ನಂದೇನು ತಪ್ಪಿಲ್ಲ ಎಂದ ದರ್ಶನ್ ; ಮುಂದೇನಾಗುತ್ತೆ ? ವಿಚಾರಣೆ ಹೇಗೆ ನಡೆಯುತ್ತೆ ?
''ಕುಂಟು'' ನೆಪ ಹೇಳಿ ಕಳೆದ ವರ್ಷಾಂತ್ಯದಲ್ಲಿ ದರ್ಶನ್ ಜಾಮೀನು ಪಡೆದು ಹೊರಗಡೆ ಏನೋ ಬಂದಿದ್ದರು. ಆದರೆ.. ''ಇದ್ರೆ ನೆಮ್ಮದಿಯಾಗ್ ಇರಬೇಕ್'' ಅಂತಿದ್ದ ದರ್ಶನ್ ಗೆ ನೆಮ್ಮದಿ ಇರಲಿಲ್ಲ. ಯಾಕೆಂದರೆ ದರ್ಶನ್ ಗೆ ಮುಂದೆ ಎದುರಾಗಬಹುದಾದ ಅಪಾಯದ ಅರಿವು ಇತ್ತು. ಸ್ವತಂತ್ರ ಹಕ್ಕಿಯಾದರು ಕೂಡ ಮತ್ತೆ ಜೈಲು ಹಕ್ಕಿಯಾಗುವ ಭಯ ಇತ್ತು. ಆತಂಕ ಇತ್ತು.
ಕೊನೆಗೂ ಅಂದುಕೊಂಡತೆಯೇ ಆಯ್ತು. ದರ್ಶನ್ ಈಗ ಮತ್ತೊಮ್ಮೆ ಜೈಲಿನ ದರ್ಶನ ಮಾಡಿದ್ದಾರೆ. ಆದರೆ.. ಈ ಬಾರಿ ಅರಮನೆಯಲ್ಲ ಬದಲಿಗೆ ಅಕ್ಷರಶಃ ದರ್ಶನ್ ಪಾಲಿಗೆ ಜೈಲು ಸೆರೆಮನೆಯಾಗಿದೆ. ''ಇದ್ರೆ ನೆಮ್ಮದಿಯಾಗ್ ಇರಬೇಕ್'' ಎನ್ನುತ್ತಿದ್ದ ದರ್ಶನ್ ಗೆ ಜೈಲಿನಲ್ಲಿ ದಿನ ನಿತ್ಯ ನರಕ ದರ್ಶನವಾಗುತ್ತಿದೆ.

ಈ ನರಕದಿಂದ ದರ್ಶನ್ ಪಾರಾಗುತ್ತಾರಾ..? ಜೈಲಿಂದ ಹೊರ ಬರುತ್ತಾರಾ..? ಈ ಪ್ರಶ್ನೆಗಳಿಗೆ ಉತ್ತರ ಮುಂಬರುವ ದಿನಗಳಲ್ಲಿ ಗೊತ್ತಾಗಲಿದೆಯಾದರೂ ಸದ್ಯ ದರ್ಶನ್ ತಮ್ಮ ಮೇಲಿನ ಆರೋಪಗಳೆಲ್ಲವೂ ಸುಳ್ಳು ಎಂದು ಇಂದು ( ನವೆಂಬರ್ 3 ) ನ್ಯಾಯಾಲಯದಲ್ಲಿ ಹೇಳಿದ್ದಾರೆ. ನಾನು ನಿರಪರಾಧಿ ಎಂದು ಹೇಳಿದ್ದಾರೆ.
