Kaatera Booking: ಸೋಲ್ಡೌಟ್..ಸೋಲ್ಡೌಟ್.. ಸೋಲ್ಡೌಟ್.. 'ಕಾಟೇರ' ಅಡ್ವಾನ್ಸ್ ಬುಕ್ಕಿಂಗ್‌ಗೆ ಅದ್ಭುತ ರೆಸ್ಪಾನ್ಸ್
ದರ್ಶನ್ ಅಭಿಮಾನಿಗಳು 'ಕಾಟೇರ'ನ ಜಪ ಮಾಡುತ್ತಿದ್ದಾರೆ. ಇದೇ ಶುಕ್ರವಾರ ಸಿನಿಮಾ ರಾಜ್ಯಾದ್ಯಂತ ಅದ್ಧೂರಿಯಾಗಿ ಬಿಡುಗಡೆಯಾಗಲಿದೆ. ಮಧ್ಯರಾತ್ರಿ 12 ಗಂಟೆಗೆ ಹಲವೆಡೆ ಮೊದಲ ಪ್ರದರ್ಶನ ಆರಂಭವಾಗಲಿದೆ. ರಾಜ್ಯಾದ್ಯಂತ ಆಯ್ದ ಚಿತ್ರತ್ರಮಂದಿರಗಳಲ್ಲಿ ಅಡ್ವಾನ್ಸ್ ಬುಕ್ಕಿಂಗ್ ಶುರುವಾಗಿದ್ದು ಹಲವು ಶೋಗಳು ಸೋಲ್ಡೌಟ್ ಆಗೋಗಿದೆ.
ವರ್ಷದ ಕೊನೆಗೆ 'ಕಾಟೇರ' ಸಿನಿಮಾ ತೆರೆಗೆ ಬರ್ತಿದೆ. ತರುಣ್ ಸುಧೀರ್ ನಿರ್ದೇಶನದ ಸಿನಿಮಾ ಭಾರೀ ನಿರೀಕ್ಷೆ ಹುಟ್ಟಾಕ್ಕಿದೆ. ಚಿತ್ರದಲ್ಲಿ ದರ್ಶನ್ ಹಳ್ಳಿ ಹೈದನಾಗಿ ಕುಲುಮೆಯಲ್ಲಿ ಕೆಲಸ ಮಾಡುವ ವ್ಯಕ್ತಿಯಾಗಿ ಕಾಣಿಸಿಕೊಂಡಿದ್ದಾರೆ. ಈಗಾಗಲೇ ಚಿತ್ರದ ಟ್ರೈಲರ್ ಹಾಗೂ ಸಾಂಗ್ಸ್ ರಿಲೀಸ್ ಆಗಿ ಸಿನಿಮಾ ಮೇಲಿನ ನಿರೀಕ್ಷೆ ಹೆಚ್ಚಿಸಿದೆ. ವಾರಕ್ಕೂ ಮೊದ್ಲೆ ಸಿನಿಮಾ ಅಡ್ವಾನ್ಸ್ ಬುಕ್ಕಿಂಗ್ ಶುರುವಾಗಿದೆ.

ಅಭಿಮಾನಿಗಳಂತೂ ಮೊದಲ ದಿನವೇ 'ಕಾಟೇರ'ನ ಆರ್ಭಟ ಕಣ್ತುಂಬಿಕೊಳ್ಳಲು ಚಾತಕ ಪಕ್ಷಿಗಳಂತೆ ಕಾಯುತ್ತಿದ್ದಾರೆ. ಅದೇ ಕಾರಣಕ್ಕೆ ಮುಗಿಬಿದ್ದು ಟಿಕೆಟ್ ಬುಕ್ ಮಾಡುತ್ತಿದ್ದಾರೆ. ಈಗಾಗಲೇ ಬೆಳಗಿನ ಜಾವ 5 ಗಂಟೆ ಹಾಗೂ 10 ಗಂಟೆಯ ಶೋಗಳು ಕೆಲವೆಡೆ ಸೋಲ್ಡೌಟ್ ಆಗಿದೆ. ಮತ್ತೆ ಕೆಲ ಶೋಗಳು ಫಾಸ್ಟ್‌ಫಿಲ್ಲಿಂಗ್ ಆಗುತ್ತಿದೆ. ಇನ್ನು ಮಧ್ಯರಾತ್ರಿ ಹಾಗೂ ಅರ್ಲಿ ಮಾರ್ನಿಂಗ್ ಶೋಗಳ ಟಿಕೆಟ್ ದರ 1000 ರೂ. ಮುಟ್ಟಿದೆ. ಆದರೂ ಕೂಡ ಅಭಿಮಾನಿಗಳು ಟಿಕೆಟ್ ಬುಕ್ ಮಾಡುತ್ತಿದ್ದಾರೆ.
