ದರ್ಶನ್ ಜೈಲಿಗೆ ಹೋಗಿದ್ದರಿಂದ ಕೆಲವರಿಗೆ ಖುಷಿಯಾಗಿದೆ- ಜೋಗಿ ಪ್ರೇಮ್
ದರ್ಶನ್ ಮತ್ತೊಮ್ಮೆ ಜೈಲಿನ ದರ್ಶನ ಮಾಡಿದ್ದಾರೆ. ಆದರೆ.. ಈ ಬಾರಿ ಅರಮನೆಯಲ್ಲ ಬದಲಿಗೆ ಅಕ್ಷರಶಃ ದರ್ಶನ್ ಪಾಲಿಗೆ ಜೈಲು ಸೆರೆಮನೆಯಾಗಿದೆ. 'ಇದ್ರೆ ನೆಮ್ಮದಿಯಾಗ್ ಇರಬೇಕ್' ಎನ್ನುತ್ತಿದ್ದ ದರ್ಶನ್ ಗೆ ಜೈಲಿನಲ್ಲಿ ದಿನ ನಿತ್ಯ ನರಕ ದರ್ಶನವಾಗುತ್ತಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗುತ್ತಿದೆ. ಈ ಹಿನ್ನೆಲೆ .. ತಮ್ಮ ನೆಚ್ಚಿನ ನಾಯಕನ ದಯನೀಯ ಸ್ಥಿತಿಯನ್ನು ಕಂಡು ದರ್ಶನ್ ಅವರ ಅಸಂಖ್ಯಾತ.. ಅಗಣಿತ.. ಅಭಿಮಾನಿಗಳು ಮಮ್ಮಲ ಮರಗುತ್ತಿದ್ದಾರೆ.
ಇನ್ನೂ.. ಚಿತ್ರರಂಗದಲ್ಲಿ ಕೂಡ ಅನೇಕರಲ್ಲಿ ದುಃಖ ಮಡುಗಟ್ಟಿದೆ. ಯಾಕೆಂದರೆ.. ದರ್ಶನ್ ಕನ್ನಡ ಚಿತ್ರರಂಗದ ನಂಬರ್ ಒನ್ ಹೀರೋ. ಯಾರು ಒಪ್ಪಲಿ.. ಬಿಡಲಿ.. ಆದರೆ ದರ್ಶನ್ ಅವರ ಚಿತ್ರಗಳಿಂದ ಚಿತ್ರಂಗದಲ್ಲಿ ಹಲವರಿಗೆ ಕೆಲಸ ಸಿಗುತ್ತಿತ್ತು. ಹಲವರು ಬದುಕು ನಡೆಯುತ್ತಿತ್ತು. ಈ ಹಿಂದೆ ದರ್ಶನ್ ಜೈಲು ಪಾಲಾದಗ ಹಲವರು ಈ ವಾದವನ್ನೇ ಮಾಡಿದ್ದರು. ಈಗಲೂ ಮಾಡುತ್ತಿದ್ದಾರೆ.

ಆದರೆ.. ಇವರಲ್ಲಿಯೇ ಅಂದರೆ ಜನ ಸಾಮಾನ್ಯರಲ್ಲಿಯೇ ಕೆಲವರಿಗೆ ದರ್ಶನ್ ಜೈಲು ಪಾಲಾದ ಹಿನ್ನೆಲೆ ಖುಷಿಯಾಗಿದೆ. ಇಂತಹದ್ದೊಂದು ಮಾತನ್ನು ಇಂದು (ಸೆಪ್ಟೆಂಬರ್ 3) ಜೋಗಿ ಪ್ರೇಮ್ ಹೇಳಿದ್ದಾರೆ.
