ಯಶ್ 'ಟಾಕ್ಸಿಕ್' ಟೀಸರ್‌ನಲ್ಲಿ ಅಶ್ಲೀಲ ಕಂಟೆಂಟ್; ಮುಖ್ಯಮಂತ್ರಿ ಚಂದ್ರು ಅಸಮಾಧಾನ
ರಾಕಿಂಗ್ ಸ್ಟಾರ್ ಯಶ್ ಹುಟ್ಟುಹಬ್ಬದ ಸಂಭ್ರಮದಲ್ಲಿ ಬಿಡುಗಡೆಯಾಗಿದ್ದ 'ಟಾಕ್ಸಿಕ್' ಚಿತ್ರದ ಟೀಸರ್ ಭಾರೀ ವೈರಲ್ ಆಗ್ತಿದೆ. ಅದರಲ್ಲಿರುವ ಅಶ್ಲೀಲ ದೃಶ್ಯದ ಬಗ್ಗೆ ಪರ ವಿರೋಧ ಚರ್ಚೆ ನಡೀತಿದೆ. ವಕೀಲರೊಬ್ಬರು ಈ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. AAP ಪಕ್ಷದಿಂದ ಮಹಿಳಾ ಆಯೋಗಕ್ಕೆ ದೂರು ನೀಡಲಾಗಿದೆ. ಇದೀಗ ಹಿರಿಯ ನಟ ಮುಖ್ಯಮಂತ್ರಿ ಚಂದ್ರು ಈ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.
'ಟಾಕ್ಸಿಕ್' ಟೀಸರ್ ಬ್ಯಾನ್ ಮಾಡುವಂತೆ AAP ಪಕ್ಷದಿಂದ ಮಹಿಳಾ ಆಯೋಗಕ್ಕೆ ಮನವಿ ಮಾಡಲಾಗಿದೆ. ಇದೇ ವಿಚಾರದ ಬಗ್ಗೆ AAP ರಾಜ್ಯ ಘಟಕದ ಅಧ್ಯಕ್ಷ ಮುಖ್ಯಮಂತ್ರಿ ಚಂದ್ರು ಫಿಲ್ಮಿಬೀಟ್ ಕನ್ನಡಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ. "ಇಂತಹ ದೃಶ್ಯಗಳಲ್ಲಿ ಮಕ್ಕಳಿಗೆ ಅರಿವು ಮೂಡಿಸುವಂತಿಲ್ಲ, ಬದಲಿಗೆ ಪ್ರಚೋದನೆ ನೀಡುವಂತಿದೆ ಎನ್ನುವ ಸುದ್ದಿ ಇದೆ. ಹಾಗಾಗಿ ಅವ್ರೇ ಅರ್ಥ ಮಾಡ್ಕೊಂಡು ನಿಲ್ಲಿಸಬೇಕು. ವೀಡಿಯೋ ತೆಗಿಬೇಕು. ಸೆನ್ಸಾರ್ ಬೋರ್ಡ್ ಇಂಥದ್ದಕ್ಕೆ ಕಡಿವಾಣ ಹಾಕಬೇಕು. ಯಶ್ ಸಿನಿಮಾ ಅಂತ ಅಲ್ಲ. ಯಾವುದೇ ಸಿನಿಮಾ ಆದರೂ ಸರಿ, ಇಂತದ್ದು ಬೇಡ" ಎಂದು ಹೇಳಿದ್ದಾರೆ.

