»   » ನಿಮ್ಮ ನಟನೆಗೆ ಒಂದನ್ನು ಮಾತ್ರ ಆರಿಸಿಕೊಳ್ಳಿ.

ನಿಮ್ಮ ನಟನೆಗೆ ಒಂದನ್ನು ಮಾತ್ರ ಆರಿಸಿಕೊಳ್ಳಿ.

Posted By: Super
Subscribe to Filmibeat Kannada

ಇನ್ನು ಮುಂದೆ ಯಾವುದೇ ಟಿವಿ ನಟ/ನಟಿ ಸಿನಿಮಾಗಳಲ್ಲಿ ನಟಿಸುವಂತಿಲ್ಲ ! ಇಂಥಾ ಒಂದು ಫರ್ಮಾನನ್ನು ಚಲಚ್ಚಿತ್ರ ನಿರ್ಮಾಪಕರು ಸದ್ಯದಲ್ಲೇ ಹೊರಡಿಸುವ ಎಲ್ಲಾ ಲಕ್ಷಣಗಳೂ ನಿಚ್ಚಳವಾಗಿವೆ. ಬುಧವಾರ ಸೆಟ್ಟೇರಿದ ಜಗ್ಗೇಶ್‌ ನಾಯಕತ್ವದ 'ವಂಶಕ್ಕೊಬ್ಬ" ಚಿತ್ರದ ಮುಹೂರ್ತದಲ್ಲಿ ಇಂಥಾ ಗಂಭೀರ ಚಿಂತನೆ ಇಣುಕಿತು.

ಕನ್ನಡ ಚಿತ್ರಗಳಿಗೆ ಉದ್ದಿಮೆ ಸ್ಥಾನ ಕಲ್ಪಿಸಿಕೊಡುವ ಮಾತುಗಳನ್ನು ನಾರ್ತಾ ಸಚಿವ ಶಿವಣ್ಣ ಆಡಿದ ಬೆನ್ನಲ್ಲೇ ವಂಶಕ್ಕೊಬ್ಬ ನಿರ್ಮಾಪಕ ಆರ್‌.ಎಫ್‌.ಮಾಣಿಕ್‌ಚಂದ್‌, ಸಿನಿಮಾ ಹಾಗೂ ಟಿವಿ ತಾರೆಗಳ ನಡುವೆ ಗೆರೆ ಎಳೆಯುವ ಮಾತಾಡಿದರು.

ದಿನಾ ಟಿವಿಯಲ್ಲಿ ನೋಡುವ ಅದೇ ಮುಖಗಳನ್ನು ಸಿನಿಮಾದಲ್ಲೂ ನೋಡೋಕೆ ಜನ ಇಷ್ಟಪಡಲ್ಲ. ಇಪ್ಪತ್ತು ರುಪಾಯಿ ಕೊಟ್ಟು ಟಿವಿಯಲ್ಲಿ ನೋಡುವ ಮೂತಿಗಳನ್ನ ನೋಡೋಕೆ ಥಿಯೇಟರ್‌ಗೆ ಬಂದೆವಾ ಅಂದುಕೋತಾರೆ. ಸಿನಿಮಾದಲ್ಲಿ ಹೀರೋ ಪಾರ್ಟ್‌ ಮಾಡಕ್ಕೆ 4 ಲಕ್ಷ ರುಪಾಯಿ ಕೇಳ್ತಾರೆ. ಸೀರಿಯಲ್‌ಗಳಲ್ಲಾದರೋ 10 ಸಾವಿರ ರುಪಾಯಿಗೇ ನಟನೆಗೆ ಸೈ. ಇದ್ಯಾವ ನ್ಯಾಯ ಎಂದು ಮಾಣಿಕ್‌ ಪ್ರಶ್ನೆ ಎಸೆದರು.


ಬಗಲಲ್ಲೇ ಕುಂತಿದ್ದ ಜಗ್ಗೇಶ್‌, ಮಾಣಿಕ್‌ ಮಾತುಗಳನ್ನು ಸಮರ್ಥಿಸುತ್ತಾ ಹೇಳಿದರು...

