'ಟಾಕ್ಸಿಕ್' ಚಿತ್ರದ ಈ ಜೋಕರ್ ಯಾರು ಗೊತ್ತಾಯ್ತಾ? ಅಬ್ಬಬ್ಬಾ.. ತೆರೆಮೇಲೆ ಇನ್ನು ಏನೇನ್ ಕಾದಿದ್ಯೋ?
ಮಾರ್ಚ್ 19ಕ್ಕೆ ತೆರೆಮೇಲೆ ರಾಕಿಂಗ್ ಸ್ಟಾರ್ ರಾಕಿಂಗ್ ಪರ್ಫಾರ್ಮೆನ್ಸ್ ನೋಡೋಕೆ ಸಿನಿರಸಿಕರು ಕಾಯ್ತಿದ್ದಾರೆ. ಟೀಸರ್ ಬಂದು ಸಿನಿಮಾ ಮೇಲಿನ ನಿರೀಕ್ಷೆ ಹೆಚ್ಚಿಸಿದೆ. ಭಿನ್ನ ವಿಭಿನ್ನ ಅವತಾರಗಳಲ್ಲಿ ಯಶ್ ದರ್ಬಾರ್ ನೋಡಿ ಅಭಿಮಾನಿಗಳು ಕ್ಲೀನ್ ಬೋಲ್ಡ್ ಆಗಿದ್ದಾರೆ. ತೆರೆಮೇಲೆ ಇನ್ನು ಏನೇನ್ ಕಾದಿದ್ಯೋ ಎಂದು ಊಹಿಸಿಕೊಂಡೇ ಥ್ರಿಲ್ ಆಗುತ್ತಿದ್ದಾರೆ. ಯಾವಾಗ್ಯಾವಾಗ ಫಸ್ಟ್ ಡೇ ಫಸ್ಟ್ ಶೋ ಸಿನಿಮಾ ನೋಡ್ತಿವೋ ಎಂದು ಚಾತಕ ಪಕ್ಷಿಗಳಂತೆ ಕಾಯ್ತಿದ್ದಾರೆ.
ಗೀತು ಮೋಹನ್ ದಾಸ್ ನಿರ್ದೇಶನದ 'ಟಾಕ್ಸಿಕ್' ಸಿನಿಮಾ ಪ್ಯಾನ್ ಇಂಡಿಯಾ ಅಲ್ಲ, ಪ್ಯಾನ್ ವರ್ಲ್ಡ್ ಮಟ್ಟದಲ್ಲಿ ತೆರೆಗೆ ಬರ್ತಿದೆ. ದೊಡ್ಡಮಟ್ಟದಲ್ಲಿ ಪ್ರೀ-ರಿಲೀಸ್ ಬ್ಯುಸಿನೆಸ್ ಶುರುವಾಗಿದೆ. ಘಟಾನುಘಟಿ ಕಲಾವಿದರು, ತಂತ್ರಜ್ಞರು ಚಿತ್ರಕ್ಕಾಗಿ ಹಗಳಿರುಳು ಶ್ರಮಿಸುತ್ತಿದ್ದಾರೆ. ಹಾಲಿವುಡ್ ಮಟ್ಟದಲ್ಲಿ ಸಿನಿಮಾ ನಿರ್ಮಾಣವಾಗುತ್ತಿದೆ. ಚಿತ್ರದಲ್ಲಿ ಹಲವು ಪ್ರಮುಖ ಪಾತ್ರಗಳಿವೆ. ಅದರಲ್ಲಿ ಜೋಕರ್ ಪಾತ್ರ ಕೂಡ ಒಂದಾಗಿದೆ.

