Jaggesh: ಹುಲಿ ಉಗುರು ಪೆಂಡೆಂಟ್ ಪ್ರಕರಣದಲ್ಲಿ ನಟ ಜಗ್ಗೇಶ್‌ಗೆ ಹೈಕೋರ್ಟ್ ರಿಲೀಫ್
ರಾಜ್ಯದಲ್ಲಿ ಸಕತ್ ಸುದ್ದಿಯಾಗಿದ್ದ ಹುಲಿ ಉಗುರು ಪೆಂಡೆಂಟ್ ಪ್ರಕರಣದಲ್ಲಿ ನಟ, ಬಿಜೆಪಿ ರಾಜ್ಯಸಭಾ ಸದಸ್ಯ ಜಗ್ಗೇಶ್ ಅವರಿಗೂ ಅರಣ್ಯ ಇಲಾಖೆ ಅಧಿಕಾರಿಗಳು ನೋಟಿಸ್ ಜಾರಿ ಮಾಡಿದ್ದರು. ನೋಟಿಸ್ ಪ್ರಶ್ನಿಸಿ ನಟ ಹೈಕೋರ್ಟ್ ಮೆಟ್ಟಿಲೇರಿದ್ದರು. ಈಗ ಈ ಪ್ರಕರಣದಲ್ಲಿ ಅವರಿಗೆ ರಿಲೀಫ್ ಸಿಕ್ಕಿದೆ.
ಅರಣ್ಯ ಇಲಾಖೆ ಅಧಿಕಾರಿಗಳು ನೀಡಿದ್ದ ನೋಟಿಸ್‌ಗೆ ತಡೆ ನೀಡಬೇಕು ಎಂದು ನಟ ಜಗ್ಗೇಶ್ ಅವರು ಹೈಕೋರ್ಟ್ ಮೆಟ್ಟಿಲು ಏರಿದ್ದರು. ಸದ್ಯಕ್ಕೆ ಕರ್ನಾಟಕ ಹೈಕೋರ್ಟ್ ಜಗ್ಗೇಶ್ ಪರವಾಗಿ ಆದೇಶ ನೀಡಿದ್ದು, ಜಗ್ಗೇಶ್ ವಿರುದ್ಧ ಅರಣ್ಯಾಧಿಕಾರಿಗಳ ನೋಟಿಸ್‌ಗೆ ತಡೆ ನೀಡಿದೆ. ಹೀಗಾಗಿ ಜಗ್ಗೇಶ್‌ಗೆ ದೊಡ್ಡ ರಿಲೀಫ್ ಸಿಕ್ಕಿದೆ.

ಕಳೆದ ವಾರ ಹುಲಿ ಉಗುರು ಪ್ರಕರಣ ರಾಜ್ಯದಲ್ಲಿ ಭಾರಿ ಸುದ್ದಿಯಾಗಿತ್ತು. ಬಿಗ್ ಬಾಸ್ ಸ್ಪರ್ಧಿ ವರ್ತೂರು ಸಂತೋಷ್ ಬಂಧನದ ಬಳಿಕ ಕನ್ನಡ ಸಿನಿಮಾ ರಂಗಕ್ಕೂ ಆತಂಕ ಅವರಿಸಿತ್ತು. ಇದೇ ವಿಷಯದಲ್ಲಿ ಜಗ್ಗೇಶ್ ಅವರು ಹುಲಿ ಉಗುರಿನ ಪೆಂಡೆಂಟ್ ಧರಿಸಿರುವ ಅನೇಕ ಫೋಟೋ ಮತ್ತು ವಿಡಿಯೋಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದವು. ಇದರ ಬೆನ್ನಲ್ಲೆ ಅರಣ್ಯಾಧಿಕಾರಿಗಳು ಜಗ್ಗೇಶ್ ಮನೆಯ ಮೇಲೆ ದಾಳಿ ನಡೆಸಿದ್ದರು. ದಾಳಿಯ ಕಾನೂನು ಬದ್ಧತೆಯನ್ನು ಪ್ರಶ್ನಿಸಿ ಕರ್ನಾಟಕ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.
ಪ್ರಕರಣವೇನು...?
ಬಿಗ್ ಬಾಸ್ ರಿಯಾಲಿಟಿ ಸೋಗೆ ಕಾಲಿಟ್ಟಿರುವ ವರ್ತೂರು ಸಂತೋಷ್ ಹುಲಿ ಉಗುರಿನ ಪೆಂಡೆಂಟ್ ಧರಿಸಿದ್ದರು ಎಂದು ದೂರು ದಾಖಲಾಗಿತ್ತು. ಅವರನ್ನು ಬಿಗ್ ಬಾಸ್ ಮನೆಯಿಂದಲೇ ಬಂಧಿಸಲಾಗಿತ್ತು. ಇವರ ಬಂಧನದ ಬೆನ್ನಲ್ಲೇ ಸಾಮಾಜಿಕ ಮಾಧ್ಯಮಗಳಲ್ಲಿ ಸ್ಯಾಂಡಲ್‌ವುಡ್ ನಟ, ನಿರ್ಮಾಪಕರು, ವಿನಯ್ ಗುರೂಜಿಯವರ ಫೋಟೋಗಳು ಹರಿದಾಡಿ ಇವರ ಬಂಧನ ಯಾವಾಗ ಎಂದು ಪ್ರಶ್ನಿಸಲಾಗಿತ್ತು. ಜೊತೆಗೆ ಸಾಮಾನ್ಯರಿಗೆ ಒಂದು, ಸೆಲಬ್ರಿಟಿಗಳಿಗೆ ಒಂದು ನ್ಯಾಯವೇ ಎಂಬ ದೊಡ್ಡ ಪ್ರಶ್ನೆ ಎದ್ದಿತ್ತು. ಹೀಗಾಗಿ, ನಟರ ಮನೆಗಳ ಮೇಲೆ ದಾಳಿ ನಡೆಸಲಾಗಿತ್ತು.
ಸಾಮಾಜಿಕಕ ಜಾಲತಾಣಗಳಲ್ಲಿ ವೈರಲ್ ಅದ ವಿಡಿಯೋಗಳಲ್ಲಿ ನಟ ಜಗ್ಗೇಶ್ ಅವರದ್ದು ಇತ್ತು. ಈ ಹಿಂದೆ ಸಂದರ್ಶನ ಒಂದರಲ್ಲಿ ನಟ ಜಗ್ಗೇಶ್ ತಮ್ಮ ಕೊರಳಿನಲ್ಲಿದ್ದ ಹುಲಿ ಉಗುರಿನ ಪೆಂಡೆಂಟ್ ತೋರಿಸಿ "ಇದು ನಿಜವಾದ ಹುಲಿ ಉಗುರಿನ ಸರ. ನನ್ನ ತಾಯಿ ನಾನು ಇಪ್ಪತ್ತು ವರ್ಷದವನಿದ್ದಾಗ ನನ್ನ ಮಗ ಹುಲಿಯಂತೆ ಇರಬೇಕು ಎಂದು ನನಗೆ ಉಡುಗೊರೆ ನೀಡಿದ್ದು" ಎಂದು ಹೇಳಿದ್ದರು.

