'ಧುರಂಧರ್- 2' ಎದುರು 'ಟಾಕ್ಸಿಕ್' ಬಿಡುಗಡೆ ಮಾಡದೇ ಒಳ್ಳೆ ಕೆಲ್ಸ ಮಾಡಿದ್ರಾ ಯಶ್?
ಎಲ್ಲಾ ಅಂದುಕೊಂಡಂತೆ ಆಗಿದ್ದರೆ ಈ ವಾರ 'ಧುರಂಧರ್- 2' ಜೊತೆ ಕನ್ನಡದ 'ಟಾಕ್ಸಿಕ್' ಸಿನಿಮಾ ಕೂಡ ತೆರೆಗಪ್ಪಳಿಸಬೇಕಿತ್ತು. 4 ವರ್ಷಗಳಿಂದ ಯಶ್ ಚಿತ್ರಕ್ಕಾಗಿ ಕಾಯುತ್ತಿದ್ದ ಅಭಿಮಾನಿಗಳು ತೆರೆಮೇಲೆ ರಾಯ ಹಾಗೂ ಟಿಕೆಟ್ ಆಗಿ ರಾಕಿಂಗ್ ಸ್ಟಾರ್ ಆರ್ಭಟ ನೋಡಿ ಎಂಜಾಯ್ ಮಾಡುತ್ತಿದ್ದರು. ಇರಾನ್- ಇಸ್ರೇಲ್ ಯುದ್ಧದ ನೆಪವೊಡ್ಡಿ ಸಿನಿಮಾ ಬಿಡುಗಡೆ 3 ತಿಂಗಳು ಮುಂದೂಡಲಾಗಿದೆ.
ಮಾರ್ಚ್ 19ಕ್ಕೆ ಬರಬೇಕಿದ್ದ 'ಟಾಕ್ಸಿಕ್' ಸಿನಿಮಾ ಜೂನ್ 4ರಂದು ತೆರೆಗಪ್ಪಳಿಸಲಿದೆ. ಸದ್ಯ ಬಾಕ್ಸಾಫೀಸ್‌ನಲ್ಲಿ 'ಧುರಂಧರ್- 2' ಆರ್ಭಟ ಜೋರಾಗಿದೆ. ಸಣ್ಣ ಪುಟ್ಟ ತಪ್ಪುಗಳನ್ನು ಪಕ್ಕಕ್ಕಿಟ್ಟು ಜನ ಸಿನಿಮಾ ನೋಡಿ ಕೊಂಡಾಡುತ್ತಿದ್ದಾರೆ. 'ಟಾಕ್ಸಿಕ್' ಚಿತ್ರವನ್ನು ಬಿಡುಗಡೆ ಮಾಡದೇ ಇದ್ದಿದ್ದೇ ಒಳ್ಳೆದಾಯ್ತು ಎನ್ನುವ ಚರ್ಚೆ ನಡೀತಿದೆ. ಒಂದು ವೇಳೆ ಯಶ್ ಚಿತ್ರ ಇದೇ ಸಮಯದಲ್ಲಿ ಬಂದಿದ್ದರೆ ಸಹಜವಾಗಿಯೇ ಹಿನ್ನಡೆ ಆಗುತ್ತಿತ್ತು ಎನ್ನುವ ಮಾತುಗಳು ಕೇಳಿಬರ್ತಿದೆ. ಆದರೆ ರಾಕಿಭಾಯ್ ಫ್ಯಾನ್ಸ್ ಇದನ್ನು ಒಪ್ಪಲು ಸಿದ್ಧರಿಲ್ಲ.

