ಬಂಟ್ವಾಳದ ಟಿಕ್‌ಟಾಕ್ ಕಮಲಜ್ಜಿ ನಿಧನ
ದಕ್ಷಿಣ ಕನ್ನಡದ ಬಂಟ್ವಾಳ ಬಳಿಯ ಅನಂತಾಡಿ ಗ್ರಾಮದ ನಿವಾಸಿ ಆಗಿದ್ದ ಟಿಕ್ ಟಾಕ್ ಅಜ್ಜಿ ಅಲಿಯಾಸ್ ಕಮಲಜ್ಜಿ ನಿನ್ನೆ ನಿಧನರಾಗಿದ್ದಾರೆ.
ಕಮಲಾ ಅಥವಾ ಕಮಲಜ್ಜಿ ಎಂದು ಕರೆಯಲಾಗುತ್ತಿದ್ದ ಇವರು ಕಳೆದ ಕೆಲವು ದಿನಗಳಿಂದ ವಯೋಸಹಜ ಖಾಯಿಲೆಯಿಂದ ಬಳಲುತ್ತಿದ್ದರು. ಅವರನ್ನು ಆಸ್ಪತ್ರೆಗೆ ದಾಖಲಿಸಿ ಐಸಿಯುನಲ್ಲಿಟ್ಟು ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಕಮಲಜ್ಜಿ ನಿನ್ನೆ ನಿಧನ ಹೊಂದಿದ್ದಾರೆ.
ಕಮಲಜ್ಜಿ ತಮ್ಮ ಮೊಮ್ಮಗ ಧನರಾಜ್ ಜೊತೆ ಸೇರಿ ಟಿಕ್‌ಟಾಕ್ ವಿಡಿಯೋಗಳಲ್ಲಿ ನಟಿಸುತ್ತಿದ್ದರು. ಕಮಲಜ್ಜಿ ಕುಟುಂಬವೇ ಟಿಕ್‌ಟಾಕ್ ವಿಡಿಯೋಗಳಲ್ಲಿ ಪ್ರತಿಭಾ ಪ್ರದರ್ಶನ ಮಾಡುತ್ತಿತ್ತು. ಇವರ ಕುಟುಂಬವನ್ನು ಟಿಕ್ ಟಾಕ್ ಕುಟುಂಬವೆಂದೇ ಕರೆಯಲಾಗುತ್ತಿತ್ತು.

ಟಿಕ್‌ಟಾಕ್ ಬಳಿಕ ಇನ್‌ಸ್ಟಾಗ್ರಾಂ ರೀಲ್‌ಗಳಲ್ಲಿ ನಟಿಸಲು ಆರಂಭಿಸಿದರು ಅಜ್ಜಿ ಮತ್ತು ಮೊಮ್ಮಗ. ವಿಡಿಯೋಗಳಲ್ಲಿ ಅಜ್ಜಿ ಮಾತನಾಡುತ್ತಿದ್ದ ವೇಗ, ಚುರುಕಿನಿಂದ ಭಾಗವಹಿಸುತ್ತಿದ್ದ, ನಟಿಸುತ್ತಿದ್ದ ಪರಿ ಹಲವರಿಗೆ ಇಷ್ಟವಾಗಿತ್ತು. ಅಜ್ಜಿಗೆ ಪ್ರತ್ಯೇಕ ಅಭಿಮಾನಿ ಬಳಗವೇ ಹುಟ್ಟಿಕೊಂಡಿತ್ತು.
ಇದೀಗ ಕಮಲಜ್ಜಿ ನಿಧನ ಹೊಂದಿರುವುದಕ್ಕೆ ಹಲವರು ಸಂತಾಪ ವ್ಯಕ್ತಪಡಿಸಿದ್ದಾರೆ. ಬಂಟ್ವಾಳ ಶಾಸಕ ರಮೇಶ್ ನಾಯಕ್, ಬಂಟ್ವಾಳ ಬಿಜೆಪಿ ಮಂಡಲ ಅಧ್ಯಕ್ಷ ದೇವಪ್ಪ ಪೂಜಾರಿ, ವಿಟ್ಲ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಸನತ್ ಕುಮಾರ್ ರೈ ಇನ್ನೂ ಹಲವರು ಸಂತಾಪ ಸೂಚಿಸಿದ್ದಾರೆ.


Click it and Unblock the Notifications











