ಈ ವಾರ ತೆರೆಗೆ ಬಂದಿರುವ ಸಿನಿಮಾಗಳ ಪಟ್ಟಿ ಇಲ್ಲಿದೆ: ಕನ್ನಡದ ನಾಲ್ಕು ಸಿನಿಮಾ ರಿಲೀಸ್!
ಮತ್ತೊಂದು ಶುಕ್ರವಾರ (ಜೂನ್ 24) ಬಂದಿದೆ. ಪ್ರತಿ ಶುಕ್ರವಾರದಂತೆ ಈ ಶುಕ್ರವಾರವೂ ಗಾಂಧಿ ನಗರ ಗರಿಗೆದರಿದೆ. ಈ ವಾರ ನಾಲ್ಕು ಕನ್ನಡ ಸಿನಿಮಾಗಳು ತೆರೆಗೆ ಬಂದಿವೆ.
ಕೋವಿಡ್ ನಂತರ ಕನ್ನಡ ಸೇರಿದಂತೆ ಹಲವು ಭಾಷೆಗಳಲ್ಲಿ ಸಾಲು-ಸಾಲಾಗಿ ಸಿನಿಮಾಗಳು ಬಿಡುಗಡೆ ಆಗುತ್ತಿವೆ. ಅಂತೆಯೇ ಈ ವಾರವೂ ಸಹ ಕನ್ನಡ ಸೇರಿದಂತೆ ಬೇರೆ ಬೇರೆ ಭಾಷೆಗಳಲ್ಲಿ ಹಲವು ಸಿನಿಮಾಗಳು ತೆರೆಗೆ ಬಂದಿವೆ.
ಈ ವಾರ ಯಾವುದೇ ಭಾಷೆಯಲ್ಲಿ ಭಾರಿ ಬಜೆಟ್‌ನ, ಸ್ಟಾರ್ ಸಿನಿಮಾ ಯಾವುದೂ ಬಿಡುಗಡೆ ಆಗಿಲ್ಲ. ಆದರೆ ಕಂಟೆಂಟ್ ಆಧರಿತ ಸಿನಿಮಾಗಳು ಬಿಡುಗಡೆ ಆಗಿದ್ದು, ಕುಟುಂಬ ಸಮೇತ ಹೋಗಿ ನೋಡಿ ನಕ್ಕು ಬರಬಹುದಾದ ಸಿನಿಮಾಗಳು ತೆರೆಗೆ ಬಂದಿವೆ.

ರಿಷಬ್ ಶೆಟ್ಟಿ ಹರಿಕತೆ
ರಿಷಬ್ ಶೆಟ್ಟಿ ಮುಖ್ಯ ಪಾತ್ರದಲ್ಲಿ ನಟಿಸಿರುವ 'ಹರಿ ಕತೆ ಅಲ್ಲ ಗಿರಿ ಕತೆ' ಸಿನಿಮಾ ಈ ದಿನ (ಜೂನ್ 24) ಬಿಡುಗಡೆ ಆಗಿದೆ. ಸಿನಿಮಾ ನಿರ್ದೇಶಕನೊಬ್ಬನ ಕತೆಯನ್ನು ಹೊಂದಿರುವ 'ಹರಿ ಕತೆ ಅಲ್ಲ ಗಿರಿ ಕತೆ' ಹಾಸ್ಯದ ಜೊತೆಗೆ ಜೀವನ ಸತ್ಯವನ್ನು, ಸಾಮಾನ್ಯ ವ್ಯಕ್ತಿಯ ಸಂಕಷ್ಟಗಳನ್ನು ಹೇಳುವ ಕತೆ ಹೊಂದಿದೆ. ಸಿನಿಮಾದಲ್ಲಿ ರಿಷಬ್ ಶೆಟ್ಟಿ, ರಚನಾ ಇಂದರ್, ತಪಸ್ವಿನಿ, ಪ್ರಮೋದ್ ಶೆಟ್ಟಿ, ಹೊನ್ನವಳ್ಳಿ ಕೃಷ್ಣ ಇತರರು ನಟಿಸಿದ್ದಾರೆ. ಸಿನಿಮಾದ ನಿರ್ದೇಶಕ ಕರಣ್ ಅನಂತ್ ಹಾಗೂ ಅನಿರುದ್ ಮಹೇಶ್.

