Tiger Claw Pendant: ನಿಖಿಲ್ ಕುಮಾರಸ್ವಾಮಿ ಕೂಡ ಧರಿಸಿದ್ದರು ಹುಲಿ ಉಗುರಿನ ಪೆಂಡೆಂಟ್! ನಟ ಹೇಳಿದ್ದು ಹೀಗೆ
ಬಿಗ್ ಬಾಸ್ ಕನ್ನಡ ಸೀಸನ್ ಹತ್ತರ ಸ್ಪರ್ಧಿ ವರ್ತೂರು ಸಂತೋಷ್ ಅವರು ಹುಲಿ ಉಗುರಿನ ಪೆಂಡೆಂಟ್ ಧರಿಸಿದ್ದಕ್ಕಾಗಿ ಅರಣ್ಯ ಅಧಿಕಾರಿಗಳಿಂದ ಬಂಧನಕ್ಕೆ ಒಳಗಾದ ಬೆನ್ನಲ್ಲೇ ರಾಜ್ಯದಲ್ಲಿ ಬಿಸಿ ಬಿಸಿ ಚರ್ಚೆ ಆರಂಭವಾಗಿದೆ. ಹುಲಿ ಉಗುರು ಧರಿಸಿದ್ದ ಹಲವು ಸೆಲೆಬ್ರಿಟಿಗಳನ್ನು ಸಾರ್ವಜನಿಕರು ತರಾಟೆಗೆ ತೆಗೆದುಕೊಂಡಿದ್ದಾರೆ.
ಅದರಲ್ಲೂ ಸಾರ್ವಜನಿಕವಾಗಿ ನಟರಾದ ದರ್ಶನ್ ತೂಗುದೀಪ, ನಿಖಿಲ್ ಕುಮಾರಸ್ವಾಮಿ, ನಟ, ರಾಜಕಾರಣಿ ಜಗ್ಗೇಶ್ ಮತ್ತು ಜ್ಯೋತಿಷಿ ವಿನಯ್ ಗುರೂಜಿ ಸೇರಿದಂತೆ ಹಲವರು ಇದೇ ರೀತಿಯ ಲಾಕೆಟ್‌ಗಳನ್ನು ಧರಿಸಿದ್ದಕ್ಕಾಗಿ ಟೀಕೆಗೆ ಒಳಗಾಗಿದ್ದಾರೆ. ಇದರಿಂದಾಗಿ ವಿವಿಧ ಸಂಘಟನೆಗಳು ಇವರ ವಿರುದ್ಧ ದೂರುಗಳನ್ನು ದಾಖಲಿಸಿದೆ. ಸದ್ಯ ನಟ ನಿಖಿಲ್ ಕುಮಾರಸ್ವಾಮಿ ಕೂಡ ಈ ವಿವಾದಕ್ಕೆ ಒಳಗಾಗಿದ್ದು ಸ್ಪಷ್ಟನೆ ನೀಡಿದ್ದಾರೆ.

ಹುಲಿ ಉಗುರು: ನಟ ನಿಖಿಲ್ ಕುಮಾರಸ್ವಾಮಿ ಸ್ಪಷ್ಟನೆ
ಹುಲಿ ಉಗುರಿನ ಪೆಂಡೆಂಟ್ ಧರಿಸಿದ್ದಾರೆ ಎಂದು ನಟ ನಿಖಿಲ್ ಕುಮಾರಸ್ವಾಮಿ ಅವರ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ. ಇದೆ ವಿಷಯಕ್ಕೆ ಪ್ರತಿಕ್ರಿಯೆ ನೀಡಿರುವ ಅವರು, ನಕಲಿ ಎಂದು ಸ್ಪಷ್ಟನೆ ನೀಡಿದ್ದಾರೆ. ಜೊತೆಗೆ ತನಿಖೆಗೆ ಸಹಕರಿಸುವುದಾಗಿ ಹೇಳಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ನಿಖಿಲ್ ಕುಮಾರಸ್ವಾಮಿ, "ತಮ್ಮ ಮದುವೆ ಸಮಯದಲ್ಲಿ ನಿಖಿಲ್ ಕುಮಾರಸ್ವಾಮಿ ಅವರು ಹುಲಿ ಉಗುರಿನ ಪೆಂಡೆಂಟ್ ಧರಿಸಿದ್ದರು ಎಂದು ಕೆಲ ಮಾಧ್ಯಮಗಳಲ್ಲಿ ವರದಿ ಮಾಡಲಾಗಿದೆ. ಇದು ಸತ್ಯಕ್ಕೆ ದೂರ. ವನ್ಯಜೀವಿ ಸಂರಕ್ಷಣಾ ಕಾಯ್ದೆ, ಅದರ ಗಂಭೀರತೆ ಬಗ್ಗೆ ನನಗೆ ಖಂಡಿತಾ ಅರಿವಿದೆ" ಎಂದಿದ್ದಾರೆ.
"ನಾನು ಧರಿಸಿದ್ದ ಹುಲಿ ಉಗುರು ಮಾದರಿಯ ಪೆಂಡೆಂಟ್ ಕೃತಕವಾದದ್ದೇ ಹೊರತು ನೈಜವಾದುದ್ದಲ್ಲ. ಅದನ್ನು ನನ್ನ ಮದುವೆ ಸಮಯದಲ್ಲಿ ಉಡುಗೋರೆ ನೀಡಿದ್ದು. ಅದು ಈಗಲೂ ನನ್ನ ಬಳಿ ಇದೆ. ಸಂಬಂಧಪಟ್ಟ ಅಧಿಕಾರಿಗಳು ಪರಿಶೀಲಿಸಬಹುದು. ದಯಮಾಡಿ ಯಾರೂ ಸತ್ಯಕ್ಕೆ ದೂರವಾದ ಸುದ್ದಿಗಳನ್ನು ಪ್ರಸಾರ ಮಾಡಬಾರದು ಎಂದು ವಿನಂತಿ ಮಾಡಿಕೊಳ್ಳುತ್ತೇನೆ" ಎಂದು ಮನವಿ ಮಾಡಿದ್ದಾರೆ.

