ಹುಲಿ ಉಗುರು: ವರ್ತೂರ್ ಸಂತೋಷ್ ಬಳಿಕ ನಟ ದರ್ಶನ್ ತೂಗುದೀಪ ವಿರುದ್ಧ ದೂರು ದಾಖಲು
ಬಿಗ್ ಬಾಸ್ ಕನ್ನಡ ಸೀಸನ್ ಎಂಟರ ಸ್ಪರ್ಧಿಯಾಗಿದ್ದ ರೈತ ವರ್ತೂರ್ ಸಂತೋಷ್ ಅವರನ್ನು ಬಂಧಿಸಲಾಗಿದೆ. ಹುಲಿ ಉಗುರನ್ನು ಪೆಂಡೆಂಟ್ ಮಾಡಿಕೊಂಡಿದ್ದ ಆರೋಪದಲ್ಲಿ ಅರಣ್ಯ ಅಧಿಕಾರಿಗಳು ಅವರನ್ನು ಬಿಗ್ ಬಾಸ್ ಮನೆಯಿಂದಲೇ ಅರೆಸ್ಟ್ ಮಾಡಿದ್ದರು. ಇದರ ಬೆನ್ನಲ್ಲೆ ಸ್ಯಾಂಡಲ್‌ವುಡ್ ನಟರ ಹಳೆಯ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಕ್ರಮಕ್ಕೆ ಆಗ್ರಹಿಸಿದ್ದಾರೆ.
ಇದರ ಬೆನ್ನಲ್ಲೆ ನಟ ದರ್ಶನ್ ತೂಗುದೀಪ ಮತ್ತು ವಿನಯ್ ಗುರೂಜಿ ಅವರ ವಿರುದ್ಧ ಸರ್ವ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಶಿವಕುಮಾರ್ ಅರಣ್ಯಾಧಿಕಾರಿಗಳಿಗೆ ದೂರು ನೀಡಿದ್ದಾರೆ. ವರ್ತೂರ್ ಸಂತೋಷ್ ಬಂಧನದಂತೆಯೇ ನಟ ದರ್ಶನ್ ಮತ್ತು ಅವಧೂತ ವಿನಯ್ ಗುರೂಜಿ ಅವರನ್ನು ಠಾಣೆಗೆ ಕರೆಸಬೇಕು. ನಮ್ಮ ದೂರಿನಂತೆ ಅವರ ವಿರುದ್ಧ ಕಾನೂನು ಪ್ರಕಾರ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

ನಟ ದರ್ಶನ್ ತೂಗುದೀಪ ತಮ್ಮ ಚಿನ್ನದ ಚೈನಿನಲ್ಲಿ ಹುಲಿಯ ಉಗುರು ಧರಿಸಿದ್ದಾರೆ. ವಿನಯ್ ಗುರೂಜಿ ಹುಲಿ ಚರ್ಮದ ಮೇಲೆ ಕುಳಿತಿದ್ದಾರೆ . ಹೀಗಾಗಿ ಜನ ಸಾಮಾನ್ಯರ ಮೇಲೆ ಕ್ರಮ ಕೈಗೊಳ್ಳುವಂತೆಯೇ ಇವರ ಮೇಲೆಯೂ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ದೂರುದಾರರು ತಿಳಿಸಿದ್ದಾರೆ.ಈ ಬಗ್ಗೆ ಮಾಧ್ಯಮಗಳ ಜೊತೆಗೆ ಮಾತನಾಡಿರುವ ಸರ್ವ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಶಿವಕುಮಾರ್, "ನಟ ದರ್ಶನ್ ಮತ್ತು ವಿನಯ್ ಗುರೂಜಿ ಅವರನ್ನು ಠಾಣೆಗೆ ಕರೆಸಬೇಕು. ನೀವು ಹೇಗೆ ವರ್ತೂರು ಸಂತೋಷ್ ಅವರನ್ನು ಬಂದಿಸಿದಿರೋ ಹಾಗೆ. ಸಾಮಾನ್ಯ ಜನರಿಗೆ ಒಂದು ನ್ಯಾಯ, ದೊಡ್ಡವರಿಗೆ ಒಂದು ನ್ಯಾಯ ಅಂತ ಆಗಬಾರದು. ಕಾನೂನು ಪ್ರಕಾರ ಅವರ ಮೇಲೂ ಕ್ರಮ ತೆಗೆದುಕೊಳ್ಳಬೇಕು. ಇದೇ ಕಾರಣಕ್ಕೆ ನಾವು ಇಂದು ಅರಣ್ಯಾಧಿಕಾರಿಗಳನ್ನು ಭೇಟಿ ಮಾಡಿ, ದೂರು ನೀಡಿದ್ದೇವೆ. ಅವರು ದೂರು ಸ್ವೀಕರಿಸಿದ್ದಾರೆ" ಎಂದು ಹೇಳಿದ್ದಾರೆ.
ಕ್ರಮ ಕೈಗೊಳ್ಳದಿದ್ದರೇ ಹೋರಾಟದ ಎಚ್ಚರಿಕೆ!
ಮುಂದುವರಿದು ಮಾತನಾಡಿರುವ ಅವರು, "ನಾಳೆ ಅರಣ್ಯಾಧಿಕಾರಿಗಳ ಕಚೇರಿ ಬಳಿ 10, 10:30 ಸಮಯಕ್ಕೆ ಮತ್ತೆ ಇಲ್ಲಿಗೆ ಬರುತ್ತೇವೆ. ಅವರು ಕಾನೂನು ರೀತಿ ಕ್ರಮ ತೆಗೆದುಕೊಂಡು ನಟ ದರ್ಶನ್ ಮತ್ತು ಅವಧೂತ ವಿನಯ್ ಗುರೂಜಿ ಅವರನ್ನು ಕರೆಸಿ ಕ್ರಮ ತೆಗೆದುಕೊಳ್ಳದಿದ್ದರೇ ದೊಡ್ಡ ಹೋರಾಟ ಮಾಡುತ್ತೇವೆ" ಎಂದು ಎಚ್ಚರಿಕೆ ನೀಡಿದ್ದಾರೆ.
"ವರ್ತೂರು ಸಂತೋಷ್ ಅವರ ಫೋಟೋ ಹಿಡಿದುಕೊಂಡು ಅವರನ್ನು ಕರೆಸಿ ಹೇಗೆ ವಿಚಾರಣೆ ಬಳಿಕ ಪ್ರಕರಣ ದಾಖಲಿಸಿದರೋ, ಅದೇ ರೀತಿ ವಿನಯ್ ಗುರೂಜಿ ಮತ್ತು ದರ್ಶನ್ ಅವರನ್ನು ಕರೆಸಿ ವಿಚಾರಣೆ ನಡೆಸಬೇಕು. ಈಗಾಗಲೇ ಮಾಧ್ಯಮಗಳು, ಸೋಶಿಯಲ್ ಮೀಡಿಯಾಗಳಲ್ಲಿ ಫೋಟೋಗಳು ವೈರಲ್ ಆಗಿದ್ದು, ಅದರ ಆಧಾರದಲ್ಲಿ ಅವರನ್ನು ವಿಚಾರಣೆ ನಡೆಸಬೇಕು. ಅದು ಸತ್ಯವೇ ಆಗಿದ್ದರೇ ಅವರನ್ನು ಬಂಧಿಸಬೇಕು" ಎಂದು ಹೇಳಿದ್ದಾರೆ.


Click it and Unblock the Notifications











