Toby: ಟೋಬಿ ಚೆನ್ನಾಗಿಲ್ಲ ಎಂದ ಮಹಿಳೆಗೆ ಚಿತ್ರಮಂದಿರದ ಮುಂದೆಯೇ ಬೈಗುಳ; ಚಿತ್ರ ಸೂಪರ್ ಎನ್ನಲೇಬೇಕೆಂಬ ರೂಲ್ಸ್ ಇದ್ಯಾ?
ನಿನ್ನೆಯಷ್ಟೇ (ಆಗಸ್ಟ್ 25 ) ರಾಜ್ಯಾದ್ಯಂತ ರಾಜ್ ಬಿ ಶೆಟ್ಟಿ ನಟನೆಯ ಬಹು ನಿರೀಕ್ಷಿತ ಚಿತ್ರ ಟೋಬಿ ಬಿಡುಗಡೆಗೊಂಡಿತು. ಒಂದು ಮೊಟ್ಟೆಯ ಕಥೆ ಹಾಗೂ ಗರುಡ ಗಮನ ವೃಷಭ ವಾಹನ ರೀತಿಯ ಭಿನ್ನ ಕಥಾ ಹಂದರವಿರುವ ಚಿತ್ರಗಳನ್ನು ನಿರ್ದೇಶಿಸಿ ಗೆದ್ದಿದ್ದ ರಾಜ್ ಬಿ ಶೆಟ್ಟಿ ಚಿತ್ರಕಥೆ ಬರೆದಿರುವ ಸಿನಿಮಾ ಎಂಬ ಕಾರಣಕ್ಕೆ ಟೋಬಿ ಮೇಲೆ ಬೆಟ್ಟದಷ್ಟು ನಿರೀಕ್ಷೆಯನ್ನು ಸಿನಿ ರಸಿಕರು ಇಟ್ಟುಕೊಂಡಿದ್ದರು.
ಹೀಗೆ ಬೃಹತ್ ನಿರೀಕ್ಷೆಯೊಂದಿಗೆ ಚಿತ್ರಮಂದಿರಗಳ ಅಂಗಳಕ್ಕೆ ಬಂದ ಟೋಬಿ ಮೊದಲ ದಿನ ಮಿಶ್ರ ಪ್ರತಿಕ್ರಿಯೆಯನ್ನು ಪಡೆದುಕೊಂಡಿದೆ. ಕೆಲವರು ಚಿತ್ರ ಮಾಸ್ಟರ್‌ಪೀಸ್ ಎಂದು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದರೆ, ಇನ್ನೂ ಕೆಲವರು ಚಿತ್ರ ನಿರೀಕ್ಷಿಸಿದ ರೇಂಜ್‌ಗೇನೂ ಇಲ್ಲ, ಒಮ್ಮೆ ನೋಡಬಹುದು ಎಂಬ ಟ್ವೀಟ್‌ಗಳನ್ನು ಮಾಡಿದ್ದಾರೆ.

ಇನ್ನು ಚಿತ್ರ ಬಿಡುಗಡೆಯಾದ ದಿನ ಸಿನಿ ರಸಿಕರು ಚಿತ್ರಮಂದಿರದ ಮುಂದೆ ಬರುವ ಮೀಡಿಯಾಗಳ ಮೈಕ್ ಮುಂದೆ ನಿಂತು ಚಿತ್ರ ಹೇಗಿದೆ ಎಂದು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುವುದು ಕಾಮನ್. ಅದೇ ರೀತಿ ಟೋಬಿ ಚಿತ್ರಕ್ಕೂ ಸಹ ಚಿತ್ರ ಹೇಗಿದೆ ಹೇಳಿ ಎಂದು ಪ್ರಶ್ನೆ ಕೇಳಿದ ಯುಟ್ಯೂಬ್ ಚಾನೆಲ್ ಒಂದಕ್ಕೆ ಚಿತ್ರವನ್ನು ವೀಕ್ಷಿಸಿ ಹೊರಬಂದ ಮಹಿಳೆಯೊಬ್ಬರು ಉತ್ತರವನ್ನು ನೀಡಿದ್ದಾರೆ.
ಹೌದು, ಮೈಸೂರಿನ ಸಂಗಮ್ ಚಿತ್ರಮಂದಿರದಲ್ಲಿ ಮೊದಲ ಪ್ರದರ್ಶನ ಮುಗಿದ ಬಳಿಕ ಮಾತನಾಡಿದ್ದ ಈ ಮಹಿಳೆ ಚಿತ್ರ ಚೆನ್ನಾಗಿಲ್ಲ ಎಂದು ನೇರವಾಗಿ ಕ್ಯಾಮೆರಾ ಮುಂದೆ ನಿಂತು ಹೇಳಿಬಿಟ್ಟಿದ್ದಾರೆ. ಇಷ್ಟಕ್ಕೆ ಕೋಪಗೊಂಡ ವ್ಯಕ್ತಿಯೋರ್ವ ಕನ್ನಡ ಸಿನಿಮಾ ಚೆನ್ನಾಗಿಲ್ಲ ಅಂತೀಯಲ್ಲ ಅಂತ ಬರೆಯಲೂ ಸಹ ಅಸಹ್ಯವೆನಿಸುವ ಪದಗಳನ್ನು ಬಳಸಿ ಆಕೆಯನ್ನು ನೂರಾರು ಜನರ ಮುಂದೆ ನಿಂದಿಸಿದ್ದಾನೆ.