ಗೋವಾ ಹಿನ್ನೆಲೆಯಲ್ಲಿ 50-60ರ ದಶಕದ ಕಥೆಯನ್ನು 'ಟಾಕ್ಸಿಕ್' ಚಿತ್ರದಲ್ಲಿ ಕಟ್ಟಿಕೊಡಲಾಗ್ತಿದೆ. ಮೇಲ್ನೋಟಕ್ಕೆ ಗ್ಯಾಂಗ್‌ಸ್ಟರ್ ಕಥೆ ಎನಿಸಿದರೂ ಅದನ್ನು ಹೇಳುವ ಶೈಲಿ ವಿಭಿನ್ನವಾಗಿರುವಂತೆ ಕಾಣ್ತಿದೆ. 'KGF' ಸರಣಿಯ ರಾಕಿಭಾಯ್ ಗುಂಗಿನಿಂದ ಹೊರಬಂದು ಯಶ್ ದ್ವಿಪಾತ್ರದಲ್ಲಿ ಪ್ರೇಕ್ಷಕರನ್ನು ರಂಜಿಸಲು ಸಜ್ಜಾಗಿದ್ದಾರೆ. ರಾಯ ಹಾಗೂ ಟಿಕೆಟ್ ಎಂಬ ಎರಡು ಪಾತ್ರಗಳಲ್ಲಿ ರಾಕಿಂಗ್ ಸ್ಟಾರ್ ಅಬ್ಬರಿಸಲು ಸಜ್ಜಾಗಿದ್ದಾರೆ. ಇಷ್ಟೇ ಅಲ್ಲ, ಇನ್ನು ಭಿನ್ನ ವಿಭಿನ್ನ ಗೆಟಪ್‌ಗಳಲ್ಲಿ ನೋಡುಗರನ್ನು ಅಚ್ಚರಿಗೊಳಿಸುವ ಲೆಕ್ಕಾಚಾರದಲ್ಲಿದ್ದಾರೆ.
'ಟಾಕ್ಸಿಕ್' ಚಿತ್ರದಲ್ಲಿ ರಾಯಲ್ ಸರ್ಕಸ್ ಮಹತ್ವದ ಸ್ಥಾನ ಪಡೆದುಕೊಂಡಿದೆ. ಚಿತ್ರದ ಸ್ಯಾಂಪಲ್‌ಗಳಲ್ಲಿ ಪದೇ ಪದೆ ರಾಯಲ್ ಸರ್ಕಸ್ ವಿಚಾರಗಳನ್ನು ತೋರಿಸಲಾಗ್ತಿದೆ. ಅಷ್ಟೇ ಅಲ್ಲ, ಜೋಕರ್ ಪಾತ್ರವನ್ನು ಆಗಾಗ್ಗೆ ತೋರಿಸುವ ಪ್ರಯತ್ನ ಮಾಡುತ್ತಿದ್ದಾರೆ. ಸಿನಿಮಾ ಅನೌನ್ಸ್‌ಮೆಂಟ್ ಟೀಸರ್‌ನಲ್ಲೇ 'ಟಿಕೆಟ್' ಎಂದು ಬರೆದ ಜೋಕರ್ ಚಿತ್ರ ಇರುವ ಸರ್ಕಸ್ ಟಿಕೆಟ್ ಚೀಟಿ ಹಾರುವುದನ್ನು ತೋರಿಸಲಾಗಿತ್ತು. ಹಾಗಾಗಿ ಚಿತ್ರದಲ್ಲಿ ಜೋಕರ್ ಪಾತ್ರ ಕೂಡ ಇರುತ್ತಾ ಎನ್ನುವ ಅನುಮಾನ ಮೂಡಿತ್ತು.
ಸದ್ಯ ಬಿಡುಗಡೆ ಆಗಿರುವ ಟೀಸರ್‌ನಲ್ಲಿ ಎರಡ್ಮೂರು ಕಡೆ ಜೋಕರ್ ಗೆಟಪ್‌ಗಳು ಬಂದು ಹೋಗುತ್ತವೆ. ಟೀಸರ್ 19ನೇ ಸೆಕೆಂಡ್‌ನಲ್ಲಿ ಜೋಕರ್ ಪಾತ್ರಧಾರಿ ತಲೆಯನ್ನು ಸವರುತ್ತಾ ತಿರುಗಿ ನೋಡುತ್ತಾ ಹೋಗುವುದನ್ನು ನೋಡಬಹುದು. ಆ ಗೆಟಪ್‌ನಲ್ಲಿ ಕಾಣಿಸಿಕೊಂಡಿರುವುದು ಯಾರು ಎನ್ನುವ ಸೋಶಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆ ನಡೀತಿದೆ. ಮಲಯಾಳಂ ನಟ ಟೊವಿನೋ ಥಾಮಸ್ ಈ ಲುಕ್‌ನಲ್ಲಿ ನಟಿಸಿರಬಹುದು ಎನ್ನುವುದು ಕೆಲವರ ವಾದ. ಆದರೆ ಅದು ಬೇರೆ ಯಾರು ಅಲ್ಲ ಯಶ್ ಎಂದು ಅಭಿಮಾನಿಗಳು ಗೆಸ್ ಮಾಡುತ್ತಿದ್ದಾರೆ.