ಶುಕ್ರವಾರ ರಾಜ್ಯಾದ್ಯಂತ ಸಿನಿಮಾ ತೆರೆಗಪ್ಪಳಿಸಲಿದೆ. ನಗರದ ಕೆಜಿ ರಸ್ತೆಯ ಅನುಪಮಾ ಚಿತ್ರಮಂದಿರದಲ್ಲಿ ಅಭಿಮಾನಿಗಳು ಸಂಭ್ರಮಾಚರಣೆಗೆ ಸಿದ್ಧತೆ ನಡೆಸಿದ್ದಾರೆ. ಇನ್ನುಳಿದಂತೆ ಜೆ.ಪಿ ನಗರದ ಸಿದ್ದೇಶ್ವರ, ಮಾಗಡಿ ರಸ್ತೆಯ ಪ್ರಸನ್ನ ಚಿತ್ರಮಂದಿರದಲ್ಲೂ 'ಕಾಟೇರ'ನ ಕಾರುಬಾರು ಜೋರಾಗಿರಲಿದೆ.
ಈಗಾಗಲೇ ಬೆಂಗಳೂರಿನಲ್ಲಿ 6 ಶೋಗಳು ಸೋಲ್ಡೌಟ್ ಆಗೋಗಿದೆ. 25ಕ್ಕೂ ಅಧಿಕ ಶೋಗಳು ಫಾಸ್ಟ್‌ಫಿಲ್ಲಿಂಗ್ ಆಗುತ್ತಿದೆ. ಇನ್ನು ಸಾಕಷ್ಟು ಕಡೆಗಳಲ್ಲಿ ಬುಕ್ಕಿಂಗ್ ಓಪನ್ ಆಗಬೇಕಿದೆ. ದರ್ಶನ್ ಕ್ರೇಜ್‌ಗೆ ತಕ್ಕಂತೆ ಅಡ್ವಾನ್ಸ್ ಬುಕ್ಕಿಂಗ್ ನಡೀತಿದೆ. ದರ್ಶನ್ ಹೀರೊ ಆಗಿ ನಟಿಸಿದ್ದ 'ಮೆಜೆಸ್ಟಿಕ್' ಸಿನಿಮಾ ಪ್ರಸನ್ನ ಚಿತ್ರಮಂದಿರದಲ್ಲಿ ಶತದಿನೋತ್ಸವ ಆಚರಿಸಿಕೊಂಡಿತ್ತು. ಬಳಿಕ ದರ್ಶನ್ ನಟನೆಯ ಹಲವು ಸಿನಿಮಾಗಳು ಅಲ್ಲಿ ಭರ್ಕರಿ ಪ್ರದರ್ಶನ ಕಂಡಿದ್ದವು. ಇದೀಗ 'ಕಾಟೇರ' ಕೂಡ ದಾಖಲೆ ಬರೆದಿದೆ.
