Jaggesh: ಹುಲಿ ಉಗುರು ಪ್ರಕರಣದಲ್ಲಿ ಅರಣ್ಯಾಧಿಕಾರಿಗಳ ವಿರುದ್ಧ ಹೈಕೋರ್ಟ್ ಮೊರೆ ಹೋದ ನಟ ಜಗ್ಗೇಶ್
ರಾಜ್ಯದಲ್ಲಿ ಹುಲಿ ಉಗುರು ಪ್ರಕರಣ ತಣ್ಣಗಾಗುವ ಲಕ್ಷಣಗಳಿಲ್ಲ. ಬಿಗ್ ಬಾಸ್ ಕನ್ನಡ ಸೀಸನ್ ಹತ್ತರ ಸ್ಪರ್ಧಿ ವರ್ತೂರು ಸಂತೋಷ್ ಬಂಧನದಿಂದ ಆರಂಭವಾದ ಪ್ರಕರಣ ಈಗ ಸ್ಯಾಂಡಲ್‌ವುಡ್‌ನಲ್ಲಿ ಬಿರುಗಾಳಿ ಎಬ್ಬಿಸಿದೆ. ಅರಣ್ಯ ಇಲಾಖೆ ಅಧಿಕಾರಿಗಳು ನಟ, ರಾಜ್ಯ ಸಭಾ ಸದಸ್ಯ ಜಗ್ಗೇಶ್ ಮನೆಯಲ್ಲಿ ಶೋಧ ನಡೆಸಿದ್ದರು.
ಹುಲು ಉಗುರಿನ ಪೆಂಡೆಂಟ್ ಧರಿಸಿದ್ದ ಫೋಟೋ ಮತ್ತು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಬೆನ್ನಲ್ಲೆ ಕರ್ನಾಟಕ ಅರಣ್ಯ ಇಲಾಖೆ ಅಧಿಕಾರಿಗಳು ನಟನ ಮನೆ ಮೇಲೆ ದಾಳಿ ನಡೆಸಿ, ಪರಿಶೀಲನೆ ನಡೆಸಿದ್ದರು. ಅವರಿಗೆ ಬೇಕಾದ ಲಾಕೆಟ್ ನೀಡಿದ್ದೇನೆ ಎಂದು ಮಾಹಿತಿ ಹಂಚಿಕೊಂಡಿದ್ದ ಅವರು, ಈಗ ಪ್ರಕರಣದಲ್ಲಿ ಹೈಕೋರ್ಟ್ ಮೊರೆ ಹೋಗಿದ್ದಾರೆ.

ಅರಣ್ಯಾಧಿಕಾರಿಗಳ ವಿರುದ್ಧ ಹೈಕೋರ್ಟ್ ಮೊರೆ ಹೋದ ಜಗ್ಗೇಶ್
ಹುಲಿ ಉಗುರು ಹೊಂದಿರುವ ಪ್ರಕರಣದಲ್ಲಿ ಮನೆ ಶೋಧ ನಡೆಸಿದ ಅರಣ್ಯಾಧಿಕಾರಿಗಳ ಕ್ರಮವನ್ನು ಪ್ರಶ್ನಿಸಿ ಜಗ್ಗೇಶ್ ಹೈಕೋರ್ಟ್‌ಗೆ ಮನವಿ ಸಲ್ಲಿಸಿದ್ದಾರೆ. ಅರಣ್ಯಾಧಿಕಾರಿಗಳ ಕ್ರಮ ಕಾನೂನುಬಾಹಿರವೆಂದು ಘೋಷಿಸುವಂತೆ ಮನವಿ ಮಾಡಿದ್ದಾರೆ. ಅಲ್ಲದೆ ತಮಗೆ ನೀಡಿರುವ ನೋಟಿಸ್ ರದ್ದುಪಡಿಸುವಂತೆ ಕೋರಿದ್ದಾರೆ.
ನೋಟಿಸ್‌ಗೆ ಉತ್ತರಿಸುವ ಮೊದಲೇ ಅರಣ್ಯಾಧಿಕಾರಿಗಳು ದಾಳಿ ನಡೆಸಿದ್ದಾರೆ ಎಂದು ಆರೋಪಿಸಿರುವ ಅವರು, "ಅರಣ್ಯಾಧಿಕಾರಿಗಳು ನೀಡಿದ ನೋಟಿಸ್ ರದ್ದು ಪಡಿಸಬೇಕು. ನೋಟಿಸ್‌ಗೆ ಉತ್ತರಿಸುವ ಮೊದಲೇ 14 ಮಂದಿ ಅಧಿಕಾರಿಗಳ ತಂಡ ಮನೆ ಮೇಲೆ ದಾಳಿ ನಡೆಸಿದೆ. ಮನೆಯಲ್ಲಿನ ಎಲ್ಲಾ ವಸ್ತುಗಳನ್ನು ಚೆಲ್ಲಾಪಿಲ್ಲಿ ಮಾಡಿದ್ದಾರೆ. ಹಳೆಯ ಸಂದರ್ಶನದಲ್ಲಿ ಹೇಳಿದ ಮಾತುಗಳನ್ನು ಆಧರಿಸಿ ತೇಜೋವಧೆ ಮಾಡಲಾಗಿದೆ. ಅರಣ್ಯ ಇಲಾಖೆ ಅಧಿಕಾರಿಗಳ ಕ್ರಮ ಕಾನೂನುಬಾಹಿರ ಎಂದು ಘೋಷಿಸಬೇಕು" ಎಂದು ನಟ ಜಗ್ಗೇಶ್ ಪರ ವಕೀಲರು ಅರ್ಜಿಯಲ್ಲಿ ತಿಳಿಸಿದ್ದಾರೆ.

