»   » ಕನ್ನಡ ಚಿತ್ರರಂಗದಲ್ಲೀಗ ‘ತುಂಟಾಟ’ದ ಸಮಯ

ಕನ್ನಡ ಚಿತ್ರರಂಗದಲ್ಲೀಗ ‘ತುಂಟಾಟ’ದ ಸಮಯ

Posted By: Super
Subscribe to Filmibeat Kannada
Tuntata
ಲಂಕೇಶ್‌ ಪತ್ರಿಕೆ ಓದುಗರಿಗೆ 'ತುಂಟಾಟ"ದ ಬಗ್ಗೆ ತಿಳಿದೇ ಇದೆ. ಪೋಲಿತನದ ಲೈಟ್‌ ಟಚ್‌ನ ಜೋಕ್‌ಗಳ ಸಾಗರವೇ ತುಂಟಾಟ. ಈಹೊತ್ತು ದಿವಂಗತ ಲಂಕೇಶ್‌ರ ಪುತ್ರ ಇಂದ್ರಜಿತ್‌ ಅದೇ ಹೆಸರಲ್ಲೊಂದು ಕನ್ನಡ ಚಿತ್ರ ತಯಾರಿಸುತ್ತಿದ್ದಾರೆ.

ಮೂಲತಃ ಕ್ರೀಡಾ ಪತ್ರಕರ್ತರಾದ ಇಂದ್ರಜಿತ್‌, ನಮ್ಮ ನಿಮ್ಮಂತೆಯೇ ಲಂಕೇಶರ ಬರಹಗಳಿಗೆ ಪ್ರಭಾವಿತರಾದವರು. ಸಿನಿಮಾ ರಂಗದಲ್ಲೂ ಸಾಕಷ್ಟು ಪರಿಶ್ರಮವಿದ್ದ ತಮ್ಮ ತಂದೆ ಹಾಗೂ ಪ್ರಶಸ್ತಿ ವಿಜೇತ 'ದೇವೀರಿ" ಖ್ಯಾತಿಯ ಸೋದರಿ ಕವಿತಾ ಲಂಕೇಶ್‌ರ ಒಲವು -ನಿಲುವನ್ನು ಹತ್ತಿರದಿಂದ ಕಂಡವರು.


ತಾವು ಸಿನಿಮಾ ಮಾಡೋ ಹೊತ್ತಲ್ಲಿ ಲಂಕೇಶ್‌ ಜೊತೆಗಿಲ್ಲವಲ್ಲ ಎಂಬ ಕೊರಗು ಇಂದ್ರಜಿತ್‌ದು. ಡಿಸೆಂಬರ್‌ 10ರಂದು ಅಧಿಕೃತವಾಗಿ ಸೆಟ್ಟೇರಲಿರುವ ತುಂಟಾಟ, ಚಿತ್ರೀಕರಣಕ್ಕೆ ಮೊದಲೇ ಸಾಕಷ್ಟು ಸುದ್ದಿ ಮಾಡಿದೆ. ಕಳೆದ ವಾರವಂತೂ ಕನ್ನಡದ ಎಲ್ಲ ಪತ್ರಿಕೆಗಳ ಚಲನಚಿತ್ರ ಪುರವಣಿಯ ಮುಖಪುಟ 'ತುಂಟಾಟ"ದ ಸುದ್ದಿಯಿಂದಲೇ ತುಂಬಿ ಹೋಗಿತ್ತು.

ತುಂಟಾಟದ ಸಮಯ: ಒಟ್ಟಿನಲ್ಲಿ ಕನ್ನಡ ಚಿತ್ರರಂಗಕ್ಕಿದು ತುಂಟಾಟದ ಸಮಯ. ತುಂಟುತನದ ಹದಿಹರೆಯದ ಟ್ರೆಂಡ್‌ನ ಅಲೆ ಎದ್ದಿರುವ ಈ ಪರ್ವಕಾಲದಲ್ಲಿ ತಲೆಎತ್ತುತ್ತಿರುವ ಈ ಚಿತ್ರದ ನಾಯಕ ನಾಯಕಿಯರೂ ತುಂಟಾಟ ಮಾಡುವ ಹುಡುಗರೆ. ಯಾರು ಗೊತ್ತೆ? 'ಚಿತ್ರಾ" ಖ್ಯಾತಿಯ ರೇಖಾ ಹಾಗೂ 'ಚಿಟ್ಟೆ " ಖ್ಯಾತಿಯ ಛಾಯಾಸಿಂಗ್‌.

