'ಟಾಕ್ಸಿಕ್' ಬರೀ ಗ್ಯಾಂಗ್‌ಸ್ಟರ್ ಸಿನಿಮಾ ಅಲ್ಲ; ಹಾಲಿವುಡ್ ಸಂದರ್ಶನದಲ್ಲಿ ಯಶ್ ಮೊದಲ ಮಾತು
ಗೀತು ಮೋಹನ್ ದಾಸ್ ನಿರ್ದೇಶನದ 'ಟಾಕ್ಸಿಕ್' ಸಿನಿಮಾ ಬಿಡುಗಡೆಗೆ ಸಜ್ಜಾಗ್ತಿದೆ. ಪದೇ ಪದೆ ರಿಲೀಸ್ ಡೇಟ್ ಪೋಸ್ಟ್‌ಪೋನ್ ಆಗಿ ಅಂತಿಮವಾಗಿ ಜೂನ್ 4ಕ್ಕೆ ಸಿನಿಮಾ ತೆರೆಗೆ ಬರುವುದು ಖಚಿತವಾಗಿದೆ. ಈಗಾಗಲೇ ಚಿತ್ರದ ಟೀಸರ್ ಹಾಗೂ ಒಂದು ಸಾಂಗ್ ಬಂದು ಹಿಟ್ ಆಗಿದೆ.
ಅಧಿಕೃತವಾಗಿ 'ಟಾಕ್ಸಿಕ್' ಸಿನಿಮಾ ಪ್ರಚಾರ ಇನ್ನು ಆರಂಭವಾಗಿಲ್ಲ. ಆದರೆ ಹಾಲಿವುಡ್ ಸಂದರ್ಶನದಲ್ಲಿ ಯಶ್ ಮೊದಲ ಬಾರಿಗೆ ಈ ಗ್ಯಾಂಗ್‌ಸ್ಟರ್ ಸಿನಿಮಾ ಬಗ್ಗೆ ಮಾತನಾಡಿದ್ದಾರೆ. ಸಿನಿಮಾಕಾನ್ ಸಮಾವೇಶಕ್ಕಾಗಿ ಲಾಸ್‌ವೇಗಾಸ್‌ನಲ್ಲಿರುವ ಯಶ್ 'ರಾಮಾಯಣ' ಹಾಗೂ 'ಟಾಕ್ಸಿಕ್' ಸಿನಿಮಾಗಳ ಪ್ರಚಾರ ಮಾಡುತ್ತಿದ್ದಾರೆ. ಅಲ್ಲಿನ Fandango ಯೂಟ್ಯೂಬ್ ಚಾನಲ್ ಸಂದರ್ಶನದಲ್ಲಿ ಯಶ್ ಹಾಗೂ ರಾಮಾಯಣ ಚಿತ್ರ ನಿರ್ಮಾಪಕ ನಮಿತ್ ಮಲ್ಹೋತ್ರಾ ಭಾಗಿ ಆಗಿದ್ದಾರೆ. ಸಿನಿಮಾ ಮೇಕಿಂಗ್ ಬಗ್ಗೆ ಸಾಕಷ್ಟು ವಿಚಾರಗಳನ್ನು ಹಂಚಿಕೊಂಡಿದ್ದಾರೆ.

