ಮಂಡ್ಯ: ಪಾಂಡವಪುರದಲ್ಲಿ ಅದ್ಧೂರಿ 'ಪುನೀತೋತ್ಸವ'
ಪುನೀತ್ ಅಗಲಿ ವರ್ಷ ಕಳೆದಿದ್ದರೂ ಅವರ ನೆನಪು ತುಸುವೂ ಮರೆಯಾಗಿಲ್ಲ. ಈಗಲೂ ರಾಜ್ಯದ ಹಲವೆಡೆ ಪುನೀತ್ ಅವರ ಸ್ಮರಣಾರ್ಥ ಒಂದಲ್ಲ ಒಂದು ಕಾರ್ಯಕ್ರಮಗಳು ನಡೆಯುತ್ತಲೇ ಇವೆ.
ಇದೀಗ ಮಂಡ್ಯ ಜಿಲ್ಲೆಯ ಪಾಂಡವಪುರದಲ್ಲಿ ಅಪ್ಪು ಅಭಿಮಾನಿಗಳು ಸೇರಿ ಅದ್ಧೂರಿಯಾಗಿ 'ಪುನೀತೋತ್ಸವ' ಮಾಡಲು ಸಜ್ಜಾಗಿದ್ದಾರೆ. ಈ ಪುನೀತೋತ್ಸವಕ್ಕೆ ಮೇಲುಕೋಟೆ ಕ್ಷೇತ್ರದ ಶಾಸಕ ಪುಟ್ಟಸ್ವಾಮಿ ನೇತೃತ್ವ ವಹಿಸಿದ್ದಾರೆ.
ಕಾರ್ಯಕ್ರಮವನ್ನು ಅದ್ಧೂರಿಯಾಗಿ ಮಾಡಲಾಗುತ್ತಿದ್ದು, ಕನ್ನಡ ಚಿತ್ರರಂಗದ ಹಲವು ಕಲಾವಿದರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ. ಇಂದಿನಿಂದ ಸತತ ಮೂರು ದಿನಗಳ ಕಾಲ ಅದ್ಧೂರಿಯಾಗಿ ಕಾರ್ಯಕ್ರಮ ನಡೆಯಲಿದ್ದು, ಕಾರ್ಯಕ್ರಮದ ಉದ್ಘಾಟನೆಯನ್ನು ನಟ, ರಾಜಕಾರಣಿ ನಿಖಿಲ್ ಕುಮಾರಸ್ವಾಮಿ ಮಾಡಿದ್ದಾರೆ.

ಸಂಗೀತ ನಿರ್ದೇಶಕ ಅರ್ಜುನ್ ಜನ್ಯ, ಗಾಯಕ ವಿಜಯ ಪ್ರಕಾಶ್ ಹಾಗೂ ಗಾಯಕಿ ಅನನ್ಯ ಭಟ್ ನೇತೃತ್ವದಲ್ಲಿ ಗಾಯನ ಕಾರ್ಯಕ್ರಮ ನಡೆದಿದೆ. ಕಾರ್ಯಕ್ರಮದಲ್ಲಿ ಕೆಲವು ಚಿತ್ರ ನಟ-ನಟಿಯರು ಸಹ ಭಾಗಿಯಾಗಿದ್ದಾರೆ. ಹಾಸ್ಯ ನಟರಿಂದ ಹಾಸ್ಯ ಸಂಜೆ ಕಾರ್ಯಕ್ರಮ ಸಹ ಆಯೋಜಿಸಲಾಗಿದೆ.
ಟ್ಟಣದ ಪಾಂಡವ ಕ್ರೀಡಾಂಗಣದಲ್ಲಿ ಮೂರು ದಿನಗಳ ಕಾಲ ನಡೆಯುವ ಪುನೀತೋತ್ಸವ ನಡೆಯಲಿದೆ. ಇಂದು ನವೆಂಬರ್ 25 ರಂದು ಆರಂಭವಾಗಿರುವ ಕಾರ್ಯಕ್ರಮ ನವೆಂಬರ್ 27 ರಂದು ಮುಗಿಯಲಿದೆ.