ನಟ ದರ್ಶನ್ ವಿರುದ್ಧ ದೂರ ದಾಖಲು
ಬೆಂಗಳೂರಿನ ಬಿಗ್ ಬಾಸ್ ಸೆಟ್‌ನಲ್ಲಿ ಹುಲಿ ಉಗುರುಗಳಿಂದ ತಯಾರಿಸಿದ ಪೆಂಡೆಂಟ್ ಧರಿಸಿ ಕಾರಣ ಬಿಗ್ ಬಾಸ್ ಮನೆಯಿಂದಲೇ ಅರಣ್ಯ ಇಲಾಖೆ ಅಧಿಕಾರಿಗಳು ವರ್ತೂರ್ ಸಂತೋಷ್ ವಿರುದ್ಧ ಕ್ರಮ ಕೈಗೊಂಡಿದ್ದಾರೆ. ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾದ ಬಳಿಕ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಈ ಘಟನೆಯ ಬೆನ್ನಲ್ಲೆ ದರ್ಶನ್ ತೂಗುದೀಪ, ನಟ, ರಾಜಕಾರಣಿ ಜಗ್ಗೇಶ್ ಮತ್ತು ಜೆಡಿಎಸ್ ನಾಯಕ ನಿಖಿಲ್ ಕುಮಾರಸ್ವಾಮಿ, ರಾಕ್‌ಲೈನ್ ವೆಂಕಟೇಶ್ ಸೇರಿದಂತೆ ಹಲವು ಸೆಲಬ್ರಿಟಿಗಳು ಹುಲಿ ಉಗುರಿನ ಪೆಂಡೆಂಟ್‌ಗಳನ್ನು ಹಾಕಿದ್ದು ಫೋಟೋಗಳು, ವಿಡಿಯೋಗಳು, ಮಿಮ್ಸ್‌ಗಳು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿವೆ.
ಈ ವೈರಲ್ ಚಿತ್ರಗಳಿಗೆ ಪ್ರತಿಕ್ರಿಯೆಯಾಗಿ, ನಟ ದರ್ಶನ್, ವಿನಯ್ ಗುರೂಜಿ, ಜಗ್ಗೇಶ್ ಮತ್ತು ಹಲವಾರು ಪ್ರಸಿದ್ಧ ವ್ಯಕ್ತಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಅನೇಕ ಸಂಘಟನೆಗಳು ಅರಣ್ಯ ಇಲಾಖೆಗೆ ಔಪಚಾರಿಕ ದೂರು ಸಲ್ಲಿಸಿವೆ. ಇವರ ವಿರುದ್ಧವೂ ಕೂಡ ವರ್ತೂರು ಸಂತೋಷ್ ಅವರ ಮೇಲೆ ಕ್ರಮ ಕೈಗೊಂಡಂತೆ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ. ಜನ ಸಾಮಾನ್ಯರಿಗೂ ಮತ್ತು ಸೆಲಬ್ರಿಟಿಗಳಿಗೀ ಒಂದೇ ಕಾನೂನು ಇರಬೇಕು ಎಂದು ಆಗ್ರಹಿಸಿದ್ದಾರೆ.


Click it and Unblock the Notifications