20 ದಿನಗಳ ಹಿಂದೆ ಕೂಡ 'ಟಾಕ್ಸಿಕ್' ಹಾಗೂ 'ಧುರಂಧರ್-2' ಬಾಕ್ಸಾಫೀಸ್ ಕ್ಲ್ಯಾಶ್ ಪಕ್ಕಾ ಎಂದೇ ಎಲ್ಲರೂ ಅಂದುಕೊಂಡಿದ್ದರು. ಒಂದು ವೇಳೆ ರಣ್‌ವೀರ್ ಸಿನಿಮಾ ರಿಲೀಸ್ ಮುಂದೂಡಬಹುದು. ಯಶ್ ಮಾತ್ರ ತಮ್ಮ ನಿರ್ಧಾರದಿಂದ ಹಿಂದೆ ಸರಿಯಲ್ಲ ಎಂದೇ ಎಲ್ಲರೂ ಅಂದುಕೊಂಡಿದ್ದರು. ಅಚ್ಚರಿ ಎನ್ನುವಂತೆ 'ಟಾಕ್ಸಿಕ್' ಸಿನಿಮಾ ಅಭಿಮಾನಿಗಳಿಗೆ ಶಾಕ್ ಎದುರಾಗಿತ್ತು. ಅಂತರಾಷ್ಟ್ರೀಯಮಟ್ಟದಲ್ಲಿ ಸಿನಿಮಾ ಬಿಡುಗಡೆ ಆಗಬೇಕಿದೆ. ಗಲ್ಫ್ ದೇಶಗಳಲ್ಲಿ ಯುದ್ಧದ ಆತಂಕ ಇದೆ. ಇಂತಹ ಸಮಯದಲ್ಲಿ ಅಲ್ಲಿ ಸಿನಿಮಾ ಬಿಡುಗಡೆ ಸರಿಯಲ್ಲ. ಇದರಿಂದ ಕಲೆಕ್ಷನ್ ಮೇಲೆ ಪರಿಣಾಮ ಬೀರಬಹುದು ಎಂದು ಚಿತ್ರತಂಡ ಈ ನಿರ್ಧಾರಕ್ಕೆ ಬಂದಿತ್ತು.
'ಧುರಂಧರ್- 2' ಚಿತ್ರಕ್ಕೆ ಹೆದರಿ 'ಟಾಕ್ಸಿಕ್' ರಿಲೀಸ್ ಮುಂದೂಡಿದ್ರು ಎಂದು ಮೂದಲಿಸಿದರವರು ಇದ್ದಾರೆ. ವಿಎಫ್‌ಎಕ್ಸ್ ಇಷ್ಟವಾಗಲಿಲ್ಲ, ಒಂದಷ್ಟು ದೃಶ್ಯ ರೀ-ಶೂಟ್ ಮಾಡಬೇಕು ಅದಕ್ಕೆ ಸಿನಿಮಾ ರಿಲೀಸ್ ಮುಂದೂಡಿದ್ದಾರೆ ಎನ್ನುವ ಊಹಾಪೋಹ ಕೂಡ ಕೇಳಿಬಂತು. ಅದನ್ನೆಲ್ಲಾ ಪಕ್ಕಕ್ಕಿಟ್ಟರೆ 'ಟಾಕ್ಸಿಕ್' ಸಿನಿಮಾ ಕೂಡ ಸಿಕ್ಕಾಪಟ್ಟೆ ಹೈಪ್ ಕ್ರಿಯೇಟ್ ಮಾಡಿತ್ತು. ಚಿತ್ರದ ಟೀಸರ್‌ಗಳು ಹಿಟ್ ಆಗಿ ಸಂಚಲನ ಸೃಷ್ಟಿಸಿತ್ತು. 'ಕೆಜಿಎಫ್'-2 ಬಳಿಕ ಯಶ್ ನಟನೆಯ ಸಿನಿಮಾ ಎನ್ನುವ ಕಾರಣಕ್ಕೆ ನಿರೀಕ್ಷೆ ಎವರೆಸ್ಟ್ ಎತ್ತರಕ್ಕೇರಿದೆ.

