ದಿಢೀರ್ ಮಲೇಷಿಯಾ ಫ್ಲೈಟ್ ಏರಿದ ರಾಕಿಂಗ್ ಸ್ಟಾರ್, ಏನ್ ಸಮಾಚಾರ?
ಯಶ್ ನಟನೆಯ 'ಟಾಕ್ಸಿಕ್' ಸಿನಿಮಾ ಅಪ್‌ಡೇಟ್‌ಗಾಗಿ ಅಭಿಮಾನಿಗಳು ಕಾಯುತ್ತಿದ್ದಾರೆ. ಮತ್ತೊಂದು ಕಡೆ ಬಾಲಿವುಡ್‌ನಲ್ಲಿ ಎರಡು ಸಿನಿಮಾಗಳಿಗೆ ಯಶ್ ರಾಕಿಂಗ್ ಸ್ಟಾರ್ ಹೆಸರು ಕೇಳಿಬರುತ್ತದೆ. ನಿತೇಶ್ ತಿವಾರಿ ನಿರ್ದೇಶನದ 'ರಾಮಾಯಣ' ಚಿತ್ರದಲ್ಲಿ ರಾವಣನಾಗಿ ಯಶ್ ನಟಿಸುತ್ತಾರೆ ಎನ್ನಲಾಗ್ತಿದೆ. ಶಾರುಖ್ ಖಾನ್ ಜೊತೆಗೂ ಯಶ್ ಸಿನಿಮಾ ಮಾಡು ಬಗ್ಗೆ ಚರ್ಚೆ ನಡೆಯುತ್ತಿದೆ ಎನ್ನುವ ಗುಸುಗುಸು ಕೇಳಿಬರ್ತಿದೆ.
ಕಳೆದ ವರ್ಷವೇ ಯಶ್19 ಸಿನಿಮಾ ಅನೌನ್ಸ್ ಆಗಿದೆ. ಕೆವಿಎನ್ ಪ್ರೊಡಕ್ಷನ್ಸ್ ಬ್ಯಾನರ್‌ನಲ್ಲಿ 'ಟಾಕ್ಸಿಕ್' ಎನ್ನುವ ಚಿತ್ರದಲ್ಲಿ ನಟಿಸಲಿದ್ದಾರೆ. ಮಲಯಾಳಂ ನಿರ್ದೇಶಕಿ ಗೀತು ಮೋಹನ್ ದಾಸ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳಲಿದ್ದಾರೆ. ಟೈಟಲ್ ಅನೌನ್ಸ್‌ಮೆಂಟ್ ಟೀಸರ್ ಕೂಡ ರಿಲೀಸ್ ಆಗಿ ಸದ್ದು ಮಾಡಿತ್ತು. ಎರಡು ತಿಂಗಳು ಕಳೆದರೂ ಸಿನಿಮಾ ಸೆಟ್ಟೇರಿಲ್ಲ. ಮುಂದಿನ ವರ್ಷ ಏಪ್ರಿಲ್ 10ಕ್ಕೆ 'ಟಾಕ್ಸಿಕ್' ಸಿನಿಮಾ ಬಿಡುಗಡೆ ಮಾಡುವುದಾಗಿಯೂ ಘೋಷಣೆ ಮಾಡಲಾಗಿದೆ.

KGF-2 ಬಳಿಕ ಯಶ್ ಯಾವ ಸಿನಿಮಾದಲ್ಲಿ ನಟಿಸುತ್ತಾರೆ ಎನ್ನುವ ಕುತೂಹಲ ಅಭಿಮಾನಿಗಳಲ್ಲಿತ್ತು. ಟೈಟಲ್‌ನಿಂದಲೇ 'ಟಾಕ್ಸಿಕ್' ಸಿನಿಮಾ ನಿರೀಕ್ಷೆ ಹುಟ್ಟುಹಾಕಿದೆ. ಚಿತ್ರದಲ್ಲಿ ಡ್ರಗ್ಸ್ ಮಾಫಿಯಾ ಕುರಿತಾದ ಕಥೆ ಇದೆ ಎನ್ನಲಾಗ್ತಿದೆ. ಇನ್ನು ಚಿತ್ರದಲ್ಲಿ ಹಾಲಿವುಡ್ ಕಲಾವಿದರು, ತಂತ್ರಜ್ಞರು ಕೆಲಸ ಮಾಡುವ ಸಾಧ್ಯತೆಯಿದೆ. ನಿರ್ದೇಶಕಿ ಜೊತೆ ಸೇರಿ ಯಶ್ ಚಿತ್ರದ ಕಥೆ, ಚಿತ್ರಕಥೆ ಸಿದ್ಧಪಡಿಸಿದ್ದಾರೆ.