ದರ್ಶನ್ ಅವರ ಈ ಹೇಳಿಕೆಯಿಂದ ಸಹಜವಾಗಿ ದರ್ಶನ್ ಅವರ ಭಕ್ತಗಣದಲ್ಲಿ ಖುಷಿ ಮನೆ ಮಾಡಿದೆ. ನಮ್ಮ ಬಾಸ್ ಯಾವ ತಪ್ಪು ಮಾಡಿಲ್ಲ ಎನ್ನುವ ವಾದಕ್ಕೆ ಈಗ ಇನ್ನೂ ಬಲ ಬಂದಂತಾಗಿದೆ. ಇದರ ನಡುವೆ ಮುಂದೇನು..? ಎನ್ನುವ ಪ್ರಶ್ನೆ ಕೂಡ ಹಲವರನ್ನು ಈಗ ಕಾಡುತ್ತಿದೆ.
ಹೌದು,ನಿಮಗೆ ಗೊತ್ತಿರಲಿ. ಸದ್ಯ ದರ್ಶನ್ ತಮ್ಮ ಮೇಲಿನ ಆರೋಪ ನಿರಾಕರಿಸಿದ ಹಿನ್ನೆಲೆ ಈ ನವೆಂಬರ್ ಹತ್ತರಂದು ನ್ಯಾಯಾಲಯ ಟ್ರಯಲ್‌ಗೆ ದಿನಾಂಕ ನಿಗದಿ ಮಾಡಲಿದೆ. ಇಲ್ಲಿಂದ ಅಸಲಿ ''ಕೋರ್ಟ್ ರೂಮ್'' ಸಿನಿಮಾ ಶುರುವಾಗಲಿದೆ.
ನ್ಯಾಯಾಲಯ ದರ್ಶನ್ ಮತ್ತು ಸಹಚರರ ವಿರುದ್ಧ ಇವೆ ಎನ್ನಲಾದ ಸಾಕ್ಷ್ಯಗಳ ವಿಚಾರಣೆ ಮಾಡಲಿದೆ. ಸರ್ಕಾರದ ಪರ ವಕೀಲರು ಮತ್ತು ದರ್ಶನ್ ಪರ ವಕೀಲರ ಚಾಕ್ಯಚಕ್ಯತೆಯ ಪ್ರದರ್ಶನವೂ ಆಗಲಿದೆ. ಪೊಲೀಸ್ ಅಧಿಕಾರಿಗಳು, ವಿಧಿ ವಿಜ್ಞಾನ ತಜ್ಞರು, ವೈದ್ಯರು ಅಥವಾ ಪ್ರತ್ಯಕ್ಷದರ್ಶಿ ಇದ್ದರೆ ಅವರ ವಿಚಾರಣೆಯನ್ನು ಕೂಡ ನ್ಯಾಯಾಲಯ ಮಾಡಲಿದೆ.

ಇನ್ನು ಇದೇ ಸಂದರ್ಭದಲ್ಲಿ ಪೊಲೀಸರು ರೇಣುಕಾ ಸ್ವಾಮಿ ಪ್ರಕರಣದಲ್ಲಿ ಇಲ್ಲಿಯವರೆಗೆ ತಾವು ಸಂಗ್ರಹಿಸಿರುವ ಸಿಸಿಟಿವಿ ದೃಶ್ಯಾವಳಿ.. ಮೊಬೈಲ್ ಕರೆ.. ಸಾಕ್ಷಿದಾರರ ಹೇಳಿಕೆ.. ಹೀಗೆ ಎಲ್ಲಾ ಸಾಕ್ಷಿಗಳನ್ನು ಒಂದೊಂದಾಗಿಯೇ ನ್ಯಾಯಾಲಯದ ಮುಂದೆ ಇಡಬೇಕಾಗುತ್ತೆ. ಪ್ರಕರಣದ ಎ1 ಆರೋಪಿ ಪವಿತ್ರಾ ಗೌಡ, ಎ2 ದರ್ಶನ್ ಸೇರಿ ಉಳಿದ ಆರೋಪಿಗಳ ವಿರುದ್ದ ತಾವು ಮಾಡಿರುವ ಆರೋಪವನ್ನು ಸಾಬೀತು ಮಾಡಬೇಕಾಗುತ್ತೆ.
