ಯಶ್ ಕೆಳಗೆ ಬೀಳುವುದನ್ನೇ ಅವರೆಲ್ಲ ಎದುರು ನೋಡುತ್ತಿದ್ದಾರೆ, ಮಾನ್ವಿತಾ ಕಾಮತ್ ಸ್ಫೋಟಕ ಹೇಳಿಕೆ..!
ಚಿತ್ರರಂಗಕ್ಕೆ ಬಂದ ದಿನದಿಂದ ಸೋಲು-ಗೆಲುವು ಹೊರತಾಗಿ ಶಿಸ್ತನ್ನೂ ಮೈಗೂಡಿಸಿಕೊಂಡು ಬಂದವರು ಯಶ್. ಸಿನಿಮಾ ಬದುಕಿನಂತೆಯೇ ವ್ಯೆಯಕ್ತಿಕ ಬದುಕನ್ನೂ ಕೂಡ ಕರಾರುವಕ್ಕಾದ ಪ್ಲಾನುಗಳ ಮೂಲಕ ರೂಪಿಸಿಕೊಂಡ ಯಶ್ ಈಗ ಕೇವಲ ರಾಕಿಂಗ್ ಸ್ಟಾರ್ ಅಲ್ಲ ಬದಲಿಗೆ ನ್ಯಾಷನಲ್ ಸ್ಟಾರ್.
ಕೆಜಿಎಫ್ ಚಿತ್ರದ ಮೂಲಕ ಕನ್ನಡ ಚಿತ್ರರಂಗದತ್ತ ಎಲ್ಲರು ತಿರುಗಿ ನೋಡುವಂತೆ ಮಾಡಿದ ಯಶ್ ಕುರಿತು ಇವತ್ತು ಜಗತ್ತು ಮಾತನಾಡುತ್ತಿದೆ. ಯಶ್ ಅವರ ಮುಂದಿನ ಚಿತ್ರ ಟಾಕ್ಸಿಕ್ ಚಿತ್ರಕ್ಕೆ ಕಾತುರದಿಂದ ಕಾಯುತ್ತಿದೆ. ಹಾಲಿವುಡ್, ಬಾಲಿವುಡ್‌ನವರೆಲ್ಲ ಸ್ಯಾಂಡಲ್‌ವುಡ್‌ಗೆ ಬಂದು ಯಶ್ ಜೊತೆ ಕೆಲಸ ಮಾಡುತ್ತಿದ್ದಾರೆ. ಆದರೆ ವಿಪರ್ಯಾಸ ಯಶ್ ಅವರ ಈ ಬೆಳವಣಿಗೆ ಕೆಲವರಿಗೆ ಸಹಿಸಲು ಸಾಧ್ಯವಾಗುತ್ತಿಲ್ಲ. ಕಣ್ಣುರಿಯುತ್ತಿದೆ. ಇಂತಹದ್ದೊಂದು ಕಹಿ ಸತ್ಯವನ್ನು ಮಾನ್ವಿತಾ ಕಾಮತ್ ಬಹಿರಂಗಪಡಿಸಿದ್ದಾರೆ.

ಹೌದು, ಸುಕ್ಕಾ ಸೂರಿ ನಿರ್ದೇಶನದ ಕೆಂಡಸಂಪಿಗೆ ಚಿತ್ರದ ಮೂಲಕ ಚಿತ್ರರಂಗಕ್ಕೆ ಬಂದ ಮಾನ್ವಿತಾ ಟಗರು ಚಿತ್ರದ ನಂತರ ಟಗರು ಪುಟ್ಟಿ ಎಂದೇ ಖ್ಯಾತಿಯನ್ನು ಗಳಿಸಿದರು. ಚೌಕ, ಕನಕ, ದಾರಿ ತಪ್ಪಿದ ಮಗ, ಹೀಗೆ ಹಲವು ಚಿತ್ರಗಳಲ್ಲಿ ಕಾಣಿಸಿಕೊಂಡು ಕಳೆದ ವರ್ಷ ಅರುಣ್ ಕುಮಾರ್ ಅವರ ಜೊತೆ ಸಪ್ತಪದಿಯನ್ನು ತುಳಿದರು.
