ಕರ್ನಾಟಕದಲ್ಲಿ ಬಿಡುಗಡೆಯಾಗುತ್ತಾ ಥಗ್ ಲೈಫ್ ? ಚಿತ್ರಮಂದಿರಗಳ ಮಾಲೀಕರು ಏನಂತಾರೆ ?
ಕರುನಾಡಿನಲ್ಲಿ ಕನ್ನಡಿಗನೇ ಸಾರ್ವಭೌಮ. ಸಾರ್ವಭೌಮರು ಯಾವಾಗಲೂ ಕೊಡುಗೈ ದಾನಿಗಳಾಗಿರುತ್ತಾರೆಯೇ ಹೊರತು ಎಂದೂ ಯಾರ ಬಳಿಯಲ್ಲಿಯೂ ದೈನೇಸಿಯಾಗಿ ಕೈಚಾಚುವುದಿಲ್ಲ. ಇನ್ನು ಕನ್ನಡ ಭಾಷೆ ಇಂದು ನಿನ್ನೆಯದ್ದಲ್ಲ. ಕನ್ನಡಕ್ಕೆ ಅದರದ್ದೇ ಆದ ಸುದೀರ್ಘವಾದ ಇತಿಹಾಸ ಇದೆ. 2500 ವರ್ಷಗಳ ಪರಂಪರೆ ಇದೆ. ಆದರೆ ಈಗೀಗ ಕನ್ನಡ ಸಂಸ್ಕೃತಿ, ಚರಿತ್ರೆಯನ್ನೇ ತಿರುಚುವ ಕೆಲಸಗಳು ನಿತ್ಯ ನಿರಂತರವಾಗಿ ನಡೆಯುತ್ತಿವೆ. ಮೊನ್ನೆಯ ದಿವಸ ಕಮಲ್ ಹಾಸನ್ ಮಾತನಾಡಿದ ಮಾತು ಇದಕ್ಕೆ ಅತ್ಯುತ್ತಮ ಸಾಕ್ಷಿ.
ತಮಿಳಿನಿಂದ ಕನ್ನಡ ಹುಟ್ಟಿದ್ದು ಎಂದು ಹೇಳಿ ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿರುವ ಕಮಲ್ ಹಾಸನ್ ವಿರುದ್ದ ಸದ್ಯ ಕರುನಾಡಿನೆಲ್ಲೆಡೆ ಆಕ್ರೋಶ ವ್ಯಕ್ತವಾಗುತ್ತಿದೆ. ಕ್ಷಮೆ ಕೇಳಲೇಬೇಕೆಂದು ಕನ್ನಡದ ಮನಸ್ಸುಗಳು, ಕನ್ನಡದ ಸಂಘಟನೆಗಳು ಪಟ್ಟು ಹಿಡಿದು ಕುಳಿತಿವೆ. ಕ್ಷಮೆ ಕೇಳದೇ ಇದ್ದಲ್ಲಿ ಮುಂದಿನ ವಾರ { ಜೂನ್ 6 } ಬಿಡುಗಡೆಯಾಗಲಿರುವ ಥಗ್ ಲೈಫ್ ಚಿತ್ರವನ್ನು ಯಾವುದೇ ಕಾರಣಕ್ಕೂ ಕರ್ನಾಟಕದಲ್ಲಿ ಬಿಡುಗಡೆ ಮಾಡಲು ಅವಕಾಶ ನೀಡುವುದಿಲ್ಲ ಎಂಬ ಸಂದೇಶವನ್ನು ಕೂಡ ಕಮಲ್ ಹಾಸನ್‌ಗೆ ರವಾನೆ ಮಾಡಿಯಾಗಿದೆ.