ನನಗೆ ಟಿವಿ ಧಾರಾವಾಹಿಗಳಲ್ಲಿ ನಟಿಸುವವರ ಬಗ್ಗೆ ತುಂಬಾ ಗೌರವ ಇದೆ. ಆದರೆ ಕನ್ನಡ ಚಿತ್ರಗಳ ಹಿತದೃಷ್ಟಿಯಿಂದ ಏನಾದರೊಂದು ತೀರ್ಮಾನ ಕೈಗೊಳ್ಳಲೇ ಬೇಕು. ಒಂದು ಕನ್ನಡ ಸಿನಿಮಾ ತೆಗೆಯೋಕೆ ಕನಿಷ್ಠ 75 ಲಕ್ಷ ರುಪಾಯಿ ಬಂಡವಾಳ ಬೇಕು. ಆದರೆ, ಧಾರಾವಾಹಿಯ ಒಂದೇ ಒಂದು ಕಂತಿಗೆ ಟಿವಿ ಚಾನೆಲ್‌ಗಳು 50 ಸಾವಿರ ರುಪಾಯಿ ಕೊಡುತ್ತವೆ. ನಟ-ನಟಿಯರಿಗೆ, ತಂತ್ರಜ್ಞರಿಗೆ ಕೊಡುವ ಫೀಸನ್ನೂ ಸೇರಿಸಿದರೆ ಒಂದು ಕಂತು ಧಾರಾವಾಹಿ ಚಿತ್ರೀಕರಣಕ್ಕೆ ಮೂವತ್ತರಿಂದ ನಲವತ್ತು ಸಾವಿರ ರುಪಾಯಿ ಖರ್ಚಾಗುತ್ತದೆ. ಒಂದು ತಿಂಗಳಲ್ಲಿ ಧಾರಾವಾಹಿ ನಿರ್ಮಾಪಕ ಎಷ್ಟು ಹಣ ಮಾಡಬಹುದು ಲೆಕ್ಕ ಹಾಕಿ? ಆದರೆ ಸಿನಿಮಾದಲ್ಲಿ ದುಡ್ಡು ಮಾಡುವುದು ಇಷ್ಟು ಸಲೀಸಲ್ಲ. ಇಲ್ಲಿ ಪೀಕಲಾಟ ತಪ್ಪುವುದೇ ಇಲ್ಲ.

'ಚಾನೆಲ್‌ಗಳು ಒಂದು ಸಿನಿಮಾ ಅಥವಾ ಅದರ ಹಾಡುಗಳ ಪ್ರಸಾರದ ಹಕ್ಕನ್ನು ಪಡಕೊಂಡು, ಸಿಕ್ಕಾಪಟ್ಟೆ ಜಾಹಿರಾತುಗಳ ನಡುವೆ ಅವನ್ನು ತೋರಿಸಿ ಹಣ ಮಾಡಿಕೊಳ್ಳುತ್ತಿವೆ. ಸಿನಿಮಾಗಳಿಗೆ ತೆರಿಗೆ. ಚಾನೆಲ್‌ಗಾದರೋ ಸುಂಕ ಇಲ್ಲ. ಇದು ನ್ಯಾಯವಾ", ಜಗ್ಗೇಶ್‌ ಕೂಡ ಪ್ರಶ್ನೆ ಎಸೆದರು.

ಈ ಪ್ರಶ್ನೆಗಳು ಗಂಭೀರ ರೂಪ ತಳೆಯುತ್ತಿವೆ. ನಿರ್ಮಾಪಕರ ಸಂಘವೇನಾದರೂ ಸಿನಿಮಾ ಮತ್ತು ಟಿವಿ ನಡುವೆ ಲಕ್ಷ್ಮಣ ರೇಖೆ ಎಳೆದುಬಿಟ್ಟರೆ ? ಗರ್ವದಿಂದ ಬೀಗುತ್ತಿರುವ ಅನಂತ್‌ನಾಗ್‌, ಕಲ್ಯಾಣ ಲೀಲೆಗಳ ಕೃಷ್ಣನಾಗಿ ಬರುತ್ತಿರುವ ಅಣ್ಣಾವ್ರ ಅಳಿಯ ರಾಮ್‌ಕುಮಾರ್‌, ಮೂತಿ ಹಿಗ್ಗಲಿಸಿ ನಗುತ್ತಾ ನಗಿಸುತ್ತಿರುವ ಮಂಡ್ಯ ರಮೇಶ್‌, ದಿನೇಶ್‌ ಬಾಬು ನೆಚ್ಚಿನ ಚಿಟ್ಟೆ ಛಾಯಾಸಿಂಗ್‌, ಚಿಕ್ಕ ಪಾತ್ರದಲ್ಲೇ ಮಿಂಚುವ ಕಾಶಿ ಜೊತೆಗೆ ವಾಣಿಶ್ರೀಯಂಥಾ ಪೋಷಕ ನಟ/ನಟಿಯರ ದೊಡ್ಡ ವರ್ಗವೇ ಚಿಂತೆಗೆ ಬಿದ್ದೀತು. ಆಗ ಅದು ದಡ- ನದಿ ಆಟವಾಗುವುದರಲ್ಲಿ ಅನುಮಾನವಿಲ್ಲ.

ಇದಕ್ಕೆ ನೀವೇನಂತೀರಿ?

English summary
Either Cinema or TV : Artistes have to chose one

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada