ಆಗ 'ಜಿಗರ್ ಥಂಡ', ಈಗ ಬರ್ತಿದೆ 'ತ್ರಾಟಕ'
ಈ ಹಿಂದೆ 'ಜಿಗರ್ ಥಂಡ' ಸಿನಿಮಾದ ಮೂಲಕ ತಮ್ಮ ಸಿನಿ ಜರ್ನಿ ಶುರು ಮಾಡಿದ್ದ ನಿರ್ದೇಶಕ ಶಿವ ಗಣೇಶ್ ಈಗ 'ತ್ರಾಟಕ' ಚಿತ್ರದೊಂದಿಗೆ ಮತ್ತೊಂದು ಹೆಜ್ಜೆ ಇಟ್ಟಿದ್ದಾರೆ. ಈ ಸಿನಿಮಾ ಇದೇ ವಾರ ಬಿಡುಗಡೆಯಾಗುತ್ತಿದೆ.
ಆಸ್ತಾ ಸಿನಿಮಾಸ್ ಲಾಂಛನದಲ್ಲಿ ರಾಹುಲ್ ಐನಾಪುರ ಅವರು ಈ 'ತ್ರಾಟಕ' ಸಿನಿಮಾವನ್ನು ನಿರ್ಮಿಸಿದ್ದಾರೆ. ರಾಹುಲ್ ಐನಾಪುರ, ಅಜಿತ್ ಜಯರಾಜ್, ಹೃದಯ, ಅಕ್ಷತ, ಭವಾನಿ ಪ್ರಕಾಶ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ. ಈಗಾಗಲೇ ಖಳನಟನಾಗಿ ಒಳ್ಳೆಯ ಹೆಸರು ಮಾಡುತ್ತಿರುವ ಯಶ್ ಶೆಟ್ಟಿ ಈ ಸಿನಿಮಾದಲ್ಲಿ ಡಾಕ್ಟರ್ ಪಾತ್ರವನ್ನು ಮಾಡಿದ್ದಾರೆ.
ಸಿನಿಮಾದ ಮತ್ತೊಂದು ವಿಶೇಷ ನಟಿ ಹೃದಯ 10 ವರ್ಷದ ಬಳಿಕ ಕಮ್ ಬ್ಯಾಕ್ ಮಾಡುತ್ತಿದ್ದಾರೆ. 'ಒರಟ ಐ ಲವ್ ಯೂ' ಚಿತ್ರದ ನಾಯಕಿ 'ತ್ರಾಟಕ'ದಲ್ಲಿ ನಟಿಸುತ್ತಿದ್ದಾರೆ.

'ತ್ರಾಟಕ' ಇಬ್ಬರು ಪೊಲೀಸ್ ಅಧಿಕಾರಿಗಳ ಸುತ್ತ ನಡೆಯುವ ಕಥೆಯಾಗಿದೆ. 'ತ್ರಾಟಕ' ಎಂದರೆ ಧ್ಯಾನ ಎಂಬ ಅರ್ಥ ಬರುತ್ತದೆ. ಮನಸ್ಸನ್ನು ಹತೋಟಿಯಲ್ಲಿಟ್ಟುಕೊಳ್ಳಲು, ನೆನಪಿನ ಶಕ್ತಿ ವೃದ್ಧಿಗೆ ತ್ರಾಟಕ ಧ್ಯಾನ ಮಾಡಲಾಗುತ್ತದೆಯಂತೆ. ಈ ವಿಷಯದ ಮೇಲೆ ಸಿನಿಮಾದ ಕಥೆ ಇರುವ ಕಾರಣ ಆ ಹೆಸರನ್ನು ಇಡಲಾಗಿದೆಯಂತೆ.

ವಿನೋದ್ ಭಾರತಿ ಛಾಯಾಗ್ರಹಣವಿರುವ ಈ ಚಿತ್ರಕ್ಕೆ ಅರುಣ್ ಸುರಧಾ ಸಂಗೀತ ನೀಡಿದ್ದಾರೆ. ಸುರೇಶ್ ಆರ್ಮುಗಂ ಸಂಕಲನ, ಕಲೈ, ಮೋಹನ್ ನೃತ್ಯ ನಿರ್ದೇಶನ, ವಿಕ್ರಂ ಮೋರ್ ಸಾಹಸ ನಿರ್ದೇಶನ ಹಾಗೂ ಶಿವಕುಮಾರ್ ಕಲಾ ನಿರ್ದೇಶನ ಈ ಚಿತ್ರಕ್ಕಿದೆ. ಡಾ||ವಿ.ನಾಗೇಂದ್ರ ಪ್ರಸಾದ್ ಹಾಗೂ ಜಯಂತ ಕಾಯ್ಕಿಣಿ ಗೀತರಚನೆ ಮಾಡಿದ್ದಾರೆ. ಎ.ಆರ್.ಸಾಯಿರಾಮ್ ಸಂಭಾಷಣೆ ಬರೆದಿದ್ದಾರೆ.


Click it and Unblock the Notifications