ಈ ಚಿತ್ರ ನಿರ್ಮಿಸುತ್ತಿರುವವರು ಪತ್ರಕರ್ತ ಕಮ್‌ ವ್ಯವಹಾರ ಕುಶಲಿ ಬಾಲಚಂದ್ರ. 'ಪ್ರಿಯಾಂಕ" ಮತ್ತು 'ಸೂರ್ಯ" ಎಂಬ ಎರಡು ಪತ್ರಿಕೆಗಳ ಸಂಪಾದಕರೂ ಆದ ಇವರು ರಾಜಹಂಸ ಎಂಬ ಆಫ್‌ಸೆಟ್‌ ಮುದ್ರಣಾಲಯದಿಂದ ಪತ್ರಿಕೋದ್ಯಮದಲ್ಲಿ ಹೆಸರಾದವರು.

ಇವರು ತಮ್ಮ ವ್ಯವಹಾರ ಚಾತುರ್ಯದಿಂದಲೇ ತುಂಟಾಟಕ್ಕೆ ಇಬ್ಬರು ನಾಯಕಿಯನ್ನು ಆರಿಸಿದ್ದಾರೆ. ಕನ್ನಡ ಸಾಕೆಂದು ಹೈದರಾಬಾದಿಗೆ ಹಾರಿದ್ದ ರೇಖಾರನ್ನು ಮತ್ತೆ ಕರ್ನಾಟಕಕ್ಕೆ ಎಳೆದು ತಂದಿದ್ದಾರೆ. ತುಂಬಾ ದುಬಾರಿ ಸಂಭಾವನೆ ಕೇಳಿದ ರಿಯಾಸೇನ್‌ರನ್ನು ದೂರವೇ ಇಟ್ಟಿದ್ದಾರೆ.

ಅನನುಭವಿಗಳು: ತುಂಟಾಟ ಚಿತ್ರ ನಿರ್ಮಿಸುತ್ತಿರುವ ಬಾಲಚಂದ್ರ ಹಾಗೂ ನಿರ್ದೇಶನದ ಹೊಣೆಹೊತ್ತಿರುವ ಇಂದ್ರಜಿತ್‌ ಇಬ್ಬರೂ ಜಾಣರೆ. ಆದರೆ, ಚಲನಚಿತ್ರರಂಗಕ್ಕೆ ಹೊಸಬರು. ಅನನುಭವಿಗಳು. ಈ ಅನನುಭವಿಗಳು ನಿರ್ಮಿಸಿ, ನಿರ್ದೇಶಿಸುತ್ತಿರುವ ಚಿತ್ರದ ಬಗ್ಗೆ ಮಾತ್ರ ಸ್ಯಾಂಡಲ್‌ವುಡ್‌ ಭಾರಿ ನಿರೀಕ್ಷೆ ಇಟ್ಟುಕೊಂಡಿದೆ.

ನಾಯಕ ಪ್ರಸಾದ್‌ ಹಾಗೂ ಆತನ ಐದು ಮಂದಿ ತುಂಟಾಟದ ಸ್ನೇಹಿತರ ವರ್ಗದಲ್ಲಿ ಧಾರವಾಡದ ಅನಿರುದ್ಧ್‌ ಕೂಡ ಒಬ್ಬ. ಅನಿರುದ್ಧ್‌ಗಿದು ನಾಲ್ಕನೇ ಚಿತ್ರ. ಅಂದಹಾಗೆ ತುಂಟಾಟಕ್ಕೆ ಗುರುಕಿರಣ್‌ ಸಂಗೀತ ನೀಡಿದ್ದರೆ ಕೆ.ಕಲ್ಯಾಣ್‌, ನಾಗತಿಹಳ್ಳಿ ಚಂದ್ರಶೇಖರ್‌, ಲಂಕೇಶ್‌ ಪತ್ರಿಕೆಯ ವರದಿಗಾರ ಸದಾಶಿವ ಶೆಣೈ ಅವರ ಹಾಡುಗಳನ್ನು ಬರೆದಿದ್ದಾರೆ. ಸಂಭಾಷಣೆಯ ಹೊಣೆಯನ್ನು ಬಿ.ಎ. ಮಧು ಹೊತ್ತಿದ್ದಾರೆ.

English summary
Lankeshs son Indrajit directing a kannada movie Tuntata

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada