ಈ ವರ್ಷ ಬಿಡುಗಡೆ ಆಗಲಿರುವ ಕೊನೆಯ ಕನ್ನಡ ಸಿನಿಮಾಗಳಿವು
ವರ್ಷ 2021 ಮುಗಿಯಲು ಇನ್ನು ಕೆಲವೇ ಗಂಟೆಗಳು ಬಾಕಿ ಉಳಿದಿವೆ. 2020 ರ ಕೊರೊನಾದಿಂದ ಪ್ರಾರಂಭವಾದ ಸಮಸ್ಯೆಗಳು 2021 ರಲ್ಲೂ ಮುಂದುವರೆದು ಕನ್ನಡ ಚಿತ್ರರಂಗ ಹಾಗೂ-ಹೀಗೂ ಏದುಸಿರು ಬಿಡುತ್ತಲೇ ವರ್ಷ ಮುಗಿಸಿದೆ.
ಇದೀಗ ವರ್ಷದ ಕೊನೆಯ ದಿನ ಶುಕ್ರವಾರವಾಗಿದ್ದು ಕನ್ನಡ ಮೂರು ಸಿನಿಮಾಗಳು ವರ್ಷಾಂತ್ಯದಲ್ಲಿ ತಮ್ಮ ಅದೃಷ್ಟ ಪರೀಕ್ಷೆಗೆ ಪ್ರೇಕ್ಷಕರ ಮುಂದೆ ಬರುತ್ತಿವೆ.
ವರ್ಷದ ಕೊನೆಯ ದಿನ (ಡಿಸೆಂಬರ್ 31, ಶುಕ್ರವಾರ) ಮೂರು ಕನ್ನಡದ ಸಿನಿಮಾಗಳು ಬಿಡುಗಡೆಗೆ ಸಜ್ಜಾಗಿದ್ದು ಮೂರರಲ್ಲಿ ಯಶಸ್ಸು ಯಾರಿಗೆ ಒಲಿಯಲಿದೆ ನೋಡಬೇಕಿದೆ. ವರ್ಷಾಂತ್ಯದಲ್ಲಿ ಬಿಡುಗಡೆ ಆದ ಸಿನಿಮಾಗಳು ಹಿಟ್ ಆಗುವ ಸಾಧ್ಯತೆ ಹೆಚ್ಚು ಎಂಬ ಲೆಕ್ಕಾಚಾರವೂ ಒಂದಿದೆ, ಆ ಲೆಕ್ಕಾಚಾರಕ್ಕೆ ಕಾರಣ 'ಮುಂಗಾರು ಮಳೆ', 'ದುನಿಯಾ', 'ಕೆಜಿಎಫ್' ಇತರೆ ಇತರೆ.. ಹಾಗಾಗಿ ವರ್ಷಾಂತ್ಯದಲ್ಲಿ ಬಿಡುಗಡೆ ಆಗುವ ಸಿನಿಮಾಗಳ ಮೇಲೆ ಗಾಂಧಿನಗರ ಒಂದು ಕಣ್ಣಿಟ್ಟಿರುತ್ತದೆ.

