'ಅಗತ್ಯಕ್ಕೆ ತಕ್ಕಷ್ಟು ಹಣ ಇದ್ದರೆ ಸಾಕು, ಅನಗತ್ಯ ಖರ್ಚು ಯಾಕೆ'- ಕನ್ನಡತಿ ರಂಜಿನಿ ರಾಘವನ್ ಕಂಡಂತೆ ಬದುಕು...!
ಒಂದಲ್ಲ.. ಎರಡಲ್ಲ.. ಹತ್ ಹತ್ರ ಐದು ವರ್ಷ ಪ್ರಸಾರವಾದ ಪುಟ್ಟಗೌರಿ ಮದುವೆ ಧಾರಾವಾಹಿಯ ಮೂಲಕ ಖ್ಯಾತಿಯ ಶಿಖರಕ್ಕೇರಿದವರು ರಂಜಿನಿ ರಾಘವನ್. ಆರಂಭದಿಂದ ಇಲ್ಲಿವರೆಗೆ ಬಹುತೇಕ ಸಾಂಪ್ರದಾಯಿಕ ಕಾಸ್ಟೂಮ್‌ಗಳಲ್ಲಿಯೇ ಕಾಣಿಸಿಕೊಂಡ ರಂಜನಿ ರಾಘವನ್ ಹೆಂಗಳೆಯರ ಪಾಲಿಗೆ ಮನೆ ಮಗಳು.
ಕೇವಲ ನಾಯಕಿಯಾಗಿಯಷ್ಟೇ ಅಲ್ಲದೇ ಕಥೆಗಾರ್ತಿಯಾಗಿರುವ ರಂಜನಿ ಕಥೆ ಡಬ್ಬಿ ಎಂಬ ಕಥಾಸಂಕಲನದ ರೂವಾರಿ ಕೂಡ ಹೌದು. ಯುವ ಸಾಹಿತ್ಯ ರತ್ನ ಕೂಡ ಹೌದು. ಇಂಥಾ ರಂಜನಿ ರಾಘವನ್ ಕೆಲ ದಿನಗಳ ಹಿಂದೆ ತಮ್ಮ ಕೈ ಹಿಡಿಯಲಿರುವ ಹುಡುಗ ಸಾಗರ್ ಭಾರದ್ವಾಜ್ ಅವರನ್ನು ಪರಿಚಯಿಸಿದ್ದರು. ಅವರಿವರ ಬಾಯಿಗೆ ಆಹಾರವಾಗುವ ಬದಲು, ನಮ್ಮ ಕಥೆ ನಿಮ್ಮ ಜೊತೆ ಹಂಚಿಕೊಂಡಿದ್ದೇನೆ ಎಂದು ತಮ್ಮ ಪ್ರೀತಿಯ ವಿಚಾರವನ್ನೂ ಹಂಚಿಕೊಂಡಿದ್ದರು. ಇದೀಗ ಜೀವನದ ಕುರಿತು ರಂಜನಿ ತಮ್ಮ ಮಾತುಗಳನ್ನೂ ಹಂಚಿಕೊಂಡಿದ್ದಾರೆ.

ಹೌದು, ನ್ಯಾಷನಲ್ ಟಿವಿಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ರಂಜನಿ, ನೆಮ್ಮದಿಯ ಬದುಕು ನಡೆಸಲು ಅಗತ್ಯಕ್ಕೆ ಸಾಕಾಗುವಷ್ಟು ಹಣ ಇದ್ದರೆ ಸಾಕು ಎಂದಿದ್ದಾರೆ. ನನಗೆ ಮತ್ತು ನಮ್ಮವರ ಅಗತ್ಯತೆಗಳಿಗೆ ತಕ್ಕಂತೆ ಬೇಕಾದಷ್ಟು ಹಣ ನಮ್ಮ ಬಳಿ ಇದ್ದರೆ ಸಾಕು ಎಂದಿರುವ ರಂಜನಿ, ಊಟ, ತಿಂಡಿ, ಬಟ್ಟೆ, ಮನೆ ಮತ್ತು ಒಂದು ಕಾರು ಆ ಕಾರು ಮುಂದಕ್ಕೋಗಲು ಡಿಸೇಲ್ ಹಾಕುವಷ್ಟು ಹಣ ಇದ್ದರೆ ಸಾಕು, ನಾವು ಬದುಕಿನಲ್ಲಿ ಸೆಟಲ್ ಆಗಿದ್ದೇವೆ ಎಂದರ್ಥ ಎಂದು ರಂಜನಿ ಹೇಳಿದ್ದಾರೆ. ಮುಂದುವರೆದು ಐಶಾರಾಮಿ ಬದುಕಿಗೆ ಹೊತೊರೆದು ನಾವು ಅನಗತ್ಯವಾಗಿ ದೊಡ್ಡ ಕಾರು ಅಥವಾ ವಸ್ತು ಖರೀದಿ ಮಾಡಲು ಮುಂದಾಗುತ್ತೇವೆ, ಆದರೆ ಹೀಗೆ ನಾವು ಖರೀದಿ ಮಾಡಿದಾಗ ಆ ವಸ್ತುಗಳನ್ನು ತಯಾರಿಸಿದ ಮಾಲೀಕ ಶ್ರೀಮಂತನಾಗುತ್ತಾನೆ ಹೊರತು ನಾವು ಆಗುವುದಿಲ್ಲ. ಬದಲಿಗೆ ಆ ಸಾಲ ತೀರಿಸೋದರಲ್ಲಿ ನಮ್ಮ ಬಾಕಿ ಸಮಯವನ್ನು ನಾವು ಹಾಳು ಮಾಡುತ್ತೇವೆ ಎಂದಿದ್ದಾರೆ.