ಇಂಥಾ ಮಾನ್ವಿತಾ ಕಾಮತ್ ಯುಗಾದಿ ಹಬ್ಬದ ಪ್ರಯುಕ್ತ ಟಿವಿ5 ಗೆ ಸಂದರ್ಶನ ನೀಡಿದ್ದಾರೆ. ಈ ಸಂದರ್ಶನದಲ್ಲಿ ಕನ್ನಡ ಚಿತ್ರರಂಗದಲ್ಲಿರುವ ಕೆಲವರ ಮನಸ್ಥಿತಿಗೆ ಮಾನ್ವಿತಾ ಕೈಗನ್ನಡಿ ಹಿಡಿದಿದ್ದಾರೆ. ಸಂದರ್ಶನದಲ್ಲಿ ಕನ್ನಡ ಚಿತ್ರರಂಗದ ಸ್ಥಿತಿ ಗತಿಯ ಕುರಿತು ಮಾತನಾಡಿರುವ ಮಾನ್ವಿತಾ ನಮ್ಮಲ್ಲಿ ಒಳ್ಳೆಯದಾಗಬೇಕು ಎನ್ನುವ ಉದ್ದೇಶ ಹಲವರಿಗೆ ಇಲ್ಲ ಎಂದು ಹೇಳಿದ್ದಾರೆ. ಉದಾಹರಣೆಗೆ ಯಶ್ ಅವರ ವಿಚಾರ ತೆಗೆದುಕೊಳ್ಳಿ ಎಂದು ಹೇಳಿದ್ದಾರೆ.
ಈ ಕುರಿತು ಸಂದರ್ಶನದಲ್ಲಿ ಮಾತನಾಡಿರುವ ಮಾನ್ವಿತಾ, ಹೀಗೆ ಒಂದು ದಿನ ನಾವೆಲ್ಲ ಒಂದು ಮೀಟಿಂಗ್‌ನಲ್ಲಿ ಕುಳಿತಿಕೊಂಡಿದ್ವಿ, ಒಂದೇ ಸಿನಿಮಾ ಮಾಡುವ ಒಬ್ಬ ನಿರ್ಮಾಪಕ, ನನಗೂ ಸ್ನೇಹಿತರೇ ಅವರು ಎಂದಿರುವ ಮಾನ್ವಿತಾ ಹೀಗೆ ಮಾತನಾಡುವಾಗ ಯಶ್ ವಿಚಾರ ಬಂತು ಅವರು ಕೂಡಲೇ ಏ ಅವರು ನಂಗೆ ತುಂಬಾ ಹಿಂದೆಯಿಂದಲೂ ಗೊತ್ತು ಅನ್ನೋ ರೀತಿ ಮಾತನಾಡಿದರು ಎಂದು ಹೇಳಿದ್ದಾರೆ.
ಮುಂದುವರೆದು, ಒಳ್ಳೆಯದಾಯ್ತು ಅಂದುಕೊಂಡು ನಾನು ಸುಮ್ಮನಾದೆ, ಆದರೆ ಅವರು ಹಾಗೇ ಮಾತನಾಡುತ್ತಲೇ ಹೋದರು, ಅವರೆಲ್ಲ ಹೇಗೆ ಮಾತನಾಡುತ್ತಿದ್ದರು ಅಂದರೆ ಅವರೆಲ್ಲ ಯಶ್ ಕೆಳಗೆ ಬೀಳುವುದನ್ನ ನೋಡಲು ಕಾಯುತ್ತಿರುವಂತೆ ಇತ್ತು ಎಂದು ಮಾನ್ವಿತಾ ಕಾಮತ್ ಹೇಳಿದ್ದಾರೆ.
