'ಟಾಕ್ಸಿಕ್' ಸಿನಿಮಾ ಇನ್ನು ಕಂಪ್ಲೀಟ್ ಆಗಿಲ್ವಾ? ರಿಲೀಸ್ ತಡವಾಗಲು ಅಸಲಿ ಕಾರಣ ಬಿಚ್ಚಿಟ್ಟ ಯಶ್
ರಾಕಿಂಗ್ ಸ್ಟಾರ್ ಯಶ್ ನಿರ್ಮಿಸಿ ನಟಿಸಿರುವ 'ಟಾಕ್ಸಿಕ್' ಸಿನಿಮಾ ಬಿಡುಗಡೆ ಪದೇ ಪದೆ ವಿಳಂಬವಾಗುತ್ತಿದೆ. ಪ್ರೇಕ್ಷಕರು ಕಾದು ಕಾದು ಸುಸ್ತಾಗಿದ್ದಾರೆ. 4 ವರ್ಷಗಳಿಂದ ಯಶ್ ನಟಿಸಿದ ಯಾವುದೇ ಸಿನಿಮಾ ತೆರೆಗೆ ಬಂದಿಲ್ಲ ಎಂದು ಬೇಸರಗೊಂಡಿದ್ದಾರೆ. ಜೂನ್ 4ಕ್ಕೆ ಬರಬೇಕಿದ್ದ 'ಟಾಕ್ಸಿಕ್' ರಿಲೀಸ್ ಮುಂದೂಡಿದ್ದಾರೆ. ಈ ಬಾರಿ ಹೊಸ ಡೇಟ್ ಕೂಡ ಅನೌನ್ಸ್ ಮಾಡಿಲ್ಲ.
ಪ್ಯಾನ್ ಇಂಡಿಯಾ ಅಲ್ಲ ಪ್ಯಾನ್ ವರ್ಲ್ಡ್ ಮಟ್ಟದಲ್ಲಿ ಏಕಕಾಲಕ್ಕೆ 'ಟಾಕ್ಸಿಕ್' ಸಿನಿಮಾ ಬಿಡುಗಡೆ ಮಾಡಬೇಕು ಎನ್ನುವುದು ಯಶ್ ಲೆಕ್ಕಾಚಾರ. ಅದೇ ಕಾರಣಕ್ಕೆ ತಡವಾದರೂ ಸಹಿಸಿಕೊಳ್ಳುವಂತೆ ಮನವಿ ಮಾಡಿದ್ದಾರೆ. ಸಿನಿಮಾಕಾನ್ ಸಮಾವೇಶದಲ್ಲಿ ಸಿನಿಮಾ ಪ್ರಚಾರ ಮಾಡಿದ್ದರು. ಅದೇ ಸಮಯದಲ್ಲಿ ಚಿತ್ರದ 9 ನಿಮಿಷಗಳ ಫುಟೇಜ್ ಅನ್ನು ಹಾಲಿವುಡ್ ಮಂದಿಗೆ ಯಶ್ ತೋರಿಸಿದ್ದರು. ಅದಕ್ಕೆ ಸಿಕ್ಕ ರೆಸ್ಪಾನ್ಸ್ ನೋಡಿ ಥ್ರಿಲ್ಲಾಗಿ ದೊಡ್ಡಮಟ್ಟದಲ್ಲಿ ವಿದೇಶಗಳಲ್ಲಿ ಸಿನಿಮಾ ಬಿಡುಗಡೆ ಮಾಡುವ ನಿರ್ಧಾರವನ್ನು ಮತ್ತಷ್ಟು ಗಟ್ಟಿಗೊಳಿಸಿಕೊಂಡಿದ್ದಾರೆ.