ತ್ರಿವಿಕ್ರಮ್
ರವಿಚಂದ್ರನ್ ಎರಡನೇ ಪುತ್ರ ವಿಕ್ರಮ್‌ರ ಮೊದಲ ಸಿನಿಮಾ 'ತ್ರಿವಿಕ್ರಮ್' ಇಂದು ಬಿಡುಗಡೆ ಆಗುತ್ತಿದೆ. 'ತ್ರಿವಿಕ್ರಮ್' ಪ್ರೇಮ ಕತೆಯಾಗಿದ್ದು, ಒಬ್ಬ ಸಾಧಾರಣ ಹುಡುಗ ಜೈನ ಧರ್ಮದ ಯುವತಿಯೊಬ್ಬಳನ್ನು ಪ್ರೀತಿಸುತ್ತಾನೆ ಆ ನಂತರ ಅವರ ಬಾಳಿನಲ್ಲಿ ಏನೇನು ಬದಲಾವಣೆ ಆಗುತ್ತದೆ. ಅವರ ಪ್ರೀತಿ ಏನಾಗುತ್ತದೆ ಎಂಬ ಕತೆ ಸಿನಿಮಾದಲ್ಲಿದೆ. ಸಿನಿಮಾದಲ್ಲಿ ಆಕಾಂಕ್ಷ ಎಸ್ ನಾಯಕಿಯಾಗಿ ನಟಿಸಿದ್ದಾರೆ. ಜೊತೆಗೆ ಸಾಧುಕೋಕಿ, ಚಿಕ್ಕಣ್ಣ, ಸುಚೇಂದ್ರ ಪ್ರಸಾದ್ ಇನ್ನಿತರರು ಇದ್ದಾರೆ. ಸಹನಾ ಮೂರ್ತಿ ಎಸ್ ನಿರ್ದೇಶನ ಮಾಡಿದ್ದಾರೆ. ನಿರ್ಮಾಣ ಮಾಡಿರುವುದು ರ್ಯಾಮ್ಕೊ ಸೋಮಣ್ಣ.

ಸುನಿಲ್ 'ತುರ್ತು ನಿರ್ಗಮನ'
ಬೇಜವಾಬ್ದಾರಿ ವ್ಯಕ್ತಿಯೊಬ್ಬ ಸತ್ತು ನಂತರ ಮೂರು ದಿನಗಳ ಅವಧಿಗೆ ಮತ್ತೆ ಭೂಮಿಗೆ ಬರುವ, ಭೂಮಿಗೆ ಬಂದು ತಾನು ಮಾಡಬೇಕಾಗಿದ್ದ ಕೆಲಸಗಳನ್ನು ಮಾಡುವ ಭಿನ್ನ ಕತೆಯನ್ನು ಹೊಂದಿರುವ ಸಿನಿಮಾ 'ತುರ್ತು ನಿರ್ಗಮನ' ಇಂದು ಬಿಡುಗಡೆ ಆಗುತ್ತಿದೆ. ಸಿನಿಮಾದಲ್ಲಿ ಸುನಿಲ್ ರಾವ್, ಸುಧಾರಾಣಿ, ರಾಜ್ ಬಿ ಶೆಟ್ಟಿ, ಅಚ್ಯುತ್ ಕುಮಾರ್ ಇನ್ನೂ ಹಲವರು ನಟಿಸಿದ್ದಾರೆ. ರಾಜ್ ಬಿ ಶೆಟ್ಟಿ, ಟ್ಯಾಕ್ಸಿ ಡ್ರೈವರ್ ಪಾತ್ರದಲ್ಲಿ ನಟಿಸಿದ್ದಾರೆ.