ಹೌದು, ಎಲ್ಲರಿಗೆ ಗೊತ್ತಿರುವಂತೆ ಪ್ರೇಮ್ ಕೇವಲ ಅತ್ಯುತ್ತಮ ನಿರ್ದೇಶಕ ಮಾತ್ರ ಅಲ್ಲ ಅತ್ಯುತ್ತಮ ಗಾಯಕ ಕೂಡ ಹೌದು. ಪ್ರೇಮ್ ಕಂಠ ಕುಣಿದಾಗೆಲ್ಲಾ ಕರುನಾಡಿನ ಒಂದು ವರ್ಗ ಹುಚ್ಚೆದ್ದು ಕುಣಿದಿದೆ.
ಈ ಹಿನ್ನೆಲೆ ತಮ್ಮ ಚಿತ್ರದಲ್ಲಿ ಪ್ರೇಮ್ ಹಾಡು ಇದ್ದರೆ ಅದರ ಬೆಲೆಯೇ ಬೇರೆ ಎನ್ನುವ ಅಭಿಪ್ರಾಯ ಹಲವರಲ್ಲಿದೆ. ಹೀಗಾಗಿಯೇ ಹಲವರು ಇವರಿಂದ ಹಾಡನ್ನು ಹಾಡಿಸುತ್ತಾರೆ. ಆ ಪೈಕಿ ''ಲೈಫ್ ಟುಡೇ'' ಎಂಬ ಚಿತ್ರತಂಡ ಕೂಡ ಒಂದು.
ಇತ್ತೀಚೆಗೆ ಈ ಚಿತ್ರದ ಹಾಡನ್ನು ಹಾಡಲು ಪ್ರೇಮ್ ''ಲೂಪ್ ಸ್ಟುಡಿಯೋ''ಗೆ ಹೋಗಿದ್ದರು. ಇದೇ ಸಮಯದಲ್ಲಿ ಚಿತ್ರದ ಕುರಿತು, ಹಾಡಿನ ಕುರಿತು ಮಾತನಾಡಿದ ಪ್ರೇಮ್ ಆ ನಂತರ ದರ್ಶನ್ ವಿಚಾರಕ್ಕೆ ಸಂಬಂಧಿಸಿದಂತೆ ಕೇಳಲಾದ ಪ್ರಶ್ನೆಗಳಿಗೆ ಉತ್ತರ ನೀಡಿದ್ಧಾರೆ. ಮಾತನಾಡುತ್ತಾ ಮಾತನಾಡುತ್ತಾ ಸಮಾಜದಲ್ಲಿನ ಕೆಲವರ ಮನಸ್ಥಿತಿಗೆ ಕೈಗನ್ನಡಿ ಹಿಡಿಯುವ ಪ್ರಯತ್ನವನ್ನು ಕೂಡ ಪ್ರೇಮ್ ಮಾಡಿದ್ದಾರೆ.

ಈ ಕುರಿತು ಮಾತನಾಡಿರುವ ಜೋಗಿ ಪ್ರೇಮ್, ''ಅವರ ಅವರ ನೋವು ಅವರಿಗೆ ಗೊತ್ತಿರುತ್ತೆ, ಆದರೆ.. ಕೆಲವೊಂದು ಕ್ಯಾರೆಕ್ಟರ್‌ಗಳು ನಮ್ಮ ನಡುವೆ ಇರ್ತಾವೆ, ಅವರದ್ದು ಸ್ಯಾಡಿಸ್ಟ್ ಮನಸ್ಥಿತಿ.. ಅವರಿಗೆ ಖುಷಿ.. ದರ್ಶನ್ ಎಷ್ಟು ನೊಂದುಕೊಂಡಿರುತ್ತಾರೆ, ಅವರಿಗೆ ಎಷ್ಟೆಲ್ಲಾ ಸಮಸ್ಯೆಗಳಾಗಿರುತ್ತಾವೆ. ಅದೆಲ್ಲಾ ಅವರಿಗೆ ಗೊತ್ತಿರಲ್ಲ, ಅವರಿಗೆ ಏನಂದ್ರೆ ಹೋದ್ನಾ ಒಳಗಡೆ.. ಕುಂತಾವ್ನಾ ಒಳಗಡೆ.. ಜಾಮೀನು ಸಿಗಲಿಲ್ವಾ..ಹೀಗೆ ಮನಸ್ಥಿತಿಗಳನ್ನು ಹೊಂದಿರುತ್ತಾರೆ. ಅಂತವರನ್ನೆಲ್ಲಾ ನಾವು ಬದಲಾಯಿಸೋದಕ್ಕೂ ಆಗಲ್ಲ ಹಾಗೇನಾದರೆ ಅವರನ್ನು ಚೇಂಜ್ ಮಾಡಬೇಕು ಅಂದರೆ ಆ ದೇವರಿಂದ ಮಾತ್ರ ಸಾಧ್ಯ. ನಾವು ಏನೂ ಮಾಡೋಕಾಗಲ್ಲ. ನೀವೂ ಏನೂ ಮಾಡೋಕಾಗಲ್ಲ'' ಎಂದು ಹೇಳಿದ್ದಾರೆ.