ಟಾಕ್ಸಿಕ್‌ನಂತಹ ಚಿತ್ರವನ್ನು ಯಶ್ ಮಾಡುತ್ತಿದ್ದಾರೆ, ಆ ಚಿತ್ರ ಗೆಲ್ಲಬೇಕು, ಅದರಿಂದ ಇನ್ನು ಒಂದಿಷ್ಟು ಜನರಿಗೆ ಕೆಲಸ ಸಿಗುತ್ತೆ, ಆ ವ್ಯಕ್ತಿ ಏನೋ ಗುರಿ ಇಟ್ಕೊಂಡು ಹೋಗ್ತಿದ್ದಾರೆ ಅವರಿಗೆ ಒಳ್ಳೆಯದಾದರೆ ಕನ್ನಡ ಚಿತ್ರರಂಗಕ್ಕೆ ಒಳ್ಳೆಯದಾಗುತ್ತೆ ಎನ್ನುವ ಮನಸ್ಥಿತಿಯೇ ಅವರಲ್ಲಿ ಇರಲಿಲ್ಲ ಎಂದಿರುವ ಮಾನ್ವಿತಾ ಅವರ ಮಾತುಗಳನ್ನು ಕೇಳಿ ನನಗೆ ಸಹಿಸಿಕೊಳ್ಳೋಕೆ ಆಗಲಿಲ್ಲ ಎಂದು ಹೇಳಿದ್ದಾರೆ. 20 ಜನ ಒಬ್ಬರ ಬಗ್ಗೆ ಕೆಟ್ಟದಾಗಿ ಮಾತನಾಡುವಾಗ, ಆ ಗುಂಪಿಗೆ ಸೇರಿಕೊಂಡು ಕೆಟ್ಟದಾಗಿ ಮಾತನಾಡುವ ವ್ಯಕ್ತಿ ನಾನಲ್ಲ ಎಂದಿದ್ದಾರೆ.
ಯಾಕೆಂದರೆ ನನಗೆ ಮೊದಲೇ ಬೇರೆಯವರ ಬಗ್ಗೆ ಕೆಟ್ಟದಾಗಿ ಮಾತನಾಡಿದರೆ ಆಗುವುದಿಲ್ಲ, ನಾನು ಸುಮ್ಮನೆ ಕೂರುವಳು ಅಲ್ಲ, ಆ ಜಾಗದಲ್ಲಿ ನಾನು ಇರುವುದು ಇಲ್ಲ ಎಂದಿರುವ ಮಾನ್ವಿತಾ ನಾನು ಮೊದಲಿಂದ ಅಲ್ಲಿಯೇ ಸರಿಯಾಗಿ ಉತ್ತರವನ್ನು ನೀಡಿಯೇ ಬರುತ್ತೇನೆ ಎಂದು ಹೇಳಿದ್ದಾರೆ. ಆ ದಿನ ಕೂಡ ಅವರಿಗೆ ಉತ್ತರವನ್ನು ಕೊಟ್ಟೆ ಬಂದೆ ಎಂದು ಹೇಳಿರುವ ಮಾನ್ವಿತಾ ನೀವೆಲ್ಲ ಯಾಕೆ ಉದ್ದಾರ ಆಗಿಲ್ಲ ಅಂದರೆ ನೀವು ಎಲ್ಲರೂ ಬೀಳಲಿ ಅಂತ ಕಾಯುತ್ತಿರುತ್ತೀರಾ, ಒಬ್ಬರ ಏಳಿಗೆ ಸಹಿಸಲ್ಲ ನೀವುಗಳು, ಒಬ್ಬ ನಟ ಬೆಳೆಯುತ್ತಿದ್ದಾನೆ ಅಂದರೆ, ಒಂದು ನಿರ್ಮಾಣ ಸಂಸ್ಥೆ ಬೆಳೆಯುತ್ತಿದೆ ಅಂದರೆ ಅವರ ಜೊತೆ ನಿಲ್ಲಬೇಕು ಎನ್ನುವ ಮನಸ್ಥಿತಿಯೇ ನಿಮಗಿಲ್ಲ ಎಂದು ನಾನು ಅವರಿಗೆ ಹೇಳಿ ಅಲ್ಲಿಂದ ಹೊರ ಬಂದೆ ಎಂದು ಹೇಳಿದ್ಧಾರೆ.
