2023ರ ಮೊದಲ 3 ತಿಂಗಳು ಮುಕ್ತಾಯ; ಅತಿಹೆಚ್ಚು ಗಳಿಕೆ ಮಾಡಿದ ಟಾಪ್ 10 ಚಿತ್ರಗಳಿವು!
ಕಳೆದ ವರ್ಷ ಅಂದರೆ 2022 ಸಿನಿಮಾ ಕ್ಷೇತ್ರಕ್ಕೆ ಅದೃಷ್ಟದ ವರ್ಷ ಎಂದೇ ಹೇಳಬಹುದು. ಏಕೆಂದರೆ ಆ ವರ್ಷ ಚಿತ್ರಗಳು ಯಶಸ್ಸು ಗಳಿಸಿದ ಹಾಗೆ ಇತ್ತೀಚೆಗಿನ ಯಾವ ವರ್ಷಗಳಲ್ಲಿಯೂ ಸಹ ಚಿತ್ರಗಳು ಗೆಲುವು ಕಂಡಿರಲಿಲ್ಲ. ಅದರಲ್ಲಿಯೂ ಕಳೆದ ವರ್ಷ ದಕ್ಷಿಣ ಭಾರತ ಚಿತ್ರರಂಗದ ಚಿತ್ರಗಳು ಭರ್ಜರಿ ಯಶಸ್ಸು ಗಳಿಸಿದ್ದವು. ಭಾರತದ ಬರೋಬ್ಬರಿ 30 ಚಿತ್ರಗಳು ಕಳೆದ ವರ್ಷ ನೂರು ಕೋಟಿ ಕ್ಲಬ್ ಸೇರಿದ್ದವು. ಇನ್ನು ಕಳೆದ ವರ್ಷ ದಕ್ಷಿಣ ಭಾರತದ ಸಿನಿಮಾಗಳಿಗೆ ಹೋಲಿಸಿದರೆ ಬಾಲಿವುಡ್ ಚಿತ್ರಗಳು ಅಷ್ಟೇನೂ ಕಲೆಕ್ಷನ್ ಮಾಡಲಿಲ್ಲ.
ಹೌದು, ಕಳೆದ ವರ್ಷ ಬಾಲಿವುಡ್‌ನ ಯಾವ ಚಿತ್ರವೂ ಸಹ 500 ಕೋಟಿ ಕ್ಲಬ್ ಸೇರಿರಲಿಲ್ಲ. ಆದರೆ ಈ ವರ್ಷ ಬಾಲಿವುಡ್ ಆರಂಭದಲ್ಲಿಯೇ ಸಾವಿರ ಕೋಟಿ ಕ್ಲಬ್ ಸೇರುವ ಮೂಲಕ ಪುಟಿದೆದ್ದಿದೆ. ಹೌದು, ಬಾಲಿವುಡ್ ಕಿಂಗ್ ಖಾನ್ ಎಂದೇ ಖ್ಯಾತಿಯನ್ನು ಪಡೆದಿರುವ ಶಾರುಖ್ ಖಾನ್, ದೀಪಿಕಾ ಪಡುಕೋಣೆ ಹಾಗೂ ಜಾನ್ ಅಬ್ರಹಾಮ್ ನಟನೆಯ ಪಠಾಣ್ ಚಿತ್ರ 1000 ಕೋಟಿ ಗಳಿಕೆ ಮಾಡಿದೆ. ಹೀಗೆ ವರ್ಷದ ಮೊದಲ ತಿಂಗಳಿನಲ್ಲಿ ಬಿಡುಗಡೆಯಾಗಿದ್ದ ಪಠಾಣ್ ಸಿನಿಮಾ ಗಲ್ಲಾ ಪೆಟ್ಟಿಗೆಯಲ್ಲಿ ಈ ವರ್ಷದ ನಂಬರ್ ಒನ್ ಚಿತ್ರವಾಗಿ ನಿಂತಿದೆ.