ಹೀಗಾಗಿ ಅವರ ಮನೆ ಮೇಲೂ ಅಕ್ಟೋಬರ್ 24 ರಂದು ದಾಳಿ ನಡೆಸಲಾಗಿತ್ತು. ಬಳಿಕ ಹುಲಿ ಉಗುರು ಹೊಂದಿರುವ ಪ್ರಕರಣದಲ್ಲಿ ಮನೆ ಶೋಧ ನಡೆಸಿದ ಅರಣ್ಯಾಧಿಕಾರಿಗಳ ಕ್ರಮವನ್ನು ಪ್ರಶ್ನಿಸಿ ಜಗ್ಗೇಶ್ ಹೈಕೋರ್ಟ್‌ಗೆ ಮನವಿ ಸಲ್ಲಿಸಿದ್ದರು. ಅರಣ್ಯಾಧಿಕಾರಿಗಳ ಕ್ರಮ ಕಾನೂನುಬಾಹಿರವೆಂದು ಘೋಷಿಸುವಂತೆ ಮನವಿ ಮಾಡಿ, ತಮಗೆ ನೀಡಿರುವ ನೋಟಿಸ್ ರದ್ದುಪಡಿಸುವಂತೆ ಕೋರಿದ್ದರು.
ನೋಟಿಸ್‌ಗೆ ಉತ್ತರಿಸುವ ಮೊದಲೇಅರಣ್ಯಾಧಿಕಾರಿಗಳು ದಾಳಿ ನಡೆಸಿದ್ದಾರೆ ಎಂದು ಆರೋಪಿಸಿ, "ಅರಣ್ಯಾಧಿಕಾರಿಗಳು ನೀಡಿದ ನೋಟಿಸ್ ರದ್ದು ಪಡಿಸಬೇಕು. ನೋಟಿಸ್‌ಗೆ ಉತ್ತರಿಸುವ ಮೊದಲೇ 14 ಮಂದಿ ಅಧಿಕಾರಿಗಳ ತಂಡ ಮನೆ ಮೇಲೆ ದಾಳಿ ನಡೆಸಿದೆ. ಮನೆಯಲ್ಲಿನ ಎಲ್ಲಾ ವಸ್ತುಗಳನ್ನು ಚೆಲ್ಲಾಪಿಲ್ಲಿ ಮಾಡಿದ್ದಾರೆ. ಹಳೆಯ ಸಂದರ್ಶನದಲ್ಲಿ ಹೇಳಿದ ಮಾತುಗಳನ್ನು ಆಧರಿಸಿ ತೇಜೋವಧೆ ಮಾಡಲಾಗಿದೆ. ಅರಣ್ಯ ಇಲಾಖೆ ಅಧಿಕಾರಿಗಳ ಕ್ರಮ ಕಾನೂನುಬಾಹಿರ ಎಂದು ಘೋಷಿಸಬೇಕು" ಎಂದು ನಟ ಜಗ್ಗೇಶ್ ಪರ ವಕೀಲರು ಅರ್ಜಿಯಲ್ಲಿ ತಿಳಿಸಿದ್ದರು. ಈಗ ಅರ್ಜಿಯನ್ನು ನ್ಯಾಯಾಲಯ ಪರಿಗಣಿಸಿದೆ.


Click it and Unblock the Notifications