ಇನ್ನೂ ದರ್ಶನ್ ಈ ರೇಣುಕಾಸ್ವಾಮಿ ಪ್ರಕರಣದಲ್ಲಿ ಸಿಲುಕಿಕೊಳ್ಳುವ ಮುನ್ನ , ಹಲವು ಚಿತ್ರಗಳನ್ನು ಒಪ್ಪಿಕೊಂಡಿದ್ದರು. ಆ ಪೈಕಿ ಜೋಗಿ ಪ್ರೇಮ್ ನಿರ್ದೇಶನದ ಚಿತ್ರ ಕೂಡ ಒಂದು. ಸದ್ಯ ದರ್ಶನ್ ಮತ್ತೆ ಜೈಲು ಸೇರಿದ ಹಿನ್ನೆಲೆ ಈ ಚಿತ್ರದ ಕುರಿತು ಹಲವರಲ್ಲಿ ಹಲವು ಪ್ರಶ್ನೆಗಳಿವೆ. ದರ್ಶನ್ ಮತ್ತು ಪ್ರೇಮ್ ಸಿನಿಮಾ ನಿಂತು ಹೋಗುತ್ತಾ ಎನ್ನುವ ಆತಂಕ ಕೂಡ ದರ್ಶನ್ ಅವರ ಅಭಿಮಾನಿಗಳಲ್ಲಿದೆ. ಈ ಕುರಿತು ಕೂಡ ಪ್ರತಿಕ್ರಿಯೆ ನೀಡಿರುವ ಪ್ರೇಮ್, ಜೈಲಿಗೆ ಹೋಗುವ ಎರಡು ದಿನದ ಮುಂಚೆ ದರ್ಶನ್ ಅವರನ್ನು ನಾನು ಭೇಟಿಯಾಗಿದ್ದೆ, ಮಾತುಕಥೆ ನಡೆಯಿತು ಎಂದು ಹೇಳಿದ್ದಾರೆ. ಅವರು ಜೈಲಿಂದ ಹೊರ ಬಂದ ತಕ್ಷಣ ಅವರ ಸಿನಿಮಾವನ್ನು ನಾನೇ ಮಾಡೋದು ಅವರವರ ನೋವು ಅವರಿಗೆ ಇರುತ್ತೆ. ಉತ್ಪ್ರೇಕ್ಷೆಯಿಂದ ನಾನು ಏನನ್ನೂ ಮಾತನಾಡಬಾರದು, ನೋಡೋಣ ದೇವರಿದ್ದಾನೆ. ಎಲ್ಲರಿಗೆ ಒಳ್ಳೆಯದಾಗಲಿ ಎಂದು ಕೂಡ ಹೇಳಿದ್ದಾರೆ.


Click it and Unblock the Notifications