ಆದರೆ ಕಮಲ್ ಹಾಸನ್ ಅವರದ್ದು ಡೋಂಟ್ ಕೇರ್ ವ್ಯಕ್ತಿತ್ವ. ತಪ್ಪು ಮಾಹಿತಿಯನ್ನು ಹರಡಿದ್ದಕ್ಕೆ ಕ್ಷಮೆ ಕೇಳುವ ಬದಲು ಮೊಂಡುವಾದವನ್ನು ಕಮಲ್ ಹಾಸನ್ ಮಾಡುತ್ತಿದ್ದಾರೆ. ಬಹುಶಃ ಎಷ್ಟೇ ಪ್ರಯತ್ನ ಮಾಡಿದರು ಚಿತ್ರದ ಬಿಡುಗಡೆಯನ್ನು ತಡೆಯುವುದು ಅಸಾಧ್ಯ ಎನ್ನುವ ಭ್ರಮೆ ಕಮಲ್ ಹಾಸನ್ ಅವರಿಗೆ ಇರಬಹುದು. ಅಥವಾ ಕರ್ನಾಟಕದಲ್ಲಿ ತಮ್ಮ ಚಿತ್ರ ಬಿಡುಗಡೆಯಾಗುವುದೇ ಬೇಡ ಎಂದು ಕಮಲ್ ನಿರ್ಧರಿಸಿದ್ದರು ನಿರ್ಧರಿಸಬಹುದು.
ಕಮಲ್ ನಿರ್ಧಾರವೇನು ಎನ್ನುವುದು ಇನ್ನೊಂದು ಎರಡು ಮೂರು ದಿನಗಳಲ್ಲಿ ಸ್ಪಷ್ಟವಾಗಿ ಗೊತ್ತಾಗಲಿದೆಯಾದರೂ ಸದ್ಯ ಥಗ್ ಲೈಫ್ ಚಿತ್ರದ ಬಿಡುಗಡೆಯ ವಿಚಾರಕ್ಕೆ ಸಂಬಂಧಿಸಿದಂತೆ ಕರ್ನಾಟಕ ಚಿತ್ರಪ್ರದರ್ಶಕರ ಸಂಘದ ಅಧ್ಯಕ್ಷ ಮತ್ತು ಬೆಂಗಳೂರಿನ ವೀರೇಶ್ ಚಿತ್ರಮಂದಿರದ ಮಾಲೀಕರಾದ ಕೆ.ವಿ. ಚಂದ್ರಶೇಖರ್ ಫಿಲ್ಮಿಬೀಟ್ ಜೊತೆ ಮಾತನಾಡಿದ್ದಾರೆ.
ಥಗ್ ಲೈಫ್ ಚಿತ್ರದ ಬಿಡುಗಡೆಗೆ ಸಂಬಂಧಿಸಿದಂತೆ 'ಫಿಲ್ಮಿಬೀಟ್ ಕನ್ನಡ' ಜೊತೆ ಮಾತನಾಡಿರುವ ಕೆ.ವಿ.ಚಂದ್ರಶೇಖರ್ '' ಕಮಲ್ ಹಾಸನ್ ಅವರು ಕ್ಷಮೆ ಕೇಳಿದರೆ ಮಾತ್ರ ಬಿಡುಗಡೆ. ಕ್ಷಮೆ ಕೇಳದಿದ್ದರೆ ಚಿತ್ರ ಬಿಡುಗಡೆ ಮಾಡುವ ಪ್ರಶ್ನೆಯೇ ಇಲ್ಲ. ಕನ್ನಡಿಗರಿಗೆ ಕರ್ನಾಟಕಕ್ಕೆ ಕಮಲ್ ಹಾಸನ್ ಅವಮಾನ ಮಾಡಿದ್ದಾರೆ. ಕ್ಷಮೆ ಕೇಳುವ ಬದಲು ಮೊಂಡುತನದ ಪ್ರದರ್ಶನ ಮಾಡುತ್ತಿದ್ದಾರೆ. ಸೋಮವಾರ ಅವರು ಕ್ಷಮೆ ಕೇಳುವ ನಿರೀಕ್ಷೆ ಇದೆ, ನೋಡೋಣ'' ಎಂದು ಹೇಳಿದ್ದಾರೆ.