ಪ್ರಸನ್ನ ಚಿತ್ರಮಂದಿರದಲ್ಲಿ 'ಕಾಟೇರ' ಬುಕ್ಕಿಂಗ್ ಆರಂಭವಾದ ಅರ್ಧಗಂಟೆಯಲ್ಲಿ ಮೊದಲ ದಿನದ 6,850 ಟಿಕೆಟ್ ಸೋಲ್ಡೌಟ್ ಆಗಿದೆ. ಈ ವಿಚಾರವನ್ನು ಖುದ್ದು ಥಿಯೇಟರ್ ಮ್ಯಾನೇಜರ್ ನಾಗರಾಜ್ ತಿಳಿಸಿದ್ದಾರೆ. 'ಮೆಜೆಸ್ಟಿಕ್' ಸಿನಿಮಾದಿಂದಲೂ ದರ್ಶನ್ ಸಿನಿಮಾಗಳು ನಮ್ಮ ಥಿಯೇಟರ್‌ನಲ್ಲಿ ಚೆನ್ನಾಗಿ ಪ್ರದರ್ಶನ ಕಾಣುತ್ತಿವೆ. 'ಕಾಟೇರ'ಗೂ ಒಳ್ಳೆ ರೆಸ್ಪಾನ್ಸ್ ಸಿಗುವ ನಿರೀಕ್ಷೆಯಿದೆ ಎಂದಿದ್ದಾರೆ.

ಇನ್ನುಳಿದಂತೆ ಅನುಪಮಾ ಚಿತ್ರಮಂದಿರದಲ್ಲಿ ಬೆಳಗ್ಗೆ 6 ಗಂಟೆ ಹಾಗೂ 10. 30ರ ಶೋ ಸೋಲ್ಡೌಟ್ ಆಗಿದೆ. ಸುಂಕದಕಟ್ಟೆ ಮೋಹನ್ ಚಿತ್ರಮಂದಿರದ ಬೆಳಗ್ಗೆ 5.30ರ ಶೋ, ದೊಡ್ಡಬಳ್ಳಾಪುರದ ವೈಭವ್ ಚಿತ್ರಮಂದಿರದ ಬೆಳಗ್ಗೆ 5 ಗಂಟೆ ಶೋ ಟಿಕೆಟ್ ಸಂಪೂರ್ಣವಾಗಿ ಬುಕ್ ಆಗಿದೆ. ಇನ್ನು ಅಭಿಮಾನಿಗಳು ದೊಡ್ಡಮಟ್ಟದಲ್ಲಿ 'ಕಾಟೇರ'ನನ್ನು ಚಿತ್ರಮಂದಿರಗಳಲ್ಲಿ ಸ್ವಾಗತಿಸಲು ಕಾಯುತ್ತಿದ್ದಾರೆ.
ಕೆ. ಜಿ ರಸ್ತೆಯ ಅನುಪಮಾ ಚಿತ್ರಮಂದಿರದ ಮುಂದೆ ಈಗಾಗಲೇ 90 ಅಡಿ ಕಟೌಟ್ ಹಾಕಲಾಗಿದೆ. ಇನ್ನು ಜೆ. ಪಿ. ನಗರದ ಸಿದ್ದೇಶ್ವರ ಚಿತ್ರಮಂದಿರದಲ್ಲಿ ಡಿ.28 ರಂದು ಕಾಟೇರಮ್ಮ ದೇವಿ ಪ್ರತಿಷ್ಟಾಪನೆ , ತಮಟೆ ವಾದ್ಯ , ಅನ್ನದಾನ , ಸಿಡಿಮದ್ದು , ಪಲ್ಲಕ್ಕಿಯೊಂದಿಗೆ ಮೆರವಣಿಗೆ ನಡೆಸಲು ಅಭಿಮಾನಿಗಳು ತಯಾರಿ ನಡೆಸಿದ್ದಾರೆ.
ಕನ್ನಡ ಚಿತ್ರರಂಗ ಕೂಡ 'ಕಾಟೇರ' ಚಿತ್ರಕ್ಕಾಗಿ ಕಾಯುತ್ತಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಕನ್ನಡ ಸಿನಿಮಾಗಳು ದೊಡ್ಡಮಟ್ಟದಲ್ಲಿ ಸದ್ದು ಮಾಡಲಿಲ್ಲ. 'ಕಾಟೇರ' ಚಿತ್ರದ ಮೂಲಕ ಅದ್ಧೂರಿಯಾಗಿ ಹಳೇ ವರ್ಷಕ್ಕೆ ಗುಡ್ ಬೈ ಹೇಳಿ ಹೊಸ ವರ್ಷವನ್ನು ಸ್ವಾಗತಿಸಲು ನಿರ್ಧರಿಸಿದ್ದಾರೆ.


Click it and Unblock the Notifications











