ಅನೂಪ್ ರೇವಣ್ಣ - ಧನ್ಯಾ ರಾಮ್ ಕುಮಾರ್ ; ಕಣ್ಣಾಮುಚ್ಚಾಲೆ ಆಟ..!
ಕಣ್ಣಾಮುಚ್ಚಾಲೆ ತುಂಬಾನೇ ಸರಳವಾದ ಆಟ. ಆದರೆ ಧನ್ಯಾ ರಾಮ್ ಕುಮಾರ್ ಹಾಗೂ ಅನೂಪ್ ರೇವಣ್ಣ ಪಾಲಿಗೆ ಈ ಆಟ ಕಬ್ಬಿಣದ ಕಡಲೆ. ಈ ಮಾತನ್ನ ಇಬ್ಬರು ಹೇಳಿದ್ದಾರೆ ಕೂಡ. ಆದರೆ ನಿಜಕ್ಕೂ ಕಣ್ಣಾಮುಚ್ಚಾಲೆ ಆಟ ಸವಾಲಿನದ್ದಾ..? ಉತ್ತರಕ್ಕೆ ಮಾರ್ಚ್ 15ರವರೆಗೆ ಕಾಯಬೇಕು.
ಹೌದು, ಹೈಡ್ ಆಂಡ್ ಸೀಕ್ , ಧನ್ಯಾ ರಾಮ್ ಕುಮಾರ್ ಹಾಗೂ ಅನೂಪ್ ರೇವಣ್ಣ ಅಭಿನಯದ ಸಿನಿಮಾ. ಸೆಟ್ಟೇರಿದ ದಿನದಿಂದ ನಾನಾ ಕಾರಣಕ್ಕೆ ಸದ್ದು ಮಾಡ್ತಾ ಬಂದ ಈ ಚಿತ್ರದ ಬಿಡುಗಡೆಯ ದಿನಾಂಕ ನಿಗದಿಯಾಗಿದೆ. ಮಾರ್ಚ್ 15ಕ್ಕೆ ಚಿತ್ರ ಬಿಡುಗಡೆಯಾಗ್ತಿದೆ. ಪ್ರಚಾರಕ್ಕೂ ಚಿತ್ರತಂಡ ಚಾಲನೆಯನ್ನ ಕೊಟ್ಟಿದೆ. ಪ್ರಚಾರದ ಮೊದಲ ಹಂತ ಎಂಬಂತೆ ಚಿತ್ರದ ಟ್ರೇಲರ್ ನ್ನೂ ಬಿಡುಗಡೆ ಮಾಡಿದೆ.

ಚಿತ್ರದ ಶೀರ್ಷಿಕೆಗೆ ತಕ್ಕಂತೆ ಇಲ್ಲಿ ಎಲ್ರೂ ಕಣ್ಣಾಮುಚ್ಚಾಲೆಯ ಆಟವನ್ನೂ ಆಡಿರುವುದು ಮೇಲ್ನೋಟಕ್ಕೆ ಸ್ಪಷ್ಟವಾಗುತ್ತೆ. ಸಿಲುಕಿ ಹಾಕಿಕೊಳ್ಳುವವರು ಯಾರು ಅನ್ನುವುದು ಸದ್ಯದ ಕುತೂಹಲ. ಅನೂಪ್ ರೇವಣ್ಣ ಇಲ್ಲಿ ಕಿಡ್ನಾಪರ್ ರೋಲ್ ನ್ನ ನಿರ್ವಹಿಸಿದ್ದಾರೆ. ಧನ್ಯಾ ರಾಮ್ ಕುಮಾರ್ ಅವರದ್ದು ಹಾಸಿನಿ ಪಾತ್ರ
ಪುನೀತ್ ನಾಗರಾಜ್ ಈ ಚಿತ್ರದ ನಿರ್ದೇಶಕ. ಕಿಡ್ನಾಪರ್ ಉದ್ದೇಶ ಏನು..? ಅಪಹರಣಕ್ಕೊಳಗಾದ ನಾಯಕಿ ಮನಸ್ಥಿತಿ ಹಾಗೂ ಪರಿಸ್ಥಿತಿ ಎಂಥಹದ್ದು ಅನ್ನುವುದೇ ಚಿತ್ರದ ತಿರುಳು. ಚಿತ್ರದ ನಿರ್ದೇಶಕರೇ ಚಿತ್ರಕ್ಕೆ ಹಣ ಹೂಡಿದ್ದಾರೆ.

ವಸಂತರಾವ್ ಎಂ ಕುಲಕರ್ಣಿ ನಿರ್ಮಾಣದಲ್ಲಿ ಇವರ ಜೊತೆ ಕೈ ಜೋಡಿಸಿದ್ದಾರೆ. ಮೈತ್ರಿ ಜಗ್ಗಿ, ಸೂರಜ್, ಬಲ ರಾಜವಾಡಿ, ಕೃಷ್ಣ ಹೆಬ್ಬಾಳೆ, ರಾಜೇಶ್ ನಟರಂಗ, ಅರವಿಂದ್ ರಾವ್ ಮುಂತಾದವರು ಚಿತ್ರದಲ್ಲಿದ್ದಾರೆ. ರಿಜೋ ಪಿ ಜಾನ್ ಛಾಯಾಗ್ರಹಣ, ಸ್ಯಾಂಡಿ ಆಡಂಕಿ ಸಂಗೀತ ಚಿತ್ರಕ್ಕಿದೆ.
ಅಂದ್ಹಾಗೇ ಮೊನ್ನೆ ನಡೆದ ಟ್ರೇಲರ್ ಬಿಡುಗಡೆ ಸಮಾರಂಭದಲ್ಲಿ ಅನೂಪ್ ಅವರ ತಂದೆ ಎಚ್‌ಎಂ ರೇವಣ್ಣ, ರಾಮಲಿಂಗಾ ರೆಡ್ಡಿ ಮತ್ತು ವಿಶ್ವನಾಥ್ ಸೇರಿದಂತೆ ರಾಜಕಾರಣಿಗಳು ಮತ್ತು ಹಿರಿಯ ಪ್ರಾಧ್ಯಾಪಕ ಡಾ. ಕೆ ರವಿ, ಧೀರೇನ್ ರಾಮ್ ಕುಮಾರ್ ಸೇರಿ ಅನೇಕರು ಭಾಗಿಯಾಗಿದ್ದರು.
ಚಿತ್ರತಂಡಕ್ಕೆ ಶುಭ ಕೋರಿದರು. ಒಟ್ಟಿನಲ್ಲಿ ಸದ್ಯಕ್ಕೆ ಹೈಡ್ ಆಂಡ್ ಸೀಕ್ ಸಿನಿಮಾದ ಟ್ರೇಲರ್ ಬಿಡುಗಡೆಯಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಎಲ್ಲರ ಗಮನವನ್ನ ಸೆಳೆಯುತ್ತಿದೆ. ಮಾರ್ಚ್ 15ಕ್ಕೆ ಚಿತ್ರ ಬಿಡುಗಡೆಯಾಗಲಿದೆ.


Click it and Unblock the Notifications