ಅಭಿಮಾನಿಗಳು 'ಟಾಕ್ಸಿಕ್' ಸಿನಿಮಾ ಬಗ್ಗೆ ಕಾತುರಾಗಿದ್ದಾರೆ. ಇದೆಲ್ಲದರ ನಡುವೆ ಯಶ್ ದಿಢೀರನೆ ಮಲೇಷಿಯಾ ಫ್ಲೈಟ್ ಏರಿದ್ದಾರೆ. ಕಾರ್ಯಕ್ರಮವೊಂದರಲ್ಲಿ ಭಾಗಿ ಆಗಲು ಯಶ್ ಪ್ರವಾಸ ಕೈಗೊಂಡಿದ್ದಾರೆ ಎನ್ನಲಾಗ್ತಿದೆ. ರಾಕಿ ಭಾಯ್ ಏರ್‌ಪೋರ್ಟ್ ಹಾಗೂ ಮಲೇಷಿಯಾದಲ್ಲಿ ಅಭಿಮಾನಿಗಳ ಜೊತೆ ಕ್ಲಿಕ್ಕಿಸಿಕೊಂಡಿರುವ ಫೋಟೊಗಳು ವೈರಲ್ ಆಗುತ್ತಿದೆ.

'ಟಾಕ್ಸಿಕ್' ಸಿನಿಮಾ ಬಿಡುಗಡೆಗೆ ಅಭಿಮಾನಿಗಳು ಇನ್ನು 14 ತಿಂಗಳು ಕಾಯಬೇಕಿದೆ. ಬಹಳ ದೊಡ್ಡಮಟ್ಟದಲ್ಲೇ ಸಿನಿಮಾ ನಿರ್ಮಾಣವಾಗಲಿದೆ. ಕೆವಿಎನ್ ಸಂಸ್ಥೆ ಜೊತೆ ಸೇರಿ ಯಶ್ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಅಂದಾಜು 180 ಕೋಟಿ ರೂ. ಬಜೆಟ್‌ನಲ್ಲಿ ಈ ಆಕ್ಷನ್ ಎಂಟರ್‌ಟೈನರ್ ಸಿನಿಮಾ ಪ್ಲ್ಯಾನ್ ಮಾಡಲಾಗ್ತಿದೆ. ಯಶ್ ಲುಕ್, ಖದರ್ ಎಲ್ಲವೂ ಪ್ರೇಕ್ಷಕರಿಗೆ ಮಜಾ ಕೊಡಲಿದೆ.
ಇನ್ನು ಬಾಲಿವುಡ್‌ನಲ್ಲಿ ನಿತೇಶ್ ತಿವಾರಿ ರಾಮಾಯಣ ಕಾವ್ಯವನ್ನು ಸಿನಿಮಾ ಮಾಡುವ ಸಾಹಸ ಮಾಡುತ್ತಿದ್ದಾರೆ. ಚಿತ್ರದಲ್ಲಿ ಶ್ರೀರಾಮನ ಪಾತ್ರದಲ್ಲಿ ರಣ್‌ಬೀರ್ ಕಪೂರ್, ಸೀತಾಮಾತೆಯಾಗಿ ಸಾಯಿ ಪಲ್ಲವಿ ನಟಿಸುವುದು ಬಹುತೇಕ ಖಚಿತ ಎನ್ನಲಾಗ್ತಿದೆ. ಅನಿಲ್ ಕಪೂರ್, ಬಾಬಿ ಡಿಯೋಲ್ ಸೇರಿದಂತೆ ಚಿತ್ರದ ಪ್ರಮುಖ ಪಾತ್ರಗಳಿಗೆ ಘಟಾನುಘಟಿ ಕಲಾವಿದರ ಹೆಸರುಗಳು ಕೇಳಿಬರ್ತಿದೆ. ರಾವಣನಾಗಿ ಯಶ್ ಲುಕ್ ಟೆಸ್ಟ್ ಸಹ ಮಾಡಲಾಗಿದೆ ಎನ್ನುವ ಸುದ್ದಿ ಬಾಲಿವುಡ್ ಗಲ್ಲಿಗಳಲ್ಲಿ ಹರಿದಾಡ್ತಿದೆ.
