Jaggesh: ತಲೆತಗ್ಗಿಸುವ ಯಾವ ಕೆಲಸ ಮಾಡಿಲ್ಲಾ ಮಾಡೋದಿಲ್ಲಾ! ಎಂದ ನಟ ಜಗ್ಗೇಶ್
ಬಿಗ್ ಬಾಸ್ ಸ್ಪರ್ಧಿ ವರ್ತೂರು ಸಂತೋಷ್ ಬಂಧನದ ಬಳಿಕ ಕನ್ನಡ ಚಿತ್ರರಂಗದಲ್ಲಿ ಹುಲಿ ಉಗುರಿನ ಪೆಂಡೆಂಟ್ ಸದ್ದು ಮಾಡುತ್ತಿದೆ. ಹಲವು ನಟ, ನಿರ್ಮಾಪಕರ ಫೋಟೋ, ವಿಡಿಯೋಗಳ ಬೆನ್ನಲ್ಲೆ ಅರಣ್ಯ ಇಲಾಖೆ ಅಧಿಕಾರಿಗಳು ನಟರ ಮನೆ ಮೇಲೆ ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ.
ಹುಲಿ ಉಗುರಿನ ಪೆಂಡೆಂಟ್ ಧರಿಸಿದ್ದ ಆರೋಪದ ಮೇಲೆ ನಟ ದರ್ಶನ್ ತೂಗುದೀಪ, ನಿಖಿಲ್ ಕುಮಾರಸ್ವಾಮಿ, ಜಗ್ಗೇಶ್ ಮತ್ತು ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್ ಅವರ ಮನೆ ಮೇಲೆ ಅರಣ್ಯಾಧಿಕಾರಿಗಳು ದಾಳಿ ನಡೆಸಿದ್ದು, ಪರಿಶೀಲನೆ ನಡೆಸಿದ್ದರು. ಇದರ ಬೆನ್ನಲ್ಲೆ ನಟ ಜಗ್ಗೇಶ್ ಪ್ರತಿಕ್ರಿಯೆ ನೀಡಿದ್ದಾರೆ.

ನಟ ಜಗ್ಗೇಶ್ ನಿವಾಸದಲ್ಲೂ ಅಧಿಕಾರಿಗಳ ತಂಡ
ನಟ ಮತ್ತು ಬಿಜೆಪಿ ರಾಜ್ಯಸಭಾ ಸದಸ್ಯ ಜಗ್ಗೇಶ್ ಅವರ ಹುಲಿ ಉಗುರಿನ ವಿಡಿಯೋ ಮತ್ತು ಹಳೆಯ ಫೋಟೋ ವೈರಲ್ ಆಗಿದ್ದು, ಅವರ ಮನೆಗೂ ಕೂಡ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿದ್ದಾರೆ. ಮಲ್ಲೇಶ್ವರದಲ್ಲಿರುವ ಜಗ್ಗೇಶ್ ಮನೆಗೆ ಭೇಟಿ ನೀಡಿ ನೋಟಿಸ್ ನೀಡಿರುವ ಅರಣ್ಯಾಧಿಕಾರಿಗಳು, ಹುಲಿ ಉಗುರು ಧರಿಸಿದ್ದರ ಬಗ್ಗೆ ಮಾಹಿತಿ ಕಲೆಹಾಕಿದ್ದಾರೆ.
ಅಮ್ಮ ನೀಡಿದ ಬಹಳ ಹಳೆಯ ಲಾಕೆಟ್!
ಇದೇ ವೇಳೆ ನಟ ಸಾಮಾಜಿಕ ಮಾಧ್ಯಮಗಳಲ್ಲಿ ನಟ ಜಗ್ಗೇಶ್ ಪ್ರತಿಕ್ರಿಯೆ ನೀಡಿದ್ದು, ತಮ್ಮ ತಾಯಿ ನೀಡಿದ ಕಾಣಿಕೆ ಬಗ್ಗೆ ಮಾತನಾಡಿದವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಜೊತೆಗೆ ತಲೆತಗ್ಗಿಸುವ ಯಾವ ಕೆಲಸ ಮಾಡಿಲ್ಲಾ ಮಾಡೋದಿಲ್ಲಾ ಎಂದು ಹೇಳಿದ್ದಾರೆ.
"ಕಾನೂನು ದೊಡ್ಡದು.. ಅಧಿಕಾರಿಗಳು ಕೇಳಿದವಸ್ತು ಒಪ್ಪಿಸಲಾಗಿದೆ!.. ಅಮ್ಮ ನೀಡಿದ ಬಹಳ ಹಳೆಯ ಲಾಕೆಟ್ ಎಂದು ತಿಳಿಸಿರುವೆ! ಎಷ್ಟೋ ದೋಚುವ ಮನುಷ್ಯರು, ಕೊಲೆ ಪಾತಕರು, ದೇಶದ್ರೋಹಿಗಳು, ಸಮಾಜ ಘಾತಕರಿಗಿಂತ ನನ್ನ ತಾಯಿ ಕಾಣಿಕೆ ಬಗ್ಗೆ ನೆನ್ನೆಯಿಂದ ತಲೆಕೆಡಿಸಿಕೊಂಡ ದೇವರುಗಳಿಗೆ ಧನ್ಯವಾದ. ತಲೆತಗ್ಗಿಸುವ ಯಾವ ಕೆಲಸ ಮಾಡಿಲ್ಲಾ ಮಾಡೋದಿಲ್ಲಾ!ಪಾಚ್ಕೊಳಿ" ಎಂದು ವ್ಯಂಗ್ಯವಾಗಿ ಟೀಕಿಸಿದವರಿಗೆ ಉತ್ತರಿಸಿದ್ದಾರೆ.
ಈ ಹಿಂದೆ ಮಾಧ್ಯಮವೊಂದಕ್ಕೆ ಸಂದರ್ಶನ ನೀಡಿದ್ದ ನಟ ಜಗ್ಗೇಶ್ ತಮ್ಮ ಕೊರಳಿನಲ್ಲಿದ್ದ ಹುಲಿ ಉಗುರಿನ ಪೆಂಡೆಂಟ್ ತೋರಿಸಿ ಇದು ನಿಜವಾದ ಹುಲಿ ಉಗುರು. ನನ್ನ ತಾಯಿ ನಾನು ಇಪ್ಪತ್ತು ವರ್ಷದವನಿದ್ದಾಗ ನನ್ನ ಮಗ ಹುಲಿಯಂತೆ ಇರಬೇಕು ಎಂದು ನನಗೆ ಉಡುಗೊರೆ ನೀಡಿದ್ದು ಎಂದು ಹೇಳಿದ್ದರು. ಈಗ ಇದೇ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಜಗ್ಗೇಶ್ ಮೇಲೆ ಕ್ರಮ ತೆಗೆದುಕೊಳ್ಳುವಂತೆ ಸಾರ್ವಜನಿಕರು ಒತ್ತಾಯಿಸಿದ್ದರು.

