'96' ಕನ್ನಡ ರಿಮೇಕ್ ಗೆ ಜೂನಿಯರ್ ಜಾನು ಸಿಕ್ಕಾಯ್ತು
ತಮಿಳಿನ ಸೂಪರ್ ಹಿಟ್ ಸಿನಿಮಾ '96' ಕನ್ನಡದಲ್ಲಿ '99' ಎಂಬ ಟೈಟಲ್ ನಲ್ಲಿ ಬರುತ್ತಿದೆ. ಈಗಾಗಲೇ ಸಿನಿಮಾದ ಚಿತ್ರೀಕರಣ ನಡೆಯುತ್ತಿದೆ. ಇದೀಗ ಚಿತ್ರದ ಬಂದು ಪ್ರಮುಖ ಸುದ್ದಿ ಹೊರಬಂದಿದೆ.
'99' ಸಿನಿಮಾದ ಜೂನಿಯರ್ ಜಾನು ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ನಾಯಕಿ ಯಾರು ಎನ್ನುವ ವಿಷಯವನ್ನು ಇದೀಗ ಚಿತ್ರತಂಡ ಹಂಚಿಕೊಂಡಿದೆ. ಜೊತೆಗೆ ಗಣೀಶ್ ಅವರ ಸಣ್ಣ ವಯಸ್ಸಿನ ಪಾತ್ರದಲ್ಲಿ ನಟಿಸುತ್ತಿರುವವರು ಯಾರು ಎನ್ನುವುದೂ ತಿಳಿದಿದೆ.
'96' ಸಿನಿಮಾ ನೋಡಿದ ಪ್ರತಿಯೊಬ್ಬರ ಮನಸ್ಸಿನಲ್ಲಿ ಸ್ಕೂಲ್ ಹುಡುಗಿ ಜಾನು ಪಾತ್ರ ಜಾಗ ಪಡೆದಿತ್ತು. ಈ ಚಿತ್ರದ ಗೆಲುವಿನ ಕಾರಣಗಳಲ್ಲಿ ಆ ಹುಡುಗಿಯ ನಟನೆ ಕೂಡ ಒಂದಾಗಿತ್ತು. ಬಹಳ ಪ್ರಾಮುಖ್ಯತೆ ಇರುವ ಈ ಪಾತ್ರ ಈಗ ಕಿರುತೆರೆಯ ನಟಿಯೊಬ್ಬರ ಪಾಲಾಗಿದೆ. ಮುಂದೆ ಓದಿ...

ಜಾನು ಆದ ಸಮಿಕ್ಷಾ
'96' ಸಿನಿಮಾದ ಕನ್ನಡ ರಿಮೇಕ್ ನಲ್ಲಿ ಸಮಿಕ್ಷಾ ನಟಿಸುತ್ತಿದ್ದಾರೆ. ಜಾನು ಪಾತ್ರದಲ್ಲಿ ಕಾಣಿಸಿಕೊಳ್ಳುವ ಅವಕಾಶ ಕಿರುತೆರೆ ನಟಿಯಾಗಿರುವ ಸಮಿಕ್ಷಾ ಅವರಿಗೆ ಸಿಕ್ಕಿದೆ. ಸದ್ಯ, ಸಮಿಕ್ಷಾ ಜೀ ಕನ್ನಡ ವಾಹಿನಿಯ 'ಸುಬ್ಬಲಕ್ಷ್ಮಿ ಸಂಸಾರ' ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ.

ಶಿವಮೊಗ್ಗದ ಹುಡುಗಿ
ಸಮಿಕ್ಷಾ ಮೂಲತಃ ಶಿವಮೊಗ್ಗದ ಹುಡುಗಿ. ಕಿರುತೆರೆ ಮಾತ್ರವಲ್ಲದೆ ಸಿನಿಮಾದಲ್ಲಿ ಕೂಡ ಈಗಾಗಲೇ ಈಕೆ ಕಾಣಿಸಿಕೊಂಡಿದ್ದಾರೆ. ಇತ್ತೀಚಿಗಷ್ಟೆ ರಾಗಿಣಿ ದ್ವಿವೇದಿ ಅವರ 'ದಿ ಟೆರೆರಿಸ್ಟ್' ಸಿನಿಮಾದಲ್ಲಿ ಸಹ ಸಮಿಕ್ಷಾ ನಟಿಸಿದ್ದರು. ಈ ಚಿತ್ರದ ಬಳಿಕ ಈಗ '99' ಚಿತ್ರಕ್ಕೂ ಆಯ್ಕೆ ಆಗಿದ್ದಾರೆ.

