾ ನನ್ನ ಪರ್ಸನಲ್. ಪರ್ಸನಲ್ ಡೇಟಾವನ್ನೂ ಆ ಟೈಮ್‌ನಲ್ಲಿ ನನ್ನ ವಿರುದ್ದ ಯೂಸ್ ಮಾಡಿದರು ಎಂದು ಕಿಡಿ ಕಾರಿರುವ ಸಂಜನಾ ಡ್ರಗ್ಸ್ ಕೇಸ್ ನಂತರ ಎಲ್ಲವೂ ಸರ್ವನಾಶ ಆಯ್ತು, ಎಲ್ಲದಕ್ಕೂ ಫುಲ್‌ಸ್ಟಾಪ್ ಬಿತ್ತು ಎಂದು ಹೇಳಿದ್ದಾರೆ. ಇನ್ನೇನು ಮುಗಿತು ಅಂದುಕೊಂಡಾಗಲೇ ನನಗೆ ತೆಲುಗು ''ಬಿಗ್ ಬಾಸ್''ನಲ್ಲಿ ದೊಡ್ಡ ಅವಕಾಶ ಸಿಕ್ತು ಎಂದು ಹೇಳಿದ್ದಾರೆ. ನನ್ನ ಕಷ್ಟದ ದಿನಗಳಲ್ಲಿ ನನ್ನ ಕೈ ಹಿಡಿದಿದ್ದು ನನ್ನ ಕುಟುಂಬ ಮಾತ್ರ, ಚಿತ್ರರಂಗದಲ್ಲಿದ್ದರೆ ಯಾರನ್ನೂ ಸ್ನೇಹಿತರನ್ನಾಗಿ ಮಾಡಿಕೊಳ್ಳಬಾರದು ಎಂದಿದ್ದಾರೆ.


Click it and Unblock the Notifications











