ರಿಲೀಸ್ ಆಯ್ತು 'ಟಾಕ್ಸಿಕ್' ಚಿತ್ರದ 'ತಬಾಹಿ' ಸಾಂಗ್; ಅದೊಂದು ಕಾರಣಕ್ಕೆ ಫ್ಯಾನ್ಸ್ ಬೇಸರ
'ಟಾಕ್ಸಿಕ್' ಚಿತ್ರದ ಫಸ್ಟ್ ಸಾಂಗ್ ರಿಲೀಸ್ ಆಗಿದೆ. 'ತಬಾಹಿ' ಎಂದು ಶುರುವಾಗುವ ಸಾಂಗ್ ಕನ್ನಡ, ತೆಲುಗು, ತಮಿಳು, ಹಿಂದಿ ಹಾಗೂ ಮಲಯಾಳಂ ಭಾಷೆಗಳಲ್ಲಿ ಏಕಕಾಲಕ್ಕೆ ಕೇಳಲು ಸಿಕ್ಕಿದೆ. ವಿಶಾಲ್ ಮಿಶ್ರಾ ಟ್ಯೂನ್ ಹಾಕಿ ಹಾಡಿದ್ದಾರೆ. ಕನ್ನಡದಲ್ಲಿ ನಿರ್ದೇಶಕ ಯೋಗರಾಜ್ ಭಟ್ ಸಾಹಿತ್ಯ ಬರೆದಿರುವುದು ವಿಶೇಷ.
ತೆಲುಗಿನಲ್ಲಿ ರಾಮಜೋಗಯ್ಯ ಶಾಸ್ತ್ರಿ, ತಮಿಳಿನಲ್ಲಿ ನಿರ್ದೇಶಕ ವಿಘ್ನೇಶ್ ಶಿವನ್, ಹಿಂದಿಯಲ್ಲಿ ರಾಜ್‌ಶೇಖರ್, ಮಲಯಾಳಂದಲ್ಲಿ ರಫೀಕ್ ಅಹ್ಮದ್ ಸಾಹಿತ್ಯ ಬರೆದಿದ್ದಾರೆ. ಎಲ್ಲಾ ಭಾಷೆಗಳಲ್ಲಿ ಸ್ವತಃ ವಿಶಾಲ್ ಮಿಶ್ರಾ ಹಾಡಿಗೆ ದನಿಯಾಗಿದ್ದಾರೆ. 4 ನಿಮಿಷ 26 ಸೆಕೆಂಡ್ ಸಾಂಗ್ ಕೇಳುಗರ ಗಮನ ಸೆಳೆದಿದೆ. ಕೇಳ್ತಾ ಕೇಳ್ತಾ ಮತ್ತಷ್ಟು ಇಷ್ಟವಾಗುವ ಸುಳಿವು ಸಿಕ್ಕಿದೆ. ರಾಯ(ಯಶ್) ಹಾಗೂ ನಾಡಿಯ(ಕಿಯಾರಾ ಅದ್ವಾನಿ) ನಡುವಿನ ರೊಮ್ಯಾಂಟಿಕ್ ಸಾಂಗ್ ಇದು ಎನ್ನುವುದು ಗೊತ್ತಾಗುತ್ತಿದೆ. ಜೀ-ಮ್ಯೂಸಿಕ್ ಚಿತ್ರದ ಆಡಿಯೋ ರೈಟ್ಸ್ ಕೊಂಡುಕೊಂಡಿದೆ. ಜೀ ಮ್ಯೂಸಿಕ್ ಯೂಟ್ಯೂಬ್ ಚಾನಲ್‌ನಲ್ಲೇ ಸಾಂಗ್ ರಿಲೀಸ್ ಆಗಿದೆ.

"ಎಲ್ಲಾ ಮಿತಿ ಮೀರಿ ಹೋಗೋಣ ಬಾ.. ಎಲ್ಲಾ ಗಡಿ ದಾಟಿ ನೋಡೋಣ ಬಾ.. ಶೃಂಗಾರ ದಂಗಾರ ಸಿಡಿದೇಳಲು ತಬಾಹಿ... ತಬಾಹಿ" ಹೀಗೆ ಕನ್ನಡದಲ್ಲಿ ಹಾಡು ಮುಂದುವರೆಯುತ್ತದೆ. ರಾಕಿಂಗ್ ಸ್ಟಾರ್ ಅಭಿಮಾನಿಗಳಿಗೆ ಸಾಂಗ್ ಸಖತ್ ಇಷ್ಟವಾಗ್ತಿದೆ. ಪದೇ ಪದೆ ಕೇಳಿ ಎಂಜಾಯ್ ಮಾಡ್ತಿದ್ದಾರೆ. ಎಲ್ಲಾ ಸರಿ ಆದರೆ ಅದೊಂದು ಕಾರಣಕ್ಕೆ ಸಿನಿರಸಿಕರು ಬೇಸರಗೊಂಡಿದ್ದಾರೆ.