ತಲೆತಗ್ಗಿಸುವ ಯಾವ ಕೆಲಸ ಮಾಡಿಲ್ಲಾ ಮಾಡೋದಿಲ್ಲಾ!
ಅರಣ್ಯ ಇಲಾಕೆ ಅಧಿಕಾರಿಗಳ ದಾಳಿ ಬೆನ್ನಲ್ಲೆ ಮಾಹಿತಿ ನೀಡಿದ್ದ ಜಗ್ಗೇಶ್, "ಕಾನೂನು ದೊಡ್ಡದು.. ಅಧಿಕಾರಿಗಳು ಕೇಳಿದ ವಸ್ತು ಒಪ್ಪಿಸಲಾಗಿದೆ!.. ಅಮ್ಮ ನೀಡಿದ ಬಹಳ ಹಳೆಯ ಲಾಕೆಟ್ ಎಂದು ತಿಳಿಸಿರುವೆ! ಎಷ್ಟೋ ದೋಚುವ ಮನುಷ್ಯರು, ಕೊಲೆ ಪಾತಕರು, ದೇಶ ದ್ರೋಹಿಗಳು, ಸಮಾಜ ಘಾತಕರಿಗಿಂತ ನನ್ನ ತಾಯಿ ಕಾಣಿಕೆ ಬಗ್ಗೆ ನೆನ್ನೆಯಿಂದ ತಲೆಕೆಡಿಸಿಕೊಂಡ ದೇವರುಗಳಿಗೆ ಧನ್ಯವಾದ. ತಲೆತಗ್ಗಿಸುವ ಯಾವ ಕೆಲಸ ಮಾಡಿಲ್ಲಾ ಮಾಡೋದಿಲ್ಲಾ! ಪಾಚ್ಕೊಳಿ" ಎಂದು ವ್ಯಂಗ್ಯವಾಗಿ ಉತ್ತರಿಸಿದ್ದರು.
"ಒಂದು ವಿಷಯ ಅದ್ಭುತವಾಗಿ ಅರಿತೆ ಪ್ರೀತಿಸುವವರು 1000 ಜನ ಇದ್ದರು. ವಿಷಯವಿಲ್ಲದೆ ದ್ವೇಷ ಮಾಡುವ 100 ಜನರು ಇದ್ದೆ ಇರುತ್ತಾರೆ! But remember one thing ಒಳ್ಳೆ ಗುಣ ನಡತೆ ಇದ್ದಾಗ ಕೊಲ್ಲೋಕೆ ಸಾವಿರ ಮಂದಿ ಬಂದರು ಕಾಯಲು ಒಬ್ಬ ಬರುತ್ತಾನೆ ಅವನೆ ದೇವರು. ಬದುಕಲ್ಲಿ ಸಾಧ್ಯವಾದರೆ ಒಬ್ಬರಿಗೆ ಒಳ್ಳೆದು ಮಾಡಿ. ಅನ್ಯರಿಗೆ ಕೆಡುಕು ಬಯಸಿ ಬಾಳಿದರೆ ನಾಶ!" ಎಂದು ಹೇಳಿದ್ದರು.
ಈ ಹಿಂದೆ ಸಂದರ್ಶನ ಒಂದರಲ್ಲಿ ನಟ ಜಗ್ಗೇಶ್ ತಮ್ಮ ಕೊರಳಿನಲ್ಲಿದ್ದ ಹುಲಿ ಉಗುರಿನ ಪೆಂಡೆಂಟ್ ತೋರಿಸಿ "ಇದು ನಿಜವಾದ ಹುಲಿ ಉಗುರಿನ ಚೈನ್. ನನ್ನ ತಾಯಿ ನಾನು ಇಪ್ಪತ್ತು ವರ್ಷದವನಿದ್ದಾಗ ನನ್ನ ಮಗ ಹುಲಿಯಂತೆ ಇರಬೇಕು ಎಂದು ನನಗೆ ಉಡುಗೊರೆ ನೀಡಿದ್ದು" ಎಂದು ಹೇಳಿದ್ದರು. ಈಗ ಇದೇ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಜಗ್ಗೇಶ್ ಮೇಲೆ ಕ್ರಮ ತೆಗೆದುಕೊಳ್ಳುವಂತೆ ಸಾಮಾಜಿಕ ಜಾಲತಾಣಗಳಲ್ಲಿ ಒತ್ತಾಯ ಕೇಳಿಬಂದಿತ್ತು.


Click it and Unblock the Notifications