ಸದ್ಯ ಮಾನ್ವಿತಾ ಕಾಮತ್ ಅವರ ಈ ಮಾತುಗಳು ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಗೆ ನಾಂದಿ ಹಾಡಿವೆ. ನಮ್ಮ ಚಿತ್ರರಂಗಕ್ಕೆ ನಮ್ಮವರೇ ಶತ್ರುಗಳು ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ. ಇಂತಹವರ ಮನಸ್ಥಿತಿಗಳಿಂದನೇ ಕನ್ನಡ ಚಿತ್ರರಂಗ ಇನ್ನೂ ಎತ್ತರೆತ್ತರಕ್ಕೆ ಬೆಳೆದಿಲ್ಲ ಎನ್ನುವ ಅನೇಕರು ಒಂದೇ ಒಂದು ಚಿತ್ರವನ್ನು ನಿರ್ಮಾಣ ಮಾಡಿದ ಆ ನಿರ್ಮಾಪಕನ ಹೆಸರನ್ನು ಕೂಡ ಮಾನ್ವಿತಾ ಹೇಳಬೇಕಿತ್ತು ಎನ್ನುತ್ತಿದ್ದಾರೆ. ಕನ್ನಡ ಚಿತ್ರರಂಗದ ಕೀರ್ತಿಯನ್ನು ಹೆಚ್ಚಿಸಲು ಯಶ್ ಹಗಲಿರುಳು ಕೆಲಸ ಮಾಡುತ್ತಿದ್ದಾರೆ, ಆದರೆ ಕನ್ನಡ ಚಿತ್ರರಂಗದಲ್ಲಿನ ಕೆಲ ಹಿತ ಶತ್ರುಗಳೇ ಅವರಿಗೆ ಅಡ್ಡಗಾಲು ಹಾಕುವ ಪ್ರಯತ್ನವನ್ನು ಮಾಡುತ್ತಿದ್ದಾರೆ ಎನ್ನುವ ಅಭಿಪ್ರಾಯವನ್ನು ಕೂಡ ವ್ಯಕ್ತಪಡಿಸುತ್ತಿದ್ದಾರೆ. ಸದ್ಯ ಯಶ್ ಅವರ ಕುರಿತು ಮಾನ್ವಿತಾ ಕಾಮತ್ ಮಾತನಾಡಿರುವ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಇನ್ನುಳಿದಂತೆ ಮಾನ್ವಿತಾ ಕಾಮತ್ ಅವರ ವಿಚಾರಕ್ಕೆ ಬರುವುದಾದರೆ, ಟಗರು ನಂತರ ತಾರಕಾಸುರ, ರಿಲ್ಯಾಕ್ಸ್ ಸತ್ಯ, ಇಂಡಿಯಾ ವರ್ಸಸ್ ಇಂಗ್ಲೆಂಡ್, ಶಿವ 143, ಚಿತ್ರಗಳನ್ನು ಮಾನ್ವಿತಾ ಮಾಡಿದ್ದಾರೆ. ಆದರೆ ಬೇಕಿದ್ದ ಗೆಲುವು ಇವರಿಗೆ ಟಗರು ನಂತರ ಸಿಕ್ಕಿಲ್ಲ. ಸದ್ಯ ಮಾನ್ವಿತಾ ಕಾಮತ್ ಅಭಿನಯದ ರಾಜಸ್ಥಾನ್ ಡೈರೀಸ್ ಚಿತ್ರ ಇನ್ನು ಬಿಡುಗಡೆಯಾಗಬೇಕಿದೆ. ಕನ್ನಡ ಜೊತೆಯಲ್ಲಿ ಈ ಚಿತ್ರ ಮರಾಠಿಯಲ್ಲಿ ಕೂಡ ನಿರ್ಮಾಣವಾಗಿರುವುದು ವಿಶೇಷ.
ಮುಂಬೈ ಮತ್ತು ರಾಜಸ್ಥಾನದಲ್ಲಿ ಈ ಚಿತ್ರದ ಚಿತ್ರೀಕರಣ ನಡೆದಿದ್ದು, ನಂದಿತಾ ಯಾದವ್ ಚಿತ್ರವನ್ನು ನಿರ್ದೇಶಿಸಿದ್ದಾರೆ. ಇನ್ನು ಈ ಚಿತ್ರದಲ್ಲಿ ಮಾನ್ವಿತಾ ಅವರ ಜೊತೆಯಲ್ಲಿ ಅರುಣ್ ಸಾಗರ್ ಮತ್ತು ರಾಜೇಶ್ ನಟರಂಗ ಕೂಡ ಇದ್ದಾರೆ. ಸುಮುಖ್ ನಾಯಕನ ಪಾತ್ರವನ್ನು ನಿರ್ವಹಿಸಿದ್ದಾರೆ.