ಇನ್ನು ವಿಕ್ಟರಿ ಸಿನಿಮಾಸ್ ಹಂಚಿಕೊಂಡ ಥಗ್ ಲೈಫ್ ಚಿತ್ರದ ಪೋಸ್ಟರ್ ಮತ್ತು ಆನ್‌ಲೈನ್ ಬುಕ್ಕಿಂಗ್ ಕುರಿತು ನೀಡಿರುವ ಮಾಹಿತಿಯ ಕುರಿತು ಕೂಡ ಮಾತನಾಡಿರುವ ಕೆ.ವಿ.ಚಂದ್ರಶೇಖರ್ '' ಟಿಕೆಟ್‌ಗಳನ್ನು ನಾವು ಕೊಡ್ತಿದ್ದೀವಿ, ಬನ್ನಿ ಎಂದು ಅವರೇನು ಹೇಳಿಲ್ಲ. ಈಗ ಕಾಲ ಬದಲಾಗಿದೆ. ಪ್ರಚಾರದ ವೈಖರಿ ಬದಲಾಗಿದೆ. ಎಲ್ಲೆಂದರಲ್ಲಿ ಬ್ಯಾನರ್ ಹಾಕಬಾರದು, ಪೋಸ್ಟರ್‌ಗಳನ್ನು ಹಚ್ಚಬಾರದು ಎಂದು ಹತ್ತಾರು ನಿಯಮಗಳಿವೆ.
ಹೀಗಾಗಿ ತಮ್ಮ ಚಿತ್ರಮಂದಿರದಲ್ಲಿ ಬಿಡುಗಡೆಯಾಗಬೇಕಿರುವ ಥಗ್ ಲೈಫ್ ಪೋಸ್ಟರ್‌ನ ಅವರು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಾಕಿಕೊಂಡಿದ್ದಾರೆ. ಈ ಮೂಲಕ ತಮ್ಮ ಚಿತ್ರಮಂದಿರ ಮತ್ತು ಚಿತ್ರದ ಪ್ರಚಾರವನ್ನು ಅವರು ಮಾಡಿದ್ದಾರಷ್ಟೇ, ಸಾಮಾನ್ಯವಾಗಿ ಎಲ್ಲ ಚಿತ್ರಮಂದಿರಗಳಲ್ಲಿಯೂ ಚಿತ್ರಗಳ ಸ್ಟ್ಯಾಂಡೀಸ್‌ಗಳನ್ನು ಇಟ್ಟಿರಲಾಗಿರುತ್ತೆ, ಫೋಸ್ಟರ್‌ಗಳನ್ನು ಅಂಟಿಸಿರಲಾಗಿರುತ್ತೆ, ಹಾಗೆಂದ ಮಾತ್ರಕ್ಕೆ ವಿರೋಧದ ನಡುವೆಯೂ ಚಿತ್ರ ಬಿಡುಗಡೆ ಆಗಿಯೇ ಆಗುತ್ತೆ ಅಂತಲ್ಲ '' ಎಂದು ಕೆ.ವಿ.ಚಂದ್ರಶೇಖರ್ ಹೇಳಿದ್ದಾರೆ.
ಇನ್ನು ಕನ್ನಡಿಗರನ್ನು ಅಕ್ಕ ಪಕ್ಕದ ಸ್ಟಾರ್‌ಗಳು ಕೆಣಕಿದ್ದು ಇದು ಮೊದಲೇನಲ್ಲ. ಈ ಹಿಂದೆ ಕೂಡಾ ರಜಿನಿಕಾಂತ್, ಸತ್ಯರಾಜ್ ಸೇರಿ ಅನೇಕರು ಕನ್ನಡಿಗರ ಭಾವನೆಗಳಿಗೆ ಧಕ್ಕೆಯುಂಟು ಮಾಡಿದ್ದಾರೆ. ವಿವಾದ ಭುಗಿಲೆದ್ದ ನಂತರ ಕ್ಷಮೆಯನ್ನು ಕೇಳಿದ್ದಾರೆ.