ಒಂದೆಡೆ ಪಠಾಣ್ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಅಬ್ಬರಿಸಿದರೆ ಪಠಾಣ್ ಚಿತ್ರಕ್ಕೂ ಮುನ್ನ ಜನವರಿ ತಿಂಗಳಿನಲ್ಲಿ ಸಂಕ್ರಾಂತಿ ಹಬ್ಬದ ಪ್ರಯುಕ್ತ ತೆರೆಗೆ ಬಂದ ತೆಲುಗು ಹಾಗೂ ತಮಿಳಿನ ಸ್ಟಾರ್ ನಟರ ಚಿತ್ರಗಳೂ ಸಹ ಒಳ್ಳೆಯ ಗಳಿಕೆ ಮಾಡಿ ಹಿಟ್ ಎನಿಸಿಕೊಂಡವು. ಅತ್ತ ಮಾಲಿವುಡ್‌ನ ಚಿತ್ರಗಳಾದ ರೋಮಾಂಚನಂ ಹಾಗೂ ಮಾಳಿಕಪುರಂ ಚಿತ್ರಗಳೂ ಸಹ ಒಳ್ಳೆಯ ಗಳಿಕೆ ಮಾಡಿ ಹಿಟ್ ಎನಿಸಿಕೊಂಡರೆ, ಸ್ಯಾಂಡಲ್‌ವುಡ್‌ನಲ್ಲಿ ಜನ ಸಂಪೂರ್ಣವಾಗಿ ಇಲ್ಲಿಯವರೆಗೂ ಯಾವ ಚಿತ್ರವನ್ನೂ ಸಹ ಒಪ್ಪಿಕೊಂಡಿಲ್ಲ.
ಹಾಗಿದ್ದರೆ, ಈ ವರ್ಷ ಹಿಟ್ ಎನಿಸಿಕೊಂಡು ಅತಿಹೆಚ್ಚು ಗಳಿಕೆ ಮಾಡಿರುವ ಭಾರತದ ಹತ್ತು ಚಿತ್ರಗಳ ಟಾಪ್ 10 ಪಟ್ಟಿ ಹೇಗಿದೆ ಎಂಬ ಮಾಹಿತಿ ಈ ಕೆಳಕಂಡಂತಿದೆ..
1. ಪಠಾಣ್: ಶಾರುಖ್ ಖಾನ್, ದೀಪಿಕಾ ಪಡುಕೋಣೆ ಹಾಗೂ ಜಾನ್ ಅಬ್ರಹಾಂ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ಪಠಾಣ್ ಚಿತ್ರ ಸಹ ಜನವರಿಯಲ್ಲಿ ಬಿಡುಗಡೆಯಾಗಿ ಬಾಕ್ಸ್ ಆಫೀಸ್ ಧೂಳ್ ಎಬ್ಬಿಸಿದೆ. ಈ ಚಿತ್ರ 65 ದಿನಗಳಲ್ಲಿ 1050 ಕೋಟಿ ಗಳಿಸಿದೆ. ಈ ಮೂಲಕ ಈ ವರ್ಷ 500 ಹಾಗೂ 1000 ಕೋಟಿ ಕ್ಲಬ್ ಸೇರಿದ ಭಾರತದ ಮೊದಲ ಹಾಗೂ ಏಕೈಕ ಚಿತ್ರ ಎನಿಸಿಕೊಂಡಿದೆ.

2. ಈ ವರ್ಷ ನೂರು ಕೋಟಿ ಕ್ಲಬ್ ಸೇರಿದ ಕೀರ್ತಿ ದಳಪತಿ ವಿಜಯ್ ಹಾಗೂ ವಂಶಿ ಪೈಡಿಪಲ್ಲಿ ಕಾಂಬೊದ ವಾರಿಸು ಚಿತ್ರಕ್ಕೆ ಸೇರುತ್ತದೆ. ಸಂಕ್ರಾಂತಿ ಪ್ರಯುಕ್ತ ಜನವರಿ 11ರಂದು ತೆರೆಗೆ ಬಂದಿದ್ದ ಈ ಚಿತ್ರ 310 ಕೋಟಿ ಗಳಿಸಿದೆ.
3. ವಾರಿಸು ಚಿತ್ರ ಬಿಡುಗಡೆಯಾದ ದಿನವೇ ತಮಿಳಿನ ಮತ್ತೋರ್ವ ಸ್ಟಾರ್ ನಟ ಅಜಿತ್ ಕುಮಾರ್ ನಟನೆಯ ತುನಿವು ಸಹ ತೆರೆಗೆ ಬಂದಿತ್ತು. ಈ ಚಿತ್ರ ಸಹ ಒಳ್ಳೆಯ ಕಲೆಕ್ಷನ್ ಮಾಡಿದ್ದು ಒಟ್ಟಾರೆ 250 ಕೋಟಿ ಬಾಚಿದೆ.
4. ಚಿರಂಜೀವಿ ಹಾಗೂ ರವಿತೇಜಾ ನಟನೆಯ ವಾಲ್ತೇರು ವೀರಯ್ಯ ಬಿಡುಗಡೆಯಾದಾಗ ಬೃಹತ್ ಓಪನಿಂಗ್ ಪಡೆದುಕೊಂಡಿರಲಿಲ್ಲ. ಆದರೆ ನಂತರದ ದಿನಗಳಲ್ಲಿ ಕೋಟಿ ಕೋಟಿ ಬಾಚಿದ ಈ ಚಿತ್ರ ಒಟ್ಟಾರೆ 232 ಕೋಟಿ ರೂಪಾಯಿ ಕಲೆಕ್ಷನ್ ಮಾಡಿತು.
