»   » ತುಂಟಾಟ ; ಇದು ಪತ್ರಕರ್ತರ ಸಿನಿಮಾ ಆಟ

ತುಂಟಾಟ ; ಇದು ಪತ್ರಕರ್ತರ ಸಿನಿಮಾ ಆಟ

Posted By: Super
Subscribe to Filmibeat Kannada
Tuntata
ಈ ಸಿನಿಮಾ ಜಾಣ ಜಾಣೆಯರಿಗೆ ಮಾತ್ರ ಎಂದು ನಿರ್ದೇಶಕ ಇಂದ್ರಜಿತ್‌ ಅವರಾಗಲೀ, ನಿರ್ಮಾಪಕ ಎ.ಬಾಲಚಂದ್ರ ಅವರಾಗಲೀ ಹೇಳಿಕೊಂಡಿಲ್ಲ . ತುಂಟಾಟಕ್ಕಿಲ್ಲ ಯಾವುದೇ ಚೌಕಟ್ಟು ; ಅಪ್ಪಟ ಮನರಂಜನೆಯೇ ಚಿತ್ರದ ಹೈಲೈಟು ಎನ್ನುವುದು ತುಂಟಾಟ ಬಳಗದ ಒನ್‌ಲೈನರ್‌!

ಡಿಸೆಂಬರ್‌ 12 ರ ಬುಧವಾರ ಮೈಸೂರು ರಸ್ತೆಯಲ್ಲಿನ ದಿ ಕ್ಲಬ್‌ನಲ್ಲಿ ತುಂಟಾಟಕ್ಕೆ ಮುಹೂರ್ತ. ಸಾಮಾನ್ಯವಾಗಿ ಸಿನಿಮಾ ಕಾರ್ಯಕ್ರಮಗಳಿಂದ ದೂರವಿರುವ ಮುಖ್ಯಮಂತ್ರಿ ಎಸ್‌.ಎಂ.ಕೃಷ್ಣ ತುಂಟಾಟ ಮುಹೂರ್ತಕ್ಕೆ ಕ್ಯಾಮರ ಚಾಲನೆ ಮಾಡಲು ಒಪ್ಪಿಕೊಂಡಿರುವುದು ವಿಶೇಷ. ಏಕಾಂಗಿ ರವಿಚಂದ್ರನ್‌ ಆರಂಭ ಫಲಕ ತೋರಿಸುತ್ತಿದ್ದಾರೆ.

ತುಂಟಾಟದ ಬಗ್ಗೆ ನಿರೀಕ್ಷೆ ಉಳಿಸಿಕೊಳ್ಳಲಿಕ್ಕೆ ಕಾರಣಗಳು ಮೂರು. ಮೊದಲನೆಯದಾಗಿ ಚಿತ್ರದ ನಿರ್ದೇಶಕ ಇಂದ್ರಜಿತ್‌. ಎರಡನೆಯದಾಗಿ ನಾಯಕ ಅನಿರುದ್ಧ ಮತ್ತು ನಾಯಕಿಯರಾದ ರೇಖಾ ಹಾಗೂ ಛಾಯಾಸಿಂಗ್‌. ಮೂರನೆಯದು- ಹೊಸಬರನ್ನು ನಂಬಿ ತುಂಟಾಟಕ್ಕೆ ಬಂಡವಾಳ ಹೂಡಿದ ನಿರ್ಮಾಪಕ ಎ.ಬಾಲಚಂದ್ರ.

ಬಾಲಚಂದ್ರ ಹೈಟೆಕ್‌ ಪ್ರಕಾಶಕ ಸಂಸ್ಥೆಯಾದ ರಾಜ್‌ಹನ್ಸ್‌ ಎಂಟರ್‌ಪ್ರೆೃಸಸ್‌ ಇ- ಮೇಲ್‌: ನ ಮಾಲಿಕರು. ಇಂಡಿಯನ್‌ ಎಕ್ಸ್‌ಪ್ರೆಸ್‌ ಸೇರಿದಂತೆ ನಾಡಿನ ಬಹುತೇಕ ಪತ್ರಿಕೆ, ನಿಯತಕಾಲಿಕೆಗಳು ಮುದ್ರಣಗೊಳ್ಳುವುದು ರಾಜ್‌ಹನ್ಸ್‌ನಲ್ಲೇ. ಸುಂದರ ಮುದ್ರಣಕ್ಕೆ ರಾಜ್‌ಹನ್ಸ್‌ ಹೆಸರಾದುದರಿಂದ ತುಂಟಾಟವೂ ಸುಂದರವಾಗಿರಬಹುದೆಂದು ನಂಬಬಹುದು. ಬಾಲಚಂದ್ರ ಪತ್ರಕರ್ತರೂ ಹೌದು. ಅವರು ಸಂಪಾದಕರಾಗಿರುವ ನಿಯತಕಾಲಿಕೆಯ ಹೆಸರು ಪ್ರಿಯಾಂಕ.