ಈ ಕುರಿತು ಕೂಡ ಮಾತನಾಡಿರುವ ಕೆ.ವಿ.ಚಂದ್ರಶೇಖರ್ ''ಹಿಂದೆಯೆಲ್ಲ ಬಹಳಷ್ಟು ಸಂದರ್ಭದಲ್ಲಿ ಕ್ಷಮೆಯ ಮೂಲಕ ವಾತಾವರಣ ತಿಳಿಯಾಗಿದೆ. ಕ್ಷಮೆ ಕೇಳಿದರೆ ಎಲ್ಲವೂ ಸರಿಯಾಗುತ್ತೆ. ಆದರೆ ಅವರು ಕ್ಷಮೆ ಕೇಳುತ್ತಿಲ್ಲ ಕ್ಷಮೆ ಕೇಳಿದರೆ ಚಿತ್ರದ ಬಿಡುಗಡೆ ಸರಾಗವಾಗಿ ಆಗಲಿದೆ'' ಎಂದು ಹೇಳಿದ್ದಾರೆ.
''ಒಂದು ವೇಳೆ ಕಮಲ್ ಹಾಸನ್ ಕ್ಷಮೆ ಕೇಳುವುದೇ ಇಲ್ಲ ಎಂದು ಹಠ ಹಿಡಿದು ಕುಂತರೆ, ಕರ್ನಾಟಕದಲ್ಲಿ ನನ್ನ ಚಿತ್ರ ಬಿಡುಗಡೆ ಮಾಡುವುದು ಬೇಡ ಎನ್ನುವ ಫರ್ಮಾನು ಹೊರಡಿಸಿದರೆ ಕನ್ನಡಿಗರಲ್ಲಿ ಅವರ ಮೇಲಿರುವ ಗೌರವ ಕಡಿಮೆಯಾಗುತ್ತೆ, ದುಡ್ಡು ಸಂಪಾದನೆ ಮಾಡುವುದು, ಲಾಭ-ನಷ್ಟ ಬೇರೆ ಪ್ರೀತಿ ವಿಶ್ವಾಸ ಗಳಿಸುವುದು ಬೇರೆ, ಕನ್ನಡಿಗರ ಮೇಲೆ ನನಗೆ ಅಪಾರವಾದ ಪ್ರೀತಿ ಇದೆ ಎಂದು ಹಿಂದೆ ಎಲ್ಲ ಕಮಲ್ ಹೇಳಿದ್ದಾರೆ, ಆ ಪ್ರೀತಿ ಹಾಗೇ ಉಳಿಯಬೇಕು ಇರಬೇಕು ಅಂದರೆ ಅವರು ಕ್ಷಮೆ ಕೇಳಬೇಕು'' ಎಂದು ಹೇಳಿದ್ದಾರೆ ಕೆ.ವಿ.ಚಂದ್ರಶೇಖರ್
ಮುಂದುವರೆದು ''ಸದ್ಯ ಕಮಲ್ ಹಾಸನ್ ಅವರ ಅಭಿಮಾನಿಗಳಲ್ಲಿ ಥಗ್ ಲೈಫ್ ಕರ್ನಾಟಕದಲ್ಲಿ ಬಿಡುಗಡೆಯಾಗುತ್ತಾ ಎನ್ನುವ ಪ್ರಶ್ನೆ ಇದೆ. ಕಮಲ್ ಹಾಸನ್ ಕ್ಷಮೆ ಕೇಳಲೇಬೇಕು ಎನ್ನುವುದು ಕನ್ನಡಿಗರ ಮನಸ್ಸಿಲ್ಲಿದೆ. ಚಿತ್ರ ಬಿಡುಗಡೆಯಾಗುತ್ತಾ ? ಕಮಲ್ ಹಾಸನ್ ಕ್ಷಮೆ ಕೇಳ್ತಾರಾ ? ಎನ್ನುವುದಕ್ಕೆ ಸೋಮವಾರ ಸ್ಪಷ್ಟವಾದ ಉತ್ತರ ಸಿಗುವ ಸಾಧ್ಯತೆ ಇದೆ'' ಎಂದು ಕೆ.ವಿ.ಚಂದ್ರಶೇಖರ್ 'ಫಿಲ್ಮಿಬೀಟ್' ಕನ್ನಡಗೆ ಮಾಹಿತಿಯನ್ನು ನೀಡಿದ್ದಾರೆ.


Click it and Unblock the Notifications