ನಟ ಯಶ್ ಮಾತ್ರ ಕನ್ನಡ ಬಿಟ್ಟು ಎಲ್ಲೂ ಹೋಗುವುದಿಲ್ಲ ಎನ್ನುತ್ತಿದ್ದಾರೆ. ಹಾಗಾಗಿ 'ರಾಮಾಯಣ' ಚಿತ್ರದಲ್ಲಿ ನಟಿಸುವ ಬಗ್ಗೆ ಅಧಿಕೃತ ಮಾಹಿತಿ ಸಿಗಬೇಕಿದೆ. ಬಹುಕೋಟಿ ವೆಚ್ಚದಲ್ಲಿ ಚಿತ್ರವನ್ನು ತೆರೆಗೆ ತರುವ ಲೆಕ್ಕಾಚಾರ ನಡೀತಿದೆ. ಒಂದು ವರ್ಷ ಕಾಲ ಗ್ರಾಫಿಕ್ಸ್ ಕೆಲಸಗಳಿಗಾಗಿ ವ್ಯಯಿಸಲು ಚಿತ್ರತಂಡ ತೀರ್ಮಾನಿಸಿದೆ.
ಪದೇ ಪದೆ ಯಶ್ ವಿದೇಶ ಪ್ರವಾಸ ಕೈಗೊಳ್ಳುತ್ತಿದ್ದಾರೆ. ವೈಯಕ್ತಿಕ ವಿಚಾರಗಳ ಜೊತೆಗೆ ಸಿನಿಮಾ ಕೆಲಸಗಳಿಗೆ ಹೋಗಿ ಬರುತ್ತಿದ್ದಾರೆ. ಈ ಬಾರಿ ಹುಟ್ಟುಹಬ್ಬದ ಸಂಭ್ರಮದಲ್ಲಿ ವಿದೇಶದಲ್ಲಿದ್ದರು. ಪತ್ನಿ ರಾಧಿಕಾ ಪಂಡಿತ್ ಜೊತೆ ಲಂಡನ್‌ನಲ್ಲಿ ಕ್ರಿಸ್‌ಮಸ್ ಆಚರಿಸಿದ್ದರು.
ಕಳೆದೆರಡು ದಿನಗಳಿಂದ ಯಶ್ ಹಾಗೂ ಶಾರುಖ್ ಖಾನ್ ಸಿನಿಮಾ ಬಗ್ಗೆ ಊಹಾಪೋಹ ಶುರುವಾಗಿದೆ. ರಾಕಿಂಗ್ ಸ್ಟಾರ್ ನೆಚ್ಚಿನ ನಟ ಬಾಲಿವುಡ್ ಕಿಂಗ್ ಖಾನ್. ಇಬ್ಬರು ಮಲ್ಟಿಸ್ಟಾರರ್ ಸಿನಿಮಾ ಮಾಡಲು ಪ್ರಯತ್ನಿಸುತ್ತಿದ್ದಾರೆ ಎನ್ನುವ ಅಂತೆ ಕಂತೆ ಸುದ್ದಿ ಚಕ್ಕರ್ ಹೊಡೀತಿದೆ. ಶೀಘ್ರದಲ್ಲೇ ಈ ಬಗ್ಗೆ ಸ್ಪಷ್ಟನೆ ಸಿಗುವ ಸಾಧ್ಯತೆಯಿದೆ.


Click it and Unblock the Notifications