ಗಣೇಶ್ ಪಾತ್ರದಲ್ಲಿ ಹೇಮಂತ್
ಗಣೇಶ್ ಚಿತ್ರದ ಲೀಡ್ ರೋಲ್ ನಲ್ಲಿ ನಟಿಸುತ್ತಿದ್ದಾರೆ. ಅವರ ಸಣ್ಣ ವಯಸ್ಸಿನ ಪಾತ್ರವನ್ನು ಹೇಮಂತ್ ನಿರ್ವಹಿಸುತ್ತಿದ್ದಾರೆ. ಈ ಹಿಂದೆ 'ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ' ಸಿನಿಮಾದಲ್ಲಿ ಯಶ್ ಬಾಲ್ಯದ ವಯಸ್ಸಿನಲ್ಲಿ ಹೇಮಂತ್ ಕಾಣಿಸಿಕೊಂಡಿದ್ದರು. ಯಶ್ ಬಳಿಕ ಈಗ ಗಣೇಶ್ ಬಾಲ್ಯದ ಪಾತ್ರ ಮಾಡುವ ಅವಕಾಶ ಹೇಮಂತ್ ಪಾಲಾಗಿದೆ.

ಗಣೇಶ್ - ಭಾವನ ಜೋಡಿ
ತ್ರಿಷಾ ಪಾತ್ರದಲ್ಲಿ ನಟಿ ಭಾವನ ಕಾಣಿಸಿಕೊಳ್ಳುತ್ತಿದ್ದಾರೆ. ಗೋಲ್ಡನ್ ಸ್ಟಾರ್ ಗಣೇಶ್ ಹಾಗೂ ಭಾವನ ಈ ಸಿನಿಮಾದ ಮೂಲಕ ಮತ್ತೆ ಒಂದಾಗುತ್ತಿದ್ದಾರೆ. ಈ ಹಿಂದೆ 'ರೋಮಿಯೋ' ಸಿನಿಮಾದಲ್ಲಿ ಇಬ್ಬರು ಒಟ್ಟಿಗೆ ಕಾಣಿಸಿಕೊಂಡಿದ್ದರು. ಇನ್ನು ಇವರಿಬ್ಬರ ಜೋಡಿ ತೆರೆ ಮೇಲೆ ಮುದ್ದಾಗಿ ಕಾಣುತ್ತಿದೆ. ಡಿಸೆಂಬರ್ ತಿಂಗಳಿನಲ್ಲಿ ಈ ಚಿತ್ರದ ಮುಹೂರ್ತ ನಡೆದಿತ್ತು.

ಚಿತ್ರೀಕರಣ ನಡೆಯುತ್ತಿದೆ
ಸದ್ಯ, ಈ ಸಿನಿಮಾ ಚಿತ್ರೀಕರಣ ಕರಾವಳಿ ನಾಡಿನಲ್ಲಿ ನಡೆಯುತ್ತಿದೆ. '99' ಸಿನಿಮಾವನ್ನು ಪ್ರೀತಂ ಗುಬ್ಬಿ ನಿರ್ದೇಶನ ಮಾಡುತ್ತಿದ್ದಾರೆ. ಇದು ಗಣೇಶ್ ಮತ್ತು ಪ್ರೀತಂ ಕಾಂಬಿನೇಶನ್ ನ ಹ್ಯಾಟ್ರಿಕ್ ಸಿನಿಮಾವಾಗಿದೆ. ರಾಮು ಈ ಸಿನಿಮಾಗೆ ಬಂಡವಾಳ ಹಾಕುತ್ತಿದ್ದು, ಅರ್ಜುನ್ ಜನ್ಯ ಸಂಗೀತ ಇರಲಿದೆ. ಇದು ಅವರ 100ನೇ ಸಿನಿಮಾವಾಗಿದೆ. ಸಂತೋಷ್ ರೈ ಪತಾಜೆ ಕ್ಯಾಮರಾ ಹಿಡಿದಿದ್ದಾರೆ.


Click it and Unblock the Notifications











