"ಯಾರೋ ಕಿತ್ತೋದ್ ನನ್ಮಗ ಟಿವಿಯಲ್ಲಿ ತಗಲಾಕೊಂಡ"; ಹಳ್ಳಿಕಾರ್, ಹುಲಿ ಉಗುರಿನ ಬಗ್ಗೆ ಮೌನ ಮುರಿದ ಜಗ್ಗೇಶ್?
ನವರಸ ನಾಯಕ ಜಗ್ಗೇಶ್ ಏನೇ ಹೇಳಬೇಕು ಅಂದರೂ ಓಪನ್ ಆಗಿ ಮಾತಾಡುತ್ತಾರೆ. ತಮ್ಮ ನೇರ ನುಡಿಗಳಿಂದಲೇ ಆಗಾಗ ಜಗ್ಗೇಶ್ ಚಾಟಿ ಏಟು ಬೀಸುತ್ತಿರುತ್ತಾರೆ. ಇತ್ತೀಚೆಗೆ ಜಗ್ಗೇಶ್ ಹುಲಿ ಉಗುರು ವಿವಾದದಲ್ಲಿ ಸಿಕ್ಕಿಕೊಂಡಿದ್ದರು. ಆ ವೇಳೆ ಜಗ್ಗೇಶ್ ಈ ಪ್ರಕರಣದ ಬಗ್ಗೆ ಓಪನ್ ಆಗಿ ಮಾತಾಡಿರಲಿಲ್ಲ. ಈಗ ಜಗ್ಗೇಶ್ ತಮ್ಮ 'ರಂಗನಾಯಕ' ಸಿನಿಮಾದ ಎರಡನೇ ಹಾಡನ್ನು ರಿಲೀಸ್ ಮಾಡುವ ವೇಳೆ ಮಾತಾಡಿದ್ದಾರೆ.
'ರಂಗನಾಯಕ' ವೇದಿಕೆ ಮೇಲೆ ಜಗ್ಗೇಶ್ ಹುಲಿ ಉಗುರು ವಿವಾದ ಬಗ್ಗೆ ತಮ್ಮದೇ ಶೈಲಿಯಲ್ಲಿ ವಿವರಣೆ ಕೊಟ್ಟಿದ್ದಾರೆ. ಖಾಸಗಿ ವಾಹಿನಿಯ ಸಂದರ್ಶನವೊಂದರಲ್ಲಿ ಜಗ್ಗೇಶ್ ಹುಲಿ ಉಗುರು ಕೊಟ್ಟಿದ್ದನ್ನು ಹೆಮ್ಮೆಯಿಂದ ಹೇಳಿಕೊಂಡಿದ್ದರು ಹುಲಿ ಉಗುರು ವಿವಾದ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆ ಆ ವಿಡಿಯೋ ವೈರಲ್ ಆಗಿತ್ತು. ಅದನ್ನೇ ಇಟ್ಟುಕೊಂಡು ಜಗ್ಗೇಶ್ ಅವರ ಹುಲಿ ಉಗುರನ್ನು ವಶಕ್ಕೆ ಪಡೆದಿದ್ದರು.

ಆ ವೇಳೆ ಜಗ್ಗೇಶ್ ಹುಲಿ ಉಗುರು ವಿವಾದದ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಆಕ್ರೋಶ ಹೊರಹಾಕಿದ್ದರು. ಆದರೆ, ಆ ಘಟನೆಯ ಬಗ್ಗೆ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿರಲಿಲ್ಲ. ಈಗ 'ರಂಗನಾಯಕ' ವೇದಿಕೆ ಮೇಲೆ ಹುಲಿ ಉಗುರು ವಿವಾದ ಹಾಗೂ ವರ್ತೂರು ಸಂತೋಷ್ ಸಿಕ್ಕಿಕೊಂಡಿದ್ದರ ಬಗ್ಗೆ ಮಾತಾಡಿದ್ದಾರೆ. ಅಷ್ಟಕ್ಕೂ ವೇದಿಕೆ ಮೇಲೆ ಜಗ್ಗೇಶ್ ಮಾತಾಡಿದ ಝಲಕ್ ಇಲ್ಲಿದೆ.