'ರಾಮಾಯಣ' ಸಿನಿಮಾ ಬಗ್ಗೆ ಚರ್ಚೆಯ ನಡುವೆ 'ಟಾಕ್ಸಿಕ್' ಸಿನಿಮಾ ಬಗ್ಗೆ ಯಶ್‌ಗೆ ಪ್ರಶ್ನೆ ಎದುರಾಗಿದೆ. ಅದಕ್ಕೆ ಪ್ರತಿಕ್ರಿಯಿಸಿರುವ ರಾಕಿಂಗ್ ಸ್ಟಾರ್ "ಟಾಕ್ಸಿಕ್ ಕೂಡ ಬಹಳ ಮಹತ್ವಾಕಾಂಕ್ಷೆಯ ಸಿನಿಮಾ. ಮೊದಲ ಬಾರಿಗೆ ನಾವು ಇಂಗ್ಲೀಷ್‌ನಲ್ಲಿ ಕೂಡ ಸಿನಿಮಾ ಶೂಟ್ ಮಾಡಿದ್ದೀವಿ. ಕಾನ್ಸೆಪ್ಟ್‌ನಲ್ಲಿ ಸಾಕಷ್ಟು ಪದರಗಳಿವೆ.. ಇಡು ಬರೀ ಟಿಪಿಕಲ್ ಗ್ಯಾಂಗ್‌ಸ್ಟರ್ ಸಿನಿಮಾ ಅಲ್ಲ. ಮೇಲ್ನೋಟಕ್ಕೆ ಭಾರೀ ಆಕ್ಷನ್ ಇರುವ ಗ್ಯಾಂಗ್‌ಸ್ಟರ್ ಸಿನಿಮಾ ಅನಿಸಬಹುದು. ಆದರೆ ಬಹಳ ಆಳವಾದ ಸೈಕಾಲಜಿ ಇದೆ ಹಾಗೂ ಮಾನವ ಜೀವನದ ಅತ್ಯಂತ ಆಸಕ್ತಿದಾಯಕ ಅಂಶಗಳನ್ನು ಹೊಂದಿದೆ. ಡಾರ್ಕ್ ಕ್ಯಾರೆಕ್ಟರ್‌ಗಳನ್ನು ತೋರಿಸೋಕೆ ಒಳ್ಳೆ ಮಾರ್ಗ, ನೋಡೋಕೆ ಮಜವಾಗಿರುತ್ತದೆ" ಎಂದಿದ್ದಾರೆ.
ಗೀತು ಮೋಹನ್ ದಾಸ್ ಗ್ಯಾಂಗ್‌ಸ್ಟರ್ ಚಿತ್ರಕ್ಕೆ ಹೊಸ ಆಯಾಮ ಕೊಟ್ಟಿದ್ದಾರೆ, ನಾನು ಬಗಳ ಎಂಜಾಯ್ ಮಾಡ್ದೆ ಎಂದು ಯಶ್ ತಿಳಿಸಿದ್ದಾರೆ. "ನಾನು ಗ್ಯಾಂಗ್‌ಸ್ಟರ್ ಕ್ಯಾರೆಕ್ಟರ್‌ಗಳನ್ನು ಮಾಡಿದ್ದೀನಿ, ಡಾರ್ಕ್ ಕ್ಯಾರೆಕ್ಟರ್ ಮಾಡುವುದಕ್ಕೂ ಇಷ್ಟ. ನಟನಾಗಿ ಸಾಕಷ್ಟು ಪಾತ್ರಗಳನ್ನು ಮಾಡಬೇಕು, ಅದಕ್ಕೆ ಯಾವುದೇ ಗಡಿ ಇಲ್ಲ. ಈ ಚಿತ್ರದಲ್ಲಿ ಆ ಕ್ಯಾರೆಕ್ಟರ್‌ಗೆ ಸಾಕಷ್ಟು ಶೇಡ್ಸ್, ಲುಕ್ಸ್ ಇವೆ. ಸಾಕಷ್ಟು ಪ್ರತಿಭಾನ್ವಿತ ಕಲಾವಿದರು ಚಿತ್ರದಲ್ಲಿದೆ. ಭಾರತದಲ್ಲಿ ಪ್ರತಿ 200 ಕಿ.ಮೀಗೆ ಬೇರೆ ಬೇರೆ ರಾಜ್ಯಗಳಲ್ಲಿ ಭಾಷೆ ಬದಲಾಗುತ್ತದೆ. ಬೇರೆ ಬೇರೆ ಸಂಸ್ಕೃತಿ, ಭಾಷೆ ಮಾತನಾಡುತ್ತಾರೆ. ಇತ್ತೀಚೆಗೆ ನಾವು ಸಿನಿಮಾಗಳನ್ನು ಡಬ್ ಮಾಡಿ ಪ್ಯಾನ್ ಇಂಡಿಯಾ ಫಿಲ್ಮ್ಸ್ ಕಾನ್ಸೆಪ್ಟ್ ಶುರು ಮಾಡಿದ್ದೀವಿ. ಇದು ಭಾರತೀಯ ಸಿನಿರಸಿಕರಿಗೆ ಹೊಸ ಅನುಭವ ನೀಡುತ್ತಿದೆ" ಎಂದು ತಿಳಿಸಿದ್ದಾರೆ.