ಬಡ್ಡೀಸ್
ಯುವ ನಟ, ನಿರ್ದೇಶಕರ ಹೊಸ ಪ್ರಯತ್ನ 'ಬಡ್ಡೀಸ್' ಇಂದು ತೆರೆಗೆ ಬರುತ್ತಿದೆ. ಕಾಲೇಜು ಕತೆಯುಳ್ಳ ಈ ಸಿನಿಮಾದಲ್ಲಿ ಭರಪೂರ ಆಕ್ಷನ್ ಹಾಗೂ ಪ್ರೇಮದ ಎಳೆಯೂ ಇದೆ. ಸಿನಿಮಾದಲ್ಲಿ ಕಿರಣ್ ರಾಜ್ ನಾಯಕ, ಸಿರಿ ಪ್ರಹಲ್ಲಾದ್ ನಾಯಕಿ. ಗೋಪಾಲ್ ದೇಶಪಾಂಡೆ, ಅರವಿಂದ ಬೋಳಾರ್ ಇನ್ನೂ ಹಲವರು ನಟಿಸಿದ್ದಾರೆ. ನಿರ್ದೇಶನ ಮಾಡಿರುವುದು ಕೆಎಂ ಪ್ರಕಾಶ್.

ತೆಲುಗಿನಲ್ಲಿ ನಾಲ್ಕು ಸಿನಿಮಾ
ಪುರಿ ಜಗನ್ನಾಥ್ ಪುತ್ರ ಆಕಾಶ್ ನಟನೆಯ ತೆಲುಗು ಸಿನಿಮಾ 'ಚೋರ್ ಬಜಾರ್' ಇಂದು ಬಿಡುಗಡೆ ಆಗುತ್ತಿದೆ. ಲಕ್ಷ್ಯ್ ನಟಿಸಿರುವ 'ಗ್ಯಾಂಗ್‌ಸ್ಟರ್ ಗಂಗರಾಜು', ಸುಂದರ ಪ್ರೇಮಕತೆಯುಳ್ಳ 'ಸಮ್ಮತಮೆ', ರಾಮ್ ಗೋಪಾಲ್ ವರ್ಮಾ ನಿರ್ದೇಶಿಸಿರುವ ನಿಜ ಫ್ರ್ಯಾಕ್ಷನಿಸ್ಟುಗಳ ಕತೆ 'ಕೊಂಡ', ಗೋವಾದಲ್ಲಿ ಮಜಾ ಮಾಡಲು ಬಂದ ಇಬ್ಬರು ಯುವಕರ ಕತೆ '7 ಡೇಸ್ 6 ನೈಟ್ಸ್', ಇಬ್ಬರು ಹೀರೋಗಳುಳ್ಳ ಆಕ್ಷನ್ ಪ್ರೇಮಕತೆ 'ಕರಣ್-ಅರ್ಜುನ್', ಪ್ರೇಮ್ ಕರಣ್ ನಿರ್ದೇಶಿಸಿ ನಟಿಸಿರುವ 'ಸದಾ ನನ್ನು ನಡಿಪೆ', ಮದುವೆಯಾಗುವ ಯುವತಿ ಬ್ಯಾಚುಲರ್ ಪಾರ್ಟಿ ಮಾಡಲು ಹೋಗಿ ಅನುಭವಿಸುವ ಸಂಕಷ್ಟಗಳ ಕತೆಯುಳ್ಳ 'ಪೆಳ್ಳಿಕೂತುರ ಪಾರ್ಟಿ', ಸಾಫ್ಟ್‌ವೇರ್ ಎಂಜಿನಿಯರ್‌ಗಳ ಹಾಸ್ಯಕತೆ 'ಸಾಫ್ಟ್‌ವೇರ್ ಬ್ಲೂಸ್' ಸಿನಿಮಾ ಸಹ ಇದೇ ತೆರೆಗೆ ಬರುತ್ತಿದೆ.


Click it and Unblock the Notifications











