ಹುಲಿ ಉಗುರು ವಿವಾದ: ನಟ ದರ್ಶನ್, ಜಗ್ಗೇಶ್ ಮನೆ ಮೇಲೆ ಅರಣ್ಯಾಧಿಕಾರಿಗಳ ದಾಳಿ, ಪರಿಶೀಲನೆ
ರಾಜ್ಯದಲ್ಲಿ ಈಗ ಹುಲಿ ಉಗುರಿನ ಪೆಂಡೆಂಟ್‌ನದ್ದೇ ಸುದ್ದಿ. ಬಿಗ್ ಬಾಸ್ ಕನ್ನಡ ಸೀಸನ್ ಹತ್ತರ ಸ್ಪರ್ಧಿ ವರ್ತೂರು ಸಂತೋಷ್ ಬಂಧನದ ಬಳಿಕ ಇದು ಚಿತ್ರರಂಗದಲ್ಲೂ ಭಾರಿ ಆತಂಕಕ್ಕೆ ಕಾರಣವಾಗಿದ್ದು, ಹಲವು ಸೆಲಬ್ರಿಟಿಗಳು ಇದರಿಂದ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಸದ್ಯ ಹುಲಿ ಉಗುರಿನ ಪೆಂಡೆಂಟ್ ಧರಿಸಿದ್ದ ಆರೋಪದ ಮೇಲೆ ನಟ ದರ್ಶನ್ ತೂಗುದೀಪ ಅವರ ಮನೆಗೆ ಅರಣ್ಯಾಧಿಕಾರಿಗಳು ದಾಳಿ ನಡೆಸಿದ್ದು, ಪರಿಶೀಲನೆ ಮಾಡುತ್ತಿದ್ದಾರೆ.
ಇದರ ಜೊತೆಗೆ ನಟ, ರಾಜಕಾರಣಿ ಜಗ್ಗೇಶ್ ಅವರು ಕೂಡ ಹುಲಿ ಉಗುರು ಧರಿಸಿದ್ದ ಆರೋಪ ಎದುರಿಸುತ್ತಿದ್ದು ಅವರ ಮನೆಗೂ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಲಿದ್ದಾರೆ. ವರ್ತೂರು ಸಂತೋಷ್ ಬಂಧನದ ಬಳಿಕ ಹುಲಿ ಉಗುರು ಧರಿಸಿದ ಹಲವು ಸೆಲೆಬ್ರಿಟಿಗಳ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ನಟ ದರ್ಶನ್ ತೂಗುದೀಪ ಮನೆ ಮೇಲೆ ದಾಳಿ
ಅಕ್ಟೋಬರ್ 25 ರಂದು ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿ ಇರುವ ನಟ ದರ್ಶನ್ ಅವರ ಮೇಲೆ ಅರಣ್ಯ ಇಲಾಖೆ ಅಧಿಕಾರಿಗಳು ದಾಳಿ ಮಾಡಿ ಪರಿಶೀಲನೆ ನಡೆಸುತ್ತಿದ್ದಾರೆ. ಬಿಗ್ ಬಾಸ್ ಕನ್ನಡ ರಿಯಾಲಿಟಿ ಶೋನ ಸ್ಪರ್ಧಿ ವರ್ತೂರು ಸಂತೋಷ್ ಅವರನ್ನು ಹುಲಿ ಉಗುರು ಪೆಂಡೆಂಟ್ ಧರಿಸಿದ ಆರೋಪದ ಮೇಲೆ ಭಾನುವಾರ ಬಿಗ್ ಬಾಸ್ ಮನೆಯಿಂದಲೇ ಅವರನ್ನು ಬಂಧಿಸಿದ ಕೆಲವೇ ದಿನಗಳಲ್ಲಿ ಅರಣ್ಯ ಇಲಾಖೆ ಈ ಕ್ರಮ ಕೈಗೊಂಡಿದೆ. ವರ್ತೂರು ಸಂತೋಷ್ ಅವರನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ.
ನಟ ದರ್ಶನ್ ಬಳಿ ಇರುವುದು ನಿಜವಾದ ಹುಲಿ ಉಗುರು ಹೌದೋ ಅಥವಾ ಅಲ್ಲವೋ ಎಂಬುದು ಇನ್ನು ಗೊತ್ತಾಗಬೇಕಿದೆ. ಬೆಂಗಳೂರಿನ ಆರ್ ಎಫ್‌ಒ ಸೇರಿದಂತೆ ಮೂವರು ಅಧಿಕಾರಿಗಳು ದರ್ಶನ್ ಮನೆಗೆ ಭೇಟಿ ನೀಡಿದ್ದು ಮಾಹಿತಿ ಸಂಗ್ರಹಿಸುತ್ತಿದ್ದಾರೆ. ಒಂದು ವೇಳೆ ದರ್ಶನ್ ಮನೆಯಲ್ಲಿ ಹುಲಿಯುಗುರು ಲಾಕೆಟ್ ಪತ್ತೆಯಾದರೆ ಅವರನ್ನು ವಶಕ್ಕೆ ಪಡೆಯುವ ಸಾಧ್ಯತೆ ಇದೆ.