ಕನ್ನಡ ಹಾಗೂ ಇಂಗ್ಲೀಷ್ ಭಾಷೆಯಲ್ಲಿ 'ಟಾಕ್ಸಿಕ್' ಸಿನಿಮಾ ನಿರ್ಮಾಣವಾಗಿದೆ. ನಮ್ಮತನ, ನಮ್ಮ ಭಾವೋದ್ವೇಗ ಇರುವ ಸಿನಿಮಾ ಇದೆ. ಆದರೆ ಹಾಲಿವುಡ್ ಮಂದಿಗೂ ಕನೆಕ್ಟ್ ಆಗುವ ಗ್ಯಾಂಗ್‌ಸ್ಟರ್ ಸಿನಿಮಾ ಇದಾಗಿದೆ. 'ಟಾಕ್ಸಿಕ್' ಹಾಗೂ 'ರಾಮಾಯಣ' ಸಿನಿಮಾಗಳ ಬಗ್ಗೆ VARIETY ಮ್ಯಾಗಜೀನ್ ಸಂದರ್ಶನದಲ್ಲಿ ಮತ್ತೊಮ್ಮೆ ಯಶ್ ಮಾತನಾಡಿದ್ದಾರೆ. ಯಶ್ ಕವರ್ ಪೇಜ್ ಸಮೇತ ಇತ್ತೀಚಿನ ಮ್ಯಾಗಜೀನ್ ಹೊರ ಬಂದಿತ್ತು. ಇದರಲ್ಲಿ ಸುದೀರ್ಘವಾಗಿ ತಮ್ಮ ಮುಂದಿನ ಯೋಜನೆಗಳ ಬಗ್ಗೆ ಯಶ್ ಪ್ರತಿಕ್ರಿಯಿಸಿದ್ದಾರೆ.
ಸಿನಿಮಾ ಮೇಕಿಂಗ್, ಮಾರ್ಕೆಟಿಂಗ್, ಪ್ರಮೋಷನ್ ವಿಚಾರದಲ್ಲಿ ಭಾರತ ಹಾಗೂ ಹಾಲಿವುಡ್ ನಡುವೆ ಬಹಳ ವ್ಯತ್ಯಾಸವಿದೆ. ಹಾಲಿವುಡ್‌ಗೆ ತಕ್ಕಂತೆ 'ಟಾಕ್ಸಿಕ್' ಸಿನಿಮಾ ಪ್ರಕ್ರಿಯೆ, ವ್ಯವಹಾರ ನಡೀತಿದೆ. ಸಿನಿಮಾ ಸಂಪೂರ್ಣ ಸಿದ್ಧವಾಗಿ ಫೈನಲ್ ಕಾಪಿ ಸಿಕ್ಕಿದ ಮೇಲೆ ಅಲ್ಲಿ ಸಿನಿಮಾ ವಿತರಣೆ, ರಿಲೀಸ್ ಪ್ಲ್ಯಾನ್ ನಡೆಯುತ್ತದೆ. ಈಗ ನಾನು ಸಮಯ ತೆಗೆದುಕೊಂಡು ಸಿನಿಮಾ ಬಿಡುಗಡೆ ನಿರ್ಧಾರ ಮಾಡಿದ್ದೀನಿ ಎಂದಿದ್ದಾರೆ. ಸಿನಿಮಾ ತಡವಾಗುತ್ತಿರುವುದರಿಂದ ನನ್ನ ಅಭಿಮಾನಿಗಳು, ಭಾರತದ ಪ್ರೇಕ್ಷಕರಿಗೆ ಬೇಸರವಾಗ್ತಿದೆ. ಸಾಮಾನ್ಯವಾಗಿ ಒಂದು ಸಿನಿಮಾ ಶುರುವಾದರೆ ಇಷ್ಟು ದಿನಕ್ಕೆ ತೆರೆಗೆ ಬರುತ್ತದೆ ಎನ್ನುವ ಲೆಕ್ಕಚಾರ ಶರುವಾಗುತ್ತದೆ. ಸಿನಿಮಾ ಚಿತ್ರೀಕರಣ ಶುರುವಾಗುತ್ತಿದ್ದಂತೆ ಜನ ಅದರ ಬಗ್ಗೆ ಬರೆಯಲು ಆರಂಭಿಸುತ್ತಾರೆ, ಹೀಗಾಗಿ ಯಾವಾಗ ರಿಲೀಸ್ ಎಂಬ ಚರ್ಚೆ ಸಹಜ ಎಂದಿದ್ದಾರೆ.