ಪ್ರಜ್ವಲ್ ದೇವರಾಜ್ ನಟನೆಯ 'ಅರ್ಜುನ್ ಗೌಡ'
ನಿರ್ಮಾಪಕ ರಾಮು ನಿರ್ಮಾಣದ ಕೊನೆಯ ಸಿನಿಮಾ 'ಅರ್ಜುನ್ ಗೌಡ' ನಾಳೆ ಬಿಡುಗಡೆ ಆಗಲಿದೆ. ರಾಮು ಅನುಪಸ್ಥಿತಿಯಲ್ಲಿ ರಾಮು ಅವರ ಪತ್ನಿ ಮಾಲಾಶ್ರೀ ಈ ಸಿನಿಮಾವನ್ನು ತೆರೆಗೆ ತರುತ್ತಿದ್ದಾರೆ. ರಾಮು ಅವರು ಬಹಳ ಆಸಕ್ತಿಯಿಂದ, ನಿರೀಕ್ಷೆಯಿಟ್ಟುಕೊಂಡು ಈ ಸಿನಿಮಾ ನಿರ್ಮಾಣ ಮಾಡಿದ್ದರು ಎನ್ನಲಾಗಿದೆ. ಮಾಲಾಶ್ರೀ ಅವರೂ ಸಹ ಅದ್ಧೂರಿಯಾಗಿ ಸಿನಿಮಾ ಪ್ರಚಾರ ಮಾಡುತ್ತಾ, ಪತಿಯ ಕೊನೆಯ ಸಿನಿಮಾವನ್ನು ಹಿಟ್ ಮಾಡಿಸಲು ಶತಪ್ರಯತ್ನ ಮಾಡುತ್ತಿದ್ದಾರೆ. ಈ ಸಿನಿಮಾವನ್ನು ಲಕ್ಕಿ ಶಂಕರ್ ನಿರ್ದೇಶನ ಮಾಡಿದ್ದು, ನಟ ಶಿವರಾಜ್ ಕುಮಾರ್, ದರ್ಶನ್, ಸುದೀಪ್, ರವಿಚಂದ್ರನ್ ಇನ್ನೂ ಹಲವರು ಸಿನಿಮಾಕ್ಕೆ ಬೆಂಬಲ ನೀಡಿದ್ದಾರೆ.

ಗೆಲ್ಲುತ್ತಾ 'ಲವ್ ಯು ರಚ್ಚು'?
ಅಜಯ್ ರಾವ್ ಹಾಗೂ ರಚಿತಾ ರಾಮ್ ನಟನೆಯ 'ಲವ್ ಯು ರಚ್ಚು' ಸಿನಿಮಾ ಸಹ ನಾಳೆ ಬಿಡುಗಡೆ ಆಗಲಿದೆ. ಸಿನಿಮಾದ ಟ್ರೈಲರ್ ಸಾಕಷ್ಟು ಕುತೂಹಲ ಕೆರಳಿಸಿದ್ದು, ಸಿನಿಮಾದ ಬಗ್ಗೆ ನಿರೀಕ್ಷೆ ಹುಟ್ಟಿಸಿದೆ. ಈ ಸಿನಿಮಾದ ಆರಂಭದಿಂದಲೂ ಒಂದಲ್ಲ ಒಂದು ವಿವಾದ ಸಿನಿಮಾವನ್ನು ಕಾಡುತ್ತಲೇ ಬಂದಿದೆ. ಚಿತ್ರೀಕರಣ ನಡೆವಾಗ ಸಾಹಸ ಕಲಾವಿದ ವಿವೇಕ್ ನಿಧನಹೊಂದಿದ್ದು ಚಿತ್ರತಂಡವನ್ನು ತೀವ್ರವಾಗಿ ಸಂಕಷ್ಟಕ್ಕೆ ನೂಕಿತು, ನಿರ್ದೇಶಕ, ಸಾಹಸ ನಿರ್ದೇಶಕ ಜೈಲು ಪಾಲಾಗಬೇಕಾಯಿತು. ಸಿನಿಮಾ ಪ್ರಚಾರ ಹಂತಕ್ಕೆ ಬರುವ ವೇಳೆಗೆ ನಟ ಅಜಯ್ ರಾವ್ ನಿರ್ಮಾಪಕರ ಮೇಲೆ ಮುನಿಸಿಕೊಂಡು ಪ್ರಚಾರದಿಂದ ದೂರ ಉಳಿದರು. ಸಿನಿಮಾ ಬಿಡುಗಡೆ ಹಂತಕ್ಕೆ ಬರುವ ವೇಳೆಗೆ ಬಂದ್ ಕರೆ ನೀಡಿದ್ದು ವಿವಾದವಾಯಿತು. ಎಲ್ಲ ಅಡೆ-ತಡೆಗಳನ್ನು ದಾಟಿಕೊಂಡು ಇದೀಗ ಸಿನಿಮಾ ಬಿಡುಗಡೆ ಆಗುತ್ತಿದೆ.