ರಾಜಕಾರಣಿ, ನಟ ಜಗ್ಗೇಶ್ ನಿವಾಸದಲ್ಲೂ ಪರಿಶೀಲನೆ
ಇನ್ನು ನಟ ಮತ್ತು ಬಿಜೆಪಿ ರಾಜ್ಯಸಭಾ ಸದಸ್ಯ ಜಗ್ಗೇಶ್ ಅವರ ಹುಲಿ ಉಗುರಿನ ವಿಡಿಯೋ ವೈರಲ್ ಆಗಿದ್ದು, ಅವರ ಮನೆಗೂ ಕೂಡ ಅರಣ್ಯಾಧಿಕಾರಿಗಳು ಭೇಟಿ ನೀಡಿದ್ದಾರೆ. ಮಲ್ಲೇಶ್ವರದಲ್ಲಿರುವ ಜಗ್ಗೇಶ್ ಮನೆಗೆ ಭೇಟಿ ನೀಡಿ ನೋಟಿಸ್ ನೀಡಿರುವ ಅರಣ್ಯಾಧಿಕಾರಿಗಳು, ಹುಲಿ ಉಗುರು ಧರಿಸಿದ್ದರ ಬಗ್ಗೆ ಮಾಹಿತಿ ಕಲೆಹಾಕುತ್ತಿದ್ದಾರೆ.
ಈ ಹಿಂದೆ ಮಾಧ್ಯಮವೊಂದಕ್ಕೆ ಸಂದರ್ಶನ ನೀಡುವ ಸಂದರ್ಭದಲ್ಲಿ ನಟ ಜಗ್ಗೇಶ್ ತಮ್ಮ ಕೊರಳಿನಲ್ಲಿದ್ದ ಹುಲಿ ಉಗುರಿನ ಲಾಕೆಟ್ ಅನ್ನು ತೋರಿಸಿ ಇದು ನಿಜವಾದ ಹುಲಿಯುಗುರು ನನ್ನ ತಾಯಿ ನಾನು ಇಪ್ಪತ್ತು ವರ್ಷದವನಿದ್ದಾಗ ನನ್ನ ಮಗ ಹುಲಿಯಂತೆ ಇರಬೇಕು ಎಂದು ನನಗೆ ನೀಡಿದ್ದು ಎಂದು ಹೇಳಿದ್ದರು. ಈಗ ಇದೇ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಜಗ್ಗೇಶ್ ಮೇಲೆ ಕ್ರಮ ತೆಗೆದುಕೊಳ್ಳುವಂತೆ ಸಾರ್ವಜನಿಕರು ಒತ್ತಾಯಿಸಿದ್ದರು.
ಇನ್ನು, ಹುಲಿ ಉಗುರಿನ ವಿವಾದಕ್ಕೆ ಸಂಬಂಧಿಸಿದಂತೆ ಕರ್ನಾಟಕದ ಪರಿಸರ ಮತ್ತು ಅರಣ್ಯ ಸಚಿವ ಈಶ್ವರ ಖಂಡ್ರೆ ಮಾತನಾಡಿ, ಇಲ್ಲಿನ ಕಾನೂನು ಯಾವುದೇ ತಾರತಮ್ಯವಿಲ್ಲದೆ ಎಲ್ಲರಿಗೂ ಅನ್ವಯಿಸುತ್ತದೆ ಮತ್ತು ಸರ್ಕಾರವು ಕಾನೂನಿನಂತೆ ಕಾರ್ಯನಿರ್ವಹಿಸುತ್ತದೆ. ಸೆಲೆಬ್ರಿಟಿಗಳು ಮತ್ತು ಇತರರ ವಿರುದ್ಧ ದೂರುಗಳು ಬಂದಿದ್ದರೇ, ಅವರು ಹುಲು ಉಗುರನ್ನು ಹೊಂದಿದ್ದರೆ ತನಿಖೆ ನಡೆಸಲು ಕರ್ನಾಟಕ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳ ತಂಡವು ವಿವಿಧ ಸ್ಥಳಗಳಿಗೆ ಭೇಟಿ ನೀಡಲಿದೆ ಎಂದು ಬುಧವಾರ ತಿಳಿಸಿದ್ದರು.


Click it and Unblock the Notifications