ಈ ಬಾರಿ 'ಟಾಕ್ಸಿಕ್' ಸಿನಿಮಾ ಬಿಡುಗಡೆಗೆ ಬಲವಾದ ಕಾರಣವಿದೆ. ಪಾಶ್ಚಿಮಾತ್ಯ ವಿತರಕರು ರೈಟ್ಸ್ ಕೊಂಡುಕೊಳ್ಳಲು ಸಿನಿಮಾ ಸಿದ್ಧವಿರಬೇಕು, ಸಿನಿಮಾ ಫೈನಲ್ ಕಾಪಿ ಸಿಕ್ಕಿದ ಮೇಲೆ ಅಲ್ಲಿ ಎಲ್ಲರೂ ಆರಂಭವಾಗುತ್ತದೆ. ಯಾರಾದರೂ ಸಿನಿಮಾ ರೈಟ್ಸ್ ಕೊಂಡುಕೊಳ್ಳಬೇಕು, ತಂಡದ ಭಾಗವಾಗಬೇಕು ಅಂದ್ರೆ ಪೂರ್ತಿ ಸಿನಿಮಾ ನೋಡುತ್ತಾರೆ. ಕಾರಣ ಭಾರೀ ಮೊತ್ತದ ಹಣ ಹೂಡಿಕೆ ಮಾಡುತ್ತಾರೆ. ಇದೇ ಈಗ ಸವಾಲಾಗಿದೆ. ಆದರೆ ನ್ನ ತಂಡದ ಬಗ್ಗೆ ನನಗೆ ನಂಬಿಕೆಯಿದೆ. ಎಲ್ಲರೂ ಅರ್ಥ ಮಾಡಿಕೊಳ್ಳುತ್ತಾರೆ ಎಂದು ಯಶ್ ವಿವರಿಸಿದ್ದಾರೆ.
'ಟಾಕ್ಸಿಕ್' ಸಿನಿಮಾ ಪೋಸ್ಟ್ ಪ್ರೊಡಕ್ಷನ್ ವರ್ಕ್ ಇನ್ನು ಕಂಪ್ಲೀಟ್ ಆಗಿಲ್ಲ. ಎಲ್ಲಾ ಮುಗಿದು ಫೈನಲ್ ಕಾಪಿ ಸಿದ್ಧವಾದ ಬಳಿಕ ಹಾಲಿವುಡ್ ವಿತರಣ ಸಂಸ್ಥೆಗಳಿಗೆ ಸಿನಿಮಾ ತೋರಿಸಿ ವ್ಯವಹಾರ ಕುದುರಿಸುವ ಲೆಕ್ಕಾಚಾರದಲ್ಲಿದ್ದಾರೆ ಯಶ್. ಅದೇ ಕಾರಣಕ್ಕೆ ಹೊಸ ರಿಲೀಸ್ ಡೇಟ್ ಕೂಡ ಘೋಷಣೆ ಮಾಡದೇ ಕಾಯುತ್ತಿದ್ದಾರೆ. DNEG ಸಂಸ್ಥೆ ಚಿತ್ರದ ಗ್ರಾಫಿಕ್ಸ್ ಕೆಲಸಗಳನ್ನು ಕೈಗೆತ್ತಿಕೊಂಡಿದೆ. ಬಹಳ ಅದ್ಭುತವಾಗಿ ಸಿನಿಮಾ ಕಟ್ಟಿಕೊಡುವ ಪ್ರಯತ್ನ ನಡೀತಿದೆ. ರವಿ ಬಸ್ರೂರು ಅಂಡ್ ಟೀಂ ರೀ-ರೆಕಾರ್ಡಿಂಗ್ ಆರಂಭಿಸಿದೆ.


Click it and Unblock the Notifications