ಏನಾಗುತ್ತೋ ಏನೋ..? ದರ್ಶನ್ ಮತ್ತು ಯುವರಾಜ್ ಕುಮಾರ್‌ಗೆ ನಾಳೆ ಅತ್ಯಂತ ಮಹತ್ವದ ದಿನ..!
ಸಂಸಾರ ಅಂದಮೇಲೆ ಜಗಳ ರೋಮ್ಯಾನ್ಸು ಅನ್ನೋದು ಒಂದೇ ನಾಣ್ಯದ ಎರಡು ಮುಖಗಳ ತರ. ಒಮ್ಮೆ ಬೈದಾಡಿಕೊಂಡವರೂ ಕೆಲ ನಿಮಿಷಗಳಲ್ಲಿ ಒಂದಾಗಬಹುದು. ಯಾವಾಗ ವೈಯಕ್ತಿಕ ವಿಚಾರಗಳು ಬೀದಿಗೆ ಬಂದು ಸಾರ್ವಜನಿಕರ ಬಾಯಿ ಸೇರುತ್ತದೋ ಆಗ ಚಿಕ್ಕದ್ದು ದೊಡ್ಡದ್ದಾಗುವ ಎಲ್ಲ ಲಕ್ಷಣಗಳೂ ಹೆಚ್ಚಾಗಿಯೇ ಇರುತ್ತದೆ. ಯುವರಾಜ್ ಕುಮಾರ್ ಮತ್ತು ಶ್ರೀದೇವಿ ಅವರ ವಿಚಾರದಲ್ಲಿ ಕೂಡ ಸದ್ಯಕ್ಕೆ ಇದೇ ಆಗಿದೆ.
ಈಗ್ಗೆ ಸರಿಯಾಗಿ ಒಂದು ತಿಂಗ್ಳ ಹಿಂದೆ ಹಾದಿ-ಬೀದಿಯಲ್ಲಿ ದೊಡ್ಮನೆಯ ಮಾನ-ಮರ್ಯಾದೆ ತೆಗೆದ ಇವರು ಇಬ್ಬರು, ಈ ಗುರುವಾರ ಅಂದರೆ ನಾಳೆ ಕೌಟುಂಬಿಕ ನ್ಯಾಯಾಲಯದಲ್ಲಿ ಹಾಜರಾಗಲಿದ್ದಾರೆ. ಈ ಹಿನ್ನೆಲೆಯಲ್ಲಿ ವಿದೇಶದಲ್ಲಿದ್ದ ಶ್ರೀದೇವಿ ಬೈರಪ್ಪ ಸದ್ಯಕ್ಕೆ ತಾಯ್ನಾಡಿಗೆ ಮರಳಿದ್ದಾರೆ.