"ಬದುಕಿದ್ದಾಗ ಒಳ್ಳೆಯದು ಬರೀಬೇಕು"
"40ನೇ ವರ್ಷದ ಸಿನಿಮಾ ಜರ್ನಿ, ಎಂತಹ ಬ್ಯೂಟಿಫುಲ್ ಜರ್ನಿ ಅದು ಅಂದರೆ ಎಂತಹದ್ರಿ.. ನಾನು ಸತ್ತು ಹೋದ್ಮೇಲೆ ಜಗ್ಗೇಶ್ ಎಂತಹ ನಟ. ಏನೇನು ಸಿನಿಮಾ ಮಾಡಿದ ಸತ್ತು ಹೋಗ್ಬಿಟ್ಟ ಅಂತ ಬರೆದರೆ, ನನಗೇನು ಗೊತ್ತಾಗುತ್ತಾ ಬದನೆಕಾಯಿ? ಬದುಕಿದ್ದಾಗ ಒಳ್ಳೆಯದು ಬರೀಬೇಕು. ನಮ್ಮ ಅಮ್ಮ ಹುಲಿ ಉಗುರು ಕೊಟ್ಟಿದ್ಲು. ಯಾರೋ ಪುಣ್ಯಾತ್ಮ ಜಗ್ಗೇಶ್ ಸರ್‌ಗೊಂದು ಕ್ಯಾಮರಾ ಬಿಡಿ, ನನಗೊಂದು ಬಿಡಿ ಅಂತಿದ್ದ. ನಾನು ನನ್ನ 40 ವರ್ಷದ ಜರ್ನಿ ಬಗ್ಗೆ ಸಖತ್ ಆಗಿ ಏನೋ ಮಾಡುತ್ತಿದ್ದಾನೆ ಅಂತ ನಾನು ನನ್ನ ಮನಸ್ಸೋ ಇಚ್ಚೆ ಸತ್ಯವನ್ನೇ ಹೇಳಿದೆ." ಎಂದು ಆ ದಿನದ ಘಟನೆಯನ್ನು ಜಗ್ಗೇಶ್ ವಿವರಿಸಿದ್ದಾರೆ.

"ಹುಲಿತರ ಬದುಕು ಅಂತ ಅಮ್ಮ ಕೊಟ್ಟಿದ್ರು"
ಜಗ್ಗೇಶ್ ಅಮ್ಮ ಮಗನಿಗೆ ಹುಲಿತರ ಬದುಕು ಅಂತ ಹುಲಿ ಉಗುರು ಕೊಟ್ಟಿದ್ದಾಗಿ ಹೇಳಿಕೊಂಡಿದ್ದಾರೆ. ಇಷ್ಟೇ ಅಲ್ಲದೇ ವರ್ತೂರು ಸಂತೋಷ್ ಸಿಕ್ಕಿಕೊಂಡಿದ್ದರಿಂದ ಇಷ್ಟೆಲ್ಲ ರಾದ್ಧಾಂತ ಆಯ್ತು ಎಂದು ಜಗ್ಗೇಶ್ ಪರೋಕ್ಷವಾಗಿ ಹೇಳಿದ್ದಾರೆ. "ನಾನು ನಮ್ಮ ತಾಯಿ ಅವರು ಮಗನೇ ಹುಲಿತರ ಬದುಕೋ ನೀನು ಅಂತ ಹುಲಿ ಉಗುರು ಕೊಟ್ಟಿದ್ದರು ಅಂತ ನಾನು ಹೆಮ್ಮೆಯಿಂದ ಹೇಳಿದೆ. ಅವನು ಯಾರೋ ಕಿತ್ತೋದ್ ನನ್ಮಗ ರಿಯಲ್ ಆಗಿ ಹಾಕೊಂಡು, ಅದೇನೋ ಆಗಿ ಟಿವಿಯಲ್ಲಿ ತಗಲಾಕೊಂಡಿದ್ದಾನೆ. ಇಲ್ಲಿರೋ ಅಷ್ಟೂ ಕ್ಯಾಮರಾಗಳೂ ನನ್ನ ಮನೆ ಮುಂದೆ ಇತ್ತು." ಎಂದು ನವರಸ ನಾಯಕ ಆದಿನವನ್ನು ನೆನಪಿಸಿಕೊಂಡಿದ್ದಾರೆ.
"ನಾನು ಮಾತೃಪ್ರೇಮಿ"
"ನಾನು ನಮ್ಮ ಅಮ್ಮನ ಬಗ್ಗೆ ನಾನು ಪ್ರೀತಿಯಿಂದ ಹೇಳಿದ್ದೆ. ಯಾಕಂದ್ರೆ ನಾನು ಮಾತೃಪ್ರೇಮಿ. ನಾನು ನನ್ನ ತಾಯಿ ಅಂದ್ರೆ ಸತ್ತು ಹೋಗಿಬಿಡ್ತೀನಿ. ಅಂತಹ ಪ್ರೇಮಿ ನಾನು. ನಾನು ನನ್ನ ತಾಯಿ ಬಗ್ಗೆ ಹೇಳಿದ್ದೆ. ಈ ಬಗ್ಗೆ ಕಾನೂನಿನಲ್ಲಿ ಇದೆ. ಆದರೆ, ಯಾರಿಗೂ ಪ್ರಜ್ಞೆ ಇಲ್ಲ. ಹೇಳ್ಬೇಕಲ್ವಾ? ಇತರ ಇರಬಾರದು ಅಂತ ಯಾರು ಹೇಳಿರಲಿಲ್ಲ. ನಾನು ನನ್ನ ಪಾಡಿಗೆ ಇದ್ದೆ." ಎಂದು ಜಗ್ಗೇಶ್ ಹೇಳಿದ್ದಾರೆ.
ಭಯ ಪಟ್ಟ ಹೆಂಡ್ತಿ ಹೇಳಿದ್ದೇನು?
ಹುಲಿ ಉಗುರು ವಶಕ್ಕೆ ಪಡೆಯುವುದಕ್ಕೆ ಜಗ್ಗೇಶ್ ಅವರ ಮನೆಗೆ ಬಂದಾಗ ಪತ್ನಿ ಪರಿಮಳಾ ಜಗ್ಗೇಶ್ ಭಯ ಪಟ್ಟುಕೊಂಡಿದ್ದರಂತೆ. ಅದನ್ನು ಅಷ್ಟೇ ಸ್ವಾರಸ್ಯಕರವಾಗಿ ವಿವರಿಸಿದ್ದಾರೆ. "ಅಧಿಕಾರಿಗಳು ಮನೆಗೆ ಬಂದಾಗ ನಾನು ಇರಲಿಲ್ಲ. ನನ್ನ ಹೆಂಡ್ತಿ ಇದ್ದರು. ಪಾಪ ಅವರೆಲ್ಲ ಭಯಸ್ತರು. ಜಗ್ಗಿ ವಾಟ್ ಶುಡ್ ಐ ಡು ಅಂತ ಫೋನ್ ಮಾಡಿ ಕೇಳಿದ್ಲು. ಅವ ಬಂದಾಗ ಕೊಡುವುದನ್ನು ಬಿಟ್ಟು ಬೈಯಿಸಿಕೊಳ್ಳುತ್ತೀಯ ಅಂದೆ." ಎಂದು ಹುಲಿ ಉಗುರನ್ನು ಅಧಿಕಾರಿಗಳಿಗೆ ಒಪ್ಪಿಸಿರುವ ಬಗ್ಗೆ ಹೇಳಿಕೊಂಡಿದ್ದಾರೆ.


Click it and Unblock the Notifications