ಚಿತ್ರ ಚೆನ್ನಾಗಿಲ್ಲ ಅನ್ನೋಕೆ ನೀನ್ಯಾರು, ಚಿತ್ರ ಚೆನ್ನಾಗಿದೆ, ಚಿತ್ರ ನೋಡಿ ಹೇಗಿದೆ ಎಂದು ಹೇಳಲು ನಿನಗೆ ಯಾರು ಹೇಳಿದ್ರು ಎಂದೆಲ್ಲಾ ಜೋರು ದನಿಯಲ್ಲಿ ಮಾತನಾಡಿದ್ದಾನೆ. ಕನ್ನಡ ಚಿತ್ರವೊಂದನ್ನು ನೋಡಲು ಬಂದ ಹುಡುಗಿಗೆ ವ್ಯಕ್ತಿಯೊಬ್ಬ ಅತಿ ಕೆಟ್ಟ ಪದ ಬಳಕೆ ಮಾಡುತ್ತಿದ್ದರೂ ಅಲ್ಲಿ ನೆರೆದಿದ್ದ ಪ್ರತಿಯೊಬ್ಬರೂ ಸಹ ಆಕೆಯದ್ದೆ ತಪ್ಪು, ಚಿತ್ರ ಚೆನ್ನಾಗಿಲ್ಲ ಎಂದಿದ್ದೇ ತಪ್ಪು ಎಂದಿದ್ದಾರೆ.
ಇಷ್ಟೆಲ್ಲಾ ನಡೆಯುತ್ತಿದ್ದಾಗ ಮಧ್ಯ ಪ್ರವೇಶಿಸಿದ ಚಿತ್ರಮಂದಿರದ ಮ್ಯಾನೇಜರ್ ಆ ಹುಡುಗಿಯನ್ನು ಅಲ್ಲಿಂದ ಓಡಿಸಿ ಮಾಧ್ಯಮದ ಮುಂದೆ ಬಂದು ಆಕೆ ಡ್ರಗ್ ಅಡಿಕ್ಟ್ ಅನಿಸುತ್ತೆ, ಯಾರೋ ಚಿತ್ರ ಚೆನ್ನಾಗಿಲ್ಲ ಅಂತ ಹೇಳಿ ಕಳುಹಿಸಿದ ಹುಡುಗಿ ಇರಬೇಕು, ನಾನು ಚಿತ್ರ ನೋಡಿದೆ, ಆಕೆ ಹೇಳುವ ಹಾಗಿಲ್ಲ ಎಂದು ಮಾತನಾಡಿದ್ದಾರೆ. ಇಷ್ಟೆಲ್ಲಾ ನಡೆದರೂ ಚಿತ್ರಮಂದಿರದ ಅಂಗಳದಲ್ಲಿ ತನ್ನ ಪರ ಯಾರೊಬ್ಬರೂ ಮಾತನಾಡದೇ ಇದ್ದಾಗ ಆ ಹುಡುಗಿ ಅಲ್ಲಿಂದ ನೋವಿನಿಂದಲೇ ಹೊರನಡೆದಿದ್ದಾರೆ.
ಇದನ್ನೆಲ್ಲಾ ನೋಡಿದ ಬಳಿಕ ಸದ್ಯ ಎಲ್ಲರನ್ನೂ ಕಾಡುತ್ತಿರುವ ಪ್ರಶ್ನೆ ಚಿತ್ರಮಂದಿರಕ್ಕೆ ಚಿತ್ರಗಳನ್ನು ವೀಕ್ಷಿಸುವ ಪ್ರೇಕ್ಷಕ ಚಿತ್ರ ಸೂಪರ್ ಎಂದು ಹೇಳಲೇಬೇಕಾ ಎಂಬ ರೂಲ್ಸ್ ಏನಾದ್ರೂ ಇದೆಯಾ ಎಂಬುದು. ತಮ್ಮ ಸ್ವಂತ ಹಣದಿಂದ ಟಿಕೆಟ್ ಖರೀದಿಸಿ ಬರುವ ಸಿನಿ ರಸಿಕರಿಗೆ ಚಿತ್ರ ಹೇಗಿದೆ ಎಂದು ಹೇಳುವ ಎಲ್ಲಾ ರೀತಿಯ ಹಕ್ಕಿದೆ. ಅದನ್ನು ಪ್ರಶ್ನಿಸುವ ಹಕ್ಕು ಯಾರಿಗೂ ಇಲ್ಲ. ಅಂಥದ್ದರಲ್ಲಿ ಈ ರೀತಿ ನಡೆದುಕೊಂಡರೆ ಸಿನಿಮಾ ವೀಕ್ಷಿಸಲು ಚಿತ್ರಮಂದಿರಗಳತ್ತ ಬರುವ ಅಲ್ಪಸ್ಪಲ್ಪ ಮಹಿಳಾ ಪ್ರೇಕ್ಷಕರ ಸಂಖ್ಯೆಯಲ್ಲಿಯೂ ಮುಂದಿನ ದಿನಗಳಲ್ಲಿ ಇಳಿಕೆ ಏನಾದರೂ ಕಂಡುಬಂದರೆ ಆಶ್ಚರ್ಯವೇನಿಲ್ಲ.


Click it and Unblock the Notifications