ನಮಿತ್ ಜೊತೆಗಿನ ಪರಿಚಯದ ಬಗ್ಗೆ ಕೂಡ ಯಶ್ ಮಾತನಾಡಿದ್ದಾರೆ. ಪ್ರೇಕ್ಷಕರಿಗೆ ಅದ್ಭುತ ಸಿನಿಮಾಗಳನ್ನು ನೀಡಲು ಏನೆಲ್ಲಾ ಮಾಡಬಹುದು ಎಂದು ಯೋಚಿಸುತ್ತಿದ್ದಾಗ ನಮಿತ್ ಪರಿಚಯವಾಯಿತು. ನಮಿತ್ ಅವರ DNEG ಕಂಪನಿ ಜೊತೆ ಚರ್ಚೆ ನಡೆಸಲು ಆರಂಭಿಸಿದ ಬಳಿಕ 'ರಾಮಾಯಣ' ಸಿನಿಮಾ ಕೂಡ ಶುರುವಾಯಿತು. DNEG ಕಂಪನಿ ಕೂಡ 'ಟಾಕ್ಸಿಕ್' ಚಿತ್ರದ ಪ್ರಮುಖ ಭಾಗವಾಗಿದೆ. ಅದ್ಭುತ ಸಿನಿಮಾಗಳನ್ನು ನೀಡುವುದೇ ನಮ್ಮ ಗುರಿ.. ಹಾಲಿವುಡ್ ಅಥವಾ ಪಾಶ್ಚಿಮಾತ್ಯ ಸಿನಿಮಾಗಳು ಭಾರತದಲ್ಲಿ ಸಂಪೂರ್ಣವಾಗಿ ಆವರಿಸಿಕೊಂಡಿಲ್ಲ. ಈ ಎರಡೂ ಪ್ರಪಂಚಗಳನ್ನು ಒಟ್ಟಿಗೆ ಸೇರಿಸಿ ಅದ್ಭುತ ಸಿನಿಮಾಗಳನ್ನು ಮಾಡುವ ಪ್ರಯತ್ನ ಮಾಡ್ತೀದ್ದೀವಿ ಎಂದು ಯಶ್ ವಿವರಿಸಿದ್ದಾರೆ.
ಯುಕೆ ಕಲಾವಿದರು 'ಟಾಕ್ಸಿಕ್' ಚಿತ್ರದಲ್ಲಿದ್ದಾರೆ. ಜೆಜೆ ಪೆರ್ರಿ ಸೇರಿದಂತೆ ಹಾಲಿವುಡ್ ತಂತ್ರಜ್ಞರು ಕೆಲಸ ಮಾಡಿದ್ದಾರೆ. 'ರಾಮಾಯಣ' ಚಿತ್ರದಲ್ಲಿ ಕೂಡ ಹಾಲಿವುಡ್ ಸ್ಟಂಟ್ ಮಾಸ್ಟರ್ಸ್ ಕೆಲಸ ಮಾಡಿದ್ದಾರೆ. ನಮ್ಮ ಸಿನಿಮಾ ಟೆಕ್ನಿಕ್ ಹಾಗೂ ಹಾಲಿವುಡ್ ಸಿನಿಮಾ ಟೆಕ್ನಿಕ್ ಎಕ್ಸ್‌ಚೇಂಜ್ ಮಾಡಿಕೊಂಡು ಅದ್ಭುತ ಸಿನಿಮಾ ಕಟ್ಟುವ ಪ್ರಯತ್ನ ಸಾಗಿದೆ ಎಂದು ಯಶ್ ಹೇಳಿದ್ದಾರೆ.


Click it and Unblock the Notifications