ಇನ್ನೂ.. ಅಗತ್ಯ ವಸ್ತುಗಳಿಗೆ ಬೇಕಿರುವ ಹಣಕ್ಕಿಂತ ಹೆಚ್ಚು ಹಣ ನನ್ನ ಬಳಿ ಇದ್ದರೆ ನಾನು ಅದನ್ನು ಸಮಾಜದ ಒಳಿತಿಗಾಗಿ ಬಳಕೆ ಮಾಡುತ್ತೇನೆ ಹೊರತು ಅನಗತ್ಯವಾದ ದುಬಾರಿ ವಸ್ತುಗಳನ್ನು ನಾನು ಖರೀದಿ ಮಾಡಿಲ್ಲ, ಮಾಡುವುದು ಇಲ್ಲ ಎಂದು ಕೂಡ ರಂಜನಿ ರಾಘವನ್ ಈ ಸಂದರ್ಶನದಲ್ಲಿ ಹೇಳಿದ್ದಾರೆ. ಇದೇ ಸಮಯದಲ್ಲಿ ತಮ್ಮ ಪ್ರಿಯಕರ, ಗೆಳೆಯ, ಬಾಳ ಸಂಗಾತಿ ಸಾಗರ್ ಭಾರದ್ವಾಜ್ ಬಗ್ಗೆ ಕೂಡ ಮಾತನಾಡಿರುವ ರಂಜನಿ ನನ್ನ ಜೀವನದ ಏಳುಬೀಳುಗಳನ್ನು ಹತ್ತಿರದಿಂದ ನೋಡಿದವರು ಅವರು. ನಾವು ಇಬ್ಬರು ಕಾಲೇಜ್‌ನಲ್ಲಿ ಸಹಪಾಠಿಗಳಾಗಿದ್ದೇವು ಅಷ್ಟೇ ಅಲ್ಲ ಇಬ್ಬರೂ ಕ್ಲಾಸ್ ಲೀಡರ್ ಕೂಡ ಹೌದು. ಇನ್ನೂ ಓದುವ ವಿಚಾರದಲ್ಲಿ ಇಬ್ಬರ ನಡುವೆ ಮೊದಲಿಂದ ಸ್ಫರ್ಧೆ ಇತ್ತು ಎಂದಿರುವ ರಂಜನಿ ಅವರು ನಮ್ಮ ಮನೆಯ ಹತ್ತಿರವೇ ಇದ್ದರು ಎಂದು ಹೇಳಿದ್ದಾರೆ. ಸಂಗೀತ, ಅಭಿನಯ, ಚಿತ್ರರಂಗ, ಲೇಖನ, ಹೀಗೆ ನನ್ನ ಬದುಕಿನಲ್ಲಿ ಪಾತ್ರಗಳು ಬದಲಾದರೂ ನಮ್ಮ ನಡುವೆ ಅದರಿಂದ ಯಾವುದೇ ವ್ಯತ್ಯಾಸವಾಗುವುದಿಲ್ಲ ಎಂದು ಹೇಳಿದ್ದಾರೆ.
ಇನ್ನೂ ಜೀವನಪೂರ್ತಿ ನೆಮ್ಮದಿಯಾಗಿ ಬರುವಂತಹ ಜೊತೆಗಾರ ಬೇಕು ಎನ್ನುವ ರಂಜನಿ, ನಾವು ಪ್ರೀತಿಸುವ ವ್ಯಕ್ತಿಯಿಂದ ನಮಗೆ ಖುಷಿ ಸಿಗುತ್ತೆ ಎಂದು ಕಾದು ಕುಳಿತುಕೊಳ್ಳುವುದರಲ್ಲಿ ಅರ್ಥ ಇಲ್ಲ, ಯಾಕೆಂದರೆ ನಮ್ಮ ಖುಷಿಗೆ ನಾವೇ ಹೊಣೆ ಎಂದು ಹೇಳಿದ್ದಾರೆ. ಅವರು ಆಗಾಗ ಬಂದು ಖುಷಿ ನೀಡಬಹುದೇ ವಿನಃ ಅವರಿಂದಲೇ ನನ್ನ ಖುಷಿ ಎಂದು ನಾವು ಅಂದುಕೊಳ್ಳಬಾರದು ಎಂದಿದ್ದಾರೆ. ನನ್ನ ಸಂತೋಷಕ್ಕೆ ನೀನು ಕಾರಣವಾಗ್ತಿಲ್ಲ ಎಂದು ಆರೋಪವನ್ನೂ ಮಾಡಬಾರದು ಎಂದಿರುವ ರಂಜನಿ, ಒಂಟಿಯಾಗಿ ಸಂತೋಷದಿಂದ ಇರಲು ಸಾಧ್ಯ ಇಲ್ಲ ಅಂದರೆ ನೀವು ಜೀವನದಲ್ಲಿ ಖುಷಿಯಾಗಿರಲು ಸಾಧ್ಯವೇ ಇಲ್ಲ ಎಂದು ಕೂಡ ಹೇಳಿದ್ದಾರೆ ರಂಜನಿ ರಾಘವನ್.


Click it and Unblock the Notifications