ನಾಳೆ ಅಂದರೆ ನವೆಂಬರ್ 26 ರಂದು ಐಶ್ವರ್ಯ ಅನಂತ ಕಾರ್ತಿಕ್ ಅವರಿಂದ ಕಥಕ್ ನೃತ್ಯ, ನಯನ ಮತ್ತು ತಂಡದಿಂದ ಹಾಸ್ಯ ಪ್ರದರ್ಶನ ನಡೆಯಲಿದೆ. ರುದ್ರ ಮತ್ತು ತಂಡದಿಂದ ಜೈ ಭಜರಂಗಿ ನೃತ್ಯ ಪ್ರದರ್ಶನ ಮಾಡಲಿದ್ದಾರೆ. ಅದರಲ್ಲೂ ವಿಶೇಷವಾಗಿ ಪ್ರಖ್ಯಾತ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಅವರಿಂದ ಸಂಗೀತ ಸಂಜೆ ಕಾರ್ಯಕ್ರಮ ಇರುತ್ತದೆ. ಜೊತೆಗೆ ನಟಿಯರಾದ ಶುಭಾಪೂಂಜಾ, ಗೌತಮಿ, ರಜನಿ ಮತ್ತು ಭವ್ಯ ಗೌಡರಿಂದ ನೃತ್ಯ ಪ್ರದರ್ಶನ ಇರಲಿದೆ. ಕಾರ್ಯಕ್ರಮದ ನಿರೂಪಣೆಯನ್ನು ಅನುಪಮ ಭಟ್ ಮಾಡಲಿದ್ದಾರೆ ಎಂದು ತಿಳಿದುಬಂದಿದೆ.
ಕೊನೆಯ ದಿನವಾದ ನವೆಂಬರ್ 27 ಕ್ಕೆ ಜಂಬೆ ಅವರಿಂದ ಚಿತ್ರಕಲಾ ಪ್ರದರ್ಶನ, ಜಗ್ಗಪ್ಪ ಮತ್ತು ತಂಡದಿಂದ ಹಾಸ್ಯ ಪ್ರದರ್ಶನ, ರುದ್ರ ಮತ್ತು ತಂಡದಿಂದ ಅಪ್ಪು ನಮನ ಕುರಿತಂತೆ ನೃತ್ಯ ಪ್ರದರ್ಶನ ಮಾಡಲಾಗುತ್ತದೆ. ನಟಿಯರಾದ ವೈಷ್ಣವಿಗೌಡ, ಶಮಿತಾಗೌಡ ಅವರಿಂದ ನೃತ್ಯ ಪ್ರದರ್ಶನ, ಖ್ಯಾತ ಗಾಯಕ ವಿಜಯ ಪ್ರಕಾಶ್ ಅವರಿಂದ ಸಂಗೀತ ಕಾರ್ಯಕ್ರಮ ಇರುತ್ತದೆ. ಕಾರ್ಯಕ್ರಮದಲ್ಲಿ ಡಾ.ಪುನೀತ್ ರಾಜ್‌ಕುಮಾರ್ ಅವರ ಪತ್ನಿ ಅಶ್ವಿನಿ ಪುನೀತ್ ರಾಜಕುಮಾರ್ ಸೇರಿದಂತೆ ಡಾ. ರಾಜಕುಮಾರ್ ಕುಟುಂಬದ ಎಲ್ಲಾ ಸದಸ್ಯರು ಹಾಜರಿರಲಿದ್ದಾರೆ. ಹಾಗೆಯೇ ಖ್ಯಾತ ನಿರೂಪಕಿ ಅನುಶ್ರೀ ಈ ಕಾರ್ಯಕ್ರಮದ ನಿರೂಪಣೆ ಮಾಡಲಿದ್ದಾರೆ.
ಪುನೀತೋತ್ಸವ ಕಾರ್ಯಕ್ರಮದ ಕೊನೆಯ ದಿನವಾದ ನವೆಂಬರ್ 27ರಂದು ಡಾ. ಶಿವರಾಜ್ ಕುಮಾರ್ ಅಭಿನಯದ ವೇದ ಚಿತ್ರದ ಆಡಿಯೋ ಬಿಡುಗಡೆಗೆ ಏರ್ಪಡಿಸಲಾಗಿದೆ. ಈ ಕಾರ್ಯಕ್ರಮದಲ್ಲಿ ನಟ ಶಿವರಾಜ್ ಕುಮಾರ್ ಸೇರಿದಂತೆ ಕನ್ನಡ ಚಿತ್ರರಂಗದ ಪ್ರಖ್ಯಾತ ನಟ, ನಟಿಯರು ಪಾಲ್ಗೊಳ್ಳಲಿದ್ದಾರೆ. ಕಾರ್ಯಕ್ರಮ ವೀಕ್ಷಣೆಗೆ ಯಾವುದೇ ಪಾಸ್, ಟಿಕೆಟ್ ಇರುವುದಿಲ್ಲ ಉಚಿತ ಪ್ರವೇಶವಿರುತ್ತದೆ.


Click it and Unblock the Notifications