ಅರಣ್ಯಾಧಿಕಾರಿಗಳ ಪರಿಶೀಲನೆಗೆ ಪೆಂಡೆಂಟ್ ನೀಡಿದ ಮಾಜಿ ಸಿಎಂ ಕುಮಾರಸ್ವಾಮಿ
ಇನ್ನು, ನಟ ನಿಖಿಲ್ ಕುಮಾರಸ್ವಾಮಿ ಅವರು ಕುಡ ಹುಲು ಉಗುರಿನ ಪೆಂಡೆಂಟ್ ಧರಿಸಿರುವ ಫೋಟೋ ವೈರಲ್ ಆಗಿದೆ. ಇದಕ್ಕೆ ನಟ ಅದು ಅಸಲಿಯಲ್ಲ ಎಂದು ಹೇಳಿದ್ದರು. ಈ ಬಗ್ಗೆ ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಹೇಳಿಕೆ ಬಿಡುಗಡೆ ಮಾಡಿದ್ದು, "ಹುಲಿ ಉಗುರು ರೀತಿಯಲ್ಲಿರುವ ಪೆಂಟೆಂಟ್ ನೈಜವಲ್ಲ. ಅದನ್ನು ಅರಣ್ಯಾಧಿಕಾರಿಗಳು ಪರಿಶೀಲನೆ ಮಾಡಲು ತೆಗೆದುಕೊಂಡು ಹೋಗಿದ್ದಾರೆ. ನಿಖಿಲ್ ಮದುವೆ ಸಂದರ್ಭದಲ್ಲಿ ಕೊರಳಿಗೆ ಹಾಕಿದ್ದ ಪೆಂಡೆಂಟ್ ಅದು" ಎಂದು ಹೇಳಿದ್ದಾರೆ.
ಜೆಪಿ ನಗರದಲ್ಲಿರುವ ಎಚ್ ಡಿ ಕುಮಾರಸ್ವಾಮಿ ನಿವಾಸಕ್ಕೆ ಅರಣ್ಯಾಧಿಕಾರಿಗಳು ಭೇಟಿ ನೀಡಿ ಪೆಂಡೆಂಟ್ ಅನ್ನು ಪರಿಶೀಲನೆ ನಡೆಸಿದ್ದಾರೆ. "ಇವತ್ತು ಬೆಳಗ್ಗಿನಿಂದ ಚಿತ್ರನಟರು, ಜ್ಯೋತಿಷಿಗಳು ಇಟ್ಟಿರುವ ಹುಲಿ ಉಗುರುಗಳ ಪೆಂಡೆಂಟುಗಳ ಬಗ್ಗೆ ಡೊದ್ದ ಮಟ್ಟದಲ್ಲಿ ಚರ್ಚೆ ನಡೆಯುತ್ತಿದೆ. ನನ್ನ ಪುತ್ರ ನಿಖಿಲ್ ಕುಮಾರಸ್ವಾಮಿ ಹೆಸರು ಈ ವಿಷಯದಲ್ಲಿ ಕೇಳಿ ಬಂದಿದೆ. ನಮ್ಮ ಬಳಿ ಇರುವ ಹುಲಿ ಉಗುರು ರೀತಿಯ ಪೆಂಡೆಂಟ್ ಸಿಂಥೆಟಿಕ್‌ನದು. ಸಾಕಷ್ಟು ಜನರ ಬಳಿ ಇಂಥ ಪೆಂಡೆಂಟ್ ಇರುತ್ತದೆ. ನಿಖಿಲ್ ಅವರ ಮದುವೆಯಲ್ಲಿ ಯಾರೋ ಉಡುಗೊರೆ ಕೊಟ್ಟರು ಅಂತ ಹಾಕಿದ್ದು ಬಿಟ್ಟರೆ ಅದು ಬೀರುವಿನಲ್ಲಿ ಬಿದ್ದಿತ್ತು" ಎಂದು ತಿಳಿಸಿದ್ದಾರೆ.


Click it and Unblock the Notifications