ಈ ಚಿತ್ರ ಹೊರತು ಪಡಿಸಿದರೆ ಪ್ರಿಯಾಂಕ ಉಪೇಂದ್ರ ಅಭಿನಯದ ಕ್ಯಾಪ್ಚರ್ ಚಿತ್ರದಲ್ಲಿ ಕೂಡ ಮಾನ್ವಿತಾ ಕಾಣಿಸಿಕೊಳ್ಳಲಿದ್ದಾರೆ. ಇದೇ ಮೊದಲ ಬಾರಿಗೆ ಹಾರರ್ ಸಿನಿಮಾವನ್ನು ಮಾಡಿದ್ದಾರೆ. ಇವರದ್ದು ಇಲ್ಲಿ ಪ್ರಿಯಾಂಕ ಉಪೇಂದ್ರ ಅವರ ಮಗಳ ಪಾತ್ರ. ಹೀಗೆ ಕೆಲವೊಂದಿಷ್ಟು ಚಿತ್ರಗಳನ್ನು ಮಾಡುತ್ತಿರುವ ಮಾನ್ವಿತಾ ಕಾಮತ್ 2024ರ ಮೇ 1ರಂದು ಅರುಣ್ ಕುಮಾರ್ ಅವರ ಜೊತೆ ಮದುವೆಯಾದರು. ವೃತ್ತಿಯಲ್ಲಿ ಐಟಿ ಹಿನ್ನೆಲೆಯವರಾದ ಅರುಣ್ ಕುಮಾರ್ ಮ್ಯೂಸಿಕ್ ಪ್ರೊಡ್ಯೂಸರ್ ಕೂಡ ಹೌದು. ತಮ್ಮ ತಾಯಿಯ ಆಸೆಯಂತೆ ಅರುಣ್ ಕುಮಾರ್ ಅವರ ಕೈ ಹಿಡಿದ ಮಾನ್ವಿತಾ ಅವರ ವಿವಾಹ ಚಿಕ್ಕಮಗಳೂರು ಜಿಲ್ಲೆಯ ಕಳಸದ ವೆಂಕಟರಮಣ ದೇವಸ್ಥಾನದಲ್ಲಿ ಶಾಸ್ತ್ರೋಕ್ತವಾಗಿ ನಡೆದಿತ್ತು. ಎರಡೂ ಕುಟುಂಬಗಳ ಸದಸ್ಯರು, ಸ್ನೇಹಿತರು ಹಾಗೂ ಚಿತ್ರರಂಗದ ಗಣ್ಯರು ಮದುವೆಯಲ್ಲಿ ಭಾಗಿಯಾಗಿದ್ದರು. ಕೊಂಕಣಿ ಸಂಪ್ರದಾಯದಂತೆ ಮಾನ್ವಿತಾ ಕಾಮತ್ ಮದುವೆ ನಡೆದಿತ್ತು.
ಒಟ್ನಲ್ಲಿ ಸದ್ಯ ಯಶ್ ಅವರ ಬೆಳವಣಿಗೆಯನ್ನು ಸಹಿಸದ ಕೆಲವರ ಕುರಿತು ಮಾನ್ವಿತಾ ಕಾಮತ್ ಮಾತನಾಡಿದ್ದಾರೆ. ಮಾನ್ವಿತಾ ಅವರ ಈ ಮಾತುಗಳು ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಗೆ ಕಾರಣವಾಗಿದ್ದು ಮುಂಬರುವ ದಿನಗಳಲ್ಲಿ ಯಶ್ ತಮ್ಮ ಕೆಲಸದ ಮೂಲಕ ಕಾಲೆಳೆಯಲು ಕಾಯುತ್ತಿರುವ ಗುಂಪಿಗೆ ಉತ್ತರವನ್ನು ನೀಡುತ್ತಾರಾ ಎನ್ನುವುದನ್ನು ಕಾದು ನೋಡಬೇಕಿದೆ. ಮಿಕ್ಕಂತೆ ಟಾಕ್ಸಿಕ್ ಚಿತ್ರದ ಕೆಲಸಗಳು ಭರದಿಂದ ನಡೆಯುತ್ತಿದ್ದು ಮುಂದಿನ ವರ್ಷ ಯಶ್ ಅವರ ಈ ಮಹತ್ವಕಾಂಕ್ಷೆಯ ಚಿತ್ರ ತೆರೆಗೆ ಬರಲಿದೆ.


Click it and Unblock the Notifications