ಇನ್ನೂ ಯುವ ರಾಜಕುಮಾರ್ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸುವುದಕ್ಕೂ ಮುಂಚೆಯೇ ಶ್ರೀದೇವಿ ಅವರು ವಿದೇಶ ಪ್ರವಾಸ ಕೈಗೊಂಡಿದ್ದರು. ಯುವ ರಾಜಕುಮಾರ್ ಡಿವೋರ್ಸ್ ಅರ್ಜಿಯ ವಿಚಾರ ತಿಳಿದು ವಿದೇಶದಿಂದಲೇ ಪ್ರತಿಕ್ರಿಯೆ ಕೂಡ ನೀಡಿದ್ದರು. ಡಿವೋರ್ಸ್ ಅರ್ಜಿಯಲ್ಲಿ ಮಾಡಿದ್ದ ಆರೋಪಗಳಿಗೂ ಉತ್ತರಿಸಿದ್ದ ಶ್ರೀದೇವಿ ಅವರು ಯುವ ರಾಜಕುಮಾರ್ ವಿರುದ್ಧವೂ ಗಂಭೀರ ಆರೋಪಗಳನ್ನು ಮಾಡಿದ್ದರು. ಈ ಎಲ್ಲ ವಿಚಾರ ಬಹುತೇಕರಿಗೆ ಗೊತ್ತಿರುವಂತದ್ದೇ.
ಉಳಿದಂತೆ ಈ ದಾಂಪತ್ಯ ಕಲಹಕ್ಕೆ ತಮ್ಮ ಪತ್ನಿ ಶ್ರೀದೇವಿ ಅವರ ಮಾನಸಿಕ ಕ್ರೌರ್ಯವೇ ಕಾರಣ ಎಂದು ಯುವರಾಜ್ ಕುಮಾರ್ ಆರೋಪ ಹೊರಿಸಿದ್ದಾರೆ. ಈ ಕಡೆ ಶ್ರೀದೇವಿ ಭೈರಪ್ಪ ತಮ್ಮ ಗಂಡನಿಗೆ ಅನೈತಿಕ ಸಂಬಂಧ ಇದೆ ಅಂದಿದ್ದಾರೆ. ಹೊಟೇಲ್ ರೂಮ್‌ನಲ್ಲಿ ನಾನು ನೋಡಬಾರದ್ದನ್ನೆಲ್ಲ ನೋಡಿದ್ದೇನೆ ಎಂದು ಕೂಡ ಶ್ರೀದೇವಿ ಹೇಳಿದ್ದಾರೆ. ಈ ಕಾರಣಕ್ಕೆ ನಾಳೆ ಅಂದರೆ ಜುಲೈ 4ರಂದು ಇವರಿಬ್ಬರ ವಿಚ್ಛೇದನದ ಅರ್ಜಿ ವಿಚಾರಣೆ ನಡೆಯಲಿದ್ದು, ಎರಡೂ ಕಡೆಯ ವಾದಗಳನ್ನು ಆಲಿಸಿದ ಕೋರ್ಟ್ ತನ್ನ ಆದೇಶವನ್ನು ನೀಡಲಿದೆ. ಆದ್ದರಿಂದ ಯುವರಾಜ್ ಕುಮಾರ್ ವಿಚ್ಛೇದನ ಪ್ರಕರಣಕ್ಕೆ ನಾಳೆ ನಿರ್ಣಾಯಕ ದಿನವಾಗಿದೆ. ಈ ಮೂಲಕ ಹಲವು ದಿನಗಳಿಂದ ದೂರವಿದ್ದ ಈ ದಂಪತಿಯ ಮುಖಾಮುಖಿ ಕೂಡ ನಾಳೆ ಕೋರ್ಟ್‌ನಲ್ಲಿ ಆಗಲಿದೆ

ಅಂದ್ಹಾಗೇ ನಾಳೆ ಕೊಲೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರದ ಪಾಲಾದ ಶ್ರೀಯುತ ದರ್ಶನ್ ಅವರನ್ನೂ ಕೂಡ, ನ್ಯಾಯಾಲಯಕ್ಕೆ ಹಾಜರು ಪಡಿಸುವ ಸಾಧ್ಯತೆ ಇದೆ. ಮತ್ತೊಂದು ಕಡೆ ಯುವರಾಜ್ ಕುಮಾರ್ ಮತ್ತು ಶ್ರೀದೇವಿ ಅವರ ವಿಚ್ಛೇದನದ ಅರ್ಜಿ ಸಂಬಂಧ ವಿಚಾರಣೆ ಕೂಡ ನಾಳೆಯೇ ನಡೆಯಲಿದೆ. ಈ ಅರ್ಥದಲ್ಲಿ ಈ ಗುರುವಾರ ಕನ್ನಡ ಚಿತ್ರರಂಗದ ಈ ಇಬ್ಬರು ತಾರೆಯರು ಕೋರ್ಟ್ ಕಟಕಟೆಯಲ್ಲಿ ನಿಲ್ಲುತ್ತಿರುವ ಕಾರಣದಿಂದ ಇಬ್ಬರ ಪಾಲಿಗೆ ನಾಳೆ ಅತ್ಯಂತ ಮಹತ್ವದ ದಿನ ಅಂದರೆ ತಪ್ಪಲ್ಲ.
ಒಟ್ನಲ್ಲಿ ಪ್ಯಾನ್ ಇಂಡಿಯಾ ಸಿನಿಮಾ ಮೂಲಕ ಸದ್ದು ಮಾಡಬೇಕಿದ್ದ ಕನ್ನಡ ಚಿತ್ರರಂಗ ಕೋರ್ಟು-ಕಛೇರಿ-ಕೊಲೆ ಇತ್ಯಾದಿ ವಿಚಾರಗಳಿಂದ ಸುದ್ದಿಯಾಗುತ್ತಿದೆ. ಗುರುವಾರ ಮತ್ತೊಮ್ಮೆ ಎಲ್ಲ ರಾಷ್ಟ್ರೀಯ ವಾಹಿನಿಗಳಲ್ಲಿ ಕೂಡ ಕನ್ನಡ ಚಿತ್ರರಂಗದ ಈ ಎರಡು ಪ್ರಕರಣಗಳು ರಾರಾಜಿಸಲಿವೆ. ಇದಕ್ಕಿಂತ ದೌರ್ಭಾಗ್ಯ ಇನ್ನೇನಿದೆ.


Click it and Unblock the Notifications