'ಟಾಕ್ಸಿಕ್ ಆಕ್ಷನ್ ಪ್ಯಾಕ್ಡ್ ಟೀಸರ್ ಬಿಡುಗಡೆಯಾದ ಕ್ಷಣದಿಂದ ಅಭಿಮಾನಿಗಳು ಪದೇ ಪದೆ ನೋಡುತ್ತಿದ್ದಾರೆ. ಪ್ರತಿ ಫ್ರೇಮ್‌ನಲ್ಲಿ ಸೂಕ್ಷ್ಮ ವಿಚಾರಗಳನ್ನು ಗಮನಿಸುತ್ತಿದ್ದಾರೆ. ಕಥೆ, ಪಾತ್ರಗಳ ಬಗ್ಗೆ ತಮ್ಮದೇ ಥಿಯರಿಗಳನ್ನು ಮುಂದಿಡುತ್ತಿದ್ದಾರೆ. ಚಿತ್ರದಲ್ಲಿ ಯಶ್ ದ್ವಿಪಾತ್ರದಲ್ಲಿ ತಂದೆ, ಮಗನಾಗಿ ನಟಿಸಿರಬಹುದು ಎನ್ನುವ ಚರ್ಚೆ ನಡೀತಿದೆ. ಅದೇ ರೀತಿ 5 ಬೇರೆ ಬೇರೆ ಗೆಟಪ್‌ಗಳಲ್ಲಿ ರಾಯ ಆಗಿ ರಾಕಿಂಗ್ ಸ್ಟಾರ್ ದರ್ಬಾರ್ ನಡೆಸಿದ್ದಾರೆ ಎಂದು ವಿಶ್ಲೇಷಿಸುತ್ತಿದ್ದಾರೆ.
ಗಡ್ಡ ಕೂದಲು ಟ್ರಿಮ್ ಮಾಡಿ ಟಿಕೆಟ್ ಎಂಬ ಪಾತ್ರದಲ್ಲಿ ದರ್ಶನ ಕೊಟ್ಟು ಯಶ್ ಅಚ್ಚರಿ ಮೂಡಿಸಿದ್ದಾರೆ. ಅದೇ ರೀತಿ ಈ ಜೋಕರ್ ಗೆಟಪ್‌ನಲ್ಲಿ ಕೂಡ ರಾಕಿಂಗ್ ಸ್ಟಾರ್ ನಟಿಸಿದ್ದಾರೆ. ರಾಯನ ಮಗ ಟಿಕೆಟ್, ರಾಯಲ್ ಸರ್ಕಸ್‌ನಲ್ಲಿ ಜೋಕರ್ ಆಗಿ ಪ್ರೇಕ್ಷಕರನ್ನು ರಂಜಿಸುವ ಸಾಧ್ಯತೆ ಇರಬಹುದು ಎಂದು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಜೋಕರ್ ಪಾತ್ರಧಾರಿಯ ಕಿವಿ ಹಾಗೂ ಟಿಕೆಟ್ ಆಗಿ ಯಶ್ ಲುಕ್‌ನಲ್ಲಿ ಕಿವಿ ನೋಡಿದರೆ ಸಾಮ್ಯತೆಯಿದೆ. ಅಷ್ಟೇ ಅಲ್ಲ, ಅನೌನ್ಸ್‌ಮೆಂಟ್ ಟೀಸರ್‌ನಲ್ಲಿ ಜೋಕರ್ ಚಿತ್ರದ ಮೇಲೆ ಟಿಕೆಟ್ ಎಂದು ಬರೆದಿತ್ತು. ಅಂದರೆ ಜೋಕರ್ ಆಗಿ ಯಶ್ ನಟಿಸಿಸುರುವು ಪಕ್ಕಾ. ತೆರೆಮೇಲೆ ಇದು ಸಖತ್ ಸರ್‌ಪ್ರೈಸ್ ಆಗಿರುತ್ತದೆ ಎಂದು ಹೇಳುತ್ತಿದ್ದಾರೆ.


Click it and Unblock the Notifications