ಮಾರ್ಚ್ 19ಕ್ಕೆ 'ಟಾಕ್ಸಿಕ್' ಸಿನಿಮಾ ರಿಲೀಸ್ ಮಾಡುವುದಾಗಿ ವರ್ಷದ ಹಿಂದೆ ಘೋಷಿಸಿದ್ದರು. ಆದರೆ ಕಳೆದ ವರ್ಷದ ಕೊನೆಗೆ 'ಧುರಂಧರ್' ಸಿನಿಮಾ ತೆರೆಗಪ್ಪಳಿಸಿ ಹಿಟ್ ಆಗಿತ್ತು. ಯುಗಾದಿ, ರಂಜಾನ್ ವೀಕೆಂಡ್ ಟಾರ್ಗೆಟ್ ಮಾಡಿ ಸೀಕ್ವೆಲ್ ರಿಲೀಸ್ ಡೇಟ್ ಫಿಕ್ಸ್ ಮಾಡಿದ್ದರು. ಹಾಗಾಗಿ ಬಾಕ್ಸಾಫೀಸ್ ಕ್ಲ್ಯಾಶ್ ಚರ್ಚೆ ಶುರುವಾಯಿತು. ಎರಡೂ ಸಿನಿಮಾಗಳ ಬಗ್ಗೆ ನಿರೀಕ್ಷೆ ಹೆಚ್ಚಿದ್ದರಿಂದ ಕಂಡಿತ ಕ್ಲ್ಯಾಶ್ ನಡೀತಿತ್ತು. ಅದರ ಪರಿಣಾಮ ಎರಡೂ ಸಿನಿಮಾಗಳ ಮೇಲೆ ಆಗ್ತಿತ್ತು. ದಕ್ಷಿಣದಲ್ಲಿ 'ಟಾಕ್ಸಿಕ್' ಉತ್ತರ ಭಾರತದಲ್ಲಿ 'ಧುರಂಧರ್-2' ಚಿತ್ರಗಳ ಅಬ್ಬರ ಜೋರಾಗಿ ಇರುತ್ತಿತ್ತು.
ದೇಶಭಿಮಾನದ ಜೊತೆಗೆ ಬಿಜೆಪಿ ಪ್ರಾಪೊಗಂಡಾ ಇರುವ ಸಿನಿಮಾ 'ಧುರಂಧರ್-2' ಎನ್ನುವುದು ಕೆಲವರ ಆರೋಪ. ಪಂಚರಾಜ್ಯಗಳ ಚುನಾವಣೆಗೆ ಇದನ್ನು ಬಳಸಿಕೊಳ್ಳಲಾಗ್ತಿದೆ. ಹಾಗಾಗಿ 'ಟಾಕ್ಸಿಕ್' ಸಿನಿಮಾ ರಿಲೀಸ್ ಮಾಡದಂತೆ ಒತ್ತಡ ಹೇರಿರಬಹುದು ಎಂದು ಕೆಲವರು ಕಾಮೆಂಟ್ ಮಾಡುತ್ತಿದ್ದಾರೆ. 'ಧುರಂಧರ್-2' ಕ್ರೇಜ್ ನೋಡುತ್ತಿದ್ದರೆ 'ಟಾಕ್ಸಿಕ್' ಚಿತ್ರವನ್ನು ಒಂದು ವರ್ಗದವರು ನೆಗೆಟಿವ್ ಪ್ರಚಾರ ಮಾಡಿ ತುಳಿದುಬಿಡುತ್ತಿದ್ದರು ಎನ್ನುವ ವಾದ ಕೆಲವರದ್ದು. ಒಟ್ಟಾರೆ ಬಾಕ್ಸಾಫೀಸ್ ಕ್ಲ್ಯಾಶ್ ನಡೆಯದೇ ಇರುವುದೇ ಎರಡೂ ಸಿನಿಮಾಗಳಿಗೆ ಪ್ಲಸ್ ಆಗಿದೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಜೋರಾಗಿದೆ.


Click it and Unblock the Notifications