ಹೊಸ ನಿರ್ದೇಶಕರೊಬ್ಬರು ತಮ್ಮ ಮೊದಲ ಚಿತ್ರಕ್ಕೆ ಜನಪ್ರಿಯ ನಾಯಕ ನಾಯಕಿಯನ್ನು ಆರಿಸಿಕೊಳ್ಳುವುದು ಲೋಕರೂಢಿ. ಆದರೆ ಇಂದ್ರಜಿತ್‌ ಅನನುಭವಿಗಳನ್ನೇ ನೆಚ್ಚಿದ್ದಾರೆ. ಇಂದ್ರಜಿತ್‌ ಒಳ್ಳೆ ಸಿನಿಮಾ ತೆಗೆಯುತ್ತಾರೆಂಬ ನಂಬಿಕೆ ನನಗಿದೆ. ಅವರು ಕೇಳಿದ್ದನ್ನು ಒದಗಿಸುವುದಷ್ಟೇ ನನ್ನ ಕೆಲಸ ಎನ್ನುತ್ತಾರೆ ಬಾಲಚಂದ್ರ . ಈ ಹಿನ್ನೆಲೆಯಲ್ಲಿ ನಿರ್ಮಾಪಕ ಬಾಲಚಂದ್ರ ಬಂಗಾರದಂಥ ನಿರ್ಮಾಪಕ.

ನಿರ್ದೇಶನ ಹೊಸತಾದರೂ ಸಿನಿಮಾ ಒಳಹೊರಗು ಇಂದ್ರಜಿತ್‌ಗೆ ಗೊತ್ತಿಲ್ಲದ್ದೇನಲ್ಲ . ಒಂದರ್ಥದಲ್ಲಿ ಅವರು ಸಿನಿಮಾ ಕುಟುಂಬದವರೇ. ಅಪ್ಪ ಲಂಕೇಶ್‌ ಸಿನಿಮಾ ನಿರ್ಮಿಸಿ ಸೈ ಅನ್ನಿಸಿಕೊಂಡವರು. ಸೋದರಿ ಕವಿತಾ ಮೊದಲ ಚಿತ್ರ(ದೇವೀರಿ)ದಲ್ಲೇ ಅಂತರರಾಷ್ಟ್ರೀಯ ಗಮನ ಸೆಳೆದ ಪ್ರತಿಭೆ.

ಲಂಕೇಶ್‌ ಪತ್ರಿಕೆಯ ಮಾಲಿಕರಾಗಿ, ಬರಹಗಾರರಾಗಿ ಪಳಗಿರುವ ಕೂಡ ಇಂದ್ರಜಿತ್‌ ಸಿನಿಮಾ ಸಾಹಸಕ್ಕೆ ಕೈ ಹಾಕಿದ್ದಾರೆ. ಲಂಕೇಶ್‌ ಪತ್ರಿಕೆಯಲ್ಲಿ ನೇರವಾಗಿ ಭಾಗಿಯಾಗುವ ಮುನ್ನ ಆಲ್‌ರೌಂಡರ್‌ ಎನ್ನುವ ಕ್ರೀಡಾಪತ್ರಿಕೆಯನ್ನು ಇಂದ್ರಜಿತ್‌ ಕೆಲಕಾಲ ನಡೆಸಿದ್ದರು. ಆಲ್‌ರೌಂಡರ್‌ ಯಶಸ್ವಿಯಾಗಲಿಲ್ಲ . ಆದರೆ, ಅವರ ಅನುಭವ ಇನ್ನಷ್ಟು ಪಕ್ವವಾಯಿತು. ಅವರು ಸೋಲುಗಳಿಂದ ಪಾಠ ಕಲಿತಿದ್ದಾರೆ.

ನಾಯಕ ಅನಿರುದ್ಧ ಈಗಷ್ಟೇ ಕಾಲೂರುತ್ತಿರುವ ನಟ. ನಾಯಕನಾಗಿ ನಟಿಸಿದ ಚಿಟ್ಟೆ ಹೆಸರು ತಂದುಕೊಟ್ಟರೂ ಯಶಸ್ಸು ತರಲಿಲ್ಲ . ನಾಯಕಿಯರಾದ ಚಿತ್ರ ಖ್ಯಾತಿಯ ರೇಖಾ ಹಾಗೂ ಚಿಟ್ಟೆ ಖ್ಯಾತಿಯ ಛಾಯಾಸಿಂಗ್‌ ಕೂಡ ಅರಳು ಪ್ರತಿಭೆಗಳೇ. ಇವರಿಗೆಲ್ಲ ಯಶಸ್ಸು , ಆ ಮೂಲಕ ಅವಕಾಶ ಬೇಕು. ಇಂದ್ರಜಿತ್‌-ಅನಿರುದ್ಧ- ರೇಖಾ-ಛಾಯಾ : ಇವರೆಲ್ಲರ ಸಂಗಮ ತುಂಟಾಟ!

ಇದು ಬೇರೆಯದೇ ತುಂಟಾಟ : ಲಂಕೇಶ್‌ಪತ್ರಿಕೆಯ ತುಂಟಾಟ ಓದಿ ಕಚಗುಳಿ ಅನುಭವಿಸದವರು ಯಾರು!? ಪತ್ರಿಕೆಯಲ್ಲಿ ಮೊದಲಿಗೆ ತುಂಟಾಟ ಓದುತ್ತಿದ್ದವರುಂಟು. ತುಂಟಾಟಕ್ಕಾಗಿಯೇ ಪತ್ರಿಕೆ ಓದುತ್ತಿದ್ದವರೂ ಉಂಟು. ಆದರೆ, ಸಿನಿಮಾದ್ದು ಬೇರೆಯದೇ ತುಂಟಾಟ ಎನ್ನುತ್ತಾರೆ ಇಂದ್ರಜಿತ್‌.

English summary
Lankeshs son Indrajit to direct Tuntata. Producer A.Balachandra is also a jourbalist

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada