ಎಲ್ಲರ ಮುಂದೆ ತಲೆಬಾಗಿ, ಸಿದ್ದು ಪರ ನಟ ದರ್ಶನ್ ಮತ ಬೇಡಿದ್ದು ಹೀಗೆ...
ಕರ್ನಾಟಕ ವಿಧಾನಸಭೆ ಚುನಾವಣೆಗೆ ದಿನಗಣನೆ ಶುರುವಾಗಿರುವಾಗಲೇ, ಕಾಂಗ್ರೆಸ್ ಪಕ್ಷದ ಸಿ.ಎಂ ಅಭ್ಯರ್ಥಿ ಸಿದ್ದರಾಮಯ್ಯ ಪರ ಪ್ರಚಾರ ನಡೆಸಲು ಚಾಲೆಂಜಿಂಗ್ ಸ್ಟಾರ್ ದರ್ಶನ್ ಮುಂದಾಗಿದ್ದಾರೆ.
'ಪಕ್ಷದ ಸಿದ್ಧಾಂತಗಳಿಗಿಂತ ಅಭ್ಯರ್ಥಿ ಮುಖ್ಯ' ಎನ್ನುವುದನ್ನು ನಂಬಿರುವ 'ದಾಸ' ದರ್ಶನ್ ಇವತ್ತು ಮೈಸೂರಿನ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಪರ ರೋಡ್ ಶೋ ನಡೆಸಿದರು.
ನಾಗಹಳ್ಳಿಯಲ್ಲಿ ದರ್ಶನ್ ಹಾಗೂ ಸಿದ್ದರಾಮಯ್ಯ ವಿರುದ್ಧ ಜೆಡಿಎಸ್ ಕಾರ್ಯಕರ್ತರು ಧಿಕ್ಕಾರ ಕೂಗಿದರೂ, ಅದಕ್ಕೆ ಕ್ಯಾರೆ ಎನ್ನದ ದರ್ಶನ್, ಸಿದ್ದರಾಮಯ್ಯ ಪರ ಜನತೆ ಮುಂದೆ ತಲೆ ಬಾಗಿ ಮತ ಬೇಡಿದರು.
ಅಷ್ಟಕ್ಕೂ, ಜನತಾ ಜನಾರ್ಧನ ಮತ್ತೊಮ್ಮೆ ಸಿದ್ದರಾಮಯ್ಯ ರವರಿಗೆ ಯಾಕೆ ವೋಟ್ ಹಾಕ್ಬೇಕು ಅಂತ 'ಚಕ್ರವರ್ತಿ' ದರ್ಶನ್ ತಮ್ಮದೇ ಸ್ಟೈಲ್ ನಲ್ಲಿ ರೋಡ್ ಶೋ ವೇಳೆ ವಿವರಿಸಿದರು. ಫೋಟೋ ಸ್ಲೈಡ್ ಗಳಲ್ಲಿ ಬಾಕಿ ಮಾಹಿತಿ ಓದಿರಿ...

ಸಿದ್ದರಾಮಯ್ಯಗೆ ಹ್ಯಾಟ್ಸ್ ಆಫ್ ಹೇಳಬೇಕು.?
''ಎಲ್ಲರಿಗೂ ಕಷ್ಟ ಬರುತ್ತೆ. ಆದ್ರೆ, ನಾನು ಸಿದ್ದರಾಮಯ್ಯ ರವರಲ್ಲಿ ನೋಡಿದ ದೊಡ್ಡ ಗುಣ ಅಂದ್ರೆ, ರಾಕೇಶ್ ಸಿದ್ದರಾಮಯ್ಯ ತೀರಿಕೊಂಡರೂ, ಸಿದ್ದರಾಮಯ್ಯ ಧೃತಿಗೆಡಲಿಲ್ಲ. ಹತ್ತು ದಿನ ಮಾತ್ರ ದುಃಖದಲ್ಲಿ ಇದ್ದರು. ಬಳಿಕ ಮತ ಹಾಕಿರುವ ಜನತೆಗಾಗಿ ಬದುಕಲು ಮುಂದೆ ಬಂದು ಕೆಲಸ ಮಾಡಿದರು. ಇದಕ್ಕೆ ನಿಜವಾಗಲೂ ಸಿದ್ದರಾಮಯ್ಯ ಅವರಿಗೆ ಹ್ಯಾಟ್ಸ್ ಆಫ್ ಹೇಳಬೇಕು. ಅಂತಹ ಧೈರ್ಯ ಯಾರಿಗೂ ಬರಲ್ಲ'' ಎಂದು ರೋಡ್ ಶೋ ವೇಳೆ ದರ್ಶನ್ ಹೇಳಿದರು.

ಡೇರ್ ಡೆವಿಲ್ ಸಿದ್ದರಾಮಯ್ಯ
''ಡೇರ್ ಡೆವಿಲ್ ಆಗಿರುವ ಸಿದ್ದರಾಮಣ್ಣ ಅವರಿಗೆ 70 ವರ್ಷ. ಕೈಗೆ ಬಂದ ಮಗನನ್ನು ಕಳೆದುಕೊಂಡರೂ ಕೂಡ ಸಿದ್ದರಾಮಯ್ಯ ಕುಗ್ಗಲಿಲ್ಲ. ಹೀಗಾಗಿ ಮತ್ತೊಮ್ಮೆ ನಿಮಗೆ ಸೇವೆ ಮಾಡುವುದಕ್ಕೆ ಸಿದ್ದರಾಮಯ್ಯ ಅವರಿಗೆ ನಿಮ್ಮ ಅಮೂಲ್ಯವಾದ ಮತ ಹಾಕಿ, ಜಯಶೀಲರನ್ನಾಗಿ ಮಾಡಿ, ಬಹುಮತದಿಂದ ಗೆಲ್ಲಿಸಿ ಅಂತ ಎಲ್ಲರ ಬಳಿ ನಾನು ತಲೆಬಾಗಿ ಬೇಡಿಕೊಳ್ಳುತ್ತೇನೆ'' ಎಂದರು ನಟ ದರ್ಶನ್.

ಶಿಳ್ಳೆ-ಚಪ್ಪಾಳೆ ಸುರಿಮಳೆ
ಸಿದ್ದರಾಮಯ್ಯ ಪರ ದರ್ಶನ್ ಆಡಿದ ಮಾತುಗಳನ್ನು ಕೇಳಿ ಸುತ್ತ-ಮುತ್ತಲಿದ್ದ ಜನತೆ ಶಿಳ್ಳೆ-ಚಪ್ಪಾಳೆಗಳ ಸುರಿಮಳೆಗೈದರು. ಸಿದ್ದರಾಮಯ್ಯ ಅಭಿಮಾನಿಗಳು ಚಾಲೆಂಜಿಂಗ್ ಸ್ಟಾರ್ ಗೆ ಜೈಕಾರ ಹಾಕಿದರು.

ನಾಗನಹಳ್ಳಿಯಲ್ಲಿ ದರ್ಶನ್ ಗೆ ಧಿಕ್ಕಾರ
ನಾಗನಹಳ್ಳಿಯಿಂದ ದರ್ಶನ್ ಇಂದು ಪ್ರಚಾರ ಕಾರ್ಯ ಶುರು ಮಾಡಿದಾಗ, ಜೆಡಿಎಸ್ ಕಾರ್ಯಕರ್ತರು ಧಿಕ್ಕಾರ ಕೂಗಿ, ಪ್ರತಿಭಟನೆ ಮಾಡಿದರು. ಬಳಿಕ ಸ್ಥಳ ಬದಲಾಯಿಸಿದ ದರ್ಶನ್, ರಮನಹಳ್ಳಿಯಲ್ಲಿ ರೋಡ್ ಶೋ ನಡೆಸಿದರು.


Click it and Unblock the Notifications