5. ರಣಬೀರ್ ಕಪೂರ್, ಶ್ರದ್ಧಾ ಕಪೂರ್ ಹಾಗೂ ಡಿಂಪಲ್ ಕಪಾಡಿಯಾ ನಟನೆಯ ತೂ ಜೂತಿ ಮೇನ್ ಮಕ್ಕರ್ ಚಿತ್ರ ಸಹ ನೂರು ಕೋಟಿ ಕ್ಲಬ್ ಸೇರಿದೆ. ಈ ಚಿತ್ರ ಈಗಾಗಲೇ 201 ಕೋಟಿ ಗಳಿಸಿದೆ.
6. ಸಂಕ್ರಾಂತಿ ಪ್ರಯುಕ್ತ ಬಿಡುಗಡೆಯಾದ ಮತ್ತೊಂದು ತೆಲುಗು ಚಿತ್ರ ಬಾಲಕೃಷ್ಣ ಹಾಗೂ ದುನಿಯಾ ವಿಜಯ್ ನಟನೆಯ ವೀರ ಸಿಂಹ ರೆಡ್ಡಿ ಸಹ ನೂರು ಕೋಟಿ ಕ್ಲಬ್ ಸೇರಿದೆ. ಈ ಚಿತ್ರ 134 ಕೋಟಿ ಕಲೆಕ್ಷನ್ ಮಾಡಿದೆ.
7. ಧನುಷ್ ಹಾಗೂ ಸಂಯುಕ್ತ ಮೆನನ್ ನಟನೆಯ, ವೆಂಕಿ ಅಟ್ಲುರಿ ನಿರ್ದೇಶನದ ವಾತಿ ಚಿತ್ರ ಸಹ ನೂರು ಕೋಟಿ ಕ್ಲಬ್ ಸೇರಿದೆ. ತೆಲುಗಿನಲ್ಲಿ ಸಾರ್ ಎಂಬ ಶೀರ್ಷಿಕೆ ಅಡಿಯಲ್ಲಿ ಬಿಡುಗಡೆಯಾಗಿದ್ದ ಈ ಚಿತ್ರ ಎರಡೂ ಭಾಷೆಗಳೂ ಸೇರಿ 100 ಕೋಟಿ ಕ್ಲಬ್ ಸೇರಿದೆ.
8. ಕಳೆದ ವಾರವಷ್ಟೇ ತೆರೆ ಕಂಡಿರುವ ನಾನಿ ನಟನೆಯ ದಸರಾ ಚಿತ್ರ ಮೊದಲ 4 ದಿನಗಳಲ್ಲಿ 87 ಕೋಟಿ ಗಳಿಕೆ ಮಾಡಿದ್ದು, ನೂರು ಕೋಟಿ ಕ್ಲಬ್ ಸೇರುವ ಸನಿಹದಲ್ಲಿದೆ.
9. ಸೌಬಿನ್ ಶಾಹಿರ್ ನಟನೆಯ ಮಲಯಾಳಂ ಚಿತ್ರ ರೋಮಾಂಚನಂ ಬಾಕ್ಸ್ ಆಫೀಸ್‌ನಲ್ಲಿ 67 ಕೋಟಿ ಗಳಿಸುವ ಮೂಲಕ ಮೊದಲ ಮೂರು ತಿಂಗಳಿನಲ್ಲಿ ಅತಿಹೆಚ್ಚು ಗಳಿಕೆ ಮಾಡಿದ ಚಿತ್ರಗಳ ಪಟ್ಟಿಯಲ್ಲಿ ಒಂಬತ್ತನೇ ಸ್ಥಾನದಲ್ಲಿದೆ.
10. ಕಾರ್ತಿಕ್ ಆರ್ಯನ್ ಹಾಗೂ ಕೃತಿ ಸೆನನ್ ನಟನೆಯ ಶೆಹ್ಜಾದಾ ಚಿತ್ರ ಬಾಕ್ಸ್ ಆಫೀಸ್‌ನಲ್ಲಿ 51 ಕೋಟಿ ಗಳಿಸುವ ಮೂಲಕ ಈ ವರ್ಷದ ಮೊದಲ ಮೂರು ತಿಂಗಳಿನಲ್ಲಿ ಅತಿಹೆಚ್ಚು ಗಳಿಕೆ ಮಾಡಿದ ಚಿತ್ರಗಳ ಪಟ್ಟಿಯಲ್ಲಿ ಹತ್ತನೇ ಸ್ಥಾನದಲ್ಲಿದೆ.


Click it and Unblock the Notifications