ದಿಗಂತ್ ನಟನೆಯ 'ಹುಟ್ಟುಹಬ್ಬದ ಶುಭಾಶಯ'
ದಿಗಂತ್ ನಟನೆಯ 'ಹುಟ್ಟುಹಬ್ಬದ ಶುಭಾಶಯ' ಸಿನಿಮಾ ಸಹ ಡಿಸೆಂಬರ್ 31 ರಂದು ಬಿಡುಗಡೆ ಆಗಲಿದೆ. ಸಿನಿಮಾದ ಟೀಸರ್ ಬಿಡುಗಡೆ ಆಗಿದ್ದು ಗಮನ ಸೆಳೆಯುತ್ತಿದೆ. ಹುಟ್ಟುಹಬ್ಬದ ಪಾರ್ಟಿಯಲ್ಲಿ ನಡೆಯುವ ಕೊಲೆಯೊಂದರ ಸುತ್ತ ನಡೆಯುವ ಕತೆಯನ್ನು ಸಿನಿಮಾ ಒಳಗೊಂಡಿದೆ ಎಂಬುದು ಟೀಸರ್‌ನಿಂದ ಗೊತ್ತಾಗುತ್ತಿದೆ. ಸಿನಿಮಾದಲ್ಲಿ ದಿಗಂತ್ ಜೊತೆಗೆ ಕವಿತಾ ಗೌಡ ನಟಿಸಿದ್ದಾರೆ. ಕ್ರೈಂ ಥ್ರಿಲ್ಲರ್ ಕತೆಯನ್ನು ಸಿನಿಮಾ ಒಳಗೊಂಡಿದೆ. ಸಿನಿಮಾವನ್ನು ನಾಗರಾಜ್ ಬೇತೂರ್ ನಿರ್ದೇಶಕ ಮಾಡಿದ್ದು, ಕ್ರಿಸ್ಟಲ್ ಪಾರ್ಕ್ ಬ್ಯಾನರ್ ಅಡಿ ಟಿಆರ್ ಚಂದ್ರಶೇಖರ್ ನಿರ್ಮಾಣ ಮಾಡಿದ್ದಾರೆ.

ಯಾರ ಕೈ ಹಿಡಿಯಲಿದ್ದಾನೆ ಪ್ರೇಕ್ಷಕ?
ವರ್ಷದ ಕೊನೆಯ ಕನ್ನಡ ಸಿನಿಮಾ ಆಗಿ 'ಅರ್ಜುನ್ ಗೌಡ', 'ಲವ್ ಯು ರಚ್ಚು', 'ಹುಟ್ಟುಹಬ್ಬದ ಶುಭಾಶಯ' ಸಿನಿಮಾಗಳು ಬಿಡುಗಡೆ ಆಗುತ್ತಿದ್ದು, ಪ್ರೇಕ್ಷಕ ಯಾವ ಸಿನಿಮಾದ ಕೈ ಹಿಡಿಯುತ್ತಾನೆ ಎಂದು ಕಾದು ನೋಡಬೇಕಿದೆ. ಮುಂದಿನ ಶುಕ್ರವಾರ (ಜನವರಿ 07) ತೆಲುಗಿನ ಬಹುನಿರೀಕ್ಷಿತ ಸಿನಿಮಾ 'ಆರ್‌ಆರ್‌ಆರ್' ಬಿಡುಗಡೆ ಆಗುತ್ತಿರುವ ಕಾರಣ ಬೇರೆ ಭಾಷೆಯ ಸಿನಿಮಾಗಳು ಜನವರಿ 07ರ ಬಿಡುಗಡೆಯನ್ನು ತಪ್ಪಿಸಿಕೊಂಡು ಮುಂಚಿತವಾಗಿ ಅಥವ ತಡವಾಗಿ ಸಿನಿಮಾ ಬಿಡುಗಡೆ ಮಾಡಿಕೊಳ್ಳುತ್ತಿವೆ.


Click it and Unblock the Notifications