ಈ ಸಂದರ್ಭದಲ್ಲಿ ವಾದ - ಪ್ರತಿವಾದ ನಡೆಯುತ್ತೆ. ಸಾಕ್ಷ್ಯಗಳ ಸತ್ಯಾಸತ್ಯತೆಯನ್ನು ಕೂಡ ಪರಿಶೀಲಿಸಲಾಗುತ್ತೆ. ಇದೇ ಸಮಯದಲ್ಲಿ ದರ್ಶನ್ ಪರ ವಕೀಲರು ರೇಣುಕಾ ಸ್ವಾಮಿ ಕೊಲೆ ನಡೆದ ದಿನ ದರ್ಶನ್ ಎಲ್ಲಿದ್ದರು..? ಏನ್ಮಾಡ್ತಿದ್ದರು..? ಎಂಬ ಮುಂತಾದ ವಿಚಾರಗಳನ್ನು ಸಾಬೀತು ಮಾಡಬಹುದು. ದರ್ಶನ್ ಪರವಾಗಿ ಸಾಕ್ಷ್ಯಗಳನ್ನು ಹೆಕ್ಕಿ ವಾದ ಮಂಡನೆ ಮಾಡಬಹುದು.
ಈ ವಾದ ವಿವಾದಗಳನ್ನು ಆಲಿಸಿ, ಸಾಕ್ಷ್ಯಗಳನ್ನು ಪರಿಗಣಿಸಿ ಆ ನಂತರ ನ್ಯಾಯಾಲತ ತೀರ್ಪು ನೀಡುತ್ತೆ. ಅದು ದರ್ಶನ್ ಪರವಾಗಿಯೂ ಇರಬಹುದು ಅಥವಾ ದರ್ಶನ್ ವಿರುದ್ಧವೂ ಇರಬಹುದು. ಹೀಗಾಗಿ ಮುಂಬರುವ ದಿನದಲ್ಲಿ ಈ ಪ್ರಕರಣ ಕುತೂಹಲವನ್ನಂತೂ ಕೆರಳಿಸಲಿದೆ.
ಅಂದ್ಹಾಗೇ ಇಂದು (ನವೆಂಬರ್ 3 ) ಒಂದು ವೇಳೆ ದರ್ಶನ್ ತಮ್ಮ ಮೇಲಿನ ಆರೋಪ ಅಪ್ಪಿ ತಪ್ಪಿ ಒಪ್ಪಿಕೊಂಡಿದ್ದರೆ, ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ತಮ್ಮ ಪಾತ್ರ ಇದೆ ಎಂದು ಹೇಳಿದ್ದರೆ, ಇಡೀ ಪ್ರಕರಣ ಇಂದೇ ಅಂತ್ಯವಾಗುತ್ತಿತ್ತು. ಆರೋಪಿಗಳು ತಮ್ಮ ತಪ್ಪು ಒಪ್ಪಿಕೊಂಡ ಹಿನ್ನೆಲೆ ಸಾಕ್ಷಿಗಳ ವಿಚಾರಣೆ.. ವಾದ-ಪ್ರತಿವಾದ.. ಯಾವುದಕ್ಕೂ ಅವಕಾಶ ಇರುತ್ತಿರಲಿಲ್ಲ. ನೇರವಾಗಿ ನ್ಯಾಯಾಲಯ ಶಿಕ್ಷೆಯ ಪ್ರಮಾಣವನ್ನು ಹೇಳುತ್ತಿತ್ತು. ಆದರೆ, ದರ್ಶನ್ ಒಪ್ಪಿಕೊಂಡಿಲ್ಲ. ಹೀಗಾಗಿ ನವೆಂಬರ್ ಹತ್ತರಂದು ಟ್ರಯಲ್‌ಗೆ ನ್ಯಾಯಾಲಯ ದಿನಾಂಕ ನಿಗದಿ ಮಾಡಲಿದೆ.


Click it and Unblock the Notifications