ವೀಡಿಯೋ ಸಾಂಗ್ ಅಲ್ಲ, ಲಿರಿಕಲ್ ಸಾಂಗ್ ಕೂಡ ಅಲ್ಲ, ಆಡಿಯೋ ಸಾಂಗ್ ರಿಲೀಸ್ ಮಾಡಿದ್ದಾರೆ. ಒಂದೇ ಒಂದು ಪೋಸ್ಟರ್ ಇಟ್ಟು ಆಡಿಯೋ ಸಾಂಗ್ ಬಿಟ್ಟಿರುವುದು ಈ ಬೇಸರಕ್ಕೆ ಕಾರಣವಾಗಿದೆ. ಪ್ಯಾನ್ ವರ್ಲ್ಡ್ ಚಿತ್ರಕ್ಕೆ ತಕ್ಕಂತೆ ಸಾಂಗ್ ತಯಾರು ಮಾಡಿ ಬಿಡಬೇಕಿತ್ತು. ಕೊನೆ ಪಕ್ಷ ಇದೇ ಹಾಡಿನ ನಾಲ್ಕೈದು ಪೋಸ್ಟರ್ ಇಟ್ಟು ಲಿರಿಕಲ್ ವೀಡಿಯೋ ಮಾಡಬಹುದಿತ್ತು ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಸಣ್ಣ ಸಣ್ಣ ವೀಡಿಯೋ ಝಲಕ್ ಮಿಕ್ಸ್ ಮಾಡಿ ಬಿಟ್ಟಿದ್ದರೆ ಸಾಂಗ್ ಕೇಳಲು, ನೋಡಲು ಇನ್ನಷ್ಟು ಮಜವಾಗಿ ಇರುತ್ತಿತ್ತು ಎಂದು ಬೇಸರ ವ್ಯಕ್ತಪಡಿಸುತ್ತಿದ್ದಾರೆ.
ಇದು ಬರೀ ಆಡಿಯೋ ಸಾಂಗ್.. ಶೀಘ್ರದಲ್ಲೇ ವೀಡಿಯೋ ಸಾಂಗ್ ಬರುತ್ತದೆ ಎಂದು ಕೆವಿಎನ್ ಸಂಸ್ಥೆ ಪೋಸ್ಟ್ ಮಾಡಿದೆ. ಒಮ್ಮೆಲೆ ವೀಡಿಯೋ ಸಾಂಗ್ ಬಿಡಬಹುದಿತ್ತು. ಇದು ಯಾಕೆ ಬೇಕಿತ್ತು ಎಂದು ಕಾಮೆಂಟ್ ಮಾಡಿ ಬೇಸರ ಹೊರ ಹಾಕುತ್ತಿದ್ದಾರೆ. 'ಟಾಕ್ಸಿಕ್' ಚಿತ್ರತಂಡ ಡಬ್ಬಿಂಗ್, ಪೋಸ್ಟ್ ಪ್ರೊಡಕ್ಷನ್, ಪ್ರಮೋಷನ್, ರಿಲೀಸ್ ಅಂತ ಬಹಳ ಬ್ಯುಸಿಯಾಗಿದೆ. ಲಿರಿಕಲ್ ವೀಡಿಯೋ ಮಾಡಲು ಸಮಯ ಅಭಾವದಿಂದ ಹೀಗೆ ಮಾಡಿರಬಹುದು ಎಂದು ಕೆಲ ಅಭಿಮಾನಿಗಳು ಸಮಜಾಯಿಷಿ ಕೊಡುತ್ತಿದ್ದಾರೆ.
ಮಾರ್ಚ್ 19ಕ್ಕೆ ವಿಶ್ವದಾದ್ಯಂತ 'ಟಾಕ್ಸಿಕ್' ಸಿನಿಮಾ ತೆರೆಗೆ ಬರಲಿದೆ. ಅದಕ್ಕೂ ಮುನ್ನ ಟ್ರೈಲರ್ ರಿಲೀಸ್ ಆಗಬೇಕಿದೆ. ಈ ವಾರವೇ ಬೆಂಗಳೂರಿನಲ್ಲಿ ಗ್ರ್ಯಾಂಡ್ ಈವೆಂಟ್ ನಡೆಸಿ ಟ್ರೈಲರ್ ರಿಲೀಸ್ ಮಾಡುತ್ತಾರೆ ಎನ್ನಲಾಗ್ತಿದೆ. ಈ ಬಗ್ಗೆ ಖಚಿತ ಮಾಹಿತಿ ಇನ್ನು ಲಭ್ಯವಾಗಿಲ್ಲ. ಯಶ್ ಜೊತೆಗೆ ಕಿಯಾರಾ ನಾಯಕಿಯಾಗಿ ನಟಿಸುತ್ತಿದ್ದಾರೆ. ಇನ್ನುಳಿದಂತೆ ನಯನತಾರಾ, ಹುಮಾ ಖುರೇಶಿ, ತಾರಾ ಸುತಾರಿತಾ, ರುಕ್ಮಿಣಿ ವಸಂತ್ ಚಿತ್ರದ ಮುಖ್ಯ ಭೂಮಿಕೆಯಲ್ಲಿ ಬಣ್ಣ ಹಚ್ಚಿದ್ದಾರೆ.
ಕೆವಿಎನ್ ಪ್ರೊಡಕ್ಷನ್ಸ್ ಜೊತೆ ಸೇರಿ ಯಶ್ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ರಾಯ ಹಾಗೂ ಟಿಕೆಟ್ ಎಂಬ ಎರಡು ಪಾತ್ರಗಳಲ್ಲಿ ನಟಿಸಿದ್ದಾರೆ ಎನ್ನಲಾಗ್ತಿದೆ. 1000 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಲೆಕ್ಕಾಚಾರ ಶುರುವಾಗಿದೆ. ರವಿಬಸ್ರೂರು ಸೇರಿ 5 ಮಂದಿ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡಿದ್ದಾರೆ. ಒಂದು ಸಾಂಗ್ ಜೊತೆಗೆ ಚಿತ್ರಕ್ಕೆ ರವಿ ಬಸ್ರೂರು ರೀ-ರೆಕಾರ್ಡಿಂಗ್ ಮಾಡುತ್ತಿದ್ದಾರೆ.


Click it and Unblock the Notifications