ಮಾತು ಮುಂದುವರೆಸಿದ ಮುಖ್ಯಮಂತ್ರಿ ಚಂದ್ರು "ಇದು ಡೈರೆಕ್ಟ್ ಇಂಗ್ಲೀಷ್ ಸಿನ್ಮಾ ಆಗಿದ್ದರೆ ಪರವಾಗಿಲ್ಲ. ಬದಲಿಗೆ ಇದನ್ನು ಎಲ್ಲಾ ಭಾಷೆಗಳಿಗೆ ಡಬ್ ಮಾಡಿ ಬಿಡುಗಡೆ ಮಾಡ್ತಿದ್ದಾರೆ. ಹಾಗಾಗಿ ಇದೊಂದು ದುರಂತ, ಅಪಾಯಕಾರಿ ಬೆಳವಣಿಗೆ. ನನ್ನ ಪ್ರಕಾರ ಇದಕ್ಕೆ ಸರ್ಕಾರ, ಸೆನ್ಸಾರ್ ಮಂಡಳಿ, ಸಾರ್ವಜನಿಕರು ಪ್ರತಿಕ್ರಿಯಿಸಬೇಕು, ಕ್ರಮ ತೆಗೆದುಕೊಳ್ಳಬೇಕು. ಮಕ್ಕಳನ್ನು ಕೂರಿಸಿಕೊಂಡು ಇದನ್ನೆಲ್ಲಾ ತೋರಿಸೋಕೆ ಆಗುತ್ತಾ? ಇದರಲ್ಲಿ ಯಾವ ಉದ್ದೇಶ ಇದೆ. ಬಚ್ಚಲು ಮನೆಯಲ್ಲಿ ಮಾಡುವುದು ಬಚ್ಚಲಲ್ಲಿ ಮಾಡ್ಬೇಕು, ದೇವರ ಮನೆಯಲ್ಲಿ ಮಾಡುವುದನ್ನು ದೇವರ ಮನೆಯಲ್ಲಿ ಮಾಡ್ಬೇಕು. ಅವಶ್ಯಕತೆ ಇದ್ದರೆ ಅದನ್ನು ಎಷ್ಟು ಸೂಕ್ಷ್ಮವಾಗಿ ತೋರಿಸಬೇಕೋ ಅಷ್ಟು ಸೂಕ್ಷ್ಮವಾಗಿ ತೋರಿಸ್ಬೇಕು. ಅದನ್ನೇ ಟೀಸರ್ ಮಾಡಿ ಪಬ್ಲಿಸಿಟಿಗೆ ಬಳಸುವುದು ಸರಿಯಲ್ಲ" ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಗೀತು ಮೋಹನ್ ದಾಸ್ ನಿರ್ದೇಶನದ 'ಟಾಕ್ಸಿಕ್' ಸಿನಿಮಾ ಮಾರ್ಚ್ 19ಕ್ಕೆ ಬಿಡುಗಡೆ ಆಗ್ತಿದೆ. ಕನ್ನಡ ಮಾತ್ರವಲ್ಲದೇ ದೇಶವಿದೇಶದ ಭಾಷೆಗಳಿಗೆ ಡಬ್ ಆಗಿ ತೆರೆಗೆ ಬರಲಿದೆ. ಹಾಲಿವುಡ್ ತಂತ್ರಜ್ಞರು, ಕಲಾವಿದರು ಚಿತ್ರದಲ್ಲಿ ನಟಿಸಿದ್ದಾರೆ. ಟೀಸರ್‌ನಲ್ಲಿರುವ ಹಸಿಬಿಸಿ ದೃಶ್ಯದಲ್ಲಿ ಬ್ರೆಜಿಲಿಯನ್ ನಟಿ ಹಾಗೂ ಮಾಡೆಲ್ ಬೀಟ್ರಿಜ್ ಟೌಫೆನ್‌ಬಾಚ್ ಕಾಣಿಸಿಕೊಂಡಿದ್ದಾರೆ. ಕೆವಿಎನ್ ಪ್ರೊಡಕ್ಷನ್ ಸಂಸ್ಥೆ ಜೊತೆ ಸೇರಿ ಯಶ್ ಚಿತ್ರಕ್ಕೆ ಹಣ ಹೂಡಿದ್ದಾರೆ.

ಬಹುಕೋಟಿ ವೆಚ್ಚದಲ್ಲಿ 'ಟಾಕ್ಸಿಕ್' ಸಿನಿಮಾ ನಿರ್ಮಾಣವಾಗಿದೆ. 60-70ರ ದಶಕದ ಗೋವಾ ಡ್ರಗ್ಸ್ ಮಾಫಿಯಾ ಸುತ್ತಾ ಚಿತ್ರದ ಕಥೆ ಸಾಗಲಿದೆ. ಟೀಸರ್‌ನಲ್ಲಿ ಅದಕ್ಕೆ ಸುಳಿವು ಸಿಕ್ಕಿದೆ. ಇನ್ನು ಹಾಲಿವುಡ್ ಸಿನಿಮಾಗಳ ರೀತಿ ಈ ಚಿತ್ರವನ್ನು ಕಟ್ಟಿಕೊಡುವ ಪ್ರಯತ್ನ ಮಾಡಿದ್ದಾರೆ. ನಯನತಾರ, ಹುಮಾ ಖುರೇಶಿ, ರುಕ್ಮಿಣಿ ವಸಂತ್ ಸೇರಿ ದೊಡ್ಡ ತಾರಾಗಣ ಚಿತ್ರದಲ್ಲಿದೆ. ರಾಜೀವ್ ರವಿ ಛಾಯಾಗ್ರಹಣ, ರವಿ ಬಸ್ರೂರು ಸಂಗೀತ ಚಿತ್ರಕ್ಕಿದೆ. ಸಣ್ಣ ಟೀಸರ್‌ನಿಂದಲೇ ಸಿನಿಮಾ ಬೇಜಾನ್ ಹೈಪ್ ಕ್ರಿಯೇಟ್ ಮಾಡಿದೆ.
'KGF- 2' ನಂತರ ವಾಟ್ ನೆಕ್ಸ್ಟ್ ಎನ್ನುತ್ತಿದ್ದವರಿಗೆ ರಾಯನ ಅವತಾರದಲ್ಲಿ ಯಶ್ ಉತ್ತರ ಕೊಡಲು ಬರ್ತಿದ್ದಾರೆ. ಟೀಸರ್ ನೋಡಿ ಇದು 'KGF- 2'ಗಿಂತ ಬಹಳ ದೊಡ್ಡ ಸಿನಿಮಾ ಎನ್ನುವುದು ಗೊತ್ತಾಗುತ್ತಿದೆ. 1000 ಕೋಟಿ ರೂ. ಕಲೆಕ್ಷನ್ ಟಾರ್ಗೆಟ್ ಮಾಡಿ ಸಿನಿಮಾ ತೆರೆಗೆ ತರಲಾಗ್ತಿದೆ. ಇನ್ನು ಮಾರ್ಚ್ 19ರಂದು 'ಧುರುಂಧರ್- 2' ಸಿನಿಮಾ ಕೂಡ ಬಿಡುಗಡೆ ಆಗ್ತಿದೆ. ಹಾಗಾಗಿ ಎರಡೂ ಸಿನಿಮಾಗಳ ನಡುವೆ ಬಾಕ್ಸಾಫೀಸ್ ಕ್ಲ್ಯಾಶ್ ಏರ್ಪಡಲಿದೆ.


Click it and Unblock the Notifications











